ಬೆಂಗಳೂರು: ಇಂದಿನಿಂದ ಹಾಲು, ಮೆಟ್ರೊ, ನೀರು, ವಿದ್ಯುತ್ ದರ ಮಾತ್ರವಲ್ಲ, ಟೋಲ್ ದರವೂ ಹೆಚ್ಚಾಗಿದೆ. ಈ ದರ ಏರಿಕೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊಟ್ಟ ಏಪ್ರಿಲ್ ಫೂಲ್ ಉಡುಗೊರೆಗಳಾಗಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎ ಐ) ಇಡೀ ರಾಜ್ಯಾದ್ಯಂತ ಟೋಲ್ ದರ ಹೆಚ್ಚಳಕ್ಕೆ ಸಿದ್ದತೆ ಮಾಡಿಕೊಂಡಿದ್ದು, ಶೇ.3-5 ರಷ್ಟು ಹೆಚ್ಚಳವಾಗಲಿದೆ. ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದಾಬಸ್ ಪೇಟೆ ಮಾರ್ಗವಾಗಿ ದೇವನಹಳ್ಳಿ ತಲುಪುವ ಸೆಟಲೈಟ್ ಟೌನ್ ರಿಂಗ್ ರೋಡ್ (ಎಸ್ ಟಿ ಆರ್ ಆರ್) ಟೋಲ್ ಹೆಚ್ಚಳವಾಗಲಿದೆ.
ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗಬಯಸುವವರು ಸಾದಹಳ್ಳಿ ಟೋಲ್ ನಲ್ಲಿ ಹೆಚ್ಚಿನ ದರ ಪಾವತಿಸಬೇಕಾಗಿದೆ. ಕಾರು ಜೀಪು ಲಘು ವಾಹನಗಳು ಏಕ ಮುಖ ಸಂಚಾರಕ್ಕೆ 115 ರೂ ಗೆ ಬದಲಾಗಿ 120 ರೂ. ಪಾವತಿಸಬೇಕಾಗುತ್ತದೆ. ದ್ವಿಮುಖ ಸಂಚಾರಕ್ಕೆ 170 ರೂ.ಗಳಿಗೆ ಬದಲಾಗಿ 180 ರೂ. ತೆರಬೇಕಾಗಿದೆ. ಆದರೆ ಮಾಸಿಕ ಪಾಸ್ ಬಳಕೆದಾರರಿಗೆ ಅಷ್ಟೊಂದು ಹೊರೆಯಾಗದು. ಈ ಹಿಂದೆ ಪಾವತಿಸುತ್ತಿದ್ದ ಮಾಸಿಕ ಪಾಸ್ ದರ 3970 ರೂಗೆ ಬದಲಾಗಿ 3875 ರೂ. ಟೋಲ್ ಕಟ್ಟಬೇಕಾಗಿದೆ.
ಬೆಂಗಳೂರು ಮೈಸೂರು ಹೆದ್ದಾರಿಯ ಕಣಮಿಣಿಕೆ ಮತ್ತು ಶೇಷಗಿರಿಹಳ್ಳಿ ಟೋಲ್ ಪ್ಲಾಜಾಗಳಲ್ಲಿ ದಿನನಿತ್ಯ ಸಂಚರಿಸುವ ಬಳಕೆದಾರರ ಜೇಬಿಗೆ ಕತ್ತರಿ ಗ್ಯಾರಂಟಿ.
ಸೆಟಲೈಟ್ ಟೌನ್ ರಿಂಗ್ ರೋಡ್, ಬೆಂಗಳೂರು-ತಿರುಪತಿ ಹೆದ್ದಾರಿ, ಬೆಂಗಳೂರು-ಹೈದರಾಬಾದ್ ಹೆದ್ದಾರಿಗಳ ಮಾರ್ಗಗಳಲ್ಲಿ ಏಕಮುಖ ಸಂಚಾರಕ್ಕೆ ಲಘು ಸರಕು ಸಾಗಣೆ ವಾಹನಗಳು 175 ರೂ.ಗೆ ಬದಲಾಗಿ ರೂ.185, ಹಾಗೂ ದ್ವಿಮುಖ ಸಂಚಾರಕ್ಕೆ ರೂ. 265 ರಿಂದ 275, ಮತ್ತು ಮಾಸಿಕ ಪಾಸ್ ದರ ರೂ.5,890 ರಿಂದ ರೂ. 6,100 ರೂ.ಗಳಿಗೆ ಏರಿಕೆಯಾಗಿದೆ. ಲಾರಿ ಮತ್ತು ಬಸ್ ಗಳು ಏಕಮುಖ ಸಂಚಾರಕ್ಕೆ 355 ರೂ.ಗಳಿಂದ 370 ರೂ. ಪಾವತಿಸಬೇಕಾಗಿದೆ. ದ್ವಿಮುಖ ಸಂಚಾರಕ್ಕೆ ರೂ. 535 ರೂ ನಿಂದ 550 ರೂ ಮತ್ತು ಮಾಸಿಕ ಪಾಸ್ ಗಾಗಿ 11,845 ರೂ ನಿಂದ 12,265 ರೂ. ಟೋಲ್ ಕಟ್ಟಬೇಕಾಗಿದೆ. ರಾಜ್ಯದಲ್ಲಿ ರಸ್ತೆಗಳ ಗುಣಮಟ್ಟ, ನಿರ್ವಹಣೆ ಸುರಕ್ಷತೆ ಮತ್ತು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಟೋಲ್ ದರ ಏರಿಕೆ ಅನಿವಾರ್ಯ ಎಂದು ಪ್ರಾಧಿಕಾರದ ಅಧಿಕಾರಿಗಳು ಹೇಳುತ್ತಾರೆ.
ವಿಮಾನ ನಿಲ್ದಾಣಕ್ಕೆ ದಿನನಿತ್ಯ ಹೋಗುವವರು ಮತ್ತು ಸಾರಿಗೆ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ದರ ಏರಿಕೆ ಹೊರೆಯೇ ಸರಿ! ವಿಮಾನ ನಿಲ್ದಾಣಕ್ಕೆ ಸೇವೆ ಒದಗಿಸುವ ವಾಯುವಜ್ರ ಬಸ್ ಗಳಿಗೂ ಹೊಡೆತ ಬೀಳಲಿದೆ. ಕಳೆದ ಒಂದೆರಡು ತಿಂಗಳಲ್ಲಿ ಮೆಟ್ರೊ ರೈಲು, ಹಾಲು, ವಿದ್ಯುತ್ ದರ ಹೆಚ್ಚಳದ ಬಿಸಿ ತಟ್ಟಿದೆ. ಕಸಕ್ಕೂ ತೆರಿಗೆ ಹಾಕಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈ ದರ ಏರಿಕೆ ಹೊರೆಯಾಗಿರುವುದರಲ್ಲಿ ಅನುಮಾನವೇ ಇಲ್ಲ.