ಪ್ರತಿಯೊಬ್ಬ ಮತದಾರರು ವಿವೇಚನೆಯಿಂದ ಹಾಕುವ ಒಂದು ಮತ ಇರುವುದರಲ್ಲೇ ಉತ್ತಮ ಎನ್ನಿಸುವ ಪ್ರತಿನಿಧಿಯನ್ನು ಸಂಸತ್ತಿಗೆ ಕಳುಹಿಸುವ ಮಾರ್ಗವಾಗಿದೆ. ಕೇವಲ ಪ್ರಧಾನಿ ಅಭ್ಯರ್ಥಿಯ ಹೆಸರನ್ನು ಮಾತ್ರ ಪರಿಗಣಿಸಿ, ಅಭ್ಯರ್ಥಿಗಳನ್ನೇ ಕಡೆಗಣಿಸಿ ಮತ ಹಾಕಿದ್ದೇ ಆದಲ್ಲಿ ಜೀಹುಜೂರ್ ಎನ್ನುವ ಎಂಪಿಗಳು ಆಯ್ಕೆಯಾಗುತ್ತಾರೆ ಹಾಗೂ ಸರ್ವಾಧಿಕಾರಿ ಪ್ರಧಾನಿ ದೇಶವಾಳುತ್ತಾನೆ. ಮತದಾರರು ತಮ್ಮ ಹಕ್ಕು ಬಾಧ್ಯತೆಗಳನ್ನು ಕಳೆದುಕೊಂಡು ಅತಂತ್ರರಾಗುತ್ತಾರೆ -ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಈಗ ದೇಶಾದ್ಯಂತ ಲೋಕಸಭಾ ಚುನಾವಣಾ ಮತದಾನ ಪ್ರಕ್ರಿಯೆ ಏಳು ಹಂತದಲ್ಲಿ ನಡೆಯುತ್ತಿದೆ. ಖಂಡಿತಾ ಇದು ಪ್ರಧಾನ ಮಂತ್ರಿಗಳನ್ನು ಆಯ್ಕೆ ಮಾಡುವ ಚುನಾವಣೆಯಲ್ಲ. ಜನರು ಲೋಕಸಭೆಗೆ ತಮ್ಮ ಪ್ರತಿನಿಧಿಯನ್ನು ಮತಗಳ ಮೂಲಕ ಆಯ್ಕೆ ಮಾಡಿ ಕಳುಹಿಸುವ ಚುನಾವಣೆ.
ಆದರೆ.. ಪ್ರಧಾನ ಮಂತ್ರಿಯ ಆಯ್ಕೆಗಾಗಿಯೇ ಈ ಸಾರ್ವತ್ರಿಕ ಚುನಾವಣೆ ಮಾಡಲಾಗುತ್ತಿದೆ ಎಂಬ ಹುಸಿ ಭ್ರಮೆಯನ್ನು ಮತದಾರರಲ್ಲಿ ಬಿತ್ತಲಾಗುತ್ತದೆ. ದೇಶದ ಪರಮೋಚ್ಛ ನೇತಾರನನ್ನು ಆಯ್ಕೆ ಮಾಡಲು ಇದು ಅಮೇರಿಕದಲ್ಲಿರುವಂತೆ ಅಧ್ಯಕ್ಷೀಯ ಮಾದರಿ ಚುನಾವಣೆಯಲ್ಲ. ಸಂವಿಧಾನಾತ್ಮಕವಾಗಿ ಭಾರತದ ಪರಮೋಚ್ಛ ನಾಯಕ ರಾಷ್ಟ್ರಪತಿಯೇ ಹೊರತು ಪ್ರಧಾನ ಮಂತ್ರಿಯಲ್ಲ. ಭಾರತದಲ್ಲಿ ರಾಷ್ಟ್ರಪತಿ ಜನರಿಂದ ಮತದಾನದ ಮೂಲಕ ಆಯ್ಕೆಯಾಗುವುದಿಲ್ಲ.
ಆದರೂ ಪ್ರಧಾನಮಂತ್ರಿಯ ಆಯ್ಕೆಗಾಗಿಯೇ ಈ ಚುನಾವಣೆ ನಡೆಯುತ್ತಿರುವಂತೆ ಬಿಂಬಿಸುತ್ತಿರುವುದು ಯಾಕೆ? ನಮ್ಮಲ್ಲಿ ಪ್ರಧಾನ ಮಂತ್ರಿಯಾಗುವವರ ಹೆಸರಿದೆ, ಪ್ರತಿಪಕ್ಷದಲ್ಲಿ ಯಾರು ಪ್ರೈಮಿನಿಸ್ಟರ್ ಕ್ಯಾಂಡಿಡೇಟ್ ಇದ್ದಾರೆ ಎಂದು ಬಿಜೆಪಿ ಪಕ್ಷದವರು ಪ್ರಶ್ನಿಸುತ್ತಲೇ ಇರುತ್ತಾರೆ. ಪ್ರಧಾನ ಮಂತ್ರಿಯನ್ನು ಚುನಾವಣೆಗೆ ಮುನ್ನವೇ ಘೋಷಿಸಲು ಸಾಧ್ಯವೇ ಇಲ್ಲದಿರುವಾಗ ಪ್ರಧಾನಿ ಅಭ್ಯರ್ಥಿಯನ್ನು ಮೊದಲೇ ಘೋಷಿಸುವ ಅಗತ್ಯವಾದರೂ ಏನಿದೆ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಅಪ್ರಸ್ತುತ.
ಮೊದಲು ದೇಶಾದ್ಯಂತ ಚುನಾವಣೆ ಆಯೋಗದಿಂದ ಎಲೆಕ್ಷನ್ ಘೋಷಣೆಯಾಗಬೇಕು. ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿ ಪ್ರಮುಖ ಪಕ್ಷಗಳ ಉಮೇದುವಾರರು ಹಾಗೂ ಅನೇಕ ಆಸಕ್ತ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಬೇಕು. ನಿಗದಿತ ಚುನಾವಣಾ ದಿನದಂದು ಆಯಾ ಮತಕ್ಷೇತ್ರದ ಜನರು ತಮಗೆ ಯೋಗ್ಯ ಎನ್ನಿಸುವವರಿಗೆ ಮತದಾನ ಮಾಡಬೇಕು. ಅತೀ ಹೆಚ್ಚು ಮತಗಳನ್ನು ಪಡೆದ ಅಭ್ಯರ್ಥಿ ಪ್ರಜೆಗಳ ಪ್ರತಿನಿಧಿಯಾಗಿ ಸಂಸತ್ತಿಗೆ ಮೆಂಬರ್ ಆಫ್ ಪಾರ್ಲಿಮೆಂಟ್ ( ಎಂಪಿ) ಆಗಿ ಆಯ್ಕೆಯಾಗುತ್ತಾನೆ. ಹೀಗೆ ದೇಶಾದ್ಯಂತ ಒಟ್ಟು 543 ಎಂಪಿ ಗಳು ಆಯ್ಕೆಯಾಗುತ್ತಾರೆ. ಇದರಲ್ಲಿ ಬಹುಮತ ಪಡೆದ ಪಕ್ಷ ಅಥವಾ ಪಕ್ಷಗಳ ಗುಂಪು ಸಭೆ ಸೇರಿ ಯಾರು ಪ್ರಧಾನಮಂತ್ರಿ ಆಗಬೇಕು ಎಂಬುದನ್ನು ಬಹುಮತದ ಆಯ್ಕೆಯ ಮೇರೆಗೆ ನಿರ್ಣಯಿಸಿ ರಾಷ್ಟ್ರಪತಿಗೆ ಪ್ರಸ್ತಾವ ಸಲ್ಲಿಸುತ್ತಾರೆ. ಎಲ್ಲವನ್ನೂ ಪರಿಶೀಲಿಸಿ ರಾಷ್ಟ್ರಪತಿ ಭಾರತದ ಪ್ರಧಾನಮಂತ್ರಿಯ ಹೆಸರನ್ನು ಘೋಷಿಸುತ್ತಾರೆ. ಇದು ಸಂವಿಧಾನಾತ್ಮಕವಾದ ಪ್ರಕ್ರಿಯೆ.
ಪಕ್ಷವೊಂದು ಮೊದಲೇ ಘೋಷಿಸಿದ ವ್ಯಕ್ತಿಯೇ ಪ್ರಧಾನ ಮಂತ್ರಿ ಆಗಬೇಕೆಂದೇನೂ ಇಲ್ಲ. ಯಾವುದೇ ಒಂದು ಪಕ್ಷಕ್ಕೆ ಸಂಸತ್ತಿನ ಒಟ್ಟು ಸಂಖ್ಯೆಯಲ್ಲಿ ಕನಿಷ್ಟ ಅರ್ಧಕ್ಕಿಂತ ಒಂದಾದರೂ ಹೆಚ್ಚು ಬಹುಮತ ಬಾರದೇ ಇದ್ದಲ್ಲಿ ಹಲವು ಪಕ್ಷಗಳು ಸೇರಿ ಪ್ರಧಾನಿಯನ್ನು ಆಯ್ಕೆ ಮಾಡುತ್ತವೆ. ಆಗ ಅಲ್ಲಿಯೂ ಸಹ ಬಹುಮತ ಹೆಚ್ಚಿರುವ ವ್ಯಕ್ತಿಯೇ ಪ್ರಧಾನಿಯಾಗುತ್ತಾನೆ.
ಹೀಗಾಗಿ.. ಚುನಾವಣೆಗೆ ಮುನ್ನವೇ ಪ್ರಧಾನಿಯ ಹೆಸರನ್ನು ಘೋಷಿಸುವ ಅಗತ್ಯವೇ ಬೇಕಿಲ್ಲ. ಇಂತವರೇ ಪ್ರಧಾನಿಯಾಗುತ್ತಾರೆ ಎಂದು ಮೊದಲೇ ಮತದಾರರ ಮೇಲೆ ಒತ್ತಡ ತರುವುದು ಸರ್ವಾಧಿಕಾರಿ ಆಯ್ಕೆ ಪ್ರಕ್ರಿಯೆಯ ಲಕ್ಷಣವಾಗಿದೆ.
ಆದರೂ ಬಿಜೆಪಿ ಪಕ್ಷ ನರೇಂದ್ರ ಮೋದಿಯವರನ್ನೇ ಪ್ರಧಾನಿ ಎಂದು ಚುನಾವಣಾ ಪೂರ್ವದಲ್ಲೇ ಘೋಷಿಸುತ್ತದೆ ಹಾಗೂ ಪ್ರಧಾನಮಂತ್ರಿಯ ಆಯ್ಕೆಗಾಗಿಯೇ ಈ ಚುನಾವಣೆ ನಡೆಸಲಾಗುತ್ತದೆ ಎಂದು ವ್ಯಾಪಕವಾಗಿ ಪ್ರಚಾರವನ್ನೂ ಮಾಡುತ್ತದೆ. ಪ್ರಜಾಪ್ರತಿನಿಧಿಗಳ ಆಯ್ಕೆಯೇ ಆಗದೇ ಪ್ರಧಾನಿಯ ಹೆಸರನ್ನು ಘೋಷಿಸುವುದು ಪ್ರಜಾತಂತ್ರದಲ್ಲಿ ಮಾನ್ಯವಲ್ಲ. ಆದರೂ ಪ್ರಧಾನಿಯಾಗುವವರ ಹೆಸರಲ್ಲಿ ಚುನಾವಣೆ ನಡೆದು ಪಕ್ಷದ ಧೋರಣೆ ಸರ್ವಾಧಿಕಾರಿಯ ಆಯ್ಕೆಯನ್ನೇ ಸೂಚಿಸುತ್ತದೆ.
ಇದೇ ಬಿಜೆಪಿ ಪಕ್ಷವು ಬಹುತೇಕ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಚುನಾವಣೆಗೆ ಮೊದಲೇ ಘೋಷಿಸುವುದಿಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ಮಾತ್ರ ಪ್ರಧಾನಿ ಹೆಸರನ್ನು ಮೊದಲೇ ಘೋಷಿಸಿ ಆ ಹೆಸರಿನ ಮೇಲೆಯೇ ಮತಗಳನ್ನು ಕೇಳಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಂಸತ್ತಿನ ಸದಸ್ಯನಾಗಿ ಆಯ್ಕೆಯಾಗುವವನು ಕೇವಲ ಡಮ್ಮಿ ಅಭ್ಯರ್ಥಿಯಾಗಿ ಪ್ರಧಾನಿಯಾಗುವವರ ಹೆಸರೇ ಪ್ರಮುಖವಾಗುತ್ತದೆ.
ಕಳೆದ ಎರಡೂ ಲೋಕಸಭಾ ಚುನಾವಣೆಯಲ್ಲಿ ಆಗಿದ್ದೇ ಹೀಗೆ. ಮೋದಿಯವರ ಹೆಸರಲ್ಲೇ ಬಿಜೆಪಿ ಚುನಾವಣೆಯನ್ನು ಎದುರಿಸಿ ಬಹುಮತ ಪಡೆಯಿತು. ತನ್ನ ಹೆಸರಿನ ಬಲದಿಂದಲೇ ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಎನ್ನುವ ಅಹಮಿಕೆ ಪ್ರಧಾನಿಗೆ ಹೆಚ್ಚಾಗಿ ಆ ಪಕ್ಷದಿಂದ ಸಂಸತ್ತಿಗೆ ಆಯ್ಕೆಯಾದ ಎಲ್ಲರೂ ಪ್ರಧಾನಿಯ ಆಜ್ಞಾ ಪರಿಪಾಲಕರಾದರು. ಎಲ್ಲಾ ನಿರ್ಧಾರಗಳನ್ನೂ ಪ್ರಧಾನಮಂತ್ರಿ ಇಲ್ಲವೇ ಗ್ರಹಮಂತ್ರಿಗಳಿಬ್ಬರೇ ತೆಗೆದುಕೊಳ್ಳ ತೊಡಗಿದರು. ಸಂಸತ್ತಿನ ಮಂತ್ರಿಮಂಡಳವೇ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿತ್ತು. ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಂಡು ಪರಿಹಾರ ಪಡೆಯುವ ಹಕ್ಕನ್ನೂ ಸಹ ಜನಪ್ರತಿನಿಧಿಗಳು ಕಳೆದು ಕೊಂಡಿದ್ದರು. ಹೀಗಾಗಿ ಬಿಜೆಪಿ ಪಕ್ಷ ಸರ್ವಾಧಿಕಾರಿಯೊಬ್ಬನನ್ನು ಪ್ರಧಾನಿಯನ್ನಾಗಿಸಿತ್ತು. ಈಗಲೂ ಸಹ ಅಂತಹುದನ್ನೇ ಮುಂದುವರೆಸಲು ಮೋದಿ ಹೆಸರನ್ನು ಮಾತ್ರ ಮುಂಚೂಣಿಗೆ ತರಲಾಗಿದೆ, ಮೋದಿಯೇ ಪ್ರಧಾನಿ ಎಂದು ಘೋಷಿಸಲಾಗಿದೆ. ಮೋದಿ ಹೆಸರಲ್ಲೇ ಮತಯಾಚನೆ ಮಾಡಲಾಗುತ್ತಿದೆ. ಮೋದಿ ಹೆಸರಿನ ಮುಂದೆ ಪಕ್ಷದ ಅಭ್ಯರ್ಥಿ ಕೇವಲ ಹೆಸರಿಗೆ ಮಾತ್ರ ಇರುವಂತಿದೆ. ಇದು ಸರ್ವಾಧಿಕಾರಿಯೊಬ್ಬ ರೂಪಗೊಳ್ಳಲು ಅಗತ್ಯವಾದ ವಾತಾವರಣ ಸೃಷ್ಟಿಸಿದೆ.
ಈಗ ಮತದಾರರು ಯೋಚಿಸಬೇಕಿದೆ. ತಾವು ಮತ ಹಾಕುತ್ತಿರುವುದು ಸೂಕ್ತ ಎನ್ನಿಸುವ ಅಭ್ಯರ್ಥಿಗೋ ಇಲ್ಲಾ ಮೋದಿಗೋ ಎಂದು ಪ್ರಶ್ನಿಸಿಕೊಳ್ಳಬೇಕಿದೆ. ತಾವು ಮತದ ಮೂಲಕ ಆಯ್ಕೆ ಮಾಡುತ್ತಿರುವುದು ತಮ್ಮ ಪ್ರತಿನಿಧಿಯನ್ನೋ ಇಲ್ಲಾ ಸರ್ವಾಧಿಕಾರಿಯನ್ನೋ? ಎಂಬುದರ ಬಗ್ಗೆಯೂ ಯೋಚಿಸಬೇಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಬೇಕೆಂದರೆ ಯೋಗ್ಯ ಅಭ್ಯರ್ಥಿ ಎಂದು ಅನ್ನಿಸಿದವರಿಗೆ ಮತ ಹಾಕುವುದು ಮತದಾರರ ಕರ್ತವ್ಯವಾಗಿದೆ. ತನ್ನ ಮತ ಪಡೆದು ಆಯ್ಕೆಯಾಗುವವರು ಆಯ್ಕೆಯಾಗಿ ಹೋದನಂತರ ತನ್ನ ಕ್ಷೇತ್ರದ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಾರಾ? ಎಂಬುದರ ಕುರಿತೂ ಆಲೋಚಿಸಿ ಮತ ಚಲಾಯಿಸಬೇಕಿದೆ.
ಇದನ್ನೂ ಓದಿ- ನಾಯಕನಿಲ್ಲವೆಂಬ ಮಿಥ್ಯೆ
ಯಾರು ಏನೇ ಹೇಳಲಿ, ಅದೆಷ್ಟೇ ಆಮಿಷಗಳನ್ನು ಮುಂದಿರಿಸಲಿ, ಮತ ಚಲಾಯಿಸುವ ಮುನ್ನ ಯಾರು ತನ್ನ ಪ್ರತಿನಿಧಿಯಾಗಿ ಸಂಸತ್ತಿಗೆ ಹೋಗಬೇಕು ಎಂಬುದರ ಬಗ್ಗೆ ಮತದಾರರು ಸ್ಪಷ್ಟತೆಯನ್ನು ಹೊಂದಿರುವುದು ಈ ದೇಶದ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು. ನಾವು ಮತಹಾಕಿ ಆಯ್ಕೆ ಮಾಡುತ್ತಿರುವುದು ಕ್ಷೇತ್ರದ ಜನರ ಅಭಿವೃದ್ಧಿಯ ಪರವಾಗಿ ಕೆಲಸ ಮಾಡಬಹುದಾದ ಅಭ್ಯರ್ಥಿಯನ್ನೇ ಹೊರತು ಡಮ್ಮಿ ವ್ಯಕ್ತಿಯನ್ನಲ್ಲ ಎಂಬ ಮನವರಿಕೆ ಪ್ರತಿಯೊಬ್ಬ ಮತದಾರನಿಗೆ/ಳಿಗೆ ಬೇಕಿದೆ. ನಾನು ಮತ ಹಾಕಿ ಆಯ್ಕೆ ಮಾಡಿದವರು ಇನ್ಯಾರದೋ ಇರಾದೆಯ ಮೇಲೆ ಕುಣಿಯುತ್ತಾರೆ ಇಲ್ಲವೇ ಪ್ರಜೆಗಳನ್ನು ಮರೆತು ಪ್ರಭುವಿನ ಓಲೈಕೆಯಲ್ಲಿ ಕಾಲಕಳೆಯುತ್ತಾರೆ ಎನ್ನುವ ಸಣ್ಣ ಅನುಮಾನ ಬಂದರೂ ಅಂತಹ ಅಭ್ಯರ್ಥಿಗೆ ಮತ ಹಾಕದೆ ಇರುವುದೇ ಉತ್ತಮ.
ಸರ್ವಾಧಿಕಾರಿಯೋ ಇಲ್ಲಾ ಸೂಕ್ತ ಅಭ್ಯರ್ಥಿಯೋ? ಈಗ ಆಯ್ಕೆ ಮತದಾರರ ಮುಂದಿದೆ. ಸಂಸತ್ತಿನಲ್ಲಿ ಜನರ ಪರವಾಗಿ ಪ್ರಶ್ನಿಸಿ ಪರಿಹಾರ ಪಡೆಯುವ ಛಾತಿಯುಳ್ಳ ಅಭ್ಯರ್ಥಿಯ ಆಯ್ಕೆ ಪ್ರಜಾತಂತ್ರವನ್ನು ಉಳಿಸಬಲ್ಲುದು. ಗುಲಾಮಿ ಮನಸ್ಥಿತಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇ ಆದರೆ ನಮ್ಮ ಮತ ಹಾಕಿ ನಾವೇ ನಮ್ಮ ವಿರೋಧಿಯನ್ನು ಆಯ್ಕೆ ಮಾಡಿಕೊಂಡಂತಾಗುವುದು.
ಕಳೆದ ಚುನಾವಣೆಯಲ್ಲಿ ಮೋದಿ ಮುಖ ನೋಡಿ 25 ಡಮ್ಮಿ ಮಾದರಿಯ ಸಂಸದರನ್ನು ಕರ್ನಾಟಕದ ಮತದಾರರು ಆಯ್ಕೆ ಮಾಡಿ ಕಳಿಸಿದ್ದರ ಪ್ರತಿಫಲವನ್ನು ಅನುಭವಿಸಿದ್ದಾಗಿದೆ. ಕರ್ನಾಟಕದ ಯಾವುದೇ ಜ್ವಲಂತ ಸಮಸ್ಯೆಯ ಬಗ್ಗೆ ಕೂಡಾ ಈ ಮಹನೀಯರು ಸಂಸತ್ತಿನಲ್ಲಿ ದೊಡ್ಡ ಧ್ವನಿಯಲ್ಲಿ ಪ್ರಶ್ನಿಸಲಿಲ್ಲ. ಯಾವುದೇ ಸಮಸ್ಯೆಗೂ ಪರಿಹಾರ ದಕ್ಕಲಿಲ್ಲ. ಮಹದಾಯಿ ನದಿ ಉತ್ತರ ಕರ್ನಾಟಕದ ಜನರ ನೀರಿನ ಬವಣೆ ತಪ್ಪಿಸಲಿಲ್ಲ, ಕಾವೇರಿ ಸಮಸ್ಯೆ ಬಗೆಹರಿಯಲಿಲ್ಲ, ನೀರಾವರಿ ಯೋಜನೆಗಳಿಗೆ ಕೇಂದ್ರದ ಅನುದಾನ ಬರಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತವಾದ ಹಣದಲ್ಲಿ ಒಂದು ರೂಪಾಯಿ ಸಹ ದೊರೆಯಲಿಲ್ಲ. ಕೇಂದ್ರ ಸರಕಾರ ಪಡೆದ ಕನ್ನಡಿಗರ ತೆರಿಗೆ ಹಣದ ಪಾಲು ವಾಪಸ್ ಬರಲಿಲ್ಲ. ಜಿಎಸ್ಟಿ ಯಲ್ಲಿ ಕರ್ನಾಟಕಕ್ಕಾದ ನಷ್ಟ ತುಂಬಿಕೊಡಲಿಲ್ಲ. ಇಡೀ ನಾಡು ನೆರೆ ಹಾಗೂ ಬರದಿಂದ ತತ್ತರಿಸಿದಾಗಲೂ ಕೇಂದ್ರ ಕೊಡಬೇಕಾದ ಹಣವನ್ನೂ ಬಿಡುಗಡೆ ಮಾಡಲಿಲ್ಲ. ಇದೆಲ್ಲವೂ ಬೇಕೇ ಬೇಕೆಂದು ಯಾವ ಎಂಪಿ ಕೂಡಾ ಹಠಹಿಡಿಯಲಿಲ್ಲ. ಸಂಸತ್ತಿನಲ್ಲಿ ಮೇಜು ಗುದ್ದಿ ಪ್ರಶ್ನಿಸಲಿಲ್ಲ. ನಿರಂತರವಾಗಿ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಆಗುತ್ತಿದ್ದರೂ ಯಾಕೆಂದು ಕೇಳಲು ಒಬ್ಬನೇ ಒಬ್ಬ ಎಂಪಿ ಮುಂದೆ ಬರಲಿಲ್ಲ. ಯಾಕೆಂದರೆ 25 ಕ್ಕೂ ಹೆಚ್ಚು ಎಂಪಿಗಳಿಗೆ ಮೋದಿ ಮುಖ ನೋಡಿ ಮತ ಹಾಕಿ ಆರಿಸಿ ಕಳುಹಿಸಿದ್ದರಿಂದಾಗಿ ಅಂತಹ ಮುಖರಹಿತ ಡಮ್ಮಿ ಎಂಪಿ ಗಳಿಗೆ ಸಂಸತ್ತಿನ ಮೋದಿ ದರ್ಬಾರಿನಲ್ಲಿ ಕವಡೆ ಕಾಸಿನ ಬೆಲೆಯೂ ಸಿಗಲಿಲ್ಲ. ಕರ್ನಾಟಕದ ಮತದಾರ ತಪ್ಪು ವ್ಯಕ್ತಿಗಳಿಗೆ ಮತ ಹಾಕಿದ್ದರ ಪರಿಣಾಮ ಒಕ್ಕೂಟ ವ್ಯವಸ್ಥೆಯಲ್ಲಿ ಅತೀ ಹೆಚ್ಚು ಶೋಷಣೆಗೆ ಒಳಗಾಗಬೇಕಾಯ್ತು.
ಈ ಸಲದ ಚುನಾವಣೆಯಲ್ಲಿ ಅಂತಹುದು ಮತ್ತೆ ಮರುಕಳಿಸದಿರಲಿ. ಹಿಂದಿನ ಎರಡು ಸಲದ ತಪ್ಪು ಆಯ್ಕೆಗಳು ಈ ಸಲ ಮತ್ತೆ ಆಗದೇ ಇರಲಿ. ನಮ್ಮ ಚಿತ್ತ ಉತ್ತಮ ಸಂಸತ್ತಿಗೆ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಿ ಕಳುಹಿಸುವುದು ಆಗಬೇಕೇ ಹೊರತು ಸರ್ವಾಧಿಕಾರಿಯನ್ನು ಆಯ್ಕೆ ಮಾಡುವುದಲ್ಲ. ಮತದಾರರು ಜಾಗೃತರಾಗ ಬೇಕಿದೆ. ಪ್ರಧಾನಿಯ ಹೆಸರಲ್ಲಿ ಮತ ಚಲಾಯಿಸಿ ಮತ್ತೆ ಪ್ರಮಾದ ಮಾಡಿಕೊಳ್ಳದೇ, ಸೂಕ್ತ ಜನಪ್ರತಿನಿಧಿಗೆ ಮತ ಚಲಾಯಿಸಿ ಆಯ್ಕೆ ಮಾಡಬೇಕಿದೆ. ಪ್ರಜಾಪ್ರಭುತ್ವದ ಅಳಿವು ಉಳಿವೂ ಈಗ ಮತದಾರರು ಮಾಡುವ ಸೂಕ್ತ ಆಯ್ಕೆಯಲ್ಲಿದೆ. ಸಂವಿಧಾನದ ಸೋಲು ಗೆಲುವು ಸಹ ಮತದಾರರ ಪ್ರಭುದ್ಧತೆಯನ್ನು ಆಧರಿಸಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು