“ಈಗ ನಂಗೆ ಹೆಣ್ಣೋಡ್ತಿಯೋ ಇಲ್ವೋ”

Most read

(ಈ ವರೆಗೆ…) ಅಪ್ಪ ತೀರಿಕೊಂಡ ಬಳಿಕ ಗಂಗೆ ಕಾಫಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಸಂಸಾರ ಸಾಗಿಸ ತೊಡಗಿದಳು. ಅಪ್ಪಜ್ಜಣ್ಣ ಗಟ್ಟಿಯಾಗಿ ಜತೆಗೆ ನಿಂತಿದ್ದು ನಾಲ್ಕು ಕಾಸು ಸಂಪಾದಿಸಿ, ಹಸು ಖರೀದಿಸಿ, ಹಾಲು ಮಾರಿ ಬದುಕು ಕಟ್ಟಿಕೊಂಡರು. ಯುಗಾದಿ ಹಬ್ಬಕ್ಕೆ ಗಂಗೆ ನೀಡಿದ ಹೊಸಬಟ್ಟೆ ತೊಟ್ಟು ಊರು ಸುತ್ತಲು ಹೋದ ಆತನಿಗೆ ತುಂಗಾ ಮದುವೆಯ ಆಸೆಯನ್ನು ಹುಟ್ಟಿಸುತ್ತಾಳೆ. ಆತನ ಆಸೆ  ನೆರವೇರಿತೇ? ಓದಿ, ವಾಣಿ ಸತೀಶ್‌ ಅವರ ʼತಂತಿ ಮೇಲಿನ ನಡಿಗೆಯ 67 ನೇ ಕಂತು.

ಕುಳ್ಳಗೆ ಗುಂಡು ಗುಂಡಾದ ಮೈ ಕಟ್ಟು, ಸದಾ ಬಿರಿದುಕೊಂಡಂತೆಯೇ ಇರುತ್ತಿದ್ದ ಬಾಯಿ ತುಂಬಾ, ತುಸು ಉಬ್ಬಿ ಕಂದು ಬಣ್ಣಕ್ಕೆ ತಿರುಗಿದ ಕಂಡಿ ಹಲ್ಲುಗಳು, ದಟ್ಟವಾದ ಗುಂಗುರು ಕೂದಲು, ಪೊದೆಯಂತೆ ಎಡರು ಸೊಡರಾಗಿದ್ದ ಹುಬ್ಬುಗಳು, ಆ ಮುಖಕ್ಕೆ ತಾಳೆಯೇ ಆಗದಂತಹ  ಚಂದವಾದ ಕಣ್ಣುಕುಕ್ಕುವ ನೀಳ ಗಿಣಿಮೂತಿ ಮೂಗು,  ವರ್ಷಾನು ಗಟ್ಟಲೆಯಿಂದ ಹಾಕಿ ಹಾಕಿ ಎಷ್ಟು ತೊಳೆದರು ಮಸುಕಾಗಿಯೇ ಕಾಣುತ್ತಿದ್ದ ಬಿಳಿ ಅಂಗಿ, ಚೌಕುಳಿ ಪಂಚೆ, ಬಣ್ಣ ಮಾಸಿದ  ಹೆಗಲ ಮೇಲಿನ ಟವಲ್ಲು ನೋಡಿದ ಕೂಡಲೆ ಮುಖಕ್ಕೆ ಹೊಡೆದಂತೆ ಕಾಣುತ್ತಿದ್ದ ಪೆದ್ದು ಪೆದ್ದು ನೋಟ ಇವೆಲ್ಲವೂ ಅಪ್ಪಜ್ಜಣ್ಣನ ಗುರುತುಗಳಾಗಿದ್ದವು.

ಅಪ್ಪಜ್ಜಣ್ಣ ಏನು ಹುಟ್ಟ ಪೆದ್ದನಾಗಿರಲಿಲ್ಲ. ಅವನಿಗೂ ಎಲ್ಲರಂತೆ ಮದುವೆ ಮಕ್ಕಳು ಸಂಸಾರ ಆಸ್ತಿ ಪಾಸ್ತಿ ಹೀಗೆ ಎಲ್ಲಾ ಬದುಕಾಟವೂ ಇತ್ತು. ಒಂದು ಮಾರ್ನಾಮಿ ಹಬ್ಬದ ದಿನ, ಸತ್ತು ಪಟ ಸೇರಿದ್ದ ಹಿರೀಕರ ಮುಂದೆ ಎಡೆ ಇಡಲು ಎಳನೀರು ತರಲು ತೋಟದ ತೆಂಗಿನ ಮರ ಏರಿದವನಿಗೆ ಕ್ಷಣ ಕಣ್ಣು ಮಂಜಾದಂತಾಗಿ, ಮರವನ್ನು ಬಿಗಿದಪ್ಪಿದ ಕೈ ಸಡಿಲಗೊಂಡು ರೆಪ್ಪೆ ಬಡಿಯುವುದರೊಳಗೆ ರಪ್ಪನೆ ನೆಲ ಕಚ್ಚಿದ್ದ. ಅಂಗಾತ ಬಿದ್ದವನ ಹಿಂಬದಿ ತಲೆಗೆ ತಾಕಿದ ಸಣ್ಣನೆ ಚೂಪು ಕಲ್ಲಿನ ಏಟು ಕಂಡೂ ಕಾಣದಂತೆ ರಕ್ತ ಒಸರಿಸಿ ಹೆಪ್ಪು ಗಟ್ಟಿಸಿತ್ತು. ಪುಣ್ಯವೋ ಎನ್ನುವಂತೆ ಮತ್ತೇನು ಹೆಚ್ಚಿನ ತೊಂದರೆಯಾಗಿರಲಿಲ್ಲ. ಹೀಗೆ ಒಂದೆರಡು ದಿನ ಸಣ್ಣದಾಗಿ ಕಂಡು ಬಂದ ಸೊಂಟ ತಲೆ ನೋವಿನಿಂದ ಬಳಲಿ ಮೇಲೆದ್ದವನು ಮಾಮೂಲಿನಂತೆ ತನ್ನ ಹೊಲಗದ್ದೆ ಕೆಲಸಗಳಲ್ಲಿ ತೊಡಗಿ ಕೊಂಡಿದ್ದ.

ಇದಾಗಿ ಕೆಲವು ದಿನಗಳೆ ಕಳೆದಿತ್ತು. ಅಪ್ಪಜ್ಜಣ್ಣ ಬಿದ್ದ ನೆನಪು ಕೂಡ ಎಲ್ಲರೊಳಗೂ ಮಾಸಿ ಹೋಗುತ್ತಿತ್ತು. ಇನ್ನೇನು ಬದುಕು ಸರಾಗವಾಗಿ ನಡೆಯುತ್ತಿದೆ ಎನ್ನುವಾಗ ಅವನ ವರ್ತನೆಯಲ್ಲಿ ಬದಲಾವಣೆ ಕಾಣಿಸಿ ಕೊಳ್ಳಲಾರಂಭಿಸಿತು. ಒಬ್ಬನೆ ಮಾತಾಡಿಕೊಳ್ಳುವುದು, ನಗುವುದು ಎಲ್ಲಿಗೆಂದರೆ ಅಲ್ಲಿಗೆ ಯಾವಾಗಲೆಂದರೆ ಆವಾಗ ಕಣ್ಮರೆಯಾಗುವುದು, ಏನಾದರೂ ಬೇಕು ಎನ್ನುವ ಆಸೆ ಮನಸ್ಸಿಗೆ ಹೊಕ್ಕಿತೋ ಮುಗಿಯಿತು, ಮಕ್ಕಳಂತೆ ರಚ್ಚೆ ಹಿಡಿದು ಹೆಂಡತಿ ಮಕ್ಕಳನ್ನು ಹೈರಾಣಗೊಳಿಸಿ, ಹಾದಿಬೀದಿಯವರೆಲ್ಲ ಮನೆ ಮುಂದೆ ಜಮಾಯಿಸಿ ನಿಲ್ಲುವಂತೆಮಾಡಿ ಬಿಡುವುದು.. ಹೀಗೆ.

ತಮ್ಮ ಏಳಿಗೆಯನ್ನು ಸಹಿಸದ ಕುಟುಂಬಸ್ಥರೆ ಮಾಟ ಜಾಟ ಮಾಡಿಸಿದ್ದಾರೆಂದು ಬಲವಾಗಿ ನಂಬಿದ್ದ ಮನೆಯವರು, ದೇವರು ದಿಂಡಿರೆಂದು ಕಂಡಕಂಡಲ್ಲಿ ಸುತ್ತಾಡಿ, ಹರಕೆಹೊತ್ತು ಸೋತು ಸುಣ್ಣವಾದರೆ ಹೊರತು ಇದು ಆಸ್ಪತ್ರೆ ಕಾಯಿಲೆ ಎನ್ನುವ ಯೋಚನೆಗೂ ಆಸ್ಪದ ಕೊಡಲಿಲ್ಲ. ಮೊದಮೊದಲು ಅವನು ಎತ್ತಲಾದರೂ ಕಣ್ಮರೆಯಾದರೆ ಎದ್ದೆವೋ ಬಿದ್ದೆವೋ ಎನ್ನುವಂತೆ ಹುಡುಕಿ ತರುತ್ತಿದ್ದವರು, ದಿನೇ ದಿನೇ ಅಪ್ಜಜ್ಜಣ್ಣನ ಉಪಟಳ ಜಾಸ್ತಿಯಾದಂತೆಲ್ಲ ನಿಧಾನವಾಗಿ ಹುಡುಕುವುದನ್ನೇ ಕೈ ಬಿಟ್ಟು ತಣ್ಣಗಾದರು.

ಮಾಸಲು ಬಟ್ಟೆ ತೊಟ್ಟು, ಹೊಟ್ಟೆಗೆ ಸರಿಯಾಗಿ ಕೂಳು ತಿನ್ನದೆ ಅಲ್ಲಿ ಇಲ್ಲಿ ದಿಕ್ಕು ಗೆಟ್ಟವನಂತೆ ಅಲೆಯುತ್ತಾ ಓಡಾಡುತ್ತಿದ್ದ ತಮ್ಮನನ್ನು ನೋಡಲಾರದ ಮೋಹನನ ಅವ್ವ ಚಿಕ್ಕತಾಯಮ್ಮ, ತನ್ನ ಎಡ ಬಲಕ್ಕಾದನೆಂಬ ದೂರ ಆಲೋಚನೆ ಮತ್ತು ಒಡಹುಟ್ಟಿನ  ಸೆಳೆತದಿಂದಾಗಿ ತನ್ನ ಮನೆಯಲ್ಲಿಯೇ ತಂದಿರಿಸಿಕೊಂಡಿದ್ದಳು. ಅಕ್ಕನ ಮನೆ ಸೇರಿದ್ದ ಅಪ್ಪಜ್ಜಣ್ಣನ ಹುಲಿಯಂತಹ ಕೋಪ, ತಾಪ, ಸಿಟ್ಟು ಸೆಡುವುಗಳೆಲ್ಲ ಚಿಕ್ಕತಾಯಮ್ಮನ ಜೂರತ್ತಿಗೆ ಬೆಂಡಾಗಿ, ಮುಂದೆ ಬಂದರೆ ಹಾಯದ ಹಿಂದೆ ಬಂದರೆ ಒದೆಯದ ಸಾಧು ಹಸುವಿನಂತಾಗಿದ್ದ.

ಮೈ ಮುರಿಯುವಂತೆ ಕೆಲಸ ಮಾಡಿ ತುಟಿಕ್ ಪಿಟಿಕ್ ಎನ್ನದೆ ಕೊಟ್ಟದ್ದನ್ನು ಉಂಡು ನಿದ್ರೆಗೆ ಜಾರಿ ಬಿಡುತ್ತಿದ್ದ ಅಪ್ಪಜ್ಜಣ್ಣ ಸ್ವಭಾವತಃ ಕರುಣಾಮಯಿಯಾಗಿದ್ದ. ಆ ಮನೆಯಲ್ಲಿ ಗಂಗೆ ಅನುಭವಿಸುತ್ತಿದ್ದ ಸಂಕಷ್ಟಗಳನ್ನು ನೋಡಿ ಮಮ್ಮಲ ಮರುಗುತ್ತಿದ್ದ ಒಂದೇ ಜೀವ ಎಂದರೆ ಈ ಅಪ್ಪಜ್ಜಣ್ಣ ಮಾತ್ರ. ಎಷ್ಟೋ ಬಾರಿ ಗಂಗೆಯ ವಕಾಲತ್ತು ವಹಿಸಿ ಅಕ್ಕನೊಂದಿಗೆ ಕಾಲು ಕೆರೆದು ಜಗಳಕ್ಕೆ ನಿಂತು, ಅವಳಿಂದ ಏಟು ತಿಂದು ಕತ್ತಿಡಿದು ಹೊರದಬ್ಬಿಸಿಕೊಂಡ ದಿನಗಳೂ ಇವೆ..

ಹೀಗೆ ಅಕ್ಕನ ಮನೆಯಲ್ಲೂ ಗಂಗೆಯ ಬೆಂಗಾವಲಿನಂತಿದ್ದ ಅಪ್ಪಜ್ಜಣ್ಣ, ಹಿಂದೆ ಬೋಪಯ್ಯ ಮಗಳಿಗಾಗಿ ನಾರಿಪುರದ ಹೊಲದಲ್ಲಿ ಗುಡಿಸಲು ಕಟ್ಟಿಕೊಟ್ಟಾಗ ಕೂಡ ಜೊತೆ ಬಂದು ನಿಂತಿದ್ದ. ಮತ್ತೆ ಅವಳು ಮೋಹನನೊಂದಿಗೆ ಬೆಂಗಳೂರಿನತ್ತ ಮುಖ ಮಾಡಿದ ಮೇಲೆ ಬೋಗನೂರಿಗೆ ಹಿಂದಿರುಗಿದ್ದ. ಒಂದು ದಿನ ಇದ್ದಕ್ಕಿದ್ದಂತೆ ಅಲ್ಲಿಂದಲೂ ಮಾಯವಾಗಿದ್ದ. ಇನ್ನೇನು ಅಪ್ಪಜ್ಜಣ್ಣ ಎಲ್ಲರ ತಲೆಯಿಂದ ಅಳಿಸಿಯೇ ಹೋದ ಎನ್ನುವುದರಲ್ಲಿ ಮತ್ತೆ ಗಂಗೆಯ ಇಂದಿನ ಪರಿಸ್ಥಿತಿಯಲ್ಲಿ ದೇವರಂತೆ ಬೆನ್ನಿಗೆ ಬಂದು ನಿಂತಿದ್ದ.

ಹಬ್ಬದ ಆ ರಾತ್ರಿ, ತುಂಗವ್ವ ಸುರಿದ ಆಸೆಯ ಕೆಂಡವನ್ನು ಎದೆಯಲ್ಲಿ ಹೊತ್ತು ಬಂದ ಅಪ್ಪಜ್ಜಣ್ಣನಿಗೆ, ಆಗಲೇ ಗಂಗೆ ದೀಪವಾರಿಸಿ ನಿದ್ದೆಗೆ ಜಾರಿರುವುದನ್ನು ಕಂಡು ನಿರಾಸೆ ಆವರಿಸಿತು. ಇದ್ದ ಮೂರು ಮತ್ತೊಂದು ಹೆಜ್ಜೆಯ ಕೋಣೆಯೊಳಗೆ ಬಾಲ ಸುಟ್ಟ ಬೆಕ್ಕಿನಂತೆ ಅತ್ತಿಂದಿತ್ತ ಇತ್ತಿಂದತ್ತ ಚಡಪಡಿಸುತ್ತಾ ಓಡಾಡತೊಡಗಿದ. ಹೇಗಾದರೂ ಮಾಡಿ ಗಂಗೆ ಎಚ್ಚರಾಗುವಂತೆ ಮಾಡಬೇಕು ಎಂದು ನಿರ್ಧರಿಸಿದವನು, ಕಾಲುತೊಳೆಯುವ ನೆಪದಲ್ಲಿ ಬಚ್ಚಲ ನೀರನ್ನೆಲ್ಲಾ ಸದ್ದಾಗುವಂತೆ ದಬದಬನೆ ಸುರುವಿದ. ಬಾಗಿಲ ಅಗುಳಿಯನ್ನು ಜೋರಾಗಿ ಲಟಪಟನೆ ಹಾಕಿ ತೆಗೆದ, ಎರಡು ಮೂರು ಬಾರಿ ಗಂಟಲು ಹರಿದು ಹೋಗುವಂತೆ ಕೆಮ್ಮಿದ, ಅಡುಗೆ ಕೋಣೆ ಹೊಕ್ಕು ಪಾತ್ರೆಗಳನ್ನೆಲ್ಲ ಬೀಳಿಸಿ ‌ಏಳಿಸಿ ತನ್ನ ಕಾರ್ಯ ಸಾಧಿಸಿಕೊಂಡ.

ಬೆಳಗ್ಗಿನಿಂದಲೂ ಹಬ್ಬದ ಕೆಲಸ ಮಾಡಿ ಹೈರಾಣಾಗಿ ಹೋಗಿದ್ದ ಗಂಗೆಯ ವ್ಯವಧಾನದ ಕಟ್ಟೆಯೊಡೆದು ಮುನಿದು ಮೇಲೆದ್ದು ಕೂತಳು. “ತಲೆಗಿಲೆ ಏನರ ಕೆಟ್ಟೈತ ಅಪ್ಪಜ್ಜಣ್ಣ.. ಮಕ್ಳು ಮಲ್ಗವೆ ಅನ್ನೋ ಗ್ಯಾನನು ಇಲ್ದಂಗೆ ಅದೇನ್ ಗದ್ಲ  ಮಾಡ್ತಿದ್ದಿ….” ಇನ್ನೂ ಗಂಗೆ ಮಾತು ಮುಗಿಸಿರಲಿಲ್ಲ “ಹೂಂ… ಹಗ್ಲು ರಾತ್ರಿ ಗಾಣುದೆತ್ತಂಗೆ ನಿನ್ ಮನೆ ಜೀತ ಮಾಡ್ತಿದಿನಿ ನೋಡು ಅದುಕ್ಕೆ ಈ ಮಾತ್‌ ಕೇಳ್ಬೇಕ್ಕಾದ್ದೆಯ ಬುಡು ಗಂಗವ್ವ. ನಿನ್ ಅಣ್ತಮ್ಮದಿರು ಕೊಡ್ಬೇಕಾದ್ ತಲೆಯ ನಾನ್ ಕೊಡ್ತಿದ್ದೀನಿ ನೋಡು ಒಳ್ಳೆ ಬವುಮಾನನೇ ಕೊಟ್ಟೆ.  ಒಂದು ಚಿತನಾರು ನೀನು ನನ್ ಬದ್ಕಿನ್ ಬಗ್ಗೆ ಯೋಚ್ನೆ ಮಾಡಿದ್ಯೆ.  ಇವತ್ತು ಊರೋರೆಲ್ಲಾ ನನ್ನ ಎಷ್ಟು ಹೊಗ್ಳಾಡಿದ್ರು ಗೊತ್ತಾ, ಈ ಹೊಸ ಬಟ್ಟೆಲಿ ಒಳ್ಳೆ ಮದ್ವೆ ಗಂಡ್ ಕಂಡಂಗ್ ಕಾಣ್ತಿದ್ನಂತೆ.  ನೋಡು ಗಂಗವ್ವ ಅದೇನ್ ಮಾಡ್ತೀಯೋ ನಂಗೊತ್ತಿಲ್ಲ ಬಿರ್ನೆ ನನಗೊಂದು ಮದುವೆ ಮಾಡುದ್ರೆ ಸರಿ, ಇಲ್ಲ ಅಂದ್ರೆ ನಾ ಮನೆ ಬುಟ್ಟು ಹೋಯ್ತಿನಿ ಆಟೇಯ” ಕಡ್ಡಿ ಮುರಿದಂತೆ ಕಡಕ್ ಆಗಿ ಹೇಳಿ ಗೋಡೆಗೆ ಕಣ್ಣು ಕೀಲಿಸಿ ನಿಂತ.

ಹಿಂದಿನ ಕಂತು ಓದಿದ್ದೀರಾ? http://“ಒಳ್ಳೆ ಮದುಮಗ ಕಂಡಂಗ್ ಕಾಣ್ತಿದ್ಯಲ್ಲೋ ಅಪ್ಪಜಣ್ಣ” https://kannadaplanet.com/tanthi-melina-nadige-66/

ಅಪ್ಪಜ್ಜಣ್ಣನ ಹಠಮಾರಿತನವನ್ನು ಕಂಡು ಅನುಭವಿಸಿದ್ದ ಗಂಗೆಗೆ ಜೀವವೇ ಬಾಯಿಗೆ ಬಂದಂತಾಯ್ತು. “ಅಲ್ಲ ಊರ್ನಲ್ಲಿ ಹೆಂಡ್ತಿ ಮಕ್ಳೆಲ್ಲಾ ಗುಂಡುಕಲ್ನಂಗಿರುವಾಗ ಇದೆಂಥ ಮಾತು ಅಂತ ಆಡ್ತಿ ಅಪ್ಪಜ್ಜಣ್ಣ. ಇರೋ ಗಂಡ್ ಹೈಕ್ಲಿಗೆ ಹುಡ್ಗೀರ್ ಸಿಕ್ತಿಲ್ಲ ಅಂತ ಜನ ಪರ್ದಾಡ್ತಿರ್ಬೇಕಿದ್ರೆ ಈ ವಯಸ್ನಲ್ಲಿ ನಿಂಗ್ಯಾರು ಹೆಣ್ಕೊಟ್ಟಾರು ಹೇಳು” ಗಂಗೆಯ ಮಾತು ಕೇಳಿದ  ಅಪ್ಪಜ್ಜಣ್ಣನ ಮೂತಿ ಊದಿತು. ಕೋಪದಿಂದ ಮುಖ ಕೆಂಪಗೆ ಮಾಡಿ “ಹುಂ ಅವ್ಳು ನನ್ನ ಹತ್ರುಕ್ಕೂಡಿದಿದ್ರೆ ನಾನ್ಯಾಕಿಂಗೆ ಅಬ್ಬೆಪಾರಿ ಹಂಗೆ ಅಲಿತಿದ್ದೆ. ಆ ಲೌಡಿ ಯಾರ್ ಸವಾಸಕ್ಬಿದ್ದವ್ಳೊ ಯಾರಿಗೊತ್ತು. ಅದ್ಕೆ ನನ್ನ ಮನೆಲೇ ಇರಕ್ಕೊಡವಳ್ಳು‌” ಹೆಂಡತಿಯ ಮೇಲೆ ಗೂಬೆ ಕೂರಿಸುವ ಮಾತಾಡಿದ.

“ರತ್ನಕ್ಕುನ್ ಬಗ್ಗೆ ಇಂಥ ಮಾತ ನಾ ಕೇಳ್ನಾರೆ ಸುಮ್ನಿರಪ್ಪ. ನೀನೇ ಒಂದ್ ಕಡೆ ನೆಟ್ಟುಗೆ ನಿಂತ್ಕೊಳಕಿಲ್ಲ ಅಂತದ್ರಲ್ಲಿ ಪಾಪ ಅವಕ್ಕುನ್ನ ಯಾಕ್ ದೂರ್ತಿ” ಗಂಗೆ ಹೆಂಡತಿಯ ಬಗ್ಗೆ ವಕಾಲತ್ತು ವಹಿಸಿ ಮಾತಾಡಿದ್ದು ಅಪ್ಪಜ್ಜಣ್ಣನಿಗೆ ಇರುಸು ಮುರುಸೆನಿಸಿತು. “ನೋಡ್ನೋಡು ಹೆಂಗಿದ್ದಿ, ಇಲ್ಲಿ ನಿನ್ನ ನೀರು ನಿಡಿ ನೋಡ್ತಿರೋನು ನಾನು ನಿನ್ನೋಡಿದ್ರೆ ಅವ್ಳುನ್ನ ವಯ್ಸೊಕೊಂಡ್ಮಾತಾಡ್ತಿಯ. ಈಗ ಅದೆಲ್ಲ ಮಾತ್ ಬ್ಯಾಡ ನಂಗೆ  ಹೆಣ್ಣೋಡ್ತಿಯೋ ಇಲ್ವೋ  ಹೇಳು ಸಾಕು”  ಎಂದು ಪಟ್ಟೆ ಬರೆದು ಕೂತ.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

More articles

Latest article