“ಅದೇನಾಯ್ತದೋ ಆಗೇ ಬುಡ್ಲಿ….”

Most read

(ಈ ವರೆಗೆ…) ರಾತ್ರಿ ಕಟ್ಟಿದ್ದ ದನವೊಂದು ಕಾಣಿಸದಾದಾಗ ಗಾಬರಿಯಾದ ಅಪ್ಪಜ್ಜಣ್ಣ ಅದನ್ನು ಹುಡುಕಲು ಹೊರಡುತ್ತಾನೆ. ಗಂಗೆಯ ಅಣ್ಣ ತಮ್ಮಂದಿರು ಬಾಯಿಗೆ ಬಂದಂತೆ ಬೈದು ಆತನಿಗೆ ಹೊಡೆದು ಆಚೆಗೆ ಕಳಿಸುತ್ತಾರೆ. ಹೊರಹೋದ ಅಪ್ಪಜ್ಜಣ್ಣ ಎಷ್ಟು ಹೊತ್ತಾದರೂ ಮನೆಗೆ ಬರದಿರುವುದನ್ನು ಕಂಡು ಗಂಗೆ ಆತನನ್ನು ಹುಡುಕಿ ಹೊರಡುತ್ತಾಳೆ. ಅಪ್ಪಜ್ಜಣ್ಣ ಸಿಕ್ಕಿದನೇ? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಿನ ನಡಿಗೆಯ 69 ನೇ ಕಂತು.

ಅಯ್ಯೋ ಶಿವ್ನೆ…. ಮೂರ್ ಜನ ಗಂಡು ಮಕ್ಳು ಬೆನ್ನಿಗ್ ಹುಟ್ಟೈತಲ್ಲ ಈ ಬಡ್ಡಿ ಹೆಣ್ಣು, ಓ ಸಾಕವ್ವ ಮುಂದ್ ಬರೊ ಗಂಡಾಂತ್ರುಕ್ಕೆ ತಲೆಕೊಡಕೆ ಈಗಿನ್ಲೇ ತಯಾರಾಗ್ಬುಡು” ಗಂಗೆ ಹುಟ್ಟಿದ ದಿನ ಹಸುಗೂಸನ್ನು ನೋಡಲು ಬಂದ ನಾರಿಪುರದ ಕೆಲವು ಮನೆ ಮುರುಕ ಮುದುಕಿಯರು, ಆಕಾಶವೇ ತಲೆ ಮೇಲೆ ಬಿದ್ದಂತೆ ಲೊಚಗುಟ್ಟಿ, ಬೆರಳು ಮುರಿದು, ತಾಯಿ ಮಗುವಿನತ್ತ ವಕ್ರದೃಷ್ಟಿ ಹರಿಸಿ ಹೋಗಿದ್ದರು.

ಮೊದಲೇ ಈ ತರಹದ ಅಸಂಬದ್ಧ ನಂಬಿಕೆಗಳ ಗೂಡಾಗಿದ್ದ  ಸಾಕವ್ವನಿಗೆ ಆ ಮುದುಕಿಯರ ಮಾತುಗಳು ವೇದವಾಕ್ಯವಾಗಿ, ಹುಟ್ಟಿದ ಮಗು ಸಾಯಲೆಂದು ಶಪಥ ಮಾಡಿದವಳಂತೆ ವಾರವಿಡೀ ಎದೆಯುಣಿಸದೆ ಅದರ ಜೀವವನ್ನು ಬಾಯಿಗೆ ತಂದಿದ್ದಳು. ಇದು ಗಂಡನ ಗಮನಕ್ಕೆ ಬಾರದಂತೆ ತನ್ನ ಚಾಣಕ್ಷತನದಿಂದಲೆ ಅವನನ್ನು ಹತ್ತಿರ ಸುಳಿಯಗೊಡದಂತೆ ಅಂತರ ಕಾಯ್ದು ಕೊಂಡಿದ್ದಳು. 

ಮಗುವಿನ ಅಳು ಕೇಳಲಾರದೆ ಅಕ್ಕಪಕ್ಕದವರೆಲ್ಲ ಬಂದು ಸಮಾಧಾನ ಮಾಡಲೆತ್ನಿಸಿ ಸೋತು ಮರಳಿದ್ದರು. ಒಂದು ದಿನ ಅದೇ ಹಾದಿಯಲ್ಲಿ ಓಡಾಡುತ್ತಿದ್ದ ಕೆಳಗಿನ ಬೀದಿಯ ನಿಂಗಣ್ಣನ ಹೆಂಡತಿ ಅಕ್ಕಯ್ಯಮ್ಮ ಮಗುವಿನ ಸಂಕಟ ಹುಟ್ಟಿಸುವ ಅಳು ಕೇಳಿ ಕನಲಿದವಳಂತೆ  ಸೀದ ಮಗುವಿದ್ದ ಕೊಣೆಗೆ ನುಗ್ಗಿದಳು. ಒಂದೆರಡು ಬಾರಿ ಸಾಕವ್ವನ ಹೆಸರಿಡಿದು ಕೂಗಿ ನೋಡಿದಳು. ಮಗುವಿನ ಹೊರತು ಮನೆಯಲ್ಲಿ ಯಾರ ಇರುವಿಕೆಯ ಸುಳಿವು ಹತ್ತಲಿಲ್ಲ. ಅನಾಮತ್ತಾಗಿ ಆಳುತ್ತಿದ್ದ ಮಗುವನ್ನು ಎತ್ತಿ ಮಡಿಲಿಗಾಕಿ ಕೊಂಡಳು. ಇವಳೇ ಉಸಿರು ಕಟ್ಟಿದವಳಂತೆ ತರಾತುರಿಯಲ್ಲಿ  ರವಿಕೆಯ ಗುಂಡಿಬಿಚ್ಚಿ ತನ್ನ ಸೆರಗ ತುದಿಯಿಂದ ಮೊಲೆಯನ್ನು ಒರೆಸಿ ಮಗುವಿನ ಬಾಯಿಗಿಟ್ಟಳು.

ಅತ್ತು ಅತ್ತು ಗಂಟಲೊಣಗಿ ಬೆಂಡಾಗಿದ್ದ  ಮಗು ಮೊಲೆ ಎಳೆಯಲಾಗದಷ್ಟು ಶಕ್ತಿಗುಂದಿತ್ತು‌. ಇದನ್ನರಿತ ಅಕ್ಕಯ್ಯಮ್ಮ ತನ್ನ ಕೈಗಳಿಂದಲೆ ಮೊಲೆ ಹಿಂಡಿ ಹಿಂಡಿ ಮಗುವಿನ ಬಾಯಿಗೆ ಹಾಲನಿಸಿ, ಅದರ ಬಾಯಿ ಪಸೆಗಟ್ಟುವಂತೆ ಮಾಡಿದಳು.  ತುಸು ಜೀವ ಸಂಚಾರವಾದಂತಾಗಿ ಉಸಿರು ತಿರುಗಿಸಿಕೊಂಡ ಮಗು, ಕೆಲವೇ ಘಳಿಗೆಯಲ್ಲಿ ಜನ್ಮಜನ್ಮಾಂತರದ ಹಸಿವೋ ಎಂಬಂತೆ ರಾಪು ಹೊಡೆಯುತ್ತಾ ಹಾಲು ಕುಡಿಯ ತೊಡಗಿತ್ತು. ಮಗುವಿನ ಸಾವಿಗಾಗಿ ಹಗಲು ರಾತ್ರಿ ಕಣ್ಣು ಕೀಲಿಸಿ ಕೂತಿದ್ದ ಸಾಕವ್ವ, ಹಿತ್ತಲಲ್ಲಿ ಏನೋ ಮಾಡುತ್ತಿದ್ದವಳು ಮಗುವಿನ ಅಳು ನಿಂತಿದ್ದು ಕೇಳಿ ಅದರ ಜೀವ ಹಾರಿಹೋಯಿತೆಂದೇ ನಿರ್ಧರಿಸಿ, ಯಾವುದೋ ಗಂಡಾಂತರದಿಂದ ಪಾರಾದವಳಂತೆ ತುಸು ಸಮಾಧಾನ ಮತ್ತು ವಿಷಾದ ಬೆರೆತ ಮಿಶ್ರ ಭಾವಹೊತ್ತು ತನ್ನ ಕೋಣೆಗೆ ಬಂದಳು. ಬಾಗಿಲಿಗೆ ಬೆನ್ನು ಮಾಡಿ ಗೋಡೆಯತ್ತ ಮುಖ ತಿರುಗಿಸಿ ಕತ್ತಲ ಆ ಕೋಣೆಯಲ್ಲಿ ಕೂತಿದ್ದ ಹೆಂಗಸಿನ ಆಕೃತಿ ಕಂಡು  ಕ್ಷಣ ಗರಬಡಿದವಳಂತೆ ನಿಂತಳು.

ಸಾಕವ್ವ ತುಸು ಅಳುಕುತ್ತಲೇ “ಯಾರದು ಹಿಂಗ್ಬಂದು ಕೂತಿರದು ಒಂದೀಟ್ ಮಖ ತೋರ್ಸಿ….” ಎಂದು ಬಿರುಸಾಗಿಯೇ ಹೇಳಿದಳು. ಇನ್ನೇನು ಹೊಡೆದೇ ಬಿಡುವಳೋ ಎಂಬಷ್ಟು ಗಡುಸಾಗಿ ಗುಡುಗಿದ ಸಾಕವ್ವನ ದನಿ ಕೇಳಿ ಗಾಬರಿ  ಗೊಂಡಳು ಅಕ್ಕಯ್ಯಮ್ಮ.  ಮಗುವಿನ ಬಾಯಲ್ಲಿದ್ದ ಮೊಲೆಯನ್ನು ಗಡಿಬಡಿಯಿಂದಲೇ ಕಿತ್ತು ಇತ್ತ ತಿರುಗಿ “ನಾನು ಕನ್ ಸಾಕಕ್ಕ,  ಹಿಂಗೆ ಹೋಯ್ತಿದ್ನಾ ಈ ಮಗಿನ ಅಳ ಕೇಳ್ನಾರ್ದೆ  ಬಂದೆ. ನೀವ್ಯಾರು ಕಾಣುಸ್ಲಿಲ್ವಲ್ಲ  ಅದ್ಕೆ ಹಾಲ್ ಕೊಟ್ಕೊಂಡು ಕೂತ್ಕೊಂಡೆ” ಎಂದಳು. 

ಸಿಡಿ ಮಿಡಿಗೊಂಡ ಸಾಕವ್ವ ರಪ್ಪನೆ ಮಗುವನ್ನು ಕಿತ್ತುಕೊಂಡು “ನಿನ್ ಮನೆ ಹಾಳಾಗ. ನನ್ ವಂಸ ನಾಸ ಮಾಡಕ್ಕೆ ಅಂತ್ಲೇ ಮೂರು ಗಂಡೈಕ್ಲು ಮೇಲೆ ಹುಟ್ಬಂದಿರೋ ಈ ಪಿಸಾಚಿ ಮಗಿಗ್ಯಾಕೆ ಹಾಲು ಕೊಟ್ಟೆ, ಬ್ಯಾರೆಯವ್ರು ಮನೆ ಉಸಾಬರಿ ನಿಂಗ್ಯಾಕೆ  ಸುಮ್ನೆ ಅಮಿಕೊಂಡು ಹೋಗಕಾಗಕಿಲ್ವ…”  ನೋಡ ನೋಡುತ್ತಿದ್ದಂತೆ ಸಾಕವ್ವ ಸ್ಥಿಮಿತ ತಪ್ಪಿದಂತೆ ಕೂಗಾಡತೊಡಗಿದಳು. ಮೊಲೆ ಕಿತ್ತುಕೊಂಡ ಮಗು ಆಕಾಶ ಭೂಮಿ ಒಂದಾಗುವಂತೆ ಜೋರಾಗಿ ಅಳುತ್ತಲೇ ಇತ್ತು.  “ಅಯ್ಯೋ ಇನ್ನೂ ಯಾವ್ ಕಾಲ್ದಲಿದ್ದಿ ಸಾಕಕ್ಕ  ನಾನುವೆ ಮೂರ್ ಗಂಡ್ಮಕ್ಕಳು ಬೆನ್ಗೆ ಹುಟ್ಟಿರೋಳು. ನನ್ನ ಅಣ್ಣ, ತಮ್ಮ ತವ್ರು  ಎಲ್ಲಾ  ಬೇಕಾದಂಗೆ ಬದ್ಕಾಟ ಕಟ್ಕೊಂಡು ಬಾಳ್ತಾವ್ರಲ್ಲ ಏನಾಗಿದ್ದಾತು ಅವ್ರಗೆ, ನೀನೇ ನೋಡಿದ್ಯಲ್ಲ…?” ಎಂಬ ಪ್ರಶ್ನೆಯೊಂದಿಗೆ ಮಾತು ಆರಂಭಿಸಿದ ಅಕ್ಕಯಮ್ಮ ಒಂದೇ ಸಮನೆ ಜಡಿಮಳೆ ಸುರಿದಂತೆ ಬುದ್ಧಿ ಹೇಳ ತೊಡಗಿದಳು. ಕೊನೆಯ ಮಾತೆಂಬಂತೆ “ನೋಡು ಸಾಕಕ್ಕ ನಿನ್ಗೆ ಈ ಮಗ ಬ್ಯಾಡ ಅಂದ್ರೆ ಕೊಡತ್ತಗಿ ನಾನೇ ಸಾಕೊತಿನಿ, ನನ್ನ ಹೈದುಂಜೊತೆಗೆ ಮಸ್ತನಾಗೆ ಬೆಳುಸ್ತಿನಿ..” ಎನ್ನುತ್ತಾ ಸಾಕವ್ವನ ಕೈಲಿದ್ದ ಮಗುವನ್ನು  ಯಾವ ಮುಲಾಜು ಇಲ್ಲದೆ ರಪ್ಪನೆ ಕಿತ್ತುಕೊಂಡಳು. 

ಸಾಕವ್ವನಿಗೆ ಹತ್ತಿರದ ನೆಂಟತಿಯೇ ಆಗಬೇಕಿದ್ದ ಈ ಅಕ್ಕಯ್ಯಮ್ಮ,  ಈಗ್ಗೆ ಎರಡು ವರ್ಷಗಳ ಹಿಂದೆ  ಮಾಳದ  ಹಬ್ಬಕ್ಕೆಂದು ಇಡೀ ಊರಿಗೆ ಊರನ್ನೆ ತನ್ನ ತವರು ಗೌರಿಪುರಕ್ಕೆ ಕರೆದುಕೊಂಡು ಹೋಗಿ, ಬೇಕಾದ ಹಾಗೆ ಬಾಡು ಬಳ್ಳೆ ತಿನ್ನಿಸಿ ಕಳಿಸಿದ್ದಳು. ಅಕ್ಕಯ್ಯಮ್ಮನೂ ಸೇರಿದಂತೆ  ಊರ ಜನವೆಲ್ಲಾ ಅವರ ಮನೆಯ ಸಿರಿವಂತಿಕೆಯನ್ನು, ಉದಾರತನವನ್ನು ಕಂಡು ಬಾಯಿಯ ಮೇಲೆ ಕೈ ಇಟ್ಟುಕೊಂಡು ಬಂದಿದ್ದರು.   ಅಕ್ಕಯ್ಯಮ್ಮ ಹೀಗೆ ಅವಳನ್ನೇ ಉದಾಹರಣೆಯಾಗಿ ಕೊಟ್ಟು ಆಡಿದ ಮಾತುಗಳು ಸಾಕವ್ವನ ತಲೆಯೊಳಗೆ ಭೂತದಂತೆ ಕೂತಿದ್ದ ಪೂರ್ವಾಗ್ರಹವನ್ನು ಕೊಡವಿಕೊಳ್ಳುವಂತೆ ಮಾಡಿತು. ಕೂಡಲೇ ಅಕ್ಕಯ್ಯಮ್ಮನ ಕೈಲಿದ್ದ  ಮಗುವನ್ನು ತೆಗೆದುಕೊಂಡು ” ಆ ಚೆಲುವ್ರಾಯ್ ಸ್ವಾಮಿನೆ ನಿನ್ನ ಕಳುಸುದ್ನೇನೋ ಕನೆ ಅಕ್ಕಯ್ಯ. ನಾನೊಬ್ಳು ಹುಚ್ಮುಂಡೆ ಯಾರ್ಯಾರ್ದೊ ಮಾತ್ಕಟ್ಕೊಂಡು ಈಸ್ ದಿನ ಈ ಮಗಿನ ಅಯ್ಯೋ ಅನ್ಸಿ ಪಾಪಾ ಕಟ್ಕೊಂಡೆ..” ಎನ್ನುತ್ತಾ ಮೊಗುವಿನ ಬಾಯಿಗೆ ಹಾಲು ಕಟ್ಟಿ ಕಲ್ಲಂತಾಗಿದ್ದ ಮೊಲೆಯನ್ನು ಇಟ್ಟು, ಅಮುಕಿ ಅಮುಕಿ ಎದೆಯನ್ನು ಮೃದುಗೊಳಿಸ ತೊಡಗಿದಳು.

ಇತ್ತೀಚೆಗಷ್ಟೇ ಕಾಮಾಲೆ ರೋಗ ಬಂದು ತೀರಿಕೊಂಡ ಅಕ್ಕಯ್ಯಮ್ಮ,  ತಾನು ಬದುಕಿರುವವರೆಗೂ ಗಂಗೆ, ಎದುರು ಬಂದಾಗೆಲ್ಲ  ಈ ಕಥೆಯ ಪುರಾಣವನ್ನೇ ಬಿಚ್ಚಿ ಕೂತು ಬಿಡುತ್ತಿದ್ದಳು. ಈಗ ನಿರ್ಜನ ಕಾಡಿನಲ್ಲಿ ಅನಾಥಳಂತೆ ಕುಸಿದು ಕೂತಿದ್ದ ಗಂಗೆಗೆ ಮತ್ತೆ ಮತ್ತೆ ಅಕ್ಕಯಮ್ಮ ಹೇಳುತ್ತಿದ್ದ ಈ ಘಟನೆ ನೆನಪಾಯಿತು ” ಈ ಸುಖ ಅನುಭೊಗ್ಸಕ್ಕೆ ಬಂದು ನನ್ನ ಉಳುಸ್ತಾ ಅಕ್ಕಯ್ಯವ್ವ, ನಮ್ಮವ್ವ ಕಲ್ಲಾದಂಗೆ ನೀನ್ಯಾಕೆ ಕಲ್ಲಾಗ್ಲಿಲ್ಲ. ಈಗ್ ನಾನ್ ಬಾಳ್ನೋಡು ನಾಯಿಪಾಡ್ಗೂ ಕಡೆಯಾಗ್ ಕೂತೈತೆ. ನಾನ್ ಏನ್ಮಾಡಿ ಸಾಯ್ಲಿ ಹೇಳು. ಎಂದು ಇಲ್ಲದ ಅಕ್ಕಯ್ಯವ್ವನೊಡನೆ ತನ್ನ ದುಃಖ ತೋಡಿಕೊಳ್ಳತೊಡಗಿದಳು…

ಹಿಂದಿನ ಕಂತು ಓದಿದ್ದೀರಾ? ಕೈಗ್ ಬಂದ್ ತುತ್ತು ಬಾಯಿಗಿಲ್ದಂಗ್ ಮಾಡ್ಬುಟ್ಟಲ್ಲೋ ಸಿವ್ನೇ…

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More articles

Latest article