ಅಹಮದಾಬಾದ್: ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿ ಹೆಚ್ಚುತ್ತಲೇ ಇದೆ. ಇಂದು ಬೆಳಗ್ಗೆ ಗುಜರಾತ್ ನ ಕಛ್ ಗಡಿಯಲ್ಲಿ ಯುದ್ಧದ ಭೀತಿ ಆವರಿಸಿಕೊಂಡಿದ್ದು, ಪೂರ್ವ ಕಛ್ ನ ನಿರ್ಜನ ಪ್ರದೇಶದ ಮೇಲೆ ಕಂಡು ಬಂದ ಪಾಕಿಸ್ತಾನದ ಡ್ರೋಣ್ ಅನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಈ ಡ್ರೋಣ್ ಅವಶೇಷಗಳನ್ನು ಭಾರತೀಯ ಸೇನೆ ಸಂಗ್ರಹಿಸಿದೆ. ಆ ವಸ್ತು ಡ್ರೋನ್ ಅಥವಾ ಕ್ಷಿಪಣಿಯೇ ಎಂದು ತನಿಖೆ ನಡೆಸುತ್ತಿದ್ದಾರೆ.
ಕಛ್ ನಲ್ಲಿ ಸಂಭವಿಸಿದ ಈ ಘಟನೆಯ ನಂತರ ಸರ್ ಕ್ರೀಕ್ ಎಂಬಲ್ಲಿ ಇನ್ನೂ ಮೂರು ಡ್ರೋಣ್ ಗಳು ಕಾಣಿಸಿಕೊಂಡಿವೆ ಎಂದು ತಿಳಿದು ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನಿನ್ನೆ ಸಂಜೆಯಿಂದಲೇ ಕಛ್ ನಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ.
ಪಾಕಿಸ್ತಾನ ಪಡೆಗಳು, ಭಾರತದ ಸೇನಾ ಸೌಕರ್ಯಗಳನ್ನು ಗುರಿಯಾಗಿಸುವ ಉದ್ದೇಶದಿಂದ ಪಶ್ಚಿಮ ಗಡಿಯಲ್ಲಿ ಹಲವು ಬಾರಿ ಭಾರತದ ವಾಯು ಗಡಿ ಉಲ್ಲಂಘಿಸಿವೆ. ಈ ಪ್ರಯತ್ನಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿರುವ ಭಾರತೀಯ ಸೇನೆ, ಡ್ರೋಣ್ ಗಳನ್ನು ಹೊಡೆದುರುಳಿಸಿದೆ.
ಪಾಕ್ ಪಡೆಗಳು ಗಡಿಯುದ್ದಕ್ಕೂ ನಡೆಸಿದ ದಾಳಿಯಲ್ಲಿ ತಂಗ್ ಧರ್, ಉರಿ, ಪೂಂಚ್, ಮೆಂಧರ್, ರಜೌರಿ, ಅಖ್ನೂರ್ ಮತ್ತು ಉಧಮ್ ಪುರ್ ಪ್ರದೇಶಗಳ ಕೆಲವು ಗ್ರಾಮಗಳಲ್ಲಿ ಭಾರಿ ಹಾನಿಯುಂಟಾಗಿದೆ. ಫಿರೋಜ್‌ಪುರದಲ್ಲಿ, ಕಳೆದ ರಾತ್ರಿ ಪಾಕಿಸ್ತಾನಿ ಡ್ರೋಣ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಗಾಯಗೊಂಡಿದ್ದಾರೆ. ಇದರಿಂದ ಒಂದು ಕಟ್ಟಡ ಮತ್ತು ಒಂದು ಕಾರು ಸುಟ್ಟುಹೋಗಿದೆ.
ಡ್ರೋಣ್ ದಾಳಿಯ ನಂತರ, ಸ್ಥಳೀಯ ನಿವಾಸಿಗಳು ಭಯಭೀತರಾಗಿದ್ದು ಅಗತ್ಯ ವಸ್ತಗಳ ಖರೀದಿಗೆ ಅಂಗಡಿ ಮುಂಗಟ್ಟುಗಳಿಗೆ ದೌಡಾಯಿಸುತ್ತಿದ್ದಾರೆ. ಆದರೂ ಅಂಗಡಿಗಳನ್ನು ಬೇಗ ಬೇಗ ಮುಚ್ಚಲಾಗುತ್ತಿತ್ತು.
ತರಕಾರಿ ಹೂ ಹಣ್ಣು ಅಹಮದಾಬಾದ್, ರಾಜ್‌ಕೋಟ್ ಮತ್ತು ಉತ್ತರ ಗುಜರಾತ್ ನಿಂದ ಪೂರೈಕೆಯಾಗುತ್ತವೆ. ಈ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಭೀತಿಯಿಂದಾಗಿ ತರಕಾರಿ ಹೂ ಹಣ್ಣುಗಳಿಗೆ ಸಾರ್ವಜನಿಕರು ಪರದಾಡುತ್ತಿದ್ದ ದೃಶ್ಯಗಳು ಕಂಡು ಬಂದುವು ಎಂದು ತಿಳಿದು ಬಂದಿದೆ.