ಶಿರಸಿ: ಕಸ್ತೂರಿ ರಂಗನ್ ವರದಿಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ತಿರಸ್ಕಾರ ಮಾಡಿದೆ. ಕೇಂದ್ರಕ್ಕೂ ತಿರಸ್ಕರಿಸಲು ರಾಜ್ಯ ಸಚಿವ ಸಂಪುಟದ ಮೂಲಕ ಪ್ರಸ್ತಾವ ಕಳುಹಿಸಿದ್ದೇವೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಘೋರ ಕುಂಭಕರ್ಣ ನಿದ್ದೆಯಲ್ಲಿದೆ, ಈವರೆಗೆ ಪ್ರಸ್ತಾವಕ್ಕೆ ಸ್ಪಂದಿಸಿಲ್ಲ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹರಿಹಾಯ್ದರು.
ಜಾನ್ಮನೆ ಜಿ.ಪಂ. ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಯಾವ ಜಾತಿ- ಭೇದ ಮಾಡದೆ ನ್ಯಾಯಬದ್ಧವಾಗಿ ಕೆಲಸ ಮಾಡುತ್ತಾ ಬಂದಿದೆ. ೧೦ ವರ್ಷದ ಹಿಂದೆ ಅರಣ್ಯ ಕಾಯ್ದೆ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರದಿಂದ ಕಳುಹಿಸಿದ ಪ್ರಸ್ತಾವನೆಗೆ ಇನ್ನೂ ಕೇಂದ್ರ ಸರ್ಕಾರದಿಂದ ಸ್ಪಂದನೆ ಸಿಕ್ಕಿಲ್ಲ. ಇಲ್ಲಿಂದ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದವರು ಏನು ಮಾಡಿದ್ದಾರೆ? ಭೀಮಣ್ಣ ಶಾಸಕರಾದ ಮೇಲೆ ಆದಷ್ಟು ಅಭಿವೃದ್ಧಿ ಹಿಂದಿನ ಶಾಸಕರ ಅವಧಿಯಲ್ಲಿ ಯಾಕೆ ಆಗಿಲ್ಲ? ಅಂಧಃಶ್ರದ್ಧೆಯಿಂದ ಮತ ಹಾಕಬಾರದು. ಡಾ.ಅಂಜಲಿ ಅರಣ್ಯ ಹಕ್ಕು ಕಾಯ್ದೆ ಬಗ್ಗೆ ಸಂಸತ್‌ನಲ್ಲಿ ಮಾತನಾಡುತ್ತಾರೆ, ಬಡವರ ಪರ ಧ್ವನಿಯಾಗುತ್ತಾರೆ. ಅದಕ್ಕಾಗಿ ಅವರಿಗೆ ಮತ ನೀಡಬೇಕಿದೆ ಎಂದರು.
ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಮಾತನಾಡಿ, ಬಿಜೆಪಿಯ ಹುಳುಕುಗಳ ಬಗ್ಗೆ ಮಾತನಾಡಿದರೆ ನಮ್ಮನ್ನು ದೇಶದ್ರೋಹಿಗಳು ಎನ್ನುತ್ತಾರೆ. ಬಡವರು, ಅನ್ನದಾತರ ಬಗ್ಗೆ ಮಾತನಾಡಿದರೂ ಭಯೋತ್ಪಾದಕರೆನ್ನುತ್ತಾರೆ. ಒಳ್ಳೆಯ ಸಂಸದರನ್ನ ಆಯ್ಕೆ ಮಾಡಿದರೆ ಮಾತ್ರ ದೆಹಲಿಯಲ್ಲಿ ನಿಮ್ಮ ಸಮಸ್ಯೆಗಳನ್ನ ಪರಿಹರಿಸಲು ಸಾಧ್ಯ. ನಾವು ಮಾತನಾಡಿದರೆ ಕಾಂಗ್ರೆಸ್‌ನವರು ರಾಜಕೀಯ ಮಾತನಾಡುತ್ತಿದ್ದಾರೆ ಎನ್ನುತ್ತಾರೆ. ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು, ಜನಸೇವೆ ಮಾಡಲು ನಾವು ರಾಜಕೀಯಕ್ಕೆ ಬಂದಿದ್ದೇವೆ. ಹಳ್ಳಿ ಅಭಿವೃದ್ಧಿಯಾದಾಗ ದೇಶ ನಿರ್ಮಾಣವಾಗುತ್ತದೆಂಬುದನ್ನ ‘ಇದು ದೇಶದ ಚುನಾವಣೆ’ ಎನ್ನುವ ಬಿಜೆಪಿ ಅಭ್ಯರ್ಥಿ ಕಾಗೇರಿಯವರು ತಿಳಿದುಕೊಳ್ಳಬೇಕು. ಈ ಬಾರಿಯೂ ಬಿಜೆಪಿ ಗೆದ್ದರೆ ದೇಶವನ್ನ ಮಾರಲೂ ಅವರು ಹಿಂದು- ಮುಂದು ನೋಡಲ್ಲ. ಬಿಜೆಪಿ ಇಲ್ಲಿ ಆಡಳಿತ ನಡೆಸಿದ ೩೦ ವರ್ಷ ಏನು ಮಾಡಿದ್ದಾರೆ? ಜನ ಬುದ್ಧಿವಂತರಿದ್ದಾರೆ, ಇವರೆಷ್ಟೇ ಸುಳ್ಳು ಭಾಷಣ ಮಾಡಿದರೂ ನಂಬುವುದಿಲ್ಲ. ನಮ್ಮಿಂದ ಏನಾಗುತ್ತದೋ ಅದಷ್ಟನ್ನೇ ನಾವು ಮಾತನಾಡುತ್ತೇವೆ. ಬಿಜೆಪಿಗರಂತೆ ಸುಳ್ಳು ಹೇಳುತ್ತಾ ದಿನದೂಡುವುದಿಲ್ಲ ಎಂದರು.
ಶಿರಸಿ ಶಾಸಕ ಭೀಮಣ್ಣ ನಾಯ್ಕ, ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಆಗಿಲ್ಲ. ಬಡವರ ಕಷ್ಟ- ಸುಖ ಅರಿಯದ ಮೋದಿಯವರು, ಈವರೆಗೆ ಅತಿಕ್ರಮ ಸಕ್ರಮಾತಿ ಬಗ್ಗೆ ಸ್ಪಂದನೆ ನೀಡಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವ್ಕರ್ ಪ್ರಾಸ್ತಾವಿಕ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಗೌಡ್ರು, ಯೂತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವೆಂಕಟೇಶ್ ಹೆಗಡೆ ಹೊಸಬಾಳೆ, ಜಿ.ಪಂ ಮಾಜಿ ಸದಸ್ಯ ಜಿ.ಎನ್.ಹೆಗಡೆ, ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಮುಂತಾದವರು ಉಪಸ್ಥಿತರಿದ್ದರು.
ಪಕ್ಷ ಸೇರ್ಪಡೆ..
ಇದೇ ಸಂದರ್ಭದಲ್ಲಿ ಬಿಜೆಪಿಯಿಂದ ಶೀನು ಗೌಡ, ದೇವನಹಳ್ಳಿ ಪಂಚಾಯತಿ ಸದಸ್ಯೆ ಪಾರ್ವತಿ ಚಲವಾದಿ, ಜೆಡಿಎಸ್‌ನಿಂದ ಸಂತೋಷ್ ಜೈನ್, ಆಳು ಗೌಡ, ತಿಮ್ಮ ಗೌಡ ಅವರ ತಂಡ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಆರ್.ವಿ.ದೇಶಪಾಂಡೆ ಹಾಗೂ ಡಾ.ಅಂಜಲಿಯವರು ಶಾಲು ಹಾಕಿ ಎಲ್ಲರನ್ನೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರು.