NHRC ಅಧ್ಯಕ್ಷರ ನೇಮಕಾತಿ ಪಕ್ಷಪಾತಿಯಾಗಿದೆ; ರಾಹುಲ್ ಗಾಂಧಿ, ಖರ್ಗೆ ಅಸಮಾಧಾನ

Most read

ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ಅಧ್ಯಕ್ಷರ ನೇಮಕ ಪ್ರಕ್ರಿಯೆ ದೋಷಪೂರಿತವಾಗಿದೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ನ್ಯಾ. ರಾಮಸುಬ್ರಮಣಿಯನ್ ಅವರ ನೇಮಕ ಪೂರ್ವ ನಿಯೋಜಿತವಾಗಿದೆ. ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಪರಸ್ಪರ ಸಮಾಲೋಚನೆ ಮತ್ತು ಒಮ್ಮತದ ನಿರ್ಧಾರ ಕೈಗೊಳ್ಳುವ ಸಂಪ್ರದಾಯವನ್ನು ಸರ್ಕಾರ ನಿರ್ಲಕ್ಷಿಸಿದೆ ಎಂದು ಇಬ್ಬರೂ ನಾಯಕರು ಆರೋಪಿಸಿದ್ದಾರೆ. ಎನ್‌ಹೆಚ್‌ಆರ್‌ಸಿ ಅಧ್ಯಕ್ಷರನ್ನು ಆಯ್ಕೆ ಮಾಡಲು ಪ್ರಧಾನಮಂತ್ರಿಗಳ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಸಮಿತಿ ರಚನೆಯಾಗುತ್ತದೆ. ಡಿ.18ರಂದು ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಈ ಸಮಿತಿ ಸಭೆಯಲ್ಲಿ ಸಮಿತಿ ಸಭೆಯ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಭಾಗವಹಿಸಿದ್ದರು.

ಸಭೆಯಲ್ಲಿ ಸರ್ಕಾರ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್ ಅವರ ಹೆಸರನ್ನು ಪ್ರಸ್ತಾಪಿಸಿತ್ತು. ಆದರೆ, ರಾಹುಲ್ ಗಾಂಧಿ ಮತ್ತು ಖರ್ಗೆ ಅವರು, ಅಗತ್ಯವಿರುವ ಅರ್ಹತೆ ಆಧಾರದ ಮೇಲೆ ನ್ಯಾಯಮೂರ್ತಿಗಳಾದ ರೋಹಿಂಗ್ಟನ್ ಫಾಲಿ ನಾರಿಮನ್ ಮತ್ತು ನ್ಯಾಯಮೂರ್ತಿ ಕುಟ್ಟಿಯಿಲ್ ಮ್ಯಾಥ್ಯೂ ಜೋಸೆಫ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ನ್ಯಾಯಮೂರ್ತಿ ರೋಹಿಂಗ್ಟನ್ ಫಾಲಿ ನಾರಿಮನ್ ಅವರು ಅಲ್ಪಸಂಖ್ಯಾತ ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿದ್ದು, ಸಾಂವಿಧಾನಿಕ ಮೌಲ್ಯಗಳಲ್ಲಿ ಅಚಲವಾದ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ. ಅದೇ ರೀತಿ ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯಕ್ಕೆ ಸೇರಿದ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿಗಳಾದ ಕುಟ್ಟಿಯಿಲ್ ಮ್ಯಾಥ್ಯೂ ಜೋಸೆಫ್ ಅವರು ವೈಯಕ್ತಿಕ ಸ್ವಾತಂತ್ರ್ಯ ಮತ್ತು ತಳ ಸಮುದಾಯಗಳ ರಕ್ಷಣೆಗೆ ಒತ್ತು ನೀಡುವ ತೀರ್ಪುಗಳನ್ನು ನೀಡಿ ಹೆಸರಾಗಿದ್ದಾರೆ. ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದ್ದರು.

ಎನ್‌ಹೆಚ್‌ಎಸ್‌ಆರ್‌ಸಿಯ ಇತರ ಸದಸ್ಯ ಸ್ಥಾನಗಳಿಗೆ ನ್ಯಾಯಮೂರ್ತಿ ಎಸ್. ಮುರಳೀಧರ್ ಮತ್ತು ನ್ಯಾಯಮೂರ್ತಿ ಅಕಿಲ್ ಅಬ್ದುಲ್ ಹಮೀದ್ ಖುರೇಷಿ ಅವರ ಹೆಸರನ್ನು ಕಾಂಗ್ರೆಸ್ ನಾಯಕರು ಶಿಫಾರಸು ಮಾಡಿದ್ದರು. ಹೊಸದಾಗಿ ನೇಮಕಗೊಂಡಿರುವ ಎನ್‌ಹೆಚ್‌ಆರ್‌ಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಪರಸ್ಪರ ಸಮಾಲೋಚನೆ ಮತ್ತು ಒಮ್ಮತದ ನಿರ್ಧಾರದ ಸ್ಥಾಪಿತ ಸಂಪ್ರದಾಯವನ್ನು ನಿರ್ಲಕ್ಷಿಸಲಾಗಿದೆ. ಇದು ಅತ್ಯಂತ ಕಳವಳಕಾರಿ ಬೆಳವಣಿಗೆಯಾಗಿದೆ. ಸಭೆಯಲ್ಲಿ ಪ್ರಸ್ತಾಪಿಸಲಾದ ಕೆಲವು ಗಂಭೀರ ವಿಷಯಗಳನ್ನು ಬದಿಗೊತ್ತಿ, ಸಂಖ್ಯಾಬಲ ಇದೆ ಎಂಬ ಕಾರಣಕ್ಕೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಮತ್ತು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಸಂಬಂಧ ಭಿನ್ನಾಬಿಪ್ರಾಯದ ಪತ್ರ ಬರೆದಿದ್ದಾರೆ.

ಎನ್‌ಹೆಚ್‌ಆರ್‌ಸಿಯು ಎಲ್ಲಾ ನಾಗರಿಕರ, ವಿಶೇಷವಾಗಿ ಸಮಾಜದಲ್ಲಿ ತುಳಿತಕ್ಕೊಳಗಾದ ಮತ್ತು ತಳಮಟ್ಟದ ವರ್ಗಗಳ ಮೂಲಭೂತ ಮಾನವ ಹಕ್ಕುಗಳನ್ನು ರಕ್ಷಿಸುವ ಕಾರ್ಯವನ್ನು ಹೊಂದಿರುವ ಪ್ರಮುಖ ಶಾಸನಬದ್ಧ ಸಂಸ್ಥೆಯಾಗಿದೆ. ಎನ್‌ಹೆಚ್‌ಆರ್‌ಸಿಯ ಮುಖ್ಯಸ್ಥರು ದೇಶದ, ಪ್ರಾದೇಶಿಕ, ಜಾತಿ, ಸಮುದಾಯ ಮತ್ತು ಧಾರ್ಮಿಕ ವೈವಿಧ್ಯತೆಯನ್ನು ಎತ್ತಿ ಹಿಡಿಯಬೇಕಿದೆ. ಎಲ್ಲರನ್ನೂ ಒಳಗೊಳ್ಳುವ ವೈವಿದ್ಯಮಯ ತೀರ್ಮಾನಗಳು ಇಲ್ಲಿ ಪ್ರಾಥಮಿಕ ಮಾನದಂಡವಾಗಬೇಕು. ಅಲ್ಲದೆ, ಕೇವಲ ಸಾಂಖ್ಯಿಕ ಬಹುಮತವಲ್ಲ ಎಂದು ಇಬ್ಬರು ನಾಯಕರು ಒತ್ತಿ ಹೇಳಿದ್ದಾರೆ.

More articles

Latest article