ಕಪ್ಪು ಚುಕ್ಕೆ ಪ್ರಕರಣ

Most read

ವಿಜೇಂದ್ರ : ( ಮುಸು ಮುಸು ನಗುತ್ತಾ) ಓಹೋ ಕುಮ್ರಣ್ಣ

ಕುಮ್ರಣ್ಣ : ಏನು ಹೇಳು ಬ್ರದರ್. ನನ್ನ ಮುಖದಲ್ಲೇನು ಕೋತಿ ಕುಣೀತಿದೆಯಾ?

ವಿಜೇಂದ್ರ : ಅದು ಹಂಗಲ್ಲಾ.. ಕನ್ನಡೀಲೀ ನಿಮ್ಮ ಮುಖ ನೋಡಿಕೊಂಡಿದ್ದೀರಾ?..

ಕುಮ್ರಣ್ಣ : ಯಾಕೆ ಬ್ರದರ್.. ಏನಾಯ್ತು.. ಮುಖದಲ್ಲಿ ಎಲ್ಲೆಲ್ಲಿ ಏನೇನು ಇರ್ಬೇಕೋ ಎಲ್ಲಾ ಅಲ್ಲೇ ಇದ್ದಾವೆ.. ಮೊದಲು ಹೋಗಿ ನಿನ್ನ ಕಣ್ಣು ಟೆಸ್ಟ್ ಮಾಡಿಸ್ಕೋ.. ದೃಷ್ಟಿ ದೋಷ ಇರ್ಬೋದು.

ವಿಜೇಂದ್ರ : ಅದು ಹಂಗಲ್ಲಣ್ಣಾ. ನಿಮ್ಮ ಮುಖದ ತುಂಬಾ ಕಪ್ಪು ಮಸಿ…

ಕುಮ್ರಣ್ಣ : ನೋಡಿ ಬ್ರದರ್.. ನನ್ನ ಮುಖಾ ಇರೋದೆ ಕಪ್ಪು. ಯಾಕೆಂದ್ರೆ  ನಾನು ಈ  ಮಣ್ಣಿನ ಮೊಮ್ಮಗ.. ಅದರಲ್ಲೇನಿದೆ ವಿಶೇಷ.

ವಿಜೇಂದ್ರ : ಇದು ಆ ಕಪ್ಪಲ್ಲಣ್ಣಾ.. ಮಸಿ.. ಮಸಿ ಅಂಟಿದೆ.. ಕಪ್ಪು ಚುಕ್ಕೆಗಳು..

ಕುಮ್ರಣ್ಣ : ಅದೇನೋ ಅಂತಾರಲ್ಲಾ.. ಕಲ್ಲಿದ್ದಲು ಮಸಿ ಬಟ್ಟೆಗೆ ಕರಿಯಾ ಅಂತಾ ಲೇವಡಿ ಮಾಡ್ತಂತೆ. ಮೊದಲು ನಿನ್ನ ಮುಖ ನೋಡ್ಕೋ ಬ್ರದರ್.. ನಿನ್ನ ಮುಖ ಅಷ್ಟೇ ಯಾಕೆ ನಿಮ್ಮಪ್ಪನ ಮುಖ ಮೈ ಎಲ್ಲಾ ಮಸಿಯಾಗಿದೆ.

ವಿಜೇಂದ್ರ : ಅದು ನಾವು ಬಳ್ಕೊಂಡಿರೋದಲ್ಲಾ ಕುಮ್ರಣ್ಣಾ, ನೀವೇ ಎರಡು ವರ್ಷದ ಹಿಂದೆ ಬಳಿದದ್ದು. ಆಗೆಲ್ಲಾ ನಮ್ಮನ್ನ ಕಳಂಕಿತರು ಅಂತಾ ನೀವೇ ಹೇಳಿ ಮಸಿ ಬಳಿದದ್ದೇ ಬಳಿದದ್ದು. ಈಗ ನೋಡಿ ಎಷ್ಟು ಅಳಿಸಿದ್ರೂ ಮಸಿ ಹೋಗ್ತಾನೇ ಇಲ್ಲಾ.

ಕುಮ್ರಣ್ಣ : ನಿಮ್ಮ ಅಪ್ಪನವರೇನು ಕಮ್ಮಿ. ನಂದಷ್ಟೇ ಅಲ್ಲಾ ನಮ್ಮ ಕುಟುಂಬ ವರ್ಗದವರ ಮುಖಕ್ಕೆಲ್ಲಾ ಕಪ್ಪು ಚುಕ್ಕೆ ಎರಚೆರಚಿ ಕಿರುಚಾಡಿದ್ರು. ಅದು ಬಿಡಿ ಬ್ರದರ್.. ಇತ್ತೀಚೆಗೆ ನಿಮ್ಮ ಕಡೆಯವ್ರು ನಮ್ಮಣ್ಣನ ಕುಟುಂಬವನ್ನೇ ಕಪ್ಪು ಮಸಿ ನೀರಲ್ಲಿ ಅದ್ದಿ ತೆಗೆದು ಮಾನ ಮರ್ಯಾದೆ ತೆಗೆದು ಸರ್ವ ನಾಶ ಮಾಡಿದ್ರು.

ವಿಜೇಂದ್ರ : ಹೆ ಹ್ಹೆ ಅದೆಲ್ಲಾ ಆಗಿ ಹೋದ ಕತೆ ಬಿಡಿ ಕುಮ್ರಣ್ಣಾ. ಈಗ ನಾವು ನೀವು ದೋಸ್ತಿ ಆಗಿದ್ದಾಯ್ತಲ್ಲಾ, ಕೈ ಕೈ ಮಿಗಿಲಾಯಿಸಿ ಆಗಿದೆಯಲ್ಲಾ. ಹಿಂದಿದ್ದೆಲ್ಲಾ ಈಗ್ಯಾಕೆ? ಈ ಮಸಿ ಹೇಗೆ ಕ್ಲೀನ್ ಮಾಡ್ಕೊಳ್ಳೋದು?

ಕುಮ್ರಣ್ಣ : ಮಸಿ ಹಚ್ಚಿಕೊಂಡಾಗಿದೆ. ಕಪ್ಪು ಚುಕ್ಕೆ ಬಿದ್ದಾಗಿದೆ. ಈಗ ನಾವೆಷ್ಟೇ ಬಿಳಿ ಬಟ್ಟೆ ಹಾಕ್ಕೊಂಡು ಕ್ಲೀನ್ ಕ್ಲೀನ್ ಅಂತಾ ಅಂದ್ರೂ ಜನ ನಂಬೋದಿಲ್ಲ. ನಮ್ಮ ಕೈಗೆ ಅಧಿಕಾರ ಕೊಡೋದಿಲ್ಲ.

ವಿಜೇಂದ್ರ : ಇದಕ್ಕೇನಾದ್ರೂ ಒಂದು ದಾರಿ ಹುಡುಕಲೇ ಬೇಕಲ್ವಾ ಕುಮ್ರಣ್ಣಾ. ಜನರನ್ನ ನಂಬಿಸಲೇ ಬೇಕಲ್ಲಾ. ಯಾಕೆಂದ್ರೆ ನಾವೂ ಅಧಿಕಾರ ಹಿಡಿಬೇಕಲ್ವಾ.

ಕುಮ್ರಣ್ಣ : ನೋಡಲ್ಲಿ.. ಅಲ್ಲಿ ದೂರದಲ್ಲಿ. ಟಗರಿನ ಹಾಗೇ ಠೀವಿಯಿಂದ ಬರ್ತಾ ಇದ್ದಾನಲ್ಲಾ ಸಿದ್ದಣ್ಣಾ.. ಕಾಣ್ತಾ ಇದೆಯಾ..

ವಿಜೇಂದ್ರ : ಹೌದು.. ಮುಖ ಪಳ ಪಳ ಹೊಳೀತಾ ಇದೆ. ಟಗರು ಅಂದ್ರೆ ಟಗರು..

ಕುಮ್ರಣ್ಣ : ಹಾಂ. ಕ್ಲೀನ್ ಇಮೇಜ್ ಇರೋದಕ್ಕೆ ಮುಖ ಹೊಳೀತಿದೆ. ಟಗರಿನಂತೆ ಮೆರೀತಿದೆ. ಅದಕ್ಕೆ ಜನರು ನಂಬಿ ಅಧಿಕಾರ ಕೊಟ್ಟಿದ್ದಾರೆ.

ವಿಜೇಂದ್ರ : ಈಗೇನು ಮಾಡೋದು..  ಒಂದೇ ಒಂದು ಕಪ್ಪು ಚುಕ್ಕೆ ಇಲ್ಲಾ ಅಂತಾ ಈ ಟಗರು ಮನುಷ್ಯ ಹೇಳ್ಕೊಂಡು ಜನರನ್ನ ಯಾಮಾರ್ಸಿ ಆಳುವ ಅವಕಾಶ ಪಡೆದಿದ್ದು ಅಲ್ವಾ ಕುಮ್ರಣ್ಣಾ..

ಕುಮ್ರಣ್ಣ : ಯಸ್ ಬ್ರದರ್.. ಈಗ ಐಡಿಯಾ ಬಂತು. ನಮ್ಮ ಮುಖಕ್ಕೆ ಮಾತ್ರ ಯಾಕೆ ಕಪ್ಪು ಮಸಿ ಇರ್ಬೇಕು. ಒಂದು ಕೆಲಸ ಮಾಡು. ಹೇಗಾದ್ರೂ ಮಾಡಿ ಸಿದ್ದಣ್ಣನ ಮೇಲೆ ಒಂದಿಷ್ಟು ಮಸಿ ಎರಚಿ ಕಪ್ಪು ಚುಕ್ಕೆ, ಕಪ್ಪು ಚುಕ್ಕೆ ಅಂತಾ ಊರೆಲ್ಲಾ ಗುಲ್ಲೆಬ್ಬಿಸಿ ಬಿಡು.. ಆಮೇಲೆ ನೋಡು.

ವಿಜೇಂದ್ರ : ಹೋ ಗೊತ್ತಾಯ್ತಣ್ಣಾ. ನಮಗಿಲ್ಲಾ ಅಂದ್ರೆ ಇಲ್ಲಿ ಬೇರೆ ಯಾರಿಗೂ ಕ್ಲೀನ್ ಇಮೇಜ್ ಇರಬಾರದು. ನಮ್ಮ ಮುಖಕ್ಕೆ ಮಸಿ ಅಂಟಿದೆ ಅಂದ ಮೇಲೆ ಮಸಿ ಇಲ್ಲದವರ ಮುಖಕ್ಕೆ ಮಸಿ ಹಾಕಿ ಇಲ್ಲಿ ಯಾರೂ ಶುದ್ಧರಲ್ಲಾ ಅಂತಾ ಜನರನ್ನ ನಂಬಿಸಬೇಕು. ಆಗ ನಮ್ಮ ಬೇಳೆ ಬೇಯಬಹುದು.

ಕುಮ್ರಣ್ಣ : ಹಾಂ.. ಈಗ ಸ್ವಲ್ಲ ಮೆಚ್ಯೂರ್ಡ್ ಆದೆ ನೋಡು ಬ್ರದರ್.  ಕ್ಲೀನ್ ಕ್ಲೀನ್ ಅಂತಾ ಮೆರೀತಾನೆ.. ಹೋಗು, ಆ ಕಡೆ ಈ ಕಡೆ ನೋಡಿ ಮಸಿ ಎರಚಿ ಮೂಡಾ ಮೂಢಾ ಅಂತಾ ಜೋರಾಗಿ ಕಿರುಚಿಕೋ. ನಾನು ಮರೆಯಲ್ಲಿ ನಿಂತಿರ್ತೀನಿ.

ವಿಜೇಂದ್ರ : ಆಯ್ತು ಕುಮ್ರಣ್ಣಾ.. ಹಂಗೇ ಮಾಡ್ತೀನಿ.. ( ಮಸಿ ತುಂಬಿದ ಬಾಟಲ್ ಹಿಡಿದು) ಬಂದಾ..ಬಂದಾ.. ಸಿದ್ದಣ್ಣಾ ಬಂದಾ..

ಕುಮ್ರಣ್ಣ : ( ಮರದ ಮರೆಯಲ್ಲಿ ಅಡಗಿಕೊಳ್ಳುತ್ತಾ, ಪಿಸು ದ್ವನಿಯಲ್ಲಿ) ಮೂಡಾ ಮೂಢಾ ಅಂತಾ ಕಿರುಚೋದು ಮರೀಬೇಡಾ.. ಗೋ ಬ್ರದರ್ ಗೋ.

ವಿಜೇಂದ್ರ : ಹಾಂ.. ಬಂದಾ ಬಂದಾ ಬಂದೇ ಬಿಟ್ಟಾ ( ಬಾಟಲ್ ನಲ್ಲಿದ್ದ ಮಸಿ ಎರಚಿ, ಮೂಡಾ ಮೂಢಾ ಅಂತಾ ಅರಚಿಕೊಳ್ತಾನೆ)

ಸಿದ್ದಣ್ಣ : ಛೇ ಯಾವ್ನಲಾ ಅವ್ನು. ಮಸಿ ಎರಚೋನು. ಥೂ ಥೂ ತು.

ವಿಜೇಂದ್ರ : ( ಗುಂಪು ಕಟ್ಟಿಕೊಂಡು ಸಿದ್ದಣ್ಣನನ್ನು ಸುತ್ತುವರೆದು) ಮೂಡಾ ಮೂಢಾ.. ನೋಡ್ರಪ್ಪಾ ನೋಡಿ. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲಾ ಅಂತಿದ್ರಲ್ಲಾ ಸಿದ್ದಣ್ಣೋರು.. ಈಗ ನೋಡ್ರಪ್ಪಾ.. ಕಪ್ಪು ಚುಕ್ಕೆ ಅಂಟಿದೆ.. ಕ್ಲೀನು ಇಮೇಜು ಎಲ್ಲಾ ಗಲೀಜು..

ಕುಮ್ರಣ್ಣ : (ಮರೆಯಿಂದ ಹೊರಬಂದು) ಮೂಡಾ.. ಮೂಢಾ..,

ಎಲ್ಲರೂ : ಮೂಡಾ..ಮೂಢಾ.

ವಿಜೇಂದ್ರ : ಚುಕ್ಕೆ ಚುಕ್ಕೆ

ಎಲ್ಲರೂ :  ಕಪ್ಪು ಚುಕ್ಕೆ.

ಸಿದ್ದಣ್ಣ : (ಸಿಟ್ಟಿಗೆದ್ದು) ಏ.. ಹೋಗ್ರಯ್ಯಾ ಅತ್ಲಾಗೆ ಮೂಢ ನನ್ನಮಕ್ಳಾ. ನೀವೇ ಮಸಿ ಎರಚಿ, ಕಪ್ಪು ಚುಕ್ಕೆ ಅಂತಾ ಅರಚ್ತೀರಾ. ಇಲ್ಲಿವರೆಗೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೇ ಇರೋನು ನಾನು. ಇದಕ್ಕೆಲ್ಲಾ ಹೆದುರೋದಿಲ್ಲ. ತೊಲಗ್ರೊ.

ಕುಮ್ರಣ್ಣ : ಹಂಗೇಳಿದ್ರೆ ಯಾರೂ ಈಗ ನಂಬೋದಿಲ್ಲ ಬಿಡಿ ಸಿದ್ದಣ್ಣಾ. ನಮ್ಮನ್ನ ನೋಡಿ ಆಡ್ಕೋತಿದ್ರಲ್ಲಾ.. ನೋಡಿ ಈಗ ನಿಮ್ಮ ಮುಖಕ್ಕೆ ಮಸಿ ಬಿದ್ದಿದೆ.

ಸಿದ್ದಣ್ಣ :ಏ ಹೋಗ್ರಯ್ಯಾ. ನಿಮ್ಮಂತಾ ಭ್ರಷ್ಟರು ಹೇಳಿದ್ದನ್ನ ಯಾರು ನಂಬ್ತಾರೆ..

ಕುಮ್ರಣ್ಣ : ನಾವು ಜನರನ್ನ ನಂಬಿಸ್ತೀವಿ.

ವಿಜೇಂದ್ರ : ನಂಬ್ಸೋಕೆ ಅಂತಾನೇ ಊರೂರು ಅಲೀತೇವೆ, ಹಾದಿ ಬೀದಿ ಸುತ್ತತೇವೆ, ಊರಿಂದಾ ಊರಿಗೆ ಪಾದಯಾತ್ರೆ ಮಾಡ್ತೇವೆ. ಎಲ್ರೂ ಹೇಳಿ ಮೂಡಾ ಮೂಢಾ..

ಎಲ್ಲರೂ : ಮೂಡಾ ಮೂಢಾ..

ಕುಮ್ರಣ್ಣ : ಚುಕ್ಕೆ ಚುಕ್ಕೆ..

ಎಲ್ಲರೂ : ಕಪ್ಪು ಚುಕ್ಕೆ.

( ಘೋಷಣೆ ಕೂಗುತ್ತಾ ಎಲ್ಲರೂ ಹೊರಡುವರು)

ಸಿದ್ದಣ್ಣ : ಥೂ ಇವ್ರ ಮನೆ ಕಾಯ್ವೋಗಾ. ಇಂತಾದ್ದಕ್ಕೆಲ್ಲಾ ನಾನು ಜಗ್ಗೊಲ್ಲಾ ಬಗ್ಗೊಲ್ಲಾ ಕುಗ್ಗೊಲ್ಲಾ. ಹೆದರಿಸ್ತೀರೇನ್ರೊ,  ಎದುರಿಸ್ತೀನಿ.. ಎಲ್ಲಾ ಎದುರಿಸ್ತೀನಿ.. ಪಾದಯಾತ್ರೆ ಮಾಡ್ತೀರೇನ್ರೋ ಮಾಡಿ. ನಾನು ಸಮಾವೇಶ ಮಾಡಿಸ್ತೀನಿ. ನಿಮ್ಮ ಕುತಂತ್ರವನ್ನೆಲ್ಲಾ ಜನರ ಮುಂದೆ ಬಿಚ್ಚಿಡ್ತೀನಿ.

( ಮುಖಕ್ಕೆ ಅಂಟಿದ ಮಸಿಯನ್ನು ಒರೆಸಿಕೊಳ್ಳಲು ಪ್ರಯತ್ನಿಸುತ್ತಾ)

ಇದೆಂತಾ ಮಸಿ.. ಹೋಗ್ತಾನೇ ಇಲ್ವಲ್ಲಾ..

ಬಂಡೆ : (ಎದುರಿನಿಂದ ಬಂದು) ಇದೇನಾಯ್ತು ಸರ್.. ಮುಖಕ್ಕೆಲ್ಲಾ ಕಪ್ಪು ಚುಕ್ಕೆ ಹಚ್ಚಿಕೊಂಡಿದ್ದೀರಿ.

ಸಿದ್ದಣ್ಣ : ಇದು ಹಚ್ಚಿಕೊಂಡಿದ್ದಲ್ಲಾ.. ಆ ದುರಳರು ಎರಚಿದ್ದು. ಇಲ್ಲಿವರೆಗೂ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲಾ ಅಂತಾ ನಿಮಗೆ ಗೊತ್ತಿದೆ ಅಲ್ವಾ..

ಬಂಡೆ : ಹೋ ಇಷ್ಟಕ್ಕೆಲ್ಲಾ ಯಾಕೆ ಸರ್ ದಿಗಿಲು ಬೀಳ್ತೀರಿ. ನನ್ನ ನೋಡಿ. ಮೈತುಂಬಾ ಮಸಿ ಇದೆ. ಮುಖದ ತುಂಬಾ ಕಪ್ಪು ಚುಕ್ಕೆಗಳೇ ಇವೆ. ಒಂದಿಷ್ಟು ನಾನೇ ಹಚ್ಚಿಕೊಂಡಿದ್ದು, ಇನ್ನೊಂದಿಷ್ಟು ವಿರೋಧಿಗಳು ಹಚ್ಚಿದ್ದು.

ಸಿದ್ದಣ್ಣ : ಹೀಗೆ ಕಪ್ಪು ಚುಕ್ಕೆ ಇದ್ರೆ ಇಮೇಜ್ ಹಾಳಾಗುತ್ತಲ್ಲಾ..

ಬಂಡೆ : ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರ್ದು ಸರ್. ಸಾರ್ವಜನಿಕ ಜೀವನದಲ್ಲಿದ್ದಾಗ ಇದೆಲ್ಲಾ ಮಾಮೂಲು. ಮಸಿ ಜೊತೆ ಬದುಕೋದನ್ನ ಕಲೀಬೇಕು. ಮಸಿ ಹಚ್ಚಿದವರಿಗೆ ನಾವೂ ಮಸಿ ಹಚ್ಚಬೇಕು. ಇದೆಲ್ಲಾ ಮಸಿ ಎರಚಾಟದ ಪಾಲಿಟಿಕ್ಸ್ ಸರ್. ಕೆಸರೆರಚಾಟ ಅಂತಾನೂ ಅನ್ಕೊಳ್ಳಿ. ಇಲ್ಲಿ ಒಳ್ಳೆಯವರು ಅನ್ನಿಸಿಕೊಂಡು ರಾಜಕಾರಣ ಮಾಡೋಕಾಗೋದಿಲ್ಲ.

ಸಿದ್ದಣ್ಣ : ಈ ಕಪ್ಪು ಚುಕ್ಕೆ ಇಟ್ಕೊಂಡು ನಾನು ಹೇಗೆ ಜನರಿಗೆ ಮುಖ ತೋರಿಸ್ಲಿ. ಅವರು ಬೇರೆ ಪಾದಯಾತ್ರೆ ಮಾಡಿ ಮಾನ ಕಳೀತೀವಿ ಅಂತಾ ಹೋಗವ್ರೆ.

ಬಂಡೆ : ಡೋಂಟ್ ವರಿ ಮಾಡ್ಕೋಬೇಡಿ ಸರ್. ನಾನಿದ್ದೀನಲ್ಲಾ ಬಂಡೆ. ಬಂಡೆ ತರ ನಿಮ್ಮ ಬೆನ್ನಿಗೆ ನಿಂತು ಕಾಪಾಡ್ತೇನೆ. ನಡೀರಿ ಸರ್. ಊರೂರಲ್ಲಿ ಸಮಾವೇಶ ಮಾಡಿ ಈ ಭ್ರಷ್ಟರ ಕಪ್ಪು ಮುಖವನ್ನ ಜನರಿಗೆ ತೋರಿಸೋಣ.. (ಬಂಡೆ ಹೋಗ್ತಾರೆ)

ಸಿದ್ದಣ್ಣ : (ಸ್ವಗತ) ಈತ ಬಂಡೆ ಹಾಗೆ ಬೆಂಬಲಕ್ಕೆ ನಿಲ್ತಾನೋ ಇಲ್ಲಾ ಮಂಡೆ ಮೇಲೆ ಬಂಡೆ ಎಳಿತಾನೋ ಯಾವನಿಗ್ಗೊತ್ತು. (ಮುಖಕ್ಕೆ ಅಟಿದ ಮಸಿಯನ್ನು ಟವಲ್ ನಿಂದ ಅಳಿಸಲು ಪ್ರಯತ್ನಿಸುತ್ತಾ ಮುಂದಕ್ಕೆ ಹೋಗುತ್ತಾರೆ)

ಹಿನ್ನಲೆಯಲ್ಲಿ ಹಾಡು :

ಏನು ಮಾಡೋದು ಇಂತಾ ಟೈಮಲ್ಲಿ ಯಾವೋನಿಗ್ಗೊತ್ತು..

ಹಿಂದಿನಿಂದ ಘೋಷಣೆಗಳು

ಒಬ್ಬ : ಮೂಡಾ ಮೂಢಾ

ಎಲ್ಲರೂ ಮೂಡಾ ಮೂಢಾ

ಇನ್ನೊಬ್ಬ : ಚುಕ್ಕೆ ಚುಕ್ಕೆ

ಎಲ್ಲರೂ : ಕಪ್ಪು ಚುಕ್ಕೆ

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು, ರಂಗಕರ್ಮಿ

ಇದನ್ನೂ ಓದಿ- ನರೇಂದ್ರ ಮೋದಿಯವರ ಸೋಲು ಭಾರತದ ಗೆಲುವು

More articles

Latest article