ಉಗ್ರರ ದಾಳಿ: ಭಾರತೀಯ ವಾಣಿಜ್ಯ ಹಡಗನ್ನು ರಕ್ಷಿಸಿದ ನೌಕಾಪಡೆ

Most read

ಹೊಸದಿಲ್ಲಿ: ಏಡನ್‌ ಕೊಲ್ಲಿಯಲ್ಲಿ ಹೌತಿ ಬಂಡುಕೋರರಿಂದ ಕ್ಷಿಪಣಿ ದಾಳಿಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತದ ವಾಣಿಜ್ಯ ಹಡಗನ್ನು ರಕ್ಷಿಸಲು ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ.

ಹಡಗಿನಲ್ಲಿ 22 ಭಾರತೀಯ ಮತ್ತು ಓರ್ವ ಬಾಂಗ್ಲಾದೇಶಿ ಸಿಬ್ಬಂದಿ ಇದ್ದು, ಎಲ್ಲರನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದ್ದಾರೆ., ಐಎನ್‌ಎಸ್‌ ವಿಶಾಖಪಟ್ಟಣ ತನ್ನ ಆಧುನಿಕ ಅಗ್ನಿಶಾಮಕ ಉಪಕರಣಗಳ ಜೊತೆಗೆ ವಿಶೇಷ ತಂಡವನ್ನು ಕಾರ್ಯಾಚರಣೆಗೆ ನಿಯೋಜಿಸಿತ್ತು.

ಭಾರತೀಯ ನೌಕಾಪಡೆಯ ಕ್ಷಿಪಣಿ ವಿಧ್ವಂಸಕ ನೌಕೆ ಐಎನ್‌ಎಸ್‌ ವಿಶಾಖಪಟ್ಟಣ ಜನವರಿ 26ರ ರಾತ್ರಿ ತನಗೆ ಬಂದ ಸಹಾಯದ ಕರೆಗೆ ತಕ್ಷಣವೇ ಸ್ಪಂದಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿತ್ತು.

ಮಾರ್ಲಿನ್‌ ಲಾಂಡಾ ಎಂಬ ಹೆಸರಿನ ವಾಣಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆದ ಹಿನ್ನೆಲೆಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಇಸ್ರೇಲ್-ಹಮಾಸ್ ಸಂಘರ್ಷದ ಮಧ್ಯೆ ಹೌತಿ ಉಗ್ರಗಾಮಿಗಳು ಕೆಂಪು ಸಮುದ್ರದಲ್ಲಿ ವ್ಯಾಪಾರಿ ಹಡಗುಗಳ ಮೇಲೆ ದಾಳಿಗಳನ್ನು ಹೆಚ್ಚಿಸುತ್ತಿದ್ದು, ಹೌತಿ ಉಗ್ರರೇ ಖಂಡಾಂತರ ಕ್ಷಿಪಣಿಯ ಮೂಲಕ ಮಾರ್ಷಲ್‌ ದ್ವೀಪದಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಅಮೆರಿಕ ಸೆಂಟ್ರಲ್‌ ಕಮಾಂಡ್‌ ಹೇಳಿದೆ. ಹಮಾಸ್‌ ಮೇಲಿನ ಇಸ್ರೇಲ್‌ ದಾಳಿಯಿಂದ ವ್ಯಗ್ರರಾಗಿರುವ ಹೌತಿ ಬಂಡುಕೋರರು ಕಡಲಿನಲ್ಲಿ ಬೇರೆ ಬೇರೆ ದೇಶಗಳ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸುತ್ತಿದ್ದಾರೆ.

ಕಡಲಿನಲ್ಲಿ ನಡೆಯುವ ಇಂಥ ದಾಳಿಗಳನ್ನು ದೃಢವಾಗಿ ಎದುರಿಸಲು ನೌಕಾಪಡೆಯ ಅಡ್ಮಿರಲ್‌ ಆರ್‌ ಹರಿಕುಮಾರ್‌ ಸೂಚನೆ ನೀಡಿದ್ದಾರೆ.

ಕೆಲವು ದಿನಗಳ ಹಿಂದಷ್ಟೆ, ಜನವರಿ 18 ರಂದು, ಭಾರತೀಯ ವಾಣಿಜ್ಯ ಹಡಗೊಂದರ ಮೇಲೆ ಏಡನ್ ಕೊಲ್ಲಿಯಲ್ಲಿ ಡ್ರೋನ್‌ ದಾಳಿ ನಡೆದಿತ್ತು. ಸಂಕಷ್ಟದ ಕರೆಯನ್ನು ಸ್ವೀಕರಿಸಿದ ನಂತರ, ನೌಕಾದಳದ INS ವಿಶಾಖಪಟ್ಟಣ ಹಡಗನ್ನು ತಡೆದು ಸಹಾಯವನ್ನು ನೀಡಿದ್ದನ್ನು ಸ್ಮರಿಸಿಕೊಳ್ಳಬಹುದು.

ಇದಕ್ಕೂ ಮುನ್ನ 21 ಭಾರತೀಯ ಸಿಬ್ಬಂದಿಗಳಿದ್ದ ಮತ್ತೊಂದು ಹಡಗು ಡಿಸೆಂಬರ್ 23 ರಂದು ಭಾರತದ ಪಶ್ಚಿಮ ಕರಾವಳಿಯಲ್ಲಿ ಡ್ರೋನ್ ದಾಳಿಗೆ ಗುರಿಯಾಗಿತ್ತು.
ಅದೇ ದಿನ ಭಾರತಕ್ಕೆ ತೆರಳುತ್ತಿದ್ದ ಮತ್ತೊಂದು ವಾಣಿಜ್ಯ ತೈಲ ಟ್ಯಾಂಕರ್ ಕೂಡ ದಕ್ಷಿಣ ಕೆಂಪು ಸಮುದ್ರದಲ್ಲಿ ಶಂಕಿತ ಡ್ರೋನ್ ದಾಳಿಗೆ ಒಳಗಾಗಿತ್ತು. ನೌಕೆಯಲ್ಲಿದ್ದ 25 ಭಾರತೀಯ ಸಿಬ್ಬಂದಿಯ ಸೇರಿದಂತೆ ಎಲ್ಲರನ್ನು ರಕ್ಷಿಸಲಾಗಿತ್ತು.

More articles

Latest article