“ಹೊರಳಿ ಹರಿದಳು ಗಂಗೆ”

Most read


(ಈ ವರೆಗೆ…) ಗಂಗೆ ಗಂಡನನ್ನು ಬಿಟ್ಟು ಬಂದಿದ್ದರೂ ಆತನ ನೆನಪಿನಿಂದ ಹೊರ ಬಂದಿರಲಿಲ್ಲ. ಒಂದಿನ ಮೋಹನ ಮನೆಗೆ ಬಂದು ಎಂದಿನಂತೆ ತನ್ನ ಸುಳ್ಳಿನ ಸರಮಾಲೆಯನ್ನು ಬಿಚ್ಚಿಟ್ಟು ಗಂಗೆ ಉಳಿಸಿಕೊಂಡಿದ್ದ ಹಣ ಪಡೆದು  ಹೋದವನು ಮತ್ತೆ ಹಿಂದಿರುಗಲಿಲ್ಲ. ಗಂಗೆ ಆತನನ್ನು ಮನಸಿನಿಂದ ಪೂರ್ತಿಯಾಗಿ ಅಳಿಸಿಹಾಕಿ ತನ್ನೆರಡು ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಬೆಳೆಸುತ್ತಾಳೆ. ಚಿಕ್ಕ ಮಗಳನ್ನು ಡ್ಯಾನ್ಸ್‌ ತರಗತಿಗೆ ಸೇರಿಸಿ ತನ್ನ ಆಸೆಯನ್ನು ಮಗಳ ಮೂಲಕ ನೆರವೇರಿಸಿ ಕೊಳ್ಳುತ್ತಾಳೆ. ಮನೆಯಲ್ಲಿ ಉಲ್ಲಾಸ ಅರಳ ತೊಡಗುತ್ತದೆ. ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಿನ ನಡಿಗೆʼಯ 75 ನೇ ಹಾಗೂ ಕೊನೆಯ ಕಂತು.

ಸದಾ ಮಂಜು ಮುಸುಕಿನೊಳಗೆ ತೆರೆಮರೆಯಾಟ ಆಡುವ ಸೋಪಾನಪೇಟೆಯಲ್ಲಿ ಅಂದು ಧೋ ಎಂದು ಮಳೆ ಸುರಿಯುತ್ತಿತ್ತು. ಆ ಪುಟ್ಟ ಪೇಟೆಯನ್ನು ಸುತ್ತುವರಿದಿದ್ದ ಹಸಿರುಟ್ಟ ಗುಡ್ಡದ ತಪ್ಪಲಿನಿಂದ, ಜಲಪಾತದಂತೆ ನೀರು ಧುಮ್ಮಿಕ್ಕುತ್ತ  ಅಂಕುಡೊಂಕಾದ ರಸ್ತೆಯ ತುಂಬಾ ವಯ್ಯಾರವಾಡುತ್ತಾ  ಹರಿದು ಕೆಂಪೇರಿನಿಂತ ಕೊಳ್ಳ ಸೇರುತ್ತಿತ್ತು. ಇತ್ತ ನೃತ್ಯ ಶಾಲೆಯ ಒಳಗಿನಿಂದ ಕೇಳಿಬರುತ್ತಿದ್ದ ರೋಸ಼ಿ ಟೀಚರಿನ ಇಂಪಾದ ಗಾಯನ, ಲಯಬದ್ಧವಾದ ಮಕ್ಕಳ ಕಾಲ್ಗೆಜ್ಜೆ ಝೇಂಕಾರ ಈ ಎಲ್ಲವೂ ಒಂದಕ್ಕೊಂದು ಮೇಳೈಸಿ  ಹೇಳಲಸದಳವಾದ ಆಹ್ಲಾದವನ್ನು ಉಂಟು  ಮಾಡಿದ್ದವು.  ಇದೇ ಮೊದಲ ಬಾರಿಗೆ ನಿರಾಳವಾಗಿ ನಿಂತು ಪ್ರಕೃತಿಯ ವೈಭೋಗವನ್ನು ಬೆಕ್ಕಸ ಬೆರಗಾಗಿ ಕಣ್ತುಂಬಿಕೊಳ್ಳುತ್ತಿದ್ದ ಗಂಗೆಗೆ, ರಸ್ತೆಯ ಮತ್ತೊಂದು ಬದಿಯಲ್ಲಿ  ಪುಟ್ಟ ಹುಡುಗಿಯ ಕೈ ಹಿಡಿದು ಹೋಗುತ್ತಿದ್ದ  ಇಳಿ ವಯಸ್ಸಿನ ಪೊನ್ನಪ್ಪಣ್ಣ ಕಣ್ಣಿಗೆ ಬಿದ್ದ.

ತಾನು ಹಿಂದೆ ಕೆಲಸ ಮಾಡುತ್ತಿದ್ದ ಕಾಫಿ ಕಂಪನಿಯಲ್ಲಿ, ಮೇಸ್ತ್ರಿಯಾಗಿ ದುಡಿಯುತ್ತಿದ್ದ ಈ ಪೊನ್ನಪ್ಪಣ್ಣನೆಂದರೆ ಗಂಗೆಗೆ ಎಲ್ಲಿಲ್ಲದ ಪ್ರೀತಿ. ಎಷ್ಟೋ ವಿಷಯಗಳಲ್ಲಿ ತನ್ನ ಅಪ್ಪನನ್ನೆ ಹೋಲುತ್ತಿದ್ದ ಈ ಮನುಷ್ಯ, ಅಪ್ಪನಂತೆಯೆ ಸಾಧು  ಮತ್ತು ಕಡು ಮೌನಿಯಾಗಿದ್ದ.  ಸಾಕಷ್ಟು ಬಾರಿ ಗಂಗೆಯ ದುಃಖಕ್ಕೆ ಕಿವಿಯಾಗಿ ಅವಳ ಕಣ್ಣೀರೊರೆಸಿ ಧೈರ್ಯ ತುಂಬಿದ್ದ. ಕಂಪೆನಿಯ ಯಾರೊಬ್ಬರು ಅವಳ ತಂಟೆಗೆ ಹೋಗದಂತೆ ಎಚ್ಚರ ವಹಿಸುತ್ತಿದ್ದ. ಆಗಾಗ ತನ್ನ ಪುಟ್ಟ ಹಿತ್ತಲಿನಲ್ಲಿ ಬೆಳೆದ ಹಣ್ಣು ಹಂಪಲುಗಳನ್ನು ಇವಳ ಮಕ್ಕಳಿಗೆಂದು ಮುಚ್ಚಿಟ್ಟು ತಂದುಕೊಡುತ್ತಿದ್ದ. ಹೀಗೆ ಜೀವಕ್ಕೆ ಹತ್ತಿರವಾಗಿದ್ದ  ಪೊನ್ನಪ್ಪ ಮೇಸ್ತ್ರಿಯನ್ನು ಎಷ್ಟೋ ವರ್ಷಗಳ ನಂತರ ಅಚಾನಕವಾಗಿ ಕಂಡ ಗಂಗೆಗೆ ಆಶ್ಚರ್ಯ ಸಂತಸಗಳು ಒಟ್ಟೊಟ್ಟಿಗೆ ಮೂಡಿನಿಂತವು.

ಧೋ ಎಂದು ಸುರಿಯುತ್ತಲೇ ಇದ್ದ ಮಳೆಗೆ ಅಡ್ಡಲಾಗಿ ಹಿಡಿದಿದ್ದ ಕೊಡೆಯ ಕೆಳಗೆ ಹೇಮಿಯದೇ ವಯಸ್ಸಿನ ಹುಡುಗಿ ಪೊನ್ನಪ್ಪ ಮೇಸ್ತ್ರಿಯ ಕೈ ಹಿಡಿದು, ತನ್ನ ಪುಟ್ಟ ಪಾದಗಳಿಂದ ರಸ್ತೆಯಲ್ಲಿ ಹರಿಯುತ್ತಿದ್ದ ನೀರನ್ನು ಚಿಮ್ಮಿಸುತ್ತಾ  ಬರುತ್ತಿದ್ದವಳು,  ನೃತ್ಯ ಶಾಲೆ ಎದುರಾದದ್ದೆ  ಗಕ್ಕನೆ ನಿಂತು ” ನಾಳೆ ನಾಳೆ ಅಂತ ನೀ ಯಾವಾಗ್ಲೂ ಬರಿ ಬೂಸಿ ಬಿಡ್ತಿ ಅಜ್ಜಯ್ಯ ನೀ ಬೇಕಿದ್ರೆ ಹೋಗು ನಾನಿವತ್ತು ಈ ಸ್ಕೂಲಿಗೆ ಸೇರ್ಕೊಂಡೆ ಬರೋದು” ಎಂದು ಪೊನ್ನಪ್ಪ ಮೇಸ್ತ್ರಿಯ ಕೈ ಕೊಸರಿ ಮಿಂಚಿನ ವೇಗದಲ್ಲಿ ರಸ್ತೆದಾಟಿ  ನೃತ್ಯ ಶಾಲೆಯ ಬಾಗಿಲ ಬಳಿ ಓಡಿ ಬಂದು ನಿಂತಳು. ಬಾಯಿಯ ಮೇಲೆ ಬೆರಳಿಟ್ಟು “ಉಶ್ ಸದ್ದು….ಏನು ನಿನ್ನ ಹೆಸ್ರು” ಎಂದು ಪಿಸುಗುಟ್ಟಿದ ಗಂಗೆಯ ಅಗಲಿಸಿದ ಕಣ್ಣನ್ನು ಕಂಡು  ಬೆಪ್ಪಾದ ಹುಡುಗಿ ಅಂಜುತ್ತಲೇ ” ಡೈಸಿ…” ಎಂದು ಹೇಳಿ ಸದ್ದಾಗದಂತೆ ಒಳ ಹೋಗಿ ಒಂದು ಮೂಲೆ ಹಿಡಿದು ಕೂತುಬಿಟ್ಟಿತು.

ಎಲ್ಲಿ ಜಾರಿ ಬಿಡುವೆನೊ ಎಂಬ ಭಯದಲ್ಲಿಯೇ ಹುಡುಗಿಯ ಹಿಂದೆ ತಪತಪನೆ ಹೆಜ್ಜೆ ಹಾಕುತ್ತಾ ಬಂದ ಪೊನ್ನಪ್ಪ ಮೇಸ್ತ್ರಿ ಅಲ್ಲಿ ನಿಂತಿದ್ದ ಗಂಗೆಯನ್ನು ಕಂಡು  “ಅರರೇ ಗಂಗಮ್ಮ ಇಷ್ಟು ವರ್ಷ ಎತ್ತ ಮಾಯವಾದದ್ದ..” ಎಂದು ತನ್ನ ಬೊಚ್ಚು ಬಾಯಿ ಅರಳಿಸಿ ನಕ್ಕ. ಈ ಆರೇಳು ವರ್ಷಗಳಲ್ಲಿ ಮತ್ತಷ್ಟು ಹಣ್ಣಾದಂತೆ ಕಂಡ ಪೊನ್ನಪ್ಪಣ್ಣನ ಕಣ್ಣುಗಳಲ್ಲಿ ಅದೇ ಆರ್ದ್ರ ಭಾವವನ್ನು ಗುರುತಿಸಿದ ಗಂಗೆ,  ಪೊನ್ನಪ್ಪಣ್ಣನ ಕೈಹಿಡಿದು ನಿಂತ ಜಾಗದಿಂದ ಮಾರು ದೂರ ಕರೆದುಕೊಂಡು ಹೋಗಿ ಅಲ್ಲಿದ್ದ ಕಟ್ಟೆಯೊಂದರ ಮೇಲೆ  ಕುಳ್ಳಿರಿಸಿದಳು. ಅವನ ಮುಂದೆ ತಾನು ಮೊಣಕಾಲೂರಿ ಕೂತು ಉಸಿರು ಕಟ್ಟಿದವಳಂತೆ ಅವನ ಯೋಗಕ್ಷೇಮ ವಿಚಾರಿಸಿ ಸಮಾಧಾನಗೊಂಡಳು. ಕಾಫಿ ಕಂಪನಿ ಬಿಟ್ಟ ನಂತರ  ತನ್ನ ಬದುಕು ಮತ್ತೊಂದು  ಮಗ್ಗುಲಿಗೆ  ಹೇಗೆ ಹೊರಳಿಕೊಂಡಿತು ಎಂಬ ಕತೆಯನ್ನು ಸಂಕ್ಷಿಪ್ತವಾಗಿ ಹೇಳಿ ಮುಗಿಸಿದ ಗಂಗೆ “ಏನೋ ದೇವ್ರ್ ದಯದಿಂದ ಈಗ ಒಂಚೂರು ನೆಮ್ದಿ ಅಂತ ಕಾಣ್ತಿದಿನಿ ಪೊನ್ನಪ್ಪಣ್ಣ” ಎಂದು  ದೀರ್ಘ ನಿಟ್ಟುಸಿರು ಬಿಟ್ಟಳು.

ಗಂಗೆಯ ಮುಖದಲ್ಲಿ ಎದ್ದು ಕಾಣುತ್ತಿದ್ದ ನಿರಾಳತೆಯನ್ನು ಕಂಡು ಮುದಗೊಂಡ ಪೊನ್ನಪ್ಪಣ್ಣ “ಒಳ್ಳೆ ಮನಸ್ಸಿನವರಿಗೆ ಕೇಡಾಗೊದಿಲ್ವೋ ಗಂಗಮ್ಮ. ಬದುಕು ಅಂದ ಮೇಲೆ ಕಷ್ಟ ಸುಖ ಇದ್ದದ್ದೆ ನಾವು ತಾಳ್ಮೆ ಗೆಡ್ಬಾರ್ದಷ್ಟೆ ಹೋಗ್ಲಿ ಬಿಡು ಈಗ್ಲಾದ್ರು ಸಂತೋಷವಾಗಿದ್ಯಲ್ಲ ಅಷ್ಟು ಸಾಕು” ಎಂದು ಅವಳ ತಲೆ ನೇವರಿಸಿದ. “ನಿಮ್ಮಂತೋರ ಆಶೀರ್ವಾದ ಪೊನ್ನಪ್ಪಣ್ಣ” ಎಂದು ತನ್ನ ಎದೆಯ ಮೇಲೆ ಕೈ ಇಟ್ಟು ತಲೆ ಬಗ್ಗಿಸಿ ನಮಸ್ಕರಿಸಿದ ಗಂಗೆ  “ನಿಮ್ಮ ಮೊಮ್ಮಗ್ಳು ನೋಡಿ ಬಾಳ ಖುಷಿಯಾಯ್ತು ಪೊನ್ನಪ್ಪಣ್ಣ, ಬಲು ಚೂಟಿಯಾಗೈತೆ ಬುಡಿ” ಎಂದು ನಕ್ಕಳು. ಇದ್ದಕ್ಕಿದ್ದಂತೆ ಪೊನ್ನಪ್ಪಣ್ಣನ ಮುಖದ ಮಂದಹಾಸ ಮಾಯವಾಗಿ ಕನಿಕರದ ಮೂರ್ತಿಯಂತೆ ವಿಷಣ್ಣನಾಗಿ “ಅದು ನನ್ನ ಮೊಮ್ಮಗಳಲ್ವೊ ಗಂಗಮ್ಮ ಕಾರ್ಯಪ್ಪ ರೈಟರಿನ ಕೂಸು” ಎಂದು ತೊದಲಿದ.

ಕಾರ್ಯಪ್ಪ ರೈಟರ್ ಎಂದ ಕೂಡಲೇ ಗಂಗೆಯ ಮುಖ ಬಿಳುಚಿ ಕೊಂಡಿತು. ಇನ್ನೂ ತನ್ನ ಮುಖದ ತುಂಬಾ ಹಸಿ ಹಸಿಯಾಗಿದ್ದ ಅವನ ತುಟಿಯ ಬಿಸುಪು ಒಮ್ಮೆಗೆ ಅವಳ ಮೈಯನ್ನು ಕಾವೇರಿಸಿ ಬಿಟ್ಟಿತು. ಇದರ ಹಿಂದೆಯೆ ತನ್ನ ಬಗ್ಗೆ ಅಸಹ್ಯ ಭಾವವೊಂದು ಮೂಡಿ ತಲೆ ಕೆಳಗಾಕಿ ಸಪ್ಪಗೆ ನಿಂತಳು ಗಂಗೆ. ಅವಳ ಸಣ್ಣಗಾದ ಮುಖವನ್ನು ಗಮನಿಸಿದ ಪೊನ್ನಪ್ಪ ಮೇಸ್ತ್ರಿ “ಅವತ್ತು ಒಳಗೇನು ನಡಿತೋ ನಂಗೊತ್ತಿಲ್ಲ ಗಂಗಮ್ಮ ಆದರೆ ನೀನು ಪರಚಿದ ಗಾಯದ ಗುರುತು ಮಾತ್ರ ಇವತ್ತಿಗೂ ಅವನನ್ನು ಬೇಯಿಸುತ್ತಲೆ ಇದೆ ನೋಡು” ಎಂದು ಗದ್ಗದಿತನಾದ. ಪೊನ್ನಪ್ಪಣ್ಣನ ಮಾತಿನಲ್ಲಿ ಹೆಪ್ಪು ಗಟ್ಟಿದ್ದ ದುಃಖ ಗಂಗೆಯನ್ನು ಇರಿದಂತೆನಿಸಿ‌ “ಅಲ್ಲ ಪೊನ್ನಪ್ಪಣ್ಣ ಆ ರೈಟ್ರುನ್ನೆ ವಹಿಸ್ಕೊಂಡು ಮಾತಾಡ್ತಿದ್ದಿರಲ್ಲ  ಗಂಡ್ದಿಕ್ಕಿಲ್ಲದ ಹೆಂಗ್ಸು ಅಂತ ಅವರು ನನ್ನ ಹೆಂಗ್ಬೇಕಾದ್ರು ನಡುಸ್ಕೊಬೋದ ಹೇಳಿ” ಎಂದು ಅಸಮಾಧಾನ ವ್ಯಕ್ತಪಡಿಸಿದಳು. “ಅಯ್ಯೋ… ತಪ್ಪು ತಿಳಿಬೇಡ್ವೊ ಗಂಗಮ್ಮ ನಿಜ್ವಾಗ್ಲೂ ನಾನು ಅವರನ್ನ ವಹಿಸ್ಕೊಂಡು ಮಾತಾಡ್ಲಿಲ್ವೊ, ಆ ಘಟನೆ ಆದ ನಂತರ ರೈಟ್ರು ಪರಿಸ್ಥಿತಿ ಹದಗೆಟ್ಟಿದ್ದನ್ನ ನೆನಪಿಸ್ಕೊಂಡು ಬೇಜಾರಾಯ್ತು ಅಷ್ಟೆ. ಹೋಗ್ಲಿ ಬಿಡು ಆಗಿದ್ದು ಆಗೋಯ್ತು, ಇನ್ನೂ ಅದನ್ನ ಮನಸ್ಸಿನಲ್ಲಿಟ್ಕೊಂಡು ಬೇಜಾರ್ಮಾಡ್ಕೊಬೇಡ. ಅದ್ರಿಂದ ಅವ್ರು ಸಾಕಷ್ಟು ನರಳಿ ಈಗಷ್ಟೇ ಸುಧಾರಿಸ್ಕೊತಿದ್ದಾರೆ” ಎಂದು ಆಕಾಶದತ್ತ ತಲೆ ಎತ್ತಿ ನೋಡಿ “ಮಳೆ ಸ್ವಲ್ಪ ತಗ್ಗಿತ ನಾ ಹೊರಡ್ತೇನೆ ಆಯ್ತಾ” ಎಂದು ಕೊಡೆ ಬಿಡಿಸಿ ನಿಂತನು.

ಗಟ್ಟಿಯಾಗಿ ಪೊನ್ನಪ್ಪಣ್ಣನ ಕೈ ಹಿಡಿದುಕೊಂಡ ಗಂಗೆ “ಹಿಂಗೆ ಒಗಟ್ನಂಗೆ ಮಾತಾಡುದ್ರೆ ನಂಗೇನರ್ಥ ಆಗ್ಬೇಕು ಪೊನ್ನಪ್ಪಣ್ಣ ಒಂಚೂರು ಬುಡ್ಸೇಳಿ, ಇಲ್ಲ ಅಂದ್ರೆ ನನ್ನ ಮನಸ್ನಲ್ಲು ಅದೇ ಕೊರಿತಿರ್ತದೆ” ಎಂದು ಹೇಳಿದಳು. ಮತ್ತೆ ಅದೇ ಕಟ್ಟೆ ಮೇಲೆ ಕುಳಿತ ಪೊನ್ನಪ್ಪಣ್ಣ ಆ ಘಟನೆಯಾದ ಮರು ದಿನವೇ ಕಾರ್ಯಪ್ಪ ಆ ಕಂಪೆನಿಯಿಂದ ಹೊರದೂಡಲ್ಪಟ್ಟಿದ್ದು, ಅವಮಾನದಿಂದ ಕುಗ್ಗಿ ಖಿನ್ನತೆಯಿಂದ ಬಳಲಿದ್ದು,  ಒಂದು ಕಡೆ ಕಾಯಿಲೆ ಬಿದ್ದು ಹಾಸಿಗೆ ಹಿಡಿದ ಹೆಂಡತಿಯ ಸಾವು ಬದುಕಿನ ಹೋರಾಟ, ಮತ್ತೊಂದು ಕಡೆ ಹಸಿವನ್ನೇ ಹೊತ್ತು ಹುಟ್ಟಿರುವ ಎರಡು ಅವಳಿ ಮಕ್ಕಳ ಹಾಹಾಕಾರ….. ಈ ಎಲ್ಲವನ್ನು ಎದುರಿಸಲಾರದೆ ಮನೆ ಹಿಂದಿನ ಹೊಳೆಗೆ ಹಾರಿಕೊಂಡ ಕಾರ್ಯಪ್ಪನನ್ನು ತಾನೆ ಎತ್ತಿತಂದು ಉಳಿಸಿ ಮತ್ತೊಂದು ಕಂಪೆನಿಗೆ ಸೇರಿಸಿದ್ದು; ಹೀಗೆ ಕಾರ್ಯಪ್ಪನ ಇಡೀ ಚರಿತ್ರೆಯನ್ನೆ ಸವಿಸ್ತಾರವಾಗಿ ಹೇಳಿ ಮುಗಿಸಿದ ಪೊನ್ನಪ್ಪಣ್ಣ ” ಈಗ್ಲೂ ರೈಟ್ರು ಹೆಂಡತಿನ ಇದೇ ಗೌರ್ಮೆಂಟ್ ಆಸ್ಪತ್ರೆಗೆ ಅಡ್ಮಿಟ್ ಮಾಡಿದಿವಿ ಗಂಗಮ್ಮ, ಪಾಪ ಪ್ರೀತಿಸಿ ಮದುವೆ ಮಾಡಿಕೊಂಡ್ರು ಅಂತ  ಮನೆಯವರ್ಯಾರು ಅವರ ಜೊತೆಗಿಲ್ಲ ಹಾಗಾಗಿ, ರೈಟ್ರು ಕೆಲಸಕ್ಕೆ ಹೋದಾಗ ನಾನೆ ಬಂದು ಆಕೆನ ನೊಡ್ಕೊಳ್ತೀದಿನಿ” ಎಂದು ಹೇಳಿದ. 

ಈ ಎಲ್ಲಾ ಕಥೆ ಕೇಳಿ ಅಪರಾಧಿ ಭಾವದಿಂದಲೂ ಅನುಕಂಪದಿಂದಲೂ ಕನಲಿದ ಗಂಗೆ ” ನಾನೂ ಬಂದು ಆ ಮೇಡಮ್ಮೋರ್ನ ನೋಡ್ಬೋದ ಪೊನ್ನಪ್ಪಣ್ಣ” ಎಂದು ಕೇಳಿದಳು. “ಓ ಅದ್ಕೇನಂತೆ ಬಾ ಗಂಗಮ್ಮ ಹೆಂಗು ರೈಟ್ರು ಬೆಳಗ್ಗೆನೆ ಕೆಲ್ಸದ ಮೇಲೆ ಮಾಲ್ಧಾರೆ ಹೋಗಿದ್ದಾರೆ ಇನ್ನೂ ಬಂದಿಲ್ಲ. ಅವ್ರು ಬರೋದ್ರೊಳಗೆ ಮಾತಾಡುಸ್ಕೊಂಡು ಬರುವಂತೆ” ಎಂದು ಹೇಳಿ ಒಳಗೆ ನೃತ್ಯ ನೋಡುವುದರಲ್ಲಿ  ಮೈ ಮರೆತು ಕೂತಿದ್ದ ಡೈಸಿಯನ್ನು “ಹೊಯ್ ಪುಟ್ಟಕ್ಕ ತಡ ಆಯ್ತು, ಪಾಪಾ ಮಮ್ಮಿಗೆ ಗಂಜಿ ಕೊಡ್ಬೇಕಲ್ವ ಹೋಗುವ ಬೇಗ ಬಾ..” ಎಂದು ರಮಿಸಿದ . ಪೊನ್ನಪ್ಪಜ್ಜನ ಯಾವ ಮಾತಿಗೂ ಸೊಪ್ಪು ಹಾಕದ ಡೈಸಿ ” ನನ್ನೂ ಡ್ಯಾನ್ಸಿಗೆ ಸೇರ್ಸು ಮತೆ….”ಎಂದು ರಂಪ ತೆಗೆದು ಕೂತಳು. ಮಗುವನ್ನು ಕಂಡು ಹೊಟ್ಟೆ ಉರಿದುಕೊಂಡ ಗಂಗೆ ” ಪಾಪಾ ಈ ಮಗ ಎಷ್ಟೊಂದ್ ಆಸೆ ಮಾಡ್ತದೆ ಸೇರುಸ್ಬುಡದಲ್ವ ಪೊನ್ನಪ್ಪಣ್ಣ ” ಎಂದಳು…”ಅಯ್ಯೋ…. ಮೂರು ಹೊತ್ತಿನ ಊಟಕ್ಕೆ ಕಷ್ಟ ಗಂಗಮ್ಮ, ದುಡಿದದ್ದೆಲ್ಲ ಆಯಮ್ಮನ ಆಸ್ಪತ್ರೆ ಖರ್ಚಿಗೆ ಆಗ್ತದೆ ಇದಕ್ಕೆ ಬೇರೆ ಎಲ್ಲಿಂದ ಸೇರಿಸ್ತಾರೆ ಹೇಳು ” ಎಂದು ಬೇಸರ ವ್ಯಕ್ತಪಡಿಸಿದ.

ಕೊನೆಗೆ ಗಂಗೆಯೇ ಮಿಠಾಯಿ ಆಸೆ ತೋರಿಸಿ, ಮತ್ತೆ ಕರೆದು ಕೊಂಡು ಬರುವುದಾಗಿ  ಮಗುವನ್ನು ಪುಸಲಾಯಿಸಿ ಅಲ್ಲಿಂದ ಎಬ್ಬಿಸಿಕೊಂಡು ಆಸ್ಪತ್ರೆಯತ್ತ ನಡೆದಳು. ಅಷ್ಟರಲ್ಲಾಗಲೆ ಕಾರ್ಯಪ್ಪ ಬಂದಿರುವುದನ್ನು ಗಮನಿಸಿದ ಪೊನ್ನಪ್ಪ ಮೇಸ್ತ್ರಿ ” ಓಹೋ… ರೈಟ್ರು ಬಂದ್ಬಿಟ್ಟಿದ್ದಾರಲ್ಲ ಗಂಗಮ್ಮ, ಇಂಥ ಪರಿಸ್ಥಿತಿಯಲ್ಲಿ ನಿನ್ನ ಕಂಡ್ರೆ ಅವ್ರ ಮನಸ್ಸಿಗೆ ಕಷ್ಟ ಆಗ್ಬಹುದು. ನೀನೀಗ ಹೋಗು, ಮತ್ತೆ ಸಿಗುವ ಆಯ್ತಾ” ಎಂದು ಅವಸರಿಸಿದ. ಮುಖ ಸಣ್ಣದು ಮಾಡಿಕೊಂಡು ತಲೆ ಆಡಿಸಿದ ಗಂಗೆ, ಮನಸ್ಸು ತಡೆಯಲಾರದೆ ಹಾಗೆಯೆ ಕಿಟಕಿಯಿಂದ ಇಣುಕಿದಳು. ಹೆಂಡತಿಯನ್ನು ತನ್ನ ಹೆಗಲಿಗೆ ವರಗಿಸಿಕೊಂಡು ಗಂಜಿ ಕುಡಿಸುತ್ತಾ ಕೂತಿದ್ದ  ಕಾರ್ಯಪ್ಪ ರೈಟರಿನ ಚಹರೆಯೇ ಬದಲಾಗಿ ಹೋಗಿತ್ತು.

ಒಮ್ಮೆ ನೋಡಿದರೆ ಮತ್ತೆ ತಿರುಗಿ ನೋಡ ಬೇಕು ಅನ್ನಿಸುವಂತಿದ್ದ ಸ್ಪುರದ್ರೂಪಿ ಆಳು ಕಾರ್ಯಪ್ಪನ ಕಟ್ಟು ಮಸ್ತಾದ ದೇಹವೆಲ್ಲ ಸೊರಗಿ ತೊಟ್ಟ ಅಂಗಿ ಪ್ಯಾಂಟು ಲೊಳಗುಟ್ಟುತ್ತಿತ್ತು.  ಗುಳಿಬಿದ್ದ ಕೆನ್ನೆ ಮತ್ತು ಕಣ್ಣುಗಳು  ವ್ಯಥೆಯ ಗೂಡಾಗಿದ್ದವು.  ಅಸ್ತವ್ಯಸ್ತವಾದ ತಲೆ ಕೂದಲು, ಅಡ್ಡಾದಿಡ್ಡಿಯಾಗಿ ಬೆಳೆದ ಗಡ್ಡ ಮೀಸೆಗಳು ಅವನ ನೀರಸ ಬದುಕಿನ ದ್ಯೋತಕವಾಗಿದ್ದವು. ಕುಡಿದ ಗಂಜಿಯನ್ನು ಗುಟುಕರಿಸಲಾಗದೆ  ಒದ್ದಾಡುತ್ತಿದ್ದ  ಕಾರ್ಯಪ್ಪನ ಹೆಂಡತಿ ಬೋಜಿಯನ್ನೂ ಮತ್ತು ಅವಳನ್ನು  ಸಂತೈಸಲು  ಹೆಣಗಾಡುತ್ತಿದ್ದ ರೈಟರನನ್ನೂ ಕಂಡು ಗಂಗೆಯ ಕರುಳು ಚುರ್ ಎಂದಿತು. ಅವಳ ಅರಿವಿಗೆ ಬಾರದಂತೆ ತುಂಬಿಕೊಂಡ ಕಣ್ಣು ಅವಳನ್ನು ಅಲ್ಲಿ ಹೆಚ್ಚು ಹೊತ್ತು ನಿಲ್ಲಗೊಡಲಿಲ್ಲ.

ಇನ್ನೇನು ಹೊರಡಬೇಕೆಂದುಕೊಂಡವಳನ್ನು, ಅನತಿ ದೂರದಲ್ಲಿ ತಾನು ನೋಡಿ ಬಂದ ನೃತ್ಯದ ಹಾವಭಾವಗಳನ್ನು ಮಾಡಲೆತ್ನಿಸುತ್ತಿದ್ದ ಡೈಸಿ ಓಡಿ ಬಂದು ಎಳೆದು ನಿಲ್ಲಿಸಿ  “ಆಂಟಿ ಪಪ್ಪಾ, ಮಮ್ಮಿಗೆ ನನ್ನೂ ಡ್ಯಾನ್ಸಿಗೆ ಸೇರ್ಸ್ಕೋದಕ್ಕೆ ಕೇಳಿ ಪ್ಲೀಸ್” ಎಂದು ದುಃಖ ತುಂಬಿದ ದನಿಯಲ್ಲಿ ಕೇಳಿತು. ಆ ಮಗುವಿನ ಆಸೆ ತುಂಬಿದ ಕಣ್ಣು, ಉಬ್ಬಿದ ಗಂಟಲುಗಳನ್ನು ಕಂಡು ಮೂಕಳಾದ ಗಂಗೆ  “ಪೊನ್ನಪ್ಪಣ್ಣ ಈ ಮಗಿನ ಹಂಗೆ ಬುಟ್ಟೋಗಕೆ ನನ್ ಕೈಲಿ ಆಯ್ತಿಲ್ಲ. ಇದ್ರು ಡಾನ್ಸ್ ಸ್ಕೂಲಿನ ಫೀಸು ಕಟ್ಟೊ ಜವಾಬ್ದಾರಿ ನಂದು. ನಿಮ್ಮ ದಮ್ಮಯ್ಯ ಹೆಂಗಾದ್ರು ಮಾಡಿ ಆಮೇಲೆ ರೈಟ್ರುನ್ನ ಒಪ್ಸಿ. ಈಗ ನಂಜೊತೆ ನೀವು ಬನ್ನಿ  ಕರ್ಕೊಂಡೋಗಿ  ಕ್ಲಾಸಿಗೆ ಸೇರ್ಸನ” ಎಂದು ಪೊನ್ನಪ್ಪಣ್ಣನ ಕೈ ಹಿಡಿದು ಬೇಡಿಕೊಂಡಳು.

ಇದುವರೆಗೂ ಡೈಸಿಗೆ ಸಾಬೂಬು ಹೇಳಿ ರೋಸಿಹೋಗಿದ್ದ ಪೊನ್ನಪ್ಪಣ್ಣನಿಗು ಗಂಗೆಯ ಮಾತನ್ನು ತೆಗೆದುಹಾಕಲಾಗಲಿಲ್ಲ. ಎಲ್ಲಿಯೋ ಒಂದು ಕಡೆ “ಕಾರ್ಯಪ್ಪನನ್ನು ಒಪ್ಪಿಸಿಯೇ ತೀರುತ್ತೇನೆ” ಎನ್ನುವ ಹುಚ್ಚು ಭರವಸೆಯೊಂದು ಮೊಳೆತು “ಅದೇನಾಗ್ತದೊ ಮುಂದಿದ್ದು ಆಮೇಲೆ ನೋಡಿಕೊಳ್ತೇನೆ ಈ ನಮ್ಮ ಪುಟ್ಟಮ್ಮನ ಆಸೆ ಪೂರೈಸೆ ಬಿಡೋನ ನಡೀ ಗಂಗಮ್ಮ” ಎಂದು ಹೇಳಿ ಮಗುವಿನ ಕೈ ಹಿಡಿದು, ಡೈಸಿಯಷ್ಟೆ ಉಲ್ಲಾಸದಿಂದ ನೃತ್ಯ ಶಾಲೆಯತ್ತ ಹೆಜ್ಜೆ ಹಾಕಿದ. ಹೂವು, ಹಣ್ಣು, ಐದು ರುಪಾಯಿ ಕಾಣಿಕೆಯೊಂದಿಗೆ ಡೈಸಿಯನ್ನು ರೋಸ಼ಿ ಟೀಚರಿನ ಕಾಲಿಗೆರಗಿಸಿದ ಗಂಗೆ “ಈ ಮಗಿನ ನಿಮ್ಮ ಮಡ್ಲು ಹಾಕಿದಿವಿ ಟೀಚರ್ ತಪ್ಪು ನೆಪ್ಪುನ ಪ್ರೀತಿಯಿಂದ ತಿದ್ದಿ ಹೇಳ್ಕೊಡಿ ಕಲಿತಳೆ” ಎಂದು ಮತ್ತಷ್ಟು ಮುತುವರ್ಜಿಯಿಂದ ಹೇಳಿ ಪೊನ್ನಪ್ಪಣ್ಣನೊಂದಿಗೆ ಹೊರಬಂದು ನಿಂತಳು.

“ಪಾಪಾ ಮಕ್ಳುನ್ನ ನೋಡಿದ್ರೆ ಹೊಟ್ಟೆ ಉರಿತದೆ ಪೊನ್ನಪ್ಪಣ್ಣ

ಇನ್ನೂ ಎಳೆವು ತಾಯಿ ಮಡ್ಲಲ್ಲಿ ಆಡ್ಕೊಂಡು ಬೆಳಿ ಬೇಕಾದವು. ಏನಾದ್ರು ಮಾಡಿ  ನಮ್ಮ ರೈಟ್ರು ಮನೆಯವ್ರನ ಹುಶಾರ್ಮಾಡ್ಕೊಳ್ಳೇ ಬೇಕು. ನಾನು ಒಂದಿಷ್ಟು ದುಡ್ಡು ಕಾಸು ಹೊಂದುಸ್ತೀನಿ ಒಳ್ಳೆ ಪ್ರೈವಿಟ್ ಆಸ್ಪತ್ರೆಗೆ ಸೇರ್ಸಿ  ಔಷಸ್ತಿ ಮಾಡ್ಸನ….ಯಾವುದಕ್ಕೂ ಹೆದ್ರೋದ್ ಬ್ಯಾಡ ಅಂತ ರೈಟ್ರುಗೇಳಿ….ನಾನು ಜೊತೆಗಿದ್ದು ಕೈಲಾಗಿದ್ದು ಮಾಡ್ತೀನಿ….” ಹೀಗೆ ಮುಂದುವರಿಯುತ್ತಲೇ ಇದ್ದ ಗಂಗೆಯ ಕಾಳಜಿ ತುಂಬಿದ ಮಾತುಗಳಿಂದ ಭಾವುಕನಾದ ಪೊನ್ನಪ್ಪಣ್ಣನ ಕಣ್ಣುಗಳಲ್ಲಿ ದಳ ದಳನೆ ನೀರು ಸುರಿಯುತ್ತಿತ್ತು. ಅವಳ ಬಗ್ಗೆ ಕೃತಜ್ಞತಾ ಭಾವ ಮೂಡಿ  “ಇವತ್ತು ನಂಗೆ ದೇವ್ರು ಸಿಕ್ಕಿದ ಹಾಗೆ ಸಿಕ್ಕಿದೆ ಗಂಗಮ್ಮ  ನಿನ್ನಂತವರ ಸಂತಾನ ಸಾವಿರ ಆಗ್ಲಿ” ಎಂದು ಕೈ ಮುಗಿದು ನಿಂತ.

74ನೇ ಕಂತು ಓದಿದ್ದೀರಾ? http://“ಶೂದ್ರ ಮುಂಡೇದೆ ನಿಂಗೆ ಮಂಡೆ ಸಮ ಇಲ್ಲನ… https://kannadaplanet.com/thanti-melina-nadige-74/

“ಅಯ್ಯೋ ದೊಡ್ಡವ್ರು ಹಿಂಗ್ ಕೈ ಮುಗಿಬಾರ್ದು ತೆಗಿರಿ ಪೊನ್ನಪ್ಪಣ್ಣ. ಇದ್ರಲ್ಲಿ ನನ್ ದೊಡ್ಡಸ್ತಿಕೆ ಏನೂ ಇಲ್ಲ. ತುಂಬಿದ್ ಮನೆಲುಟ್ಟಿದ್ರು ನೀನೇ ಅಂತ ಕೇಳೋರು ದಿಕ್ಕಿಲ್ದಂಗೆ ಬಂಡಾಟ ಮಾಡಿ ಬದುಕ್ಕಟ್ಕೊಂಡು ನಿಂತಿದಿನಿ. ಜೀವುದ್ ಬೆಲೆ ಬದುಕಿನ ಬೆಲೆ ಏನು ಅಂತ  ನಂಗೊತ್ತು. ಆ ಪರಮಾತ್ಮ ಈಗೆಲ್ಲೊ ವಸಿ ಕಣ್ಬುಟ್ಟವ್ನೆ… ಇರದ್ನ ಹಂಚ್ಕೊಂಡು ಬದ್ಕೊದೆ ನಿಜ್ವಾದ ಬದ್ಕು ಅನ್ಕೊಂಡಿರೊಳು ಪೊನ್ನಪ್ಪಣ್ಣ ನಾನು….”ಎಂದು ಒಂದು ದೀರ್ಘ ಉಸಿರೆಳೆದುಕೊಂಡು ಆಕಾಶದತ್ತ ತಲೆ ಎತ್ತಿ ನೋಡಿದಳು.

ಬೆಳಗ್ಗಿನಿಂದ ಒಂದೇ ಸಮ ಸುರಿದ ಮಳೆ ಇಡೀ ಸೋಪಾನ ಪೇಟೆಯನ್ನೆ ತೊಳೆದು ಶುಭ್ರಗೊಳಿಸಿತ್ತು. ಯಾವಾಗಲೋ ಮೋಡವೆಲ್ಲ ಕರಗಿ ಆಕಾಶವೆಲ್ಲಾ ಮುಸ್ಸಂಜೆಯ ರಂಗಿನಿಂದ ಕಳೆಗಟ್ಟಿ ನಿಂತಿತ್ತು. ಇಡೀ ವಾತಾವರಣವನ್ನೇ ಆವರಿಸಿದ್ದ ಒಂದು ರೀತಿಯ ನಿರಾಳತೆ ಗಂಗೆಯ ಒಳಗೂ ಹರಿದು ಅವಳ  ಮೈ ಮನಗಳಲೆಲ್ಲ ಸಾರ್ಥಕ್ಯದ ಭಾವವೊಂದು ಮೂಡಿ ಎದೆ ತುಂಬಿ ಬಂದಂತೆನಿಸಿತು. ಒಳಗಿನಿಂದ ತರಗತಿ ಮುಗಿಸಿ ಕುಣಿಯುತ್ತ ನವಿಲಿನಂತೆ ಹಾರಿ ಬಂದ ಹೇಮಿಯನ್ನು, ಅವಳ ಜೊತೆಗೆ ಹೂವಿನಂತೆ ಮುಖ ಅರಳಿಸಿ ನಿಂತಿದ್ದ ಡೈಸಿಯನ್ನು ದಿಟ್ಟಿಸಿದ ಗಂಗೆಗೆ  ತನ್ನ ಕಮರಿದ ಕನಸುಗಳಿಗೆಲ್ಲ ಮತ್ತೆ ರೆಕ್ಕೆ ಮೂಡಿದಂತೆನಿಸಿತು.

ಪ್ರತೀ ದಿನ ಸತ್ತು ಹುಟ್ಟುತ್ತಾ ನಾಳೆಗಳ ಭರವಸೆಯಲ್ಲಿಯೇ ಬದುಕು ಕಟ್ಟಿಕೊಂಡು ಕೊನೆಗೂ ಹೊಸವಸಂತ ಕಂಡ ಒಂಟಿ ಹೆಣ್ಣೊಬ್ಬಳ ದಿಟ್ಟತನದ ಕಥಾನಕವನ್ನು “ತಂತಿ ಮೇಲಿನ ನಡಿಗೆ” ಅಂಕಣದ ಮೂಲಕ 75 ಕಂತುಗಳಲ್ಲಿ ಸೊಗಸಾಗಿ ಹೆಣೆದಿದ್ದಾರೆ ಕಲಾವಿದೆ ವಾಣಿ ಸತೀಶ್.‌ ಇದು ವಾಣಿಯವರ ಬರಹದ ಮೊದಲ ಹೆಜ್ಜೆಯಾದರೂ ಪ್ರತಿ ಕಂತೂ ಓದುಗರು ಕಾತರದಿಂದ ಕಾಯುವಂತೆ ಮಾಡಿದೆ. ಕನ್ನಡ ಪ್ಲಾನೆಟ್‌ ಅವರಿಗೆ ಆಭಾರಿಯಾಗಿದೆ; ಉಜ್ವಲ ಭವಿಷ್ಯವನ್ನು ಹಾರೈಸುತ್ತದೆ.  

ಪೊನ್ನಪ್ಪಣ್ಣ ಡೈಸಿ ಇಬ್ಬರನ್ನೂ ಮತ್ತಷ್ಟು ಆತ್ಮೀಯತೆಯಿಂದ ಬೀಳ್ಕೊಟ್ಟ ಗಂಗೆ, ಡೈಸಿ ಚಾಚಿದ ಪುಟ್ಟ ಕೈಯನ್ನು ಭದ್ರವಾಗಿ ಹಿಡಿದು ಹಗೂರವಾಗಿ  ಆಸ್ಪತ್ರೆಯತ್ತ ಹೆಜ್ಜೆ  ಹಾಕುತ್ತಿದ್ದ ಪೊನ್ನಪ್ಪಣ್ಣನನ್ನು ಮರೆಯಾಗುವವರೆಗೂ ಕಣ್ತುಂಬಿಕೊಂಡಳು.

….ತಿರುಗಿ ಹೇಮಿಯ ಕೈ ಹಿಡಿದು ಮತ್ತಷ್ಟು ದಿಟ್ಟ ಹೆಜ್ಜೆಯೊಂದಿಗೆ, ಸೋಪಾನ ಪೇಟೆಯ ರಾಜ ಬೀದಿಯಲ್ಲಿ ಪ್ರಶಾಂತವಾಗಿ ಹರಿಯುತ್ತಾ ಮಗ್ಗಲು ಹೊರಳಿಸಿ ನಾರೀಪುರದ ಕಡೆಯ ರಸ್ತೆ ತಿರುವಿನಲ್ಲಿ ಕರಗಿ ಮರೆಯಾದಳು  ಗಂಗೆ….

(ಮುಗಿಯಿತು)

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More articles

Latest article