ಜಮ್ಮು-ಕಾಶ್ಮೀರದಲ್ಲಿ ಉಗ್ರರು ಮತ್ತೆ ಅಟ್ಟಹಾಸ ಮುಂದುವರಿಸಿದ್ದಾರೆ. ಕಠುವಾ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಬೆಂಗಾವಲು ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಮಚೇಡಿ ಪ್ರದೇಶದ ಜೆಂಡಾ ನಲ್ಲಾ ಗ್ರಾಮದ ಬಳಿ ಸೋಮವಾರ (ಜುಲೈ 8) ಮಧ್ಯಾಹ್ನ 3.30ರ ಸುಮಾರಿಗೆ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ.
ಸೇನಾ ವಾಹನ ಬರುವುದನ್ನೇ ಕಾದು ಕುಳಿತಿದ್ದ ಹಲವು ಉಗ್ರರು, ವಾಹನದ ಮೇಲೆ ಗ್ರೆನೇಡ್ಗಳ ಮೂಲಕ ದಾಳಿ ನಡೆಸಿದ್ದಾರೆ. ಗಾಯಾಳು ಯೋಧರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರೂ ಯೋಧರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
ಸೇನೆಯ ವಾಹನ ತೆರಳುವ ಕುರಿತು ಮಾಹಿತಿ ಪಡೆದಿದ್ದ ಉಗ್ರರು, ಯೋಜನೆ ರೂಪಿಸಿ, ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಉಗ್ರರು ದಾಳಿ ನಡೆಸುತ್ತಲೇ ಭಾರತೀಯ ಸೇನೆಯ ಯೋಧರು ತಿರುಗೇಟು ನೀಡುತ್ತಿದ್ದಾರೆ. ಉಗ್ರರಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಕಳೆದ 2 ದಿನಗಳಲ್ಲಿ ಇದು ಸೇನೆಯ ಮೇಲೆ ನಡೆದ 2ನೇ ದಾಳಿಯಾಗಿದೆ. ಜೊತೆಗೆ ಒಂದು ವಾರದಲ್ಲಿ ಸೇನಾ ವಾಹನವನ್ನೇ ಗುರಿಯಾಗಿಸಿ ನಡೆಸಿದ 2ನೇ ದಾಳಿಯೂ ಆಗಿದೆ.