ಬೆಂಗಳೂರು: ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ ಲಿ. ಈ ಪ್ರಕಟಣೆ ಹೊರಡಿಸಿದ್ದು, ಮೈಸೂರು ಸ್ಯಾಂಡಲ್ ಮತ್ತು ಇತರ ಉತ್ಪನ್ನಗಳಿಗೆ 2 ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ಹೇಳಲಾಗಿದೆ.
ತಮನ್ನಾ ಭಾಟಿಯಾ ಅವರಿಗೆ 6.2 ಕೋಟಿ ರೂಪಾಯಿ ಸಂಭಾವನೆ ನೀಡಲಾಗಿದೆ.
ತಮನ್ನಾ ಭಾಟಿಯಾ ದಕ್ಷಿಣ ಭಾರತದ ಭಾಷೆಗಳೂ ಸೇರಿದಂತೆ ಬಾಲಿವುಡ್ ನಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದಾರೆ. ಗ್ಲಾಮರಸ್ ಆಗಿ ಕಾಣುವುದು ತಮನ್ನಾ ಅವರ ವಿಶೇಷ. ಗ್ಲಾಮರ್ ವಿಷಯಕ್ಕೆ ಬಂದರೆ ತಮನ್ನಾ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಈ ಕಾರಣಕ್ಕೆ ಅವರನ್ನು ಮಿಲ್ಕಿ ಬ್ಯೂಟಿ ಎಂದೂ ಕರೆಯಲಾಗುತ್ತಿದೆ. ಆದ್ದರಿಂದ ತಮನ್ನಾ ಅವರನ್ನು ನೇಮಕ ಮಾಡಿಕೊಂಡರೆ ಈ ಬ್ರ್ಯಾಂಡ್ ಉತ್ಪನ್ನಗಳ ಜನಪ್ರಿಯತೆ ಮತ್ತಷ್ಟು ಹೆಚ್ಚಬಹುದು ಎಂದು ಎಂಎಸ್ ಐಎಲ್ ಲೆಕ್ಕಚಾರ ಹಾಕಿದೆ ಎಂದೂ ಹೇಳಲಾಗುತ್ತಿದೆ. ತಮನ್ನಾ ಭಾಟಿಯಾ ಕನ್ನಡದಲ್ಲಿ ‘ಜಾಗ್ವಾರ್’ ಹಾಗೂ ‘ಕೆಜಿಎಫ್’ ಸಿನಿಮಾದ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ, ಇಷ್ಟು ದೊಡ್ಡ ಮೊತ್ತ ನೀಡಿ ಪರಭಾಷಾ ನಟಿಯನ್ನು ನೇಮಕ ಮಾಡಿಕೊಳ್ಳುವ ಅಗತ್ಯವಿತ್ತೇ ಎಂದು ಪ್ರಶ್ನಿಸಲಾಗುತ್ತಿದೆ. ಕನ್ನಡದ ನಟಿಯರನ್ನೇ ಆಯ್ಕೆ ಮಾಡಬಹುದಿತ್ತಲ್ಲವೇ ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ಪ್ರಶ್ನಿಸಲಾಗುತ್ತಿದೆ.