ತಮಿಳುನಾಡಿನಲ್ಲಿ ಬಿಜೆಪಿಗೆ ಶಾಕ್‌; ಸಮ್ಮಿಶ್ರ ಸರ್ಕಾರಕ್ಕೆ ಒಲ್ಲೆ ಎಂದ ಎಐಎಡಿಎಂಕೆ

Most read

ಚೆನ್ನೈ: ತಮಿಳುನಾಡಿನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಎದುರಿಸಲು ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಈ ಮೈತ್ರಿಗಾಗಿ ಬಿಜೆಪಿ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತ್ತು. ಮೈತ್ರಿಯನ್ನು ಅಮಿತ್‌ ಶಾ ಅವರೇ ಚೆನ್ನೈನಲ್ಲಿ ಎಐಎಡಿಎಂಕೆ ಮುಖಂಡರ ಜತೆ ಘೋಷಿಸಿದ್ದರು. ಆದರೆ ಇದೀಗ ಎಐಎಡಿಎಂಕೆ ಮುಖಂಡು ಬಿಜೆಪಿಗೆ ಬಿಗ್‌ ಶಾಕ್‌ ನೀಡಿದ್ದಾರೆ. ತಮ್ಮ ಪಕ್ಷದ ಮೈತ್ರಿ ಚುನಾವಣೆಗೆ ಮಾತ್ರ. ಗೆಲುವು ಸಾಧಿಸಿದರೆ ಸಮ್ಮಿಶ್ರ ಸರ್ಕಾರ ರಚಿಸುವುದಿಲ್ಲ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಇದು ಮೈತ್ರಿಕೂಟಕ್ಕೆ ದೊಡ್ಡ ಹಿನ್ನೆಡೆ ಎಂದೇ ಭಾವಿಸಲಾಗಿದೆ.

ಪಳನಿಸ್ವಾಮಿ ಅವರ ಸಮ್ಮುಖದಲ್ಲಿ ಏಪ್ರಿಲ್ 11ರಂದು ಮೈತ್ರಿ ಘೋಷಿಸುವಾಗ, ನಾವು ಎಡಪ್ಪಾಡಿ ಕೆ. ಪಳನಿಸ್ವಾಮಿ ನೇತೃತ್ವದಲ್ಲಿ 2026ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುತ್ತೇವೆ ಮತ್ತು ಒಟ್ಟಾಗಿ ಸರ್ಕಾರ ರಚಿಸುತ್ತೇವೆ. ಚುನಾವಣೆಯ ನಂತರ ಸಮ್ಮಿಶ್ರ ಸರ್ಕಾರದ ರೂಪುರೇಷೆಗಳನ್ನು ಅಂತಿಮಗೊಳಿಸಲಾಗುವುದು ಎಂದು ಅಮಿತ್‌ ಶಾ ಹೇಳಿದ್ದರು.

ಆದರೆ ಪಳನಿಸ್ವಾಮಿ, ಎರಡೂ ಪಕ್ಷಗಳು ಒಟ್ಟಾಗಿ ಹೋರಾಡುತ್ತವೆ ಮತ್ತು ಚುನಾವಣೆಯ ನಂತರ ಸರ್ಕಾರ ರಚಿಸುತ್ತವೆ ಎಂದು ಶಾ  ಹೇಳಿದ್ದಾರೆ. ಆದರೆ ಅವರು ಸಮ್ಮಿಶ್ರ ಸರ್ಕಾರವೆಂದು ಹೇಳಿಲ್ಲ. ನೀವೇ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ ಮತ್ತು ಅದನ್ನೇ ದೊಡ್ಡ ವಿವಾದ ಮಾಡಿದ್ದೀರಿ. ಸರ್ಕಾರದಲ್ಲಿ ಬಿಜೆಪಿ ಪಾಲು ಇರುವುದಾಗಿ ಅವರು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಎನ್‌ ಡಿಎ ಒಕ್ಕೂಟವನ್ನು ರಾಷ್ಟ್ರಮಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ತಮಿಳುನಾಡಿನಲ್ಲಿ ಎಐಎಡಿಎಂಕೆ ಮುಖ್ಯಸ್ಥರು ಮುನ್ನಡೆಸಲಿದ್ದಾರೆ ಎಂದು ಶಾ ಸ್ಪಷ್ಟವಾಗಿ ಹೇಳಿದ್ದಾರೆ ಎಂದೂ ಎಂದು ಪಳನಿಸ್ವಾಮಿ ಹೇಳಿದ್ದಾರೆ.

ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್‌ ಪ್ರತಿಕ್ರಿಯಿಸಿ, ಮೈತ್ರಿ ಸರ್ಕಾರ ರಚನೆ ಕುರಿತ ನಿರ್ಧಾರವನ್ನು ಅಮಿತ್‌ ಶಾ ಮತ್ತು ಪಳನಿಸ್ವಾಮಿ ಅವರು ತೆಗೆದುಕೊಳ್ಳುತ್ತಾರೆ. ಮೈತ್ರಿ ಕುರಿತು ಪಳನಿಸ್ವಾಮಿ ಅವರೊಂದಿಗೆ ಕೇಂದ್ರ ಗೃಹ ಸಚಿವರು ಚರ್ಚಿಸಿದ್ದು ನಾನು ಉತ್ತರ ನೀಡುವುದಿಲ್ಲ ಎಂದು ಹೇಳಿದ್ದಾರೆ.

More articles

Latest article