ಉಳ್ಳವರ ಸಂತೆಯಾಗದಿರಲಿ ‘ಚಿಂತಕರ ಚಾವಡಿ’

Most read

ಈ ಸಲದ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದಿಂದ ನಡೆದ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರ ಕ್ಷೇತ್ರದ ಅಭ್ಯರ್ಥಿಗಳು ಮಾಡಿರಬಹುದಾದ ವೆಚ್ಚವಂತೂ ದಿಗಿಲು ಹಿಡಿಸುವಂತಿದೆ. ಸಾಮಾನ್ಯ ಮತದಾರರನ್ನು ನಾಚಿಸುವ ರೀತಿಯಲ್ಲಿ ಈ ಕ್ಷೇತ್ರದ ‘ಪ್ರಜ್ಞಾವಂತ’ ರು ಆಮಿಷಕ್ಕೆ ಒಳಗಾಗಿರುವ ಮಾಹಿತಿಗಳು ಗಾಬರಿ, ಬೇಸರ, ಹೇಸಿಗೆ ಹುಟ್ಟಿಸುವಂತಿದೆ. ಈ ಕ್ಷೇತ್ರದಿಂದ ನಡೆಯುವ ಚುನಾವಣೆಗಳು ಕಾನೂನಾತ್ಮಕವಾಗಿ ಸರಿಯಾಗಿ, ನೈತಿಕವಾಗಿ ಇಲ್ಲದೇ ಹೋದರೆ ವಿಧಾನ ಪರಿಷತ್ ‘ಹಿರಿಯರ ಮನೆ’ಯಾಗಿ ತನ್ನ ಮಹತ್ವ ಉಳಿಸಿಕೊಳ್ಳುವುದು ಸಾಧ್ಯವಾಗದು ಡಾ. ಉದಯ ಕುಮಾರ ಇರ್ವತ್ತೂರು.

‘ಚಿಂತಕರ ಚಾವಡಿ’ ಎಂದೇ ಪರಿಗಣಿತವಾದ ಕರ್ನಾಟಕ ರಾಜ್ಯ ವಿಧಾನ ಪರಿಷತ್‍ಗೆ ಇತ್ತೀಚೆಗೆ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದಿಂದ ಚುನಾವಣೆ ನಡೆದು, ಪ್ರತಿನಿಧಿಗಳ ಆಯ್ಕೆಯೂ ಆಯಿತು. ಬಹಳ ವರ್ಷಗಳಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಇರುವ ಗೊಂದಲ, ಇತಿಮಿತಿಗಳ ಕುರಿತು ಬರೆಯಬೇಕು ಎಂದುಕೊಂಡರೂ, ಆನಂತರ ಸುಮ್ಮನಾಗುತ್ತಿದ್ದೆ. ಆದರೆ ಈ ಬಾರಿ ಬರೆಯಲೇಬೇಕು ಎನ್ನುವ ಸಂಕಲ್ಪ ಈ ಲೇಖನವಾಗಿ ರೂಪು ತಳೆದಿದೆ.

ನಾನು ಮತದಾರನಾಗಿರುವ ನೈರುತ್ಯ ಪದವೀಧರ ಶಿಕ್ಷಕ ಮತ್ತು ಪದವೀಧರ ಕ್ಷೇತ್ರವನ್ನು ಉದಾಹರಣೆಯಾಗಿಟ್ಟುಕೊಂಡು ಈ ಲೇಖನವನ್ನು ಬರೆಯುತ್ತಿದ್ದೇನೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಹೊನ್ನಾಳಿ ಜಿಲ್ಲೆಗಳಿಗೆ ಸೇರಿದ ಪದವೀಧರರು ಮತ್ತು ಪದವೀಧರ ಶಿಕ್ಷಕರು ತಮ್ಮ ತಲಾ ಒಬ್ಬ ಪ್ರತಿನಿಧಿಯನ್ನು ಕರ್ನಾಟಕ ವಿಧಾನ ಪರಿಷತ್ತಿಗೆ ಆರಿಸುವ ಅವಕಾಶವನ್ನು ಈ ಚುನಾವಣೆಯ ಮೂಲಕ ಕಲ್ಪಿಸಲಾಗಿದೆ. ಇಂತಹ ಪ್ರಾತಿನಿಧ್ಯದ ಮುಖ್ಯ ಆಶಯ ಕರ್ನಾಟಕ ಸರಕಾರ ರಚಿಸುವ ಯಾವುದೇ ಕಾನೂನು ವಿಧಾನಸಭೆಯಲ್ಲಿ ಅಂಗೀಕಾರವಾಗಿ, ವಿಧಾನ ಪರಿಷತ್ತಿಗೆ ಬಂದಾಗ ವಿಷಯದ ಕುರಿತು ವಿಮರ್ಶೆ, ಚರ್ಚೆಯ ಮೂಲಕ ಅದರ ಸಾಧಕ-ಭಾದಕಗಳ ಬಗ್ಗೆ ಕೂಲಂಕಷ ಪರಿಶೀಲನೆ ಮಾಡುವುದಾಗಿದೆ. ಇಂತಹ ಒಂದು ಸಾಂವಿಧಾನಿಕ ಕ್ರಮದ ಹಿಂದಿರುವ ದೂರದೃಷ್ಟಿ, ಜನಪರ ಕಾಳಜಿ, ಮೆಚ್ಚ ತಕ್ಕದ್ದೇ. ಪ್ರಸ್ತುತ ವಿಧಾನ ಪರಿಷತ್ ಕಾರ್ಯನಿರ್ವಹಿಸುತ್ತಿರುವ ರೀತಿ ನೋಡಿದರೆ ಸಾಂವಿಧಾನಿಕ ಆಶಯ ಅನುಷ್ಠಾನಕ್ಕೆ ಬರುತ್ತಿದೆಯೇ ಎನ್ನುವ ಬಗ್ಗೆ ಅನುಮಾನಗಳಿವೆ. ಬುದ್ಧಿವಂತ ಶಿಕ್ಷಕರು ಮತ್ತು ವಿದ್ಯಾವಂತ ಪದವೀಧರರು ಹೇಗೆ, ಯಾವ ಆಧಾರದ ಮೇಲೆ, ಯಾವ ಅಂಶಗಳಿಂದ ಪ್ರಭಾವಿತರಾಗಿ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುತ್ತಿದ್ದಾರೆ ಎನ್ನುವುದನ್ನು ನೋಡಿದರೆ ಇಂತಹ ಪ್ರಾತಿನಿಧ್ಯ ಮೂಲ ಆಶಯಕ್ಕೆ ವಿರುದ್ಧವಾಗಿದ್ದು ಅರ್ಥ ಕಳಕೊಳ್ಳುತ್ತಿದೆ ಎನಿಸದಿರದು. ಈ ಕ್ಷೇತ್ರಗಳ ಮತದಾರರು ಯಾರು, ಅವರನ್ನು ಯಾವ ಆಧಾರದ ಮೇಲೆ ಮತದಾರರನ್ನಾಗಿ ನೋಂದಣಿ ಮಾಡಲಾಗುತ್ತದೆ ಇದರ ಸಾಧಕ, ಭಾದಕಗಳೇನು ಎನ್ನುವುದನ್ನು ತಿಳಿಯುವುದು ಮತ್ತು ಇದರಲ್ಲಿ ಏನೇನು ಸುಧಾರಣೆಗಳು ಅಗತ್ಯವಿದೆ ಎನ್ನುವುದರ ಕುರಿತು ಈ ಲೇಖನವಿದೆ.

ಕರ್ನಾಟಕ ವಿಧಾನಪರಿಷತ್ತು

ಆರು ವರ್ಷಗಳಿಗೊಮ್ಮೆ ನಡೆಯುವ ಈ ಚುನಾವಣೆಗೆ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದ ತಕ್ಷಣ ಮೊದಲ ಹಂತವಾಗಿ ನೋಂದಣಿ ಕಾರ್ಯ ಆರಂಭವಾಗುವುದರೊಂದಿಗೆ ಮತದಾರರ ಯಾದಿ ಸಿದ್ಧವಾಗುತ್ತದೆ. ಚುನಾವಣಾ ಆಯೋಗದ ಅಧಿಸೂಚನೆಯ ಪ್ರಕಾರ ಮತಕ್ಷೇತ್ರದಲ್ಲಿ ವಾಸವಿರುವ (ದಾಖಲೆ ಒದಗಿಸಬೇಕಿದೆ) ಯಾವುದೇ ಪದವೀಧರರು ಮತದಾರರಾಗಿ ನೊಂದಾಯಿಸಬಹುದು. ಸಾರ್ವಜನಿಕರಲ್ಲಿ ಬಹಳಷ್ಟು ಮಂದಿ ಇದರ ಬಗ್ಗೆ ಆಸಕ್ತರೇ ಅಲ್ಲ. ನೋಂದಣಿಗೆ ಬೇಕಾಗುವ ಅರ್ಜಿ, ಪೂರಕ ದಾಖಲೆಗಳು ಯಾವುವು ಎನ್ನುವುದನ್ನು ಬಹಳಷ್ಟು ಜನ ಗಮನಿಸುವುದಿಲ್ಲ. ಇಷ್ಟಕ್ಕೂ ತೊಂದರೆ ತಾಪತ್ರಯ ತೆಗೆದುಕೊಂಡು ಹಣ, ಸಮಯ ವಿನಿಯೋಗಿಸಿದರೆ ನಮಗೇನು ಸಿಗುತ್ತದೆ ಎಂದು ಭಾವಿಸುವವರೇ ಅಧಿಕ. ರಾಜಕೀಯ ಪಕ್ಷಗಳು, ಅದರಲ್ಲಿಯೂ ಸಂಘ ಪರಿವಾರದ ಅಂಗಸಂಸ್ಥೆಗಳು ಸದ್ಯದ ಮಟ್ಟಿಗೆ ಈ ಕೆಲಸದಲ್ಲಿ ಗಂಭೀರವಾಗಿ ತೊಡಗಿಸಿಕೊಂಡು ಶಿಸ್ತುಬದ್ಧವಾಗಿ ನೋಂದಣಿಯ ಕೆಲಸ ಮಾಡುತ್ತವೆ. ಉಳಿದವರು ಕೋಟೆಬಾಗಿಲು ಮುಚ್ಚಿದ ಮೇಲೆ ಎಚ್ಚರವಾಗುವುದೂ ಕಷ್ಟಕ್ಕೆ. ಪರಿವಾರದ ಈ ಸಂಸ್ಥೆಗಳಿಗೆ ವ್ಯವಸ್ಥಿತವಾಗಿ ಕೆಲಸ ನಿರ್ವಹಿಸುವ ಸಂಘಟನಾ ಜಾಲವಿರುವುದು ಮತ್ತು ಸ್ವಯಂಸೇವಕರಾಗಿ ಪೂರ್ಣಾವಧಿ ಕಾರ್ಯಕರ್ತರಿರುವ ಕಾರಣ ಅವರು ಈ ಕೆಲಸವನ್ನು ಬಹಳ ವ್ಯವಸ್ಥಿತವಾಗಿ ಮಾಡುತ್ತಾರೆ. ಇವರನ್ನು ಹೊರತುಪಡಿಸಿದರೆ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ರಾಜಕೀಯ ಪಕ್ಷಗಳಲ್ಲಿ ಸ್ಪರ್ಧೆಗೆ ಅವಕಾಶ ಬಯಸುವ ಕೆಲಮಂದಿ ನೋಂದಣಿಗೆ ಅರ್ಜಿ ಮುದ್ರಿಸುವುದರಿಂದ ಹಿಡಿದು ಮತದಾರರನ್ನು ಬೆನ್ನತ್ತಿ ಅವರಿಂದ ಅರ್ಜಿ ತುಂಬಿಸಿಕೊಂಡು, ಸೂಕ್ತ ದಾಖಲೆ ಪಡೆದು, ನೋಂದಣಿ ಪೂರ್ಣಗೊಳಿಸಿ, ಮತದಾನ ಮಾಡಿಸುವವರೆಗೂ ಬೆನ್ನು ಬಿಡದ ಬೇತಾಳದಂತೆ ಕೆಲಸ ಮಾಡಿದರೆ ಮಾತ್ರ ಇಲ್ಲಿ ಜಯಗಳಿಸಲು ಸಾಧ್ಯ. ಹಾಗಾಗಿ ಇದಕ್ಕೆ ಹಣ, ಶ್ರಮ ಮತ್ತು ಒಂದು ದೊಡ್ಡ ಸಂಪರ್ಕ ಜಾಲ ಬಹಳ ಅಗತ್ಯ. ಆಯಾಯ ಕ್ಷೇತ್ರಗಳ ಇತರ ಸಾಮಾಜಿಕ ಸಮೀಕರಣಕ್ಕೆ ಅನುಸಾರ ಜಾತಿ, ಧರ್ಮ, ಪಂಗಡ, ಭಾಷೆಗಳ ಪ್ರಭಾವವನ್ನು ಅಲ್ಲಗಳೆಯುವ ಹಾಗಿಲ್ಲ.

ಶಿಕ್ಷಕರ ಕ್ಷೇತ್ರದಲ್ಲಿ ಪದವೀಧರರಾಗಿರುವ ಪ್ರಾಥಮಿಕ, ಮಾಧ್ಯಮಿಕ, ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರು ಮತದಾರರಾಗಿ ನೋಂದಣಿ ಮಾಡಲು ಅರ್ಹರು. ಇಲ್ಲಿಯೂ ಅಷ್ಟೇ ಶಿಕ್ಷಕರು ಮತದಾರರಾಗಿ ನೋಂದಣಿ ಮಾಡಿಸಿಕೊಳ್ಳಲು ಉತ್ಸುಕತೆಯಲ್ಲಿ ಇರುವುದು ಬಹಳ ಅಪರೂಪ. ಹಲವಾರು ವರ್ಷಗಳ ಹಿಂದೆ ಮಾಧ್ಯಮಿಕ ಶಾಲಾ ಶಿಕ್ಷಕರನ್ನು ಸರಕಾರ ಕೆಟ್ಟದಾಗಿ ನಡೆಸಿಕೊಂಡಿತು, ಮುಷ್ಕರ ನಿರತ ಶಿಕ್ಷಕರ ಮೇಲೆ ಲಾಟಿ ಪ್ರಹಾರ ನಡೆಸಿದ ಸಿಟ್ಟಿಗೆ ತಮ್ಮಲ್ಲಿಯೇ ಒಬ್ಬರನ್ನು ವಿಧಾನ ಪರಿಷತ್ತಿಗೆ ಕಳುಹಿಸಿದ್ದು ಬಿಟ್ಟರೆ ಉಳಿದಂತೆ ಸೈದ್ಧಾಂತಿಕ ಬದ್ಧತೆಯಿಂದ ಉದಾತ್ತ ಧ್ಯೇಯಕ್ಕೆ ಬದ್ಧರಾಗಿ ಶಿಕ್ಷಕರ ಪ್ರತಿನಿಧಿಯನ್ನು ಆರಿಸಿ ಕಳುಹಿಸಿದ್ದು ಬಹಳ ಅಪರೂಪ. ಬಹುಪಾಲು ಶಿಕ್ಷಕರು ತಮ್ಮ ಪ್ರತಿನಿಧಿಯನ್ನು ಯಾಕೆ, ಯಾವ ಕಾರಣಕ್ಕಾಗಿ ಕಳುಹಿಸಬೇಕು. ಅದರ ಮಹತ್ವ ತಿಳಿದಿದ್ದಾರೆ ಎನ್ನಲಾಗದು.

ಈ ಸಲದ ಚುನಾವಣೆಯಲ್ಲಂತೂ ಪ್ರಜ್ಞಾವಂತ ಮತದಾರರ ಕ್ಷೇತ್ರದ ಅಭ್ಯರ್ಥಿಗಳು ಮಾಡಿರಬಹುದಾದ ವೆಚ್ಚವಂತೂ ದಿಗಿಲು ಹಿಡಿಸುವಂತಿದೆ. ಸಾಮಾನ್ಯ ಮತದಾರರನ್ನು ನಾಚಿಸುವ ರೀತಿಯಲ್ಲಿ ಈ ಕ್ಷೇತ್ರದ ‘ಪ್ರಜ್ಞಾವಂತ’ ರು ಆಮಿಷಕ್ಕೆ ಒಳಗಾಗಿರುವ ಮಾಹಿತಿಗಳು ಗಾಬರಿ, ಬೇಸರ, ಹೇಸಿಗೆ ಹುಟ್ಟಿಸುವಂತಿದೆ.

ಈಗಿನ ವಾತಾವರಣದಲ್ಲಿ ಚಿಂತಕರ ಚಾವಡಿ ಮುಂದುವರಿಯಲೇ ಬೇಕಿದ್ದರೆ ಇದರಲ್ಲಿ ಬದಲಾವಣೆಯ ಅಗತ್ಯ ಬಹಳವಿದೆ. ಬದಲಾವಣೆಯ ಕುರಿತು ಸರಕಾರ, ಚುನಾವಣಾ ಆಯೋಗ ಮತ್ತು ನಾಡಿನ ಪ್ರಜ್ಞಾವಂತರು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಈ ಕೆಳಗಿನ ಸಲಹೆಗಳನ್ನು ಪರಿಗಣಿಸಬಹುದಾಗಿದೆ.

1. ಪದವೀಧರ ಕ್ಷೇತ್ರದ ಮತದಾರರನ್ನು ಸಾಮಾನ್ಯ ಮತದಾರರ ಯಾದಿ ತಯಾರಿಸುವ ಹಂತದಲ್ಲಿಯೇ ಸಿದ್ಧಪಡಿಸಿ, ಇದು ಕೇವಲ ರಾಜಕೀಯ ಪಕ್ಷಗಳ ಹಿಡಿತದಿಂದ  ಮತ್ತು ಸ್ವಹಿತಾಸಕ್ತಿಯ ಜನರಿಂದ ಮುಕ್ತವಾಗಿರುವಂತೆ ಮಾಡಬೇಕು.

2. ಅಭ್ಯರ್ಥಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ದೂರದರ್ಶನ, ರೇಡಿಯೋ ಮೂಲಕ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಮಾತ್ರ ಪ್ರಚಾರ ಮಾಡಲು ವ್ಯವಸ್ಥೆ ಇರಬೇಕು. ಆಯೋಗವೇ ಇದರ ಉಸ್ತುವಾರಿ ವಹಿಸಿಕೊಳ್ಳಬೇಕು.

೩. ಶಿಕ್ಷಕರನ್ನು ಪ್ರತಿನಿಧಿಸುವ ಅಭ್ಯರ್ಥಿ ಕನಿಷ್ಠ ಪಕ್ಷ ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಹೊಂದಿರಬೇಕು.

4. ಶಿಕ್ಷಕ ಕ್ಷೇತ್ರದ ಪ್ರತಿನಿಧಿಯ ಆಯ್ಕೆಯ ಮಹತ್ವ, ವಿಧಾನದ ಕುರಿತು ಎಲ್ಲ ಶಿಕ್ಷಕರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಸೂಕ್ತ ಕಾರ್ಯಕ್ರಮ ಒಂದನ್ನು ವ್ಯವಸ್ಥೆ ಮಾಡಬೇಕು.

5. ಚುನಾವಣಾ ವೀಕ್ಷಕರನ್ನು ನೇಮಕ ಮಾಡುವ ಮೂಲಕ ಬಾಡೂಟ, ಭ್ರಷ್ಟಾಚಾರ, ಮಿತಿಮೀರಿದ ಖರ್ಚುವೆಚ್ಚಗಳಿಗೆ ಕಡಿವಾಣ ಹಾಕಬೇಕು.

ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಗಳು ಕಾನೂನಾತ್ಮಕವಾಗಿ ಸರಿಯಾಗಿ, ನೈತಿಕವಾಗಿ ಇಲ್ಲದೇ ಹೋದರೆ ವಿಧಾನ ಪರಿಷತ್ ‘ಹಿರಿಯರ ಮನೆ’ಯಾಗಿ ತನ್ನ ಮಹತ್ವ ಉಳಿಸಿಕೊಳ್ಳುವುದು ಸಾಧ್ಯವಾಗದು ಎಂದು ನನ್ನ ಅನಿಸಿಕೆ.

ಡಾ.ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

More articles

Latest article