ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಮುಂದಿನ ಮೂರು ತಿಂಗಳಲ್ಲಿ ಅವರು ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ.
ಚೆನ್ನೈ ಮೂಲದ ಗಾಯಕಿ ಮತ್ತು ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ತೇಜಸ್ವಿ ಸೂರ್ಯ ವರಿಸಲಿದ್ದಾರೆ. ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದಪ್ರಸಾದ್ ಅವರ ಎರಡೂ ಕುಟುಂಬಗಳು ಈಗಾಗಲೇ ಮಾತುಕತೆ ನಡೆಸಿ ಮದುವೆಗೆ ಒಪ್ಪಿಗೆ ನೀಡಿವೆ ಎಂದು ತೇಜಸ್ವಿ ಸೂರ್ಯ ಅವರ ಆಪ್ತರು ತಿಳಿಸಿದ್ದಾರೆ.
ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಯೋ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿಯನ್ನು ಪಡೆದಿರುವ ಶಿವಶ್ರೀ ಸ್ಕಂದಪ್ರಸಾದ್, ಚೆನ್ನೈ ವಿಶ್ವವಿದ್ಯಾನಿಲಯದಿಂದ ಭರತನಾಟ್ಯದಲ್ಲಿ ಎಂಎ ಮತ್ತು ಚೆನ್ನೈ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ಪದವಿ ಪಡೆದಿದ್ದಾರೆ. 2025 ರ ಮಾರ್ಚ್ 4ರಂದು ತೇಜಸ್ವಿ ಸೂರ್ಯ-ಶಿವಶ್ರೀ ಸ್ಕಂದಪ್ರಸಾದ್ ವಿವಾಹ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಇದೀಗ ಹಲವರ ಪ್ರಶ್ನೆಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ. ಇಷ್ಟರವರೆಗೆ ಮೌನವಾಗಿದ್ದ ತೇಜಸ್ವಿ ಸೂರ್ಯ, ಇದೀಗ ಚೆನ್ನೈ ಮೂಲದ ಗಾಯಕಿ ಮತ್ತು ಭರತನಾಟ್ಯ ಕಲಾವಿದೆ ಶಿವಶ್ರೀ ಸ್ಕಂದ ಪ್ರಸಾದ್ ಎನ್ನುವವರನ್ನು ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಇನ್ನು ಮುಂದಿನ ವರ್ಷ ಮಾರ್ಚ್ 4ರಂದು ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ. ಶಿವಶ್ರೀ ಸ್ಕಂದ ಪ್ರಸಾದ್ ಅವರ ಧ್ವನಿಗೆ ಪ್ರಧಾನಿ ಮೋದಿ ಅವರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆ ರಾಮಮಂದಿರದ ಉದ್ಘಾಟನಾ ಸಂದರ್ಭದಲ್ಲಿ ಶ್ರೀರಾಮನನ್ನು ಕುರಿತು ಶಿವಶ್ರೀ ಅವರ ಗಾಯನವನ್ನು ಮೋದಿ ಎಕ್ಸ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು.