ಬೆಂಗಳೂರು: ಪಾಕಿಸ್ತಾನದ ವಿರುದ್ಧ ಭಾರತ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಯಶಸ್ಸನ್ನು ಆಚರಿಸುವ ಸಂದರ್ಭದಲ್ಲಿ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಬೆಂಗಳೂರಿನ ಟೆಕ್ಕಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ವೈಟ್ ಫೀಲ್ಡ್ ಪೊಲೀಸರು 25 ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ಶುಭಾಂಶು ಶುಕ್ಲಾ ಎಂಬಾತನನ್ನು ಬಂಧಿಸಿದ್ದಾರೆ. ಮೂಲಗಳ ಪ್ರಕಾರ ಮೇ 9 ರ ಮುಂಜಾನೆ ವೈಟ್ ಫೀಲ್ಡ್‌ನ ಪ್ರಶಾಂತ್ ಲೇಔಟ್ ನಲ್ಲಿರುವ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಛತ್ತೀಸ್ ಗಢ ಮೂಲದ ಶುಕ್ಲಾ, ತನ್ನ ಸ್ನೇಹಿತನೊಂದಿಗೆ ಪಿಜಿಯಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.
ಮೇ 9 ರಂದು ಸುಮಾರು 12:30 ರ ಸುಮಾರಿಗೆ, ಪಿಜಿಯಲ್ಲಿ ವಾಸವಿದ್ದ ಯುವಕರು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವಿಜಯೋತ್ಸವವನ್ನು ಆಚರಿಸುತ್ತಿದ್ದರು.
ಈ ಸಂದರ್ಭದಲ್ಲಿ ಶುಕ್ಲಾ ಬಾಲ್ಕನಿಗೆ ಹೋಗಿ ಪಾಕಿಸ್ತಾನವನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ್ದಾನೆ. ಇದು ಅಲ್ಲಿನ ನಿವಾಸಿಗಳಿಗೆ ಮುಜುಗರವನ್ನುಂಟು ಮಾಡಿದೆ. ಶುಕ್ಲಾ ಪಾಕಿಸ್ತಾನ ಪರ ಘೋಷಣೆ ಕೂಗುತ್ತಿರುವಾಗ ಯುವಕರು ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ ಘಟನೆಯನ್ನು ತಿಳಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ವೈಟ್ ಫೀಲ್ಡ್ ಪೊಲೀಸರು ಶುಕ್ಲಾನನ್ನು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.