ಕೈಗ್ ಬಂದ್ ತುತ್ತು ಬಾಯಿಗಿಲ್ದಂಗ್ ಮಾಡ್ಬುಟ್ಟಲ್ಲೋ ಸಿವ್ನೇ…

Most read

ಗಂಗೆಯ ಯಾವ ಉಪಮೆ ಉಪದೇಶಗಳಿಗೂ ಬಗ್ಗದ ಅಪ್ಪಜ್ಜಣ್ಣ, ಸರಿ ರಾತ್ರಿಯವರೆಗೂ ಅವಳನ್ನು  ಕಾಡಿ ಬೇಡಿ ಗೋಳು ಹೊಯ್ದು, ಕೊನೆಗೆ  ಆರು ತಿಂಗಳೊಳಗೆ ಹೆಣ್ಣು ನೋಡಬೇಕೆಂಬ ಗಡುವು ನೀಡಿ ಬೆಳಗ್ಗೆ ತೊಟ್ಟ ಹೊಸ ಬಟ್ಟೆಯನ್ನು  ಕಳಚಿ ದುಮುಗುಡುತ್ತಲೆ ಚಾಪೆಗೆ ಮೈಚೆಲ್ಲಿದ್ದ.

ರಾತ್ರಿ ಪೂರ ಅರೆಬರೆ ನಿದ್ದೆಯಾಗಿದ್ದರಿಂದ ಬೆಳಗ್ಗೆ ತಡವಾಗಿ ಎಚ್ಚರಗೊಂಡವನು, ದಿನದ ವರ್ತ್ನೆಯವರಿಗೆ ಹಾಲು ಹಾಕಲು ತಡವಾಯಿತೆಂದು ಗಂಗೆಯ ಮೇಲೆ ಸುಖಾ ಸುಮ್ಮನೆ ಹರಿಹಾಯ್ದು. ದಡಬಡನೆ ಬಾಯಿ ಮುಕ್ಕಳಿಸಿ, ಮುಖಕ್ಕೆ ನೀರು ಎರಚಿಕೊಂಡು ಹಾಲು ಕರೆಯಲು ಕೊಟ್ಟಿಗೆಯತ್ತ ಬಂದ.

ಗಂಗೆಯ ತವರು ಮನೆಯ ಆ ದೊಡ್ಡ ಕೊಟ್ಟಿಗೆಯಲ್ಲಿದ್ದ ನಾಕಾರು ಹಸು ಎಮ್ಮೆಗಳ ನಡುವೆ ತನ್ನ ಪ್ರೀತಿಯ ಕಾವೇರಿ ಹಸುವನ್ನೂ, ಲಕ್ಷ್ಮಿ ಕರುವನ್ನು ಕಟ್ಟುತ್ತಿದ್ದ ಅಪ್ಪಜ್ಜಣ್ಣ. ಆ ಮುಂಜಾನೆ  ಅವುಗಳನ್ನು ಕಟ್ಟಿಹಾಕಿದ್ದ ಜಾಗ ಖಾಲಿ ಹೊಡೆಯುತ್ತಿದ್ದನ್ನು ಕಂಡು ತುಸು ಅಧೀರನಾದ. ಹಿಂದಿನ ಸಂಜೆಯಷ್ಟೇ ಹಾಲು ಕರೆದು ಮೇಯಲು ಹುಲ್ಲು ಹಾಕಿ ಬೆನ್ನು ಚಪ್ಪರಿಸಿ ಹೋದ ದೃಶ್ಯ ಕಣ್ಣ ಮುಂದೆ ಹಾದು ಹೋಯಿತು. ತುಸು ಕಸಿವಿಸಿ ಎನ್ನಿಸಿತಾದರು, ಗೂಟಕ್ಕೆ ಕಟ್ಟಿದ್ದ ಕುಣಿಕೆ ಸಡಿಲವಾಗಿ ಹಗ್ಗ ಬಿಚ್ಚಿರಬೇಕೆಂದು ತಾನೇ ಸಮಾಧಾನ ಮಾಡಿಕೊಂಡು, ಅಕ್ಕಪಕ್ಕದ ಹಿತ್ತಿಲು ಹೊಲಗದ್ದೆಗಳಲೆಲ್ಲಾ ಹುಡುಕಾಡಿದ. ಎಲ್ಲೂ ಅವುಗಳ ಪತ್ತೆ ಹತ್ತದೆ ಸಾಕವ್ವನನ್ನು ಕೇಳಲು ಮನೆಯತ್ತ ಬಂದ. 

ಬೆಳಗಿನ ಎಳೆಬಿಸಿಲಿಗೆ ಮೈ ಒಡ್ಡಿ ಕೂತಿದ್ದ ಚಂದ್ರಹಾಸ ಅಪ್ಪಜ್ಜಣ್ಣನನ್ನು ನೋಡಿಯೂ ನೋಡದಂತೆ  ಅತ್ತ ಮುಖ ತಿರುಗಿಸಿ ಕೂತ. ದಿನವೂ ತನ್ನೊಂದಿಗೆ ಬೆಳಗ್ಗೆ ಸಂಜೆ ಎಮ್ಮೆಗಳ ಹಾಲು ಹಿಂಡಲು ಬರುತ್ತಿದ್ದ ಸಾಕವ್ವನನ್ನು ಕೂಗಿ  ” ಏನವ್ವ ನೆನ್ನೆ ಸಂಜಿನಾಗ ನಮ್ಮ ಹಸನೂ ಕರನೂ ಕೊಟ್ಗೆಲೆ ಕಟ್ಟಿದ್ದೆ ಈಗ ನೋಡಿದ್ರೆ ಅವಲ್ಲಿಲ್ಲ ನೀನೇನಾರ ಕಂಡ” ಎಂದು ಗದ್ಗತಿತನಾಗಿ ಕೇಳಿದ. ಇನ್ನೂ ಸಾಕವ್ವನ ಕಿವಿಗೆ ಈ ಮಾತು ತಲುಪಿತ್ತೋ ಇಲ್ಲವೊ, ಅದೆಲ್ಲಿದ್ದನೋ ಗಿರಿಧರ ರಾಕ್ಷಸನಂತೆ ಅಪ್ಪಜ್ಜಣ್ಣನ ಮೇಲೆ ಏರಿ ಬಂದು “ಹೆಡ್ ಮುಂಡೆ ಗಂಡ್ನೆ ನಿನ್ ಹಸ ಕರವ ನೀನ್ ಜ್ವಾಪನ ಮಾಡ್ಬೇಕು. ನಮ್ಮುನ್ನೇನ್ಲಾ ಬಂದ್ಕೇಳ್ತಿದ್ದಿ ಇನ್ಮೇಲೆ ನಮ್ ಕೊಟ್ಗೆಕಡಿಕೇನಾರ ಕಾಲ್ ಹಾಕಿದ್ರೆ ಹುಟ್ಲಿಲ್ಲ ಅನ್ನುಸ್ಬುಡ್ತಿನಿ ನಡಿತಾ ಇರು ಇಲ್ಲಿಂದ” ಎಂದು ಕತ್ತಿಗೆ ಕೈ ಹಾಕಿ ದೂಡಿದ. 

ಮೊದಲೇ ಮಡುಗಟ್ಟಿ ನಿಂತಿದ್ದ ಅಪ್ಪಜ್ಜಣ್ಣನ ದುಃಖ ಪಳ್ಳನೆ ಕಣ್ಣೀರಾಗಿ ಉದುರಿ “ನಾನ್ ಕೇಳಿದ್ದು ಸಾಕವ್ವುನ್ನ ನಿನ್ನಲ್ಲ ಅದುಕ್ಯಾಕೆ ದಯ್ಯ ಮೆಟ್ಕೊಂಡೋನಂಗಾಡ್ತಿ ಒಳ್ಳೆ ಮಾತ್ನಲೇಳಿದ್ರೆ ಆಗಕಿಲ್ವ” ಕಟ್ಟಿದ ಗಂಟಲಲ್ಲಿ ದಸಬುಸನೆ ಉಸುರಿದ. ಬಿಸಿಲಿಗೆ ಬೆನ್ನು ಕೊಟ್ಟು ಕೂತಿದ್ದ ಚಂದ್ರಹಾಸ ನೊರನೊರನೆ ಹಲ್ಲು ಕಡಿಯುತ್ತಾ ಮೈ ಕೊಡವಿ ನಿಂತು “ಅಲಲೆ ಭೂಪ ನಮ್ಮಟ್ಟಿ ಬಾಗ್ಲುಗ್ಬಂದು ನಮ್ಮುನ್ನೆ ದಯ್ಯ ಮೆಟ್ಕೊಂಡೋರು ಅಂತಿಯ. ನಾವು ನಿನ್ನ ಹಸ ಕರ ಕದ್ ಮಾರಿದಿವಿ ಅನ್ನೋ ಹಂಗೆ ಜೂರತ್ ಮಾಡ್ತಿಯೆನ್ಲಾ  ಬೋಸುಡಿಕೆ. ಆ ಲೌಡಿ ಮನೆ ಅನ್ನ, ನಿನ್ತಿಕ ಕೊಬ್ಬುಸ್ಬುಟೈತೆ ಕಣ್ಲಾ ಏನ್ ನೋಡ್ತಿ ಗಿರಿ ಇಕ್ಲಾ ನಾಕು” ಎಂದು ಹೇಳಿದ್ದೆ ತಡ, ಅಣ್ಣನೊಂದಿಗೆ ಗಿರಿಧರನೂ ಅಪ್ಪಜ್ಜಣ್ಣನ ಮೇಲೆರಗಿದ. ” ಅಯ್ಯಯ್ಯೋ ಕೆಟ್ಟೆ ಕಣ್ರಪ್ಪೋ” ಎಂದು ಕೂಗಿ ಕೊಂಡ ಅಪ್ಪಜ್ಜಣ್ಣನ ದನಿ ಕೇಳಿ ಹಿತ್ತಿಲಿನಲ್ಲಿದ್ದ ಸಾಕವ್ವ ಓಡಿ ಬಂದು ಅವನನ್ನು ಅವರಿಬ್ಬರಿಂದ ಬಿಡಿಸಿ ಹೊರ ಕರೆದುಕೊಂಡು ಬಂದಳು. 

 “ಇದ್ಯಾಕೋ ಅಪ್ಪಜ್ಜಣ್ಣ, ಏನಾಯ್ತೋ…ಏನಾರು ಇದ್ರೆ ನನ್ನ ಕೇಳ್ಬೆಕು ತಾನೆಯ ಆ ಮೂದೇವಿಗೊಳತ್ರ ಯಾಕೋ ಹೋಯ್ತಿ” ಎಂದು ತನ್ನ ಸೆರಗ ತುದಿಯಿಂದ ಅವನ ಕಣ್ಣೀರೊರೆಸಿದಳು. “ಕೊಟ್ಗೆಲ್ ಕಟ್ಟಿದ್ ದನ ಕರ  ಕಾಣುಸ್ತಾ ಇಲ್ಲ ಕನವ್ವ. ಅದ್ಕೆ ಬಂದು ಕೇಳಿದ್ನಪ್ಪ ಅಷ್ಟುಕ್ಕೆ ಹಿಂಗೊಡಿಬೇಕಿತ್ತ… ಹಸ ಕರ ಇಲ್ಲ ಅಂತ ಗಂಗವ್ವುಂಗೊತ್ತಾದ್ರೆ ಜೀವನೆ ವಡ್ಕೊತಳೆ” ಧುತ್ತನೆ ಸಾಕವ್ವನ ಕಣ್ಣ ಮುಂದೆ  ಮಧ್ಯರಾತ್ರಿ  ಸದ್ದಾಗದಂತೆ ಕಳ್ಳ ಹೆಜ್ಜೆ ಯಲ್ಲಿ ಹೊರ ಹೋದ ಚಂದ್ರಹಾಸ ಗಿರಿಧರರ ಚಿತ್ರ ರಪ್ಪನೆ ಮೂಡಿ ನಿಂತಿತು. ಏನೋ ಅಂದಾಜಾದವಳಂತೆ ” ಏ ಹಗ್ಗ ಸಡ್ಲಾಗಿ ಎಲ್ಲೊ ಬಿಚ್ಕೊಂಡೋಗಿರ್ಬೇಕು ನೀ ಯಾವಾಗ್ಲೂ ಮೇಸಕೊಯ್ತಿಯಲ್ಲ ಆ ಕೊಲ್ಲಿ, ಕಣ್ವೆ, ಜೇನ್ಕಲ್ ಮಂಟಿತವ   ಒಂದಪ ನೋಡ್ಕಂಬರೋಗು” ಎಂದು ಅಪ್ಪಜ್ಜಣ್ಣನನ್ನು ಸಾಗಾಕಿ ಗಿರಿಧರ ಚಂದ್ರಹಾಸರ ಮುಂದೆ ವಿಚಾರಣೆಗೆಂಬಂತೆ ಬಂದು ನಿಂತಳು.

“ಅದ್ಸರಿ ಮಧ್ಯರಾತ್ರಿನಾಗ ನೀವಿಬ್ರು ಏನೋ ಗುಸ್ಪಿಸ ಅನ್ಕೊಂಡು ಎದ್ದೋದೋರು ಬೆಳ್ಗಿನ್ ಜಾವ ಬಂದು ಮನೆ ಸೆರ್ಕೊಂಡ್ರಲ್ಲ ಅದೆತ್ತಗೋಗಿದ್ರಿ…ಯಾವ್ ಘನಂದಾರಿ ಕೆಲ್ಸ ಪೂರೈಸಿ ಬಂದ್ರಪ್ಪ” ಅನುಮಾನದಿಂದ ರಾಗ ಎಳೆದಳು.  ಇಂತಹ ಸಮಯಗಳು ಎದುರಾದಾಗೆಲ್ಲ ಪಿತ್ತ ನೆತ್ತಿಗೇರಿದವನಂತೆ ಚಿರಾಡಿ ಹಾರಾಡಿ ತನ್ನ ತಪ್ಪನ್ನು ಮರೆಮಾಚಿಕೊಳ್ಳುತ್ತಿದ್ದ ಚಂದ್ರಹಾಸ, ಈಗಲೂ ಅದೇ ತಂತ್ರವನ್ನು ಬಳಸಿ ” ಓ..ಹಂಗಿದ್ರೆ ನಾವೇನು ಎರ್ಡ ಗಿರ್ಡಮಾಡಕೋಬಾರ್ದು ಎಲ್ಲನೂ ನಿನ್ ಅಪ್ಣೆ ಕೇಳೆ ಮಾಡ್ಬೇಕೆನೆ ಮುದ್ಕಿ ಬಾಯಿಮುಚ್ಕೊಂಡು ಕೆಲ್ಸಾ ನೋಡ್ನಡಿ” ಎಂದು  ಅವ್ವನನ್ನೆ ಜಬ್ಬರಿಸಿ ಅಡಿಗೆಕೋಣೆಗಟ್ಟಿದ. 

ತಾನು ಗಂಗೆಯೂ ಪೈಸೆಗೆ ಪೈಸೆ ಕೂಡಿಸಿ ಸಾವಿರಾರು ರೂಪಾಯಿ ತೆತ್ತು ತೆಗೆದುಕೊಂಡ  ಹಸು, ಕರು ಈಗಷ್ಟೇ ಬದುಕಿಗೆ ಭರವಸೆ ತುಂಬಿದ್ದವು. ಅದೇ ಭರವಸೆಯ ಗೋಪುರದ ಮೇಲೆ ಗಂಗೆ  ಈ ಬಾರಿಯ ಯುಗಾದಿಯನ್ನು ಹೊಸ ಬಟ್ಟೆಯೊಂದಿಗೆ ಜೋರಾಗಿಯೇ ಸಡಗರಿಸಿದ್ದಳು. ಗಂಗವ್ವನ ನೆಮ್ಮದಿಗಾಗಿ ಹಗಲು ರಾತ್ರಿ ಹಪಾಹಪಿಸುತ್ತಿದ್ದ  ಅಪ್ಪಜ್ಜಣ್ಣ ” ಕೈಗ್ ಬಂದ್ ತುತ್ತು ಬಾಯಿಗಿಲ್ದಂಗ್ ಮಾಡ್ಬುಟ್ಟಲ್ಲೋ ಸಿವ್ನೇ, ಹೆಂಗ್ ನಾನು ಗಂಗವ್ವುಂಗೆಳ್ಳಿ ನೀನೆ ಹೇಳು” ಎಂದು ಜೇನುಕಲ್ಲು ಬೆಟ್ಟದ ತುದಿಯಲ್ಲಿ ನಿಂತು  ಗೋಳಾಡ ತೊಡಗಿದ.

ಇತ್ತ ಹಾಲು ಕರೆಯಲು ಹೋಗಿದ್ದ ಅಪ್ಪಜ್ಜಣ್ಣ ಎಷ್ಟೊತ್ತಾದರೂ ಬಾರದ್ದನ್ನು ಕಂಡು ಇರುಸು ಮುರುಸುಗೊಂಡ ಗಂಗೆ “ಹೋದೋದ್ ಕಡೆನೆ ಜಾಂಡಊರ್ಬೇಡ, ನಂಗೆ ಕಂಪ್ನಿಗೋಗಕೆ ತಡ ಆಯ್ತದೆ ಅಂತ ಎಷ್ಟ್ ಹೇಳಿದ್ರು ಎಲ್ಲಿ ಕೇಳ್ತನೆ ಇವ್ನು” ಎಂದು ಗೊಣಗಿ ಕೊಳ್ಳುತ್ತಾ ಅವನ ಜಾಡು ಹಿಡಿದು ವರ್ತ್ನೆ ಮನೆಗಳತ್ತ ಹೆಜ್ಜೆ ಹಾಕಿದಳು. ಗಂಗೆಯ ಮುಖ ಕಂಡದ್ದೆ ಆ ಮನೆಯ ಒಡತಿಯರು “ಇದ್ಯಾಕ್ ಗಂಗೂ ಈಟ್ಹೊತ್ತಾದ್ರು ನಿಮ್ಮಪ್ಪಜ್ಜಣ್ಣ  ಹಾಲ್ ತಂದಿಲ್ಲ ನಾವೇನು ಕಾಪಿಗೀಪಿ ಕುಡಿಬೇಕೋ ಬ್ಯಾಡ್ವೊ” ಎಂದು ಅಸಮಾಧಾನ ವ್ಯಕ್ತಪಡಿಸಿದರು. “ಅಯ್ಯೋ ಶಿವ್ನೆ ಬೆಳಗ್ಗೆನೇ ಹಾಲ್ ಕರ್ದು ಹಾಕ್ಬತ್ತಿನಿ ಅಂತ ಬಂದ. ಇನ್ನೂ ಮನೆಗೂ ಬಂದಿಲ್ಲ. ನೋಡ್ತಿನಿರಿ” ಎನ್ನುತ್ತಾ  ಅವ್ವನ ಮನೆಯ ಕೊಟ್ಟಿಗೆಯತ್ತ ಓಡಿದಳು. 

ಮಗಳು ಹೀಗೆ ಹಿತ್ತಿಲಿನತ್ತ ಓಡಿದ್ದನ್ನು ಗಮನಿಸಿದ ಸಾಕವ್ವ ತಾನು ಕೂಡ ಅವಳ ಹಿಂದೆಯೇ ಹೆಜ್ಜೆ ಹಾಕಿದಳು. ಬೆಳಿಗ್ಗೆ ಅಪ್ಪಜ್ಜಣ್ಣ  ಮನೆಗೆ ಬಂದ ಸುದ್ದಿಯನ್ನು ತಿಳಿಸಿ “ಹೆಡ್ನನ್ಮಗ ಎಲ್ಲೊ ಸರಿಯಾಗಿ ಹಗ್ಗ ಕಟ್ಟಿರ್ಲಿಲ್ವೇನೋ ಬಿಚ್ಕೊಂಡೊಗವೆ. ಹುಡಿಕೊಂಡು ಬತ್ತನೆ ಕಂತೆ ಮನೆಗ್ ನಡಿ” ಎಂದು ಹೇಳಿದಳೆ ಹೊರತು ಯಾವಕಾರಣಕ್ಕೂ ಚಂದ್ರಹಾಸ ಗಿರಿಧರರ ಬಗೆಗಿನ ತನ್ನ ಅನುಮಾನವನ್ನು ಮಾತ್ರ ಅವಳ ಮುಂದೆ ವ್ಯಕ್ತಪಡಿಸಲಿಲ್ಲ.

ಅವ್ವನ ಮಾತು ಕೇಳಿ ಎದೆ ಬಡಿದುಕೊಂಡು ಅಳಲಾರಂಭಿಸಿದ ಗಂಗೆ “ಅದೆಂಗೆ ಎರಡು ಒಟ್ಗೆ ಬಿಚ್ಕೊಂಡು ಹೋಯ್ತವವ್ವ, ಯಾರಾದ್ರೂ ಕದ್ಗಿದ್ರೆ ನಾನೇನು ಮಾಡಿ ಸಾಯ್ಲಿ…” ಎಂದು ಗೋಳಾಡುತ್ತಾ ಮನೆಯಲ್ಲಿದ್ದ ಮಕ್ಕಳನ್ನು ನೋಡಿಕೊಳ್ಳುವಂತೆ ಅವ್ವನಿಗೆ ಹೇಳಿ ಅಪ್ಪಜ್ಜಣ್ಣನನ್ನು ಹುಡುಕಿಕೊಂಡು ಹೊರಟಳು.

ಹಿಂದಿನ ಕಂತು ಓದಿದ್ದೀರಾ? http://“ಈಗ ನಂಗೆ ಹೆಣ್ಣೋಡ್ತಿಯೋ ಇಲ್ವೋ” https://kannadaplanet.com/tanthi-melina-nadige-67/

ಹೊಲ, ಗದ್ದೆ, ಬಯಲು, ಕಣಿವೆ ಕೊಲ್ಲಿಗಳಲ್ಲೆಲ್ಲ ಅಲೆದು, ಜೇನುಕಲ್ಲು ಮಂಟಿ ಏರಿದ ಗಂಗೆ, ತನ್ನ ಕಣ್ಣುಗಳನ್ನು ಮತ್ತಷ್ಟು ಮೊನಚು ಮಾಡಿ ಗುಡ್ಡದ ಸುತ್ತಲೂ ದಿಟ್ಟಿಸಿ ನೋಡಿದಳು. ಎಲ್ಲಿಯೂ ಅಪ್ಪಜ್ಜಣ್ಣನಾಗಲಿ ಹಸು ಕರುವಾಗಲಿ ಪತ್ತೆಯಾಗಲಿಲ್ಲ. ನಿರ್ಜನವಾದ ಆ ಜಾಗಕ್ಕೆ ಹೀಗೆ ಮೊದಲ ಬಾರಿ ಬಂದು ನಿಂತಿದ್ದವಳಿಗೆ ಇದ್ದಕ್ಕಿದ್ದಂತೆ  ಭಯ ಆವರಿಸಿಕೊಂಡಿತು. ಏನೇ ಆದರು ಅಪ್ಪಜ್ಜಣ್ಣನನ್ನು ಹುಡುಕದ ಹೊರತು ಇಲ್ಲಿಂದ ಕದಲಬಾರದೆಂದು ಗಟ್ಟಿ ನಿರ್ಧಾರ ಮಾಡಿ  ಗುಡ್ಡವನ್ನಿಳಿದು ಪಕ್ಕದ ಕಾಡು ಹಾದಿ ಹಿಡಿದಳು. ಒಂದೇ ಉಸಿರಿಗೆ ಅಪ್ಪಜ್ಜಣ್ಣನ ಹೆಸರು ಹಿಡಿದು ಕೂಗುಹಾಕುತ್ತಾ ಹೊರಟವಳಿಗೆ, ದೂರದಲ್ಲೆಲ್ಲೋ ಅವನ ಚಿರಾಟ ಕೇಳಿದಂತಾಗಿ ಅವಳ ಜೀವವೆ ದಸಕ್ಕೆಂದಿತು.

ಹಿಂದೆ ಅವಳನ್ನು ರೋಮಾಂಚನಗೊಳಿಸಿದ್ದ ಇದೇ ಕಾಡಿನ ಆನೆ, ಚಿರತೆ ಕರಡಿಗಳ ನೂರಾರು ಕತೆಗಳೀಗ ಭೂತದಂತೆ ಎದ್ದು ಬಂದು ಅವಳ  ಕೈ ಕಾಲುಗಳ ಬಲವನ್ನೇ ಕುಂದಿಸಿ ಕುಸಿಯುವಂತೆ ಮಾಡಿತು. 

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More articles

Latest article