ಪ್ರಾಯೋಗಿಕ ಪರೀಕ್ಷೆಯ ಆ ಒಂದು ಭಯಾನಕ ದಿನ….

Most read

ಅವು ಡಿಪ್ಲೊಮಾ ಪರೀಕ್ಷೆಗಳು ನಡೆಯುತ್ತಿದ್ದ ದಿನಗಳು. ಥಿಯರಿ ಮುಗಿದಿತ್ತು. ಪ್ರಾಯೋಗಿಕ ಪರೀಕ್ಷೆಗಳು ನಡೆಯುತ್ತಿದ್ದವು. ರಾತ್ರಿ ಪೂರಾ ನಿದ್ರೆ ತ್ಯಾಗ ಮಾಡಿ ಡಿಜಿಟಲ್ ಎಲೆಕ್ಟ್ರಾನಿಕ್ಸ್ ಪ್ರಾಯೋಗಿಕ ಪರೀಕ್ಷೆಗೆ ಸಿದ್ಧವಾಗಿದ್ದೆ. ಆದರೆ ಆ ದಿನ ಪರೀಕ್ಷೆ ಆರಂಭಕ್ಕೂ ಮುನ್ನ ಒಂದು ಘಟನೆ ಸಂಭವಿಸಿ ನನ್ನನ್ನು ಇನ್ನಿಲ್ಲದಂತೆ ಕಾಡಿತು.   

ಮಧ್ಯಾಹ್ನ ಎರಡು ಘಂಟೆಗೆ ಬೆಲ್ ಆಯಿತು. ನಾವೆಲ್ಲರೂ ಪರೀಕ್ಷಾ ಕೊಠಡಿಯ ಒಳಹೊಕ್ಕೆವು. ಅದೊಂದು ವಿಶಾಲವಾದ ದೊಡ್ಡ ಕೊಠಡಿ. ಎಡ ಬಲ ದೊಡ್ಡ ದೊಡ್ಡ ಮೇಜುಗಳನ್ನು ಗೋಡೆಯ ಸಮೀಪಕ್ಕೆ  ಹಾಕಲಾಗಿ, ಮೇಜುಗಳ ನಡುವೆ ಹೆಚ್ಚು ಅಂತರವಿತ್ತು. ಮೇಜುಗಳ ಸಮೀಪಕ್ಕೆ ವಿದ್ಯುತ್ ಸಂಪರ್ಕ ಕೊಡಲಾಗಿತ್ತು. ನಾಲ್ಕು ವಿದ್ಯಾರ್ಥಿಗಳ ಒಂದು ಗುಂಪು ಒಂದೊಂದು ಮೇಜನ್ನು ಸುತ್ತುವರೆದಿತ್ತು. ಪರೀಕ್ಷೆ ಆರಂಭವಾಯಿತು. ಎದೆಯ ಬಡಿತ ಹೆಚ್ಚಾಯಿತು. ಅಕಸ್ಮಾತ್ ನಸೀಬು ಕೆಟ್ಟು ಪ್ರಯೋಗದ ಫಲಿತಾಂಶ ಬರದೇ ಹೋದರೆ…ಎಂಬಿತ್ಯಾದಿ ಪ್ರಶ್ನೆಗಳು ಅಂತರಂಗವನ್ನು ಉಜ್ಜುತ್ತಿದ್ದವು. ಗೆಳೆಯರಲ್ಲೂ ಅಂತಹ ಅಂಜಿಕೆಯಿದ್ದರೂ ತೋರಿಸಿಕೊಳ್ಳದೆ ಮಾತಿನಲ್ಲಿ ಮಗ್ನರಾಗಿದ್ದರು.

ನಮ್ಮ ಕಾಲೇಜಿನ ಉಪನ್ಯಾಸಕರಾದ ರವಿ ಸರ್‌ (ಕಾಲೇಜಿನ ಹೆಸರು ಬೇಡ) ಹಾಗೂ ಅನ್ಯ ಕಾಲೇಜಿನ ಒಬ್ಬರು ಉಪನ್ಯಾಸಕರು ಮೇಲ್ವಿಚಾರಕರಾಗಿ ನೇಮಕಗೊಂಡಿದ್ದರು. ಅವರಿಬ್ಬರು ಕೊಠಡಿ ಪ್ರವೇಶಿಸುತ್ತಿದ್ದಂತೆ ಇಡೀ ಕೊಠಡಿ ನಿಶ್ಶಬ್ದವಾಯಿತು.

ಉಪನ್ಯಾಸಕರು ನಮ್ಮ ಮೇಜಿನ ಸನಿಹ ಹಾದು ಹೋಗುತ್ತಿದ್ದರು. ನಾನು ಮೇಜಿನ ಬಲ ತುದಿಗೆ ನಿಂತಿದ್ದೆ. ಅವರಲ್ಲಿ ರವಿ ಸರ್ ನಮ್ಮ ಮೇಜಿನ ಕಡೆ ನೋಟ ಹರಿಸುವುದಕ್ಕೂ ನಾನು ಗೆಳೆಯರೊಂದಿಗೆ ಲಘುವಾಗಿ ನಕ್ಕು ನಮ್ಮ ಉಪನ್ಯಾಸಕರ ಕಡೆ ನೋಡುವುದಕ್ಕೂ ಸಮಯ ಒಂದೇ ಆಯಿತು. ಅಷ್ಟೇ ನಡೆದದ್ದು. ನನ್ನ ನೋಟದಲ್ಲಿ ಯಾವುದೇ ಕುಹುಕವಿರಲಿಲ್ಲ.

ಬಳಿಕ, ನಮ್ಮ ಟೇಬಲಿನತ್ತ ಬೆರಳು ಮಾಡಿ ಯಾರನ್ನೋ ಬರಲು ರವಿ ಸರ್ ಸನ್ನೆ ಮಾಡಿದಾಗ ನಾನಲ್ಲವೆಂದು ಭಾವಿಸಿ ನೋಟ ಬದಲಿಸಿದೆ. ನಾನಾಗಿರಲು ಸಾಧ್ಯವೇ ಇಲ್ಲ ಎನ್ನುವುದು ನನ್ನ ಬಲವಾದ ನಂಬುಗೆಯಾಗಿತ್ತು. ಆದರೆ ನನ್ನ ಗ್ರಹಚಾರ ಅವತ್ತು ಕೆಟ್ಟಿತ್ತು. ನನ್ನ ಸಹಪಾಠಿಗಳು ಮುಖ ಮುಖ ನೋಡಿಕೊಳ್ಳುತ್ತಿದ್ದರು ಯಾರು ಅಂತ? ಅನುಮಾನವೇ ಬೇಡ ಬುಲಾವ್ ಬಂದಿರುವುದು ನನಗೆ ಎಂದು  ಖಾತ್ರಿಯಾದ ಮೇಲೆ ಭಯದಿಂದಲೇ ಭಾರವಾದ ಹೆಜ್ಜೆಗಳನಿಟ್ಟೆ. ಯಾಕಾದರೂ ನನ್ನ ಕರಿತಾರೋ, ಮೊದಲೇ ಉಸಿರುಗಟ್ಟಿಸುವ ವಾತಾವರಣ, ಏನಾದರೂ ಎಡವಟ್ಟಾದರೆ ಗೆಳೆಯರ ಮುಂದೆ ಅಪಹಾಸ್ಯಕ್ಕೆ ಈಡಾಗುವೆನು ಎನ್ನುವ ಅಂಜಿಕೆ ಮನದಲ್ಲಿ ಮನೆ ಮಾಡಿತ್ತು.

ಅವರ ಎದುರು ಹೋಗಿ ಕೈ ಕಟ್ಟಿ ನಿಂತು ದೈನ್ಯನಾಗಿ ಏನು ಸಾರ್ ಎಂದೆ? ‘ನನ್ನ ನೋಡಿ ಯಾಕೆ ನಗಾಡಿದೆ?‘ ಎಂದು ಕೋಪದಿಂದ ಕೇಳಿದರು. ಮೊದಲೇ ಪರೀಕ್ಷಾ ಭಯದಿಂದ ಕಂಗಾಲಾಗಿದ್ದ ನಾನು ಅವರು ಹಾಗೆ ಕೇಳಿದಾಗ ಥರ ಥರನೇ ನಡುಗಿ ಹೋದೆ. ಮಾತು ಹೊರಡಲಿಲ್ಲ

‘ಸಾರ್ ಅದು! ‘ಇಲ್ಲ ಇಲ್ಲ ನೀನು ನನ್ನನ್ನು ನೋಡಿಯೇ ನಗಾಡಿದೆ‘ ಎಂದು ವಾದಿಸಿದರು. ʼನಾನು ನಿಮ್ಮನ್ನು ನೋಡಿ ನಗಲಿಲ್ಲʼ ಅಂದೆ ಕ್ಷೀಣ ಸ್ವರದಲ್ಲಿ…….

ನಗಾಡ್ತೀಯಾ?………ಇರು ಎಂದು ಮೇಲೆ ಕೆಳಗೆ ತಲೆಯಾಡಿಸಿ ‘ನಿನಗೆ ಉತ್ತರ ಪತ್ರಿಕೆ ಕೊಡುವುದಿಲ್ಲ ಪಕ್ಕದಲ್ಲಿ ನಿಲ್ಲು ‘ಎಂದು ಗಂಭೀರವಾಗಿ ನುಡಿದರು.

ನಂತರ ಎಲ್ಲರಿಗೂ ರೆಕಾರ್ಡ್ ಬುಕ್ಕುಗಳನ್ನು ಮೇಜಿನ ಮೇಲೆ ಇರಿಸಲು ಹೇಳಿ ಉತ್ತರ ಪತ್ರಿಕೆಗಳನ್ನು ನೀಡಿದರು. ಉತ್ತರ ಪತ್ರಿಕೆಗಳನ್ನು ನಾಲ್ಕು (ABCD) ವಿಧಗಳಾಗಿ ಪ್ರತ್ಯೇಕಿಸಲಾಗಿತ್ತು. ನಮ್ಮ ಕಾಲೇಜಿನ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪ್ರಾಯೋಗಿಕ  ಪ್ರಶ್ನೆಗಳನ್ನು ನಿರ್ದೇಶಿಸುತ್ತಿದ್ದರು. ನಾನು ನಿಂತೇ ಇದ್ದೆ. ಸಹಪಾಠಿಗಳು ಪ್ರಶ್ನೆ ಬರೆದುಕೊಂಡ ಮೇಲೆ ತಮ್ಮ ತಮ್ಮ ಪ್ರಯೋಗ ಪರೀಕ್ಷೆಯ ಉತ್ತರಗಳನ್ನು ಬರೆಯುವಲ್ಲಿ ನಿರತರಾಗಿದ್ದರು. ಅವರಲ್ಲಿ ಕೆಲವರ ಕನಿಕರದ ನೋಟಗಳು ನನ್ನ ಮೇಲೆ ನೆಟ್ಟಿದ್ದವು. ಎಲ್ಲರ ಎದುರು ಯಾವುದೇ ತಪ್ಪು ಮಾಡದೇ ಇದ್ದರೂ ವಿಧಿ ನನ್ನನ್ನು ಒಂದು ಯಕಶ್ಚಿತ್‌ ಕಾರಣಕ್ಕೆ ಅಪರಾಧಿಯನ್ನಾಗಿಸಿ ಕೈ ಕಟ್ಟಿ ನಿಲ್ಲಿಸಿತ್ತು. ಆದರೂ ಶಾಂತವಾಗಿ ಸಹನೆಯಿಂದ ಹೆಬ್ಬಂಡೆಯಂತೆ ನಿಂತೇ ಇದ್ದೆ.

ಎಲೆಕ್ಟ್ರಾನಿಕ್ಸ್ ಪ್ರಯೋಗಾಲಯ- ಸಾಂದರ್ಭಿಕ ಚಿತ್ರ

ನಾಗಿರೆಡ್ಡಿ, ಫ್ರೌಡ ಶಾಲೆಯಿಂದಲೂ ಗೆಳೆಯ. ಮಾತು ಜಾಸ್ತಿ. ವಿಷಯ ಗೊತ್ತಿಲ್ಲದೆ ಇದ್ದರೂ ವಾದದಲ್ಲಿ ಹಿಂದೆ ಸರಿಯುತ್ತಿರಲಿಲ್ಲ. ಅವನ ಉದ್ದೇಶ ಇಷ್ಟೇ- ಎಲ್ಲೂ ಹಿಂದೆ ಬೀಳಬಾರದು, ನಗರ ಪ್ರದೇಶದ ಹೈ-ಫೈ ವಿದ್ಯಾರ್ಥಿಗಳ ಎದುರು ಹಳ್ಳಿಯ ರೈತರ ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎಂದು ಬಿಂಬಿಸುವುದು. ಹಾಗಾಗಿ ಕೊಂಚ ಹಿಂಜರಿಕೆ ತೋರಿದರೂ ತುಳಿದೇ ಬಿಡುವರು ಎಂದು ಭಾವಿಸಿದ್ದನು. ಸಮಯ ಸಿಕ್ಕಾಗಲೆಲ್ಲ ಅವರ ಮೇಲೆ ದಂಡೆತ್ತಿ ಹೋಗುತ್ತಿದ್ದನು.ಅವನ ಪುಂಡಾಟವನ್ನು ನೋಡುವುದೇ ನನಗೆ ಖುಷಿ ಕೊಡುತ್ತಿತ್ತು. ನಾಗ ಸುಳ್ಳನ್ನು ಸತ್ಯ ಮಾಡುತ್ತಿದ್ದ ಹಠಮಾರಿ ಗೆಳೆಯ. ತನ್ನ ಮೊಂಡು ಹಠದಿಂದಲೇ ಅವನ ಕೊರಳಿಗೆ ಉರುಳಾಗುವಂತೆ ಮಾಡಿಕೊಂಡನು. ಡಿಪ್ಲೊಮಾ ಮೊದಲ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಅನುತ್ತೀರ್ಣ ಆಗಿದ್ದನು. ಈ ವಿಷಯವನ್ನು ಗೆಳೆಯರಿಂದ ಹಿಡಿದು ಮನೆಯವರಿಂದಲೂ ಮುಚ್ಚಿಟ್ಟಿದ್ದನು. ಗೆಳೆಯರು ಕೇಳಿದರೆ ಎಲ್ಲ ಪಾಸು ಅಂತಿದ್ದ. ಎರಡು ತಿಂಗಳಿಗೊಮ್ಮೆ ಕಿರು ಪರೀಕ್ಷೆಗಳು ನಡೆಯುತ್ತಿದ್ದವು. ಅದರಲ್ಲಿ ಏನೂ ಪ್ರಗತಿ ಕಂಡು ಬರದೇ ಇದ್ದದ್ದನ್ನು ಕಂಡು ಉಪನ್ಯಾಸಕರು ನಿಮ್ಮ ಪೋಷಕರನ್ನು ಕರೆ ತರದೆ ಇದ್ದರೆ ಕ್ಲಾಸಿಗೆ ಬರ ಕೂಡದು ಎಂದು ಕಟ್ಟಾಜ್ಞೆ ನೀಡಿದಾಗ ವಿಧಿ ಇಲ್ಲದೆ ನಾಗಿರೆಡ್ಡಿ ತನ್ನ ತಂದೆಯನ್ನು ಕರೆತರ ಬೇಕಾಯಿತು.

 “ಏನ್ರೀ ನಿಮ್ಮ ಮಗ ಯಾವ ವಿಷಯದಲ್ಲೂ ಪಾಸಾಗಿಲ್ಲ ಆದರೂ ನೀವೂ ಏಕೆ ಅವನಿಗೆ ಬುದ್ಧಿ ಹೇಳಿಲ್ಲ? ಓದಿನಲ್ಲಿ ಪ್ರಗತಿನೇ ಇಲ್ಲ, ನೋಡಿ” ಎಂದು ಫಲಿತಾಂಶವನ್ನು ಮುಂದಿರಿಸಿದರು. ಶಾಕ್‌ ಆದ ನಾಗಿರೆಡ್ಡಿಯ ಅಪ್ಪ ಅವನಿಗೆ ಅವರೆದುರೇ ಎರಡು ಬಾರಿಸಿ ಕಾಲೇಜಿಗೆ ಬಂದು ಏನು ಕಡಿದಾಕಿದ್ದೀಯಾ? ನಿನಗೆ ಕಾಲೇಜು ಲಾಯಕ್ಕಿಲ್ಲ. ನಾಳೆಯಿಂದ ತೋಟಕ್ಕೆ ನಡಿ. ಮೈ ಬಗ್ಗಿಸಿ ಕೆಲಸ ಮಾಡಿದರೆ ಗೊತ್ತಾಗುತ್ತೆ ಎಂದು ತರಾಟೆಗೆ ತೆಗೆದುಕೊಂಡು ಮನೆಗೆ ಬಾ ನಿನಗೆ ಇದೆ ಎನ್ನತ್ತಾ ರೋಷಗೊಂಡು ಹಿಂತಿರುಗಿದರು.

ನಂತರದ ದಿನಗಳಲ್ಲಿ ನಾಗನ ಅಪ್ಪ ಕಾಲೇಜಿಗೆ ಬಂದು ಮಗನ ಓದಿನ ಬಗ್ಗೆ ಉಪನ್ಯಾಸಕರಲ್ಲಿ ತನಿಖೆ ಮಾಡಲು ಶುರು ಮಾಡಿದರು. ಯಾವ ವಿಷಯವನ್ನು ಸಹಪಾಠಿಗಳಿಗೆ ಗೊತ್ತಾಗದಂತೆ ಗೌಪ್ಯವಾಗಿರಿಸಿದ್ದನೋ ಅದು ಜಗಜ್ಜಾಹೀರಾಯಿತು ಇದನ್ನೇ ನೆಪ ಮಾಡಿಕೊಂಡು ಕೆಲವು ಸಹಪಾಠಿಗಳು ನಾಗನನ್ನು ಮನ ಬಂದಂತೆ ಅವಮಾನಿಸಿದರು. ಚುಚ್ಚುವಂತೆ ಮಾತಾಡಿದರು, ಠೀಕಿಸಿದರು. ಉಪನ್ಯಾಸಕರು ಕೂಡ ತರಗತಿಯಲ್ಲಿ ಎಲ್ಲರ ಎದುರು ನೋಟ್‌ ಬುಕ್‌ ನೋಡಿ ನಾಗಿರೆಡ್ಡಿ ಏನಿದು ಬರವಣಿಗೆ? ಒಂದಕ್ಕೊಂದು ಕೂಡಿಸಿದ್ದೀಯ.. ಎಲ್‌ಕೆಜಿ ಮಕ್ಕಳಿಗಿಂತಲೂ ಕೆಟ್ಟದಾಗಿ ಇದೆ.. ಕನಿಷ್ಠ ನಿನಗಾದರೂ ಅರ್ಥವಾಗುತ್ತದೆಯೇ? ಎಂದು ಹೀಯಾಳಿಸಿದರೂ ಪಿಳಿ ಪಿಳಿ ಅಂತ ಕಣ್ಣು ಬಿಟ್ಟು ನೋಡುತ್ತಿದ್ದನೇ ಹೊರತು ಯಾವುದೇ ರೀತಿಯ ಉತ್ತರ ನೀಡುತ್ತಿರಲಿಲ್ಲ. ಅವನಿಗೆ ಕಿವಿ ಸರಿಯಾಗಿ ಕೇಳುತ್ತಿರಲಿಲ್ಲ. ಆದರೆ ಹೈಸ್ಕೂಲಿನಲ್ಲಿ ನಾನು ನೋಡಿದಂತೆ ಯಾವತ್ತೂ ಅವನ ವೈಕಲ್ಯ ತೊಡಕಾದ ಉದಾಹರಣೆ ಇರಲಿಲ್ಲ. ವೈಕಲ್ಯವನ್ನು ಮೀರಿ ಸಮಾನ ಸ್ಪರ್ಧೆ ನೀಡುತ್ತಿದ್ದನು. ಆದರೆ ಓದಿನಲ್ಲಿ ಹಿಂದೆ ಉಳಿದನು.

ಉಪನ್ಯಾಸಕರಿಗೆ ನಾಗಿರೆಡ್ಡಿಯ ವೈಕಲ್ಯದ ಬಗ್ಗೆ ತಿಳಿದಿರಲಿಲ್ಲ. ಬಹುಶಃ ತಿಳಿದಿದ್ದರೆ ಆ ರೀತಿ ಅವಮಾನಿಸುತ್ತಿರಲಿಲ್ಲವೇನೋ? ಅವನನ್ನು ನೋಡಿದ ಕಡೆಯ ದಿನಗಳಲ್ಲಿ ಅವನು ಖಿನ್ನತೆಗೆ ಒಳಗಾದವನಂತೆ ಕಂಡಿದ್ದನು. ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಮಧ್ಯಾಹ್ನ ಊಟ ಮಾಡುವಾಗಲೂ ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಮನಸ್ಸು ಸಾಕಷ್ಟು ನೊಂದಿತ್ತು ಅನಿಸುತ್ತೆ. ಸದಾ ಬೆನ್ನಿಗೆ ನಿಂತಿದ್ದ ಅಪ್ಪನಿಂದ ಓದಲು ಒತ್ತಡ ಹೆಚ್ಚಿದಾಗ ಏಕಾಂಗಿಯಾಗಿ ತೋಟದ ಮನೆಗೆ ಹೋದವನು ಸಾವಿಗೆ ಶರಣಾಗಿದ್ದನು.

ಹಳ್ಳೀಲಿ ಅವಮಾನ ಅಪಮಾನಗಳನ್ನೆ ಉಂಡು ಬೆಳೆದಿದ್ದ ನನಗೆ  ಇಂತಹವನ್ನೆಲ್ಲ ಸಹಿಸಿಕೊಳ್ಳುವ ಸಹನೆ ಸಹಜವಾಗಿ ರೂಢಿಯಾಗಿ ಬಂದಿತ್ತು. ಆದರೆ ಇದು ಹೊಸ ಬಗೆಯದು. ಎಲ್ಲರ ಇರಿಯುವ ನೋಟಗಳು ಬಾಣಗಳಂತೆ ಎದೆಗೆ ನಾಟುತ್ತಿದ್ದವು. ಕ್ಷಣಗಳು ಉರುಳುತ್ತಿದ್ದವು. ಹಾಗೇನೇ ನನ್ನ ಮನೆಯ ಪರಿಸ್ಥಿತಿ ಕಣ್ಣ ಮುಂದೆ ತೆರೆದು ಕೊಂಡಿತು. ಮಳೆ ಬಂದರೆ ತೊಟ್ಟಿಕ್ಕುವ, ಆರು ಜನರಿಗಿಂತ ಒಬ್ಬರು ಹೆಚ್ಚಾದರೂ ಮಲಗಲು ಸಾಕಾಗದ ʼಅರಮನೆʼ ನಮ್ಮದು. ಅದೆಷ್ಟೋ ವರ್ಷಗಳಿಂದ ಗೋಡೆಗೆ ಸಿಮೆಂಟಿನಿಂದ ಪ್ಲಾಸ್ಟರಿಂಗ್ ಮಾಡದೆ ಬಡಕಲು ದೇಹದ ಎಲುಬುಗಳು ಕಂಡಂತೆ ಇಟ್ಟಿಗೆಗಳು ಕಾಣುತ್ತಿದ್ದವು. ಬಿಸಿಲಲ್ಲಿ ಬೆವರು ಹರಿಸಿ ದುಡಿಯುವ ಅಪ್ಪ. ಅಪ್ಪನ ದುಡಿಮೆಯೇ ನಮ್ಮ ಕುಟುಂಬದ ಆಸರೆ. ನಾನು ಓದದೇ ಹೋದರೆ ಅಪ್ಪ, ಚಿಕ್ಕಮ್ಮ, ಸಹೋದರ,ಇಬ್ಬರು ಸಹೋದರಿಯರು ಇವರ ಸ್ಥಿತಿ ಏನಾಗಬೇಡ? ಎಂಬ ವಾಸ್ತವ ನೆನಪಾಗಿ ಕಣ್ಣಾಲಿಗಳು ತೇಲಿ ಬಂದು ಅವರ ಆಸೆಗಳು ಮಣ್ಣು ಪಾಲಾಗಬಾರದು ಎಂದು ಯೋಚಿಸಿ ಉಪನ್ಯಾಸಕರ ಬಳಿ ತೆರಳಿದೆ.

ಕೈ ಕಟ್ಟಿ ವಿನಯವಾಗಿ, ”ಸಾರ್ ನಾನು ನಿಮ್ಮನ್ನು ನೋಡಿ ನಗಲಿಲ್ಲ ಸ್ನೇಹಿತರೊಟ್ಟಿಗೆ ಮಾತಾಡುವಾಗ ಅಕಸ್ಮಾತ್ ನಗು ಬಂತು” ಎಂದು ಸಮಜಾಯಿಶಿ ನೀಡಿದೆ. ಆದರೂ ಅವರು ನಂಬಲಿಲ್ಲ. ಏನೊಂದೂ ಮಾತಾಡಲಿಲ್ಲ. ಕನಿಷ್ಟ ನನ್ನೆಡೆಗೆ ನೋಡಲೂ ಇಲ್ಲ. ಅಂತಿಮವಾಗಿ ಸ್ವಾಭಿಮಾನ ಬದಿಗಿರಿಸಿ ‘ಸಾರ್ ನಾವು ಬಡವರು, ನನ್ನ ಓದಿನ ಮೇಲೆ ಆಧಾರವಾಗಿರುವ ಕುಟುಂಬವಿದೆ, ದಯವಿಟ್ಟು ಕರುಣೆ ತೋರಿ ಸರ್, ನನ್ನ ವರ್ತನೆಯಿಂದ ನಿಮ್ಮ ಮನಸ್ಸಿಗೆ ನೋವಾಗಿದ್ದರೆ ದಯವಿಟ್ಟು ಮನ್ನಿಸಿ‘ ಎಂದು ಅಂಗಲಾಚಿದೆ. ಆಗ ಅವರ ಮನಸ್ಸು ಬದಲಾಗಿ ‘ಆಯ್ತು ಇನ್ನು ಮುಂದೆ ಹೀಗೆ ಮಾಡಬೇಡ‘ ಎಂದು ಎಚ್ಚರಿಕೆ ಕೊಟ್ಟು ಉತ್ತರ ಪತ್ರಿಕೆ ನೀಡಿ ‘ಯಾರಿಗೆ “A” ಉತ್ತರ ಪತ್ರಿಕೆ ಹೋಗಿರುತ್ತದೆಯೋ ಅವರಲ್ಲಿ ಪ್ರಶ್ನೆ ಬರೆದುಕೋ‘ ಎಂದು ಆದೇಶಿಸಿದರು.

ಲಘುನೇ ಪ್ರಶ್ನೆಗೆ ಸಂಬಂಧಿಸಿದ ಉತ್ತರ ಹಾಗೂ ಸರ್ಕ್ಯೂಟ್ ಡಯಾಗ್ರಮನ್ನು ಬಿಡಿಸಿದೆ. ಆದರೆ ಟ್ರೂತ್ ಟೇಬಲ್ ಬರೆಯಲು ಫಾರ್ಮುಲ (ಸೂತ್ರ) ನೆನಪಾಗಲೇ ಇಲ್ಲ. ʼಅರೇ!….. ರಾತ್ರಿ ಅಷ್ಟು ಸಾರಿ ಬರೆದು ಅಭ್ಯಾಸ ಮಾಡಿದ್ದೇನಲ್ಲ ಏನಾಯಿತು ನನಗೆʼ ಎಂದು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ನೆನಪಿಗೆ ಬರಲೇ ಇಲ್ಲ. ಭಯದಿಂದ ಕೈಗಳು ನಡುಗುತಿದ್ದವು. ಓ ದೇವರೇ ಏನಿದು? ನೆನಪಿನ ಶಕ್ತಿ ಕರುಣಿಸು ಎಂದು ಕಣ್ಣು ಮುಚ್ಚಿ ದೇವರನ್ನು ಬೇಡಿದೆ. ಆ ದೇವರಿಗೆ ನನ್ನ ಮೊರೆ ಮುಟ್ಟಲಿಲ್ಲ. ಕೊನೆಗೂ ಸೂತ್ರ ನೆನಪಾಗಲಿಲ್ಲ. ಯೋಚಿಸಿ ಯೋಚಿಸಿ ಸೋತು ಬಸವಳಿದು ತೋಚಿದ್ದನ್ನು ಬರೆದು ಲೆಕ್ಚರರಿಗೆ ತೋರಿಸಲು ಅತ್ತ ಧಾವಿಸಿದೆ. ಅಸಡ್ಡೆಯ ನೋಟ ಬೀರಿ ಉತ್ತರ ಪತ್ರಿಕೆಯನ್ನು ಸ್ವೀಕರಿಸಿ ಇನ್ನೊಂದು ರೆಕಾರ್ಡ್‌ ಬುಕ್ಕನ್ನು ಮುಂದಿಟ್ಟುಕೊಂಡು ಪರಿಶೀಲಿಸಿ ಸರ್ಕ್ಯೂಟ್ ಡಯಾಗ್ರಮ್ ಸರಿಯಾಗಿದ್ದನ್ನು ಗಮನಿಸಿ ವೆರಿಗುಡ್ ಎನ್ನುವ ಹೊಗಳಿಕೆ ಅವರ ಬಾಯಿಂದ ಹೊರ ಹೊಮ್ಮಿತ್ತು. ಆದರೆ ನಂತರ ಟ್ರೂತ್ ಟೇಬಲ್ಲಿಗೆ ಬಂದಾಗ ಹು‌ ಹೂ….. ಎಂದು ಅಡ್ಡಡ್ಡ ತಲೆಯಾಡಿಸಿ ಯಾರಿಗೂ ನೀಡದ  ಸಹಾಯವನ್ನು  ನನಗೆ ನೀಡಿದರು. ಅದು ಏನೆಂದರೆ ‘ಇನ್ನೊಂದು ಅವಕಾಶ ಕೊಡುತ್ತೇನೆ ಅದರಲ್ಲಿ ಟ್ರೂತ್ ಟೇಬಲ್ ಸರಿಯಾಗಿದ್ದಲ್ಲಿ ನೀನು ಪ್ರಾಯೋಗಿಕವಾಗಿ ಮಾಡುವುದೇ ಬೇಡ, ನಿನಗೆ ಪೂರಾ ಅಂಕಗಳನ್ನು ಕೊಡುತ್ತೇನೆ‘ ಎಂಬುದಾಗಿತ್ತು. ಆದರೆ ನಾನು ಅದಾಗಲೇ ಮಾನಸಿಕ ಆಘಾತದಿಂದ ಕುಗ್ಗಿ ಹೋಗಿದ್ದೆ. ಇದು ಸಾಧ್ಯವಾಗುವುದು ಕನಸಿನ ಮಾತು ಎಂದು ಮನದಲ್ಲಿ ಹೇಳಿಕೊಂಡು ತಲೆಯಾಡಿಸಿ ಪ್ರಯತ್ನಿಸುತ್ತೇನೆ ಸಾರ್ ಎಂದೇಳಿ  ಹಿಂತಿರುಗಿದೆ.

ನನಗೆ ನಿಗದಿಯಾಗಿದ್ದ ಮೇಜಿಗೆ ಬಂದು ಯೋಚನೆಯಲ್ಲಿ ತೊಡಗಿದೆ. ಒಂದು ಲಾಜಿಕ್ ಇದೆ. ಅದು ನೆನಪಾದರೆ ಸುಲಭವಾಗಿ ಟ್ರೂತ್ ಟೇಬಲ್ ಬರೆಯ ಬಹುದು. ಏನದು ಲಾಜಿಕ್? ಎಂದು ದೀರ್ಘ ಆಲೋಚನೆಯಲ್ಲಿ ಮುಳುಗಿ ಹೋದೆ. ಕೊನೆಗೆ ಅರೆ ಬರೆ  ನೆನಪಾಗಿ ಪುನಃ ಬರೆದುಕೊಂಡು ಹೋದೆ. ಆಗಲೂ ತಲೆ ಅಡ್ಡಡ್ಡ ಆಡಿಸಿದರು. ಇನ್ನು ಸೋತು ಹೋದೆ ಎಂದು ಸಪ್ಪೆ ಮೋರೆ ಹೊತ್ತು ಹಿಂತಿರುಗಿದೆ. ನಿಲ್ಲಲು ಕೂಡಾ ಕಾಲುಗಳಲ್ಲಿ ಚೈತನ್ಯವಿರಲಿಲ್ಲ. ಕೈಗಳು ನಡುಗುತ್ತಿದ್ದವು. ಚಡಪಡಿಕೆ ಶುರು ಆಯಿತು. ಫೇಲಾಗಿ ಬಿಡುವೆನು ಎಂಬ ಭೀತಿ ಮನಸನ್ನು ಆವರಿಸಿ ಒತ್ತಡಕ್ಕೆ ಒಳಗಾದೆ. ಏನು ಮಾಡೋದು? ಯಾಕೆ ಹೀಗೆ ಆಗುತ್ತಿದೆ? ಎಂದು ತಲೆ ಕೆಳಗೆ ಮಾಡಿ ನಿಂತು ಬಿಟ್ಟೆ.

ನಾನು ಡಿಪ್ಲೊಮಾ ಸೇರಿದಾಗ ಹಳ್ಳಿಲಿ “ವಾಡಿತೋ ಕಾದು, ಒಕ ಯಾಡದಿ ಅಂತೆ! ಮಲ್ಲ ಯನಕ್ಕಿ ವಚ್ಚೆಸ್ತಾಡು” (ಅವನಿಂದ ಆಗಲ್ಲ, ಒಂದು ವರ್ಷ ಅಷ್ಟೇ, ಹಿಂದೆ ಬಂದು ಬಿಡುತ್ತಾನೆ) ಎಂದು ಬಹುತೇಕರು ತೆಲುಗಿನಲ್ಲಿ ಕಿಂಡಲ್‌ ಮಾಡಿ ಭವಿಷ್ಯ ನುಡಿದಿದ್ದ ಮಾತುಗಳು ನೆನಪಾದವು. ಇಲ್ಲ ಹಾಗಾಗಲಿಕ್ಕೆ ಬಿಡುವುದಿಲ್ಲ ಎಂದು ಆತ್ಮಸ್ಥೈರ್ಯ ಪಡೆಯಲು ಪ್ರಯತ್ನಿಸಿದೆ.

ನನ್ನ ಅಸಹಾಯಕ ಸ್ಥಿತಿಯನ್ನು ಕಂಡ ಶ್ಯಾಮಲಗೆ ಕನಿಕರ ಉಂಟಾಗಿ, ಉತ್ತರ ಪತ್ರಿಕೆಯನ್ನು ಪಡೆದು ಬರೆದು ಕೊಟ್ಟಳು. ಆಗ ಕೊಂಚ ಸಮಾಧಾನಗೊಂಡು ಬಹುಶಃ ಈ ಸಾರಿ ಸರಿಯಾಗಿದ್ದೀತು ಎಂದು ಉತ್ಸಾಹದಿಂದ ಉಪನ್ಯಾಸಕರಿಗೆ ಉತ್ತರ ಪತ್ರಿಕೆ ನೀಡಿ ಕುತೂಹಲದಿಂದ ಅವರ ಮುಖವನ್ನೆ ದಿಟ್ಟಿಸಿದೆ. ಆದರೆ ದುರದೃಷ್ಟ ನನ್ನ ಬೆಂಬಿಡದ ಬೇತಾಳನಂತೆ ಕಾಡುತ್ತಿತ್ತು. ಈ ಬಾರಿಯೂ ತಪ್ಪಾಗಿತ್ತು. ಕೊನೆಗೆ ಅವರಿಗೂ ಸಾಕಾಗಿ ‘ಆಯ್ತು.. ಏನೋ ಮಾಡು‘ ಎಂದು ಕರುಣಿಸಿ ಯಾರಿಗೆ ನಿನ್ನ ಪ್ರಾಯೋಗಿಕ ಪ್ರಶ್ನೆ ಬಂದಿದೆಯೋ ನೋಡಿಕೊಂಡು ಅವರನ್ನು ಕೂಡಿಕೋ ಎಂದು ಅನುಮತಿ ನೀಡಿದರು.

ರಾಜು ಹಾಗೂ ನನ್ನದು ಒಂದೇ ಪ್ರಶ್ನೆಯಾಗಿತ್ತು. ಅವನದು ಎಲ್ಲವೂ ಸರಿಯಾಗಿತ್ತು. ಆದರೆ ಕನೆಕ್ಷನ್ ತಪ್ಪು ಮಾಡಿದ್ದನು. ಹಾಗಾಗಿ ಅನುಮತಿ ಸಿಕ್ಕರೂ ಟ್ರೂತ್ ಟೇಬಲ್ ಸರಿಯಾಗಿರಲಿಲ್ಲ. ಆದರೂ ಪ್ರಾಕ್ಟಿಕಲ್ ಮಾಡಿ ಎಂದಿದ್ದು ನನ್ನಲ್ಲಿ ಭಯಮಿಶ್ರಿತ ಸಂದೇಹ ಮೂಡಿಸಿತು. ಏನಾದರಾಗಲಿ ಎಂಬ ಮೊಂಡು ಧೈರ್ಯದಲ್ಲಿ ಎಕ್ಸ್‌ಪರಿಮೆಂಟ್ ಮಾಡಲು ಅಣಿಯಾದೆ. ಆದರೆ ಔಟ್‌ಪುಟ್ ಬರದೇ ಹೆಣಗಾಡುತ್ತಿದ್ದನು ರಾಜು. ಬುದ್ದಿವಂತನಾಗಿದ್ದ ಅವನೇ ತಡಬಡಾಯಿಸಿದ್ದು ಸೋಜಿಗವೆನಿಸಿತು. ‘ನಾನು ಪ್ರಯತ್ನಿಸಲೇ‘ ಎಂದಾಗ ರಾಜು ಒಪ್ಪಿ ನನಗೆ ಬಿಟ್ಟುಕೊಟ್ಟನು. ಡಯಾಗ್ರಮ್ ನೋಡಿಕೊಂಡು ಪಟಾ ಪಟ್ ಅಂತ ಕನೆಕ್ಷನ್ ಮಾಡಿ ಮುಗಿಸಿ ವಿದ್ಯುತ್ ಸಂಪರ್ಕ ಕೊಟ್ಟು ಔಟ್‌ಪುಟ್ ಪರೀಕ್ಷಿಸಿದೆ. ಸರಿಯಾಗಿತ್ತು. ಆಗ ಕಂಬನಿ ಆನಂದದಿಂದ ಹೊರ ಚಿಮ್ಮಿತು. ನೆನಪು ಕೂಡಾ ಮರಳಿತು. ಹಾಗೆನೇ ಟ್ರೂತ್ ಟೇಬಲ್ ಸರಿ ಮಾಡಿಕೊಂಡು ಉಪನ್ಯಾಸಕರ ಬಳಿ ತೆರಳಿ ‘ಸಾರ್ ನಂದು ಔಟ್ ಪುಟ್ ಬಂತು‘ ಎಂದೆ ಹಿಗ್ಗಿನಿಂದ. ಅವರಿಗೆ ಸಂದೇಹ ‘ಇವನಿಗೆ ಔಟ್ ಪುಟ್ ಬಂದಿರಲಾರದು‘, ನಾನು ಯಾಕೆ ಇವನನ್ನು ಫೇಲ್ ಮಾಡಬೇಕು? ಇವನ ಹಣೆಬರಹವನ್ನು ಅನ್ಯ ಕಾಲೇಜಿನವರೇ ನಿರ್ಧರಿಸಲಿ ಎಂದು ಅವರತ್ತ ನೋಟ ಹರಿಸಿ ‘ಸಾರ್ ಯೂ ಕ್ಯಾನ್‘ ಎಂದರು ಅವರು ವೈ ನಾಟ್? ಎನ್ನುತ್ತಾ ನನ್ನತ್ತ ಧಾವಿಸಿದರು.

ಅನ್ಯ ಕಾಲೇಜಿನ ಮೇಲ್ವಿಚಾರಕರು ಬಂದು ಔಟ್ ಪುಟ್ ಪರಿಶೀಲಿಸಿ ಸರಿಯಿದೆ ಎಂದು ಸಮ್ಮತಿಸಿ ತಮ್ಮ ಜಾಗಕ್ಕೆ ಮರಳಿದರು. ನಂತರ ವೈವಾ ಸರದಿ. ಪುನಃ ನಮ್ಮ ಉಪನ್ಯಾಸಕರ ಬಳಿ ತೆರಳಬೇಕಾಯಿತು. ಒಂದೆರಡು ಪ್ರಶ್ನೆ ಕೇಳಿದರು. ಸಮಂಜಸ ಉತ್ತರವನ್ನೆ ಕೊಟ್ಟೆ. ಆದರೂ ‘ರಾಜು ಮಾಡಿದ್ದನ್ನು ನೀನು ತೋರಿಸಿದ್ದೀಯಾ‘ ಎಂದು ಹೀಯಾಳಿಸಿ ನುಡಿದರು. ಆ ಕೊಂಕು ಮಾತು ಕೇಳುತ್ತಲೇ ಆಕಾಶವೇ ಮಗುಚಿ ಬಿದ್ದಂತಾಯಿತು. ನಮ್ಮಂತಹ ಬಡವರನ್ನೇ ಯಾಕೆ ಹೀಗೆ ಗುರಿ ಮಾಡುತ್ತಾರೆ? ಎಂಬ ವೇದನೆಯಲ್ಲಿ ನೋವಿನಿಂದ ಪರೀಕ್ಷಾ ಕೊಠಡಿಯಿಂದ ಹೊರಬಿದ್ದೆ.

ಯಾವ ಶಿಕ್ಷಕರೂ ವಿದ್ಯಾರ್ಥಿಗಳ ಬಳಿ ಅದರಲ್ಲೂ ನನ್ನಂತಹ ಬಡ ಹುಡುಗರ ಬಳಿ ಎಂದೂ ಹೀಗೆ ಆಟವಾಡದಿರಲಿ. ವಿದ್ಯಾರ್ಥಿಗಳ ಆತಂಕ ಭಯವನ್ನು ಅರ್ಥಮಾಡಿಕೊಳ್ಳದೆ ಅವರ ಬದುಕಿನೊಂದಿಗೆ ಚೆಲ್ಲಾಟವಾಡುವಂತಹ ವಿಘ್ನಸಂತೋಷಿಗಳು ಅವರಾಗದೆ ಇರಲಿ.     

ಆನಂದ ಕೈವಾರ, ದಾವಣಗೆರೆ

ಮೊ : 9972553959  

ಇದನ್ನೂ ಓದಿ- ತಾರುಣ್ಯದ ಬಾಗಿಲಲ್ಲಿ ಎಡವಿ ಜೈಲು ಪಾಲಾಗುವ ಯುವಕರು!!!

.

More articles

Latest article