Sunday, September 8, 2024

ಮನೋರಮ ಎಂಬ ಥಿಯೇಟರಿನ ಒಡಲ ಕಥೆಗಳು

Most read

ನಾನು ಯಾರು? ನಾನು ಯಾಕೀ ಕಥೆ ಹೇಳ್ತಾ ಇದ್ದೀನಿ? ಯಾರಿಗಾಗಿ ಕಥೆ ಹೇಳ್ತಾ ಇದ್ದೀನಿ?… ಇದಕ್ಕೆಲ್ಲಾ ನನ್ನ ಹತ್ರ ಉತ್ರ ಇಲ್ಲ. ನಂಗೆ ಮನುಷ್ಯರು ಕಥೆ ಹೇಳೋ ಹಂಗೆ ಹೇಳಕ್ಕೂ ಬರಲ್ಲ. ಆದ್ರೆ ಈ ಕಥೆ ಕೇಳದೆ ಹೋಗುವ ಜನ ಏನನ್ನೂ ಕಳೆದುಕೊಳ್ಳೋದಿಲ್ಲ. ಕಥೆ ಕೇಳಿದ್ರೆನೂ ಏನು ಉಪಯೋಗವೋ ಗೊತ್ತಿಲ್ಲ. ನನ್ನ ಕಥೆಯಲ್ಲಿ ಬರುವ ಜನ ಸಾಮಾನ್ಯರು ಸಾರ್ವಜನಿಕರಲ್ಲ. ಈ ಸಮಾಜದವರು ಯಾವ ಲೆಕ್ಕಕ್ಕೂ ಬರದೇ ಇರುವ ಜನ – ಬೇಕಾದಾಗ ಉಪಯೋಗಿಸ್ಕೊಂಡು ಬೇಡದೆ ಇರುವಾಗ ಎತ್ತಿ ಅಂಚಿಗೆ ಬಿಸಾಕಿರೋರು.  ನಗರದ ಮಧ್ಯದಲ್ಲಿರುವ ಸಮಾಜದ ಜನಕ್ಕೆ ಇವರಿಲ್ದೆ ಬದುಕಿಲ್ಲ. ಇವರಿದ್ರೆ ಅವಮಾನ.

ಬೇಡ ಬಿಡಿ ಇದೆಲ್ಲ. ನಾನು ಹುಲ್ಲು, ದಟ್ಟವಾಗಿ ಬೆಳೆದ ಹುಲ್ಲು. ಆ ಸುಟ್ಟಿರುವ ಜಾಗವನ್ನು ತುಂಬುತ್ತಾ, ಇಲ್ಲಿ ಏನ್ ನಡದ್ರೂ ನೋಡ್ತೀನಿ. ಯಾರ್ ಅತ್ರೂ, ಯಾರ್ ನಕ್ರೂ, ಯಾರ್ ಯಾರ್ ಹತ್ರ ಮಾತಾಡಿದ್ರೂ, ಯಾರ್ ಹತ್ರ ಮಾತಾಡಲ್ಲಂದ್ರೂ… ಈ ಜಾಗ ಅಂದ್ರೆ ಅದು ಮನೋರಮ ಥಿಯೆಟರ್. ನಾನು ಹೇಳ್ತಿರೋದು ಈ ಜಾಗ, ಇಲ್ಲಿ ಬದುಕುವ ಜನರ ಕಥೆ. ಈಗ ಸೀದಾ ಕಥೆಗೆ ಹೋಗೋಣ.

ಆವತ್ತು ಅಮಾವಾಸೆ. ಆದ್ರೆ ಬೆಳಗ್ಗಿನಿಂದಲೂ ಏನೋ  ಒಂಥರ ಮಸುಕು ಮಸುಕು. ಮನಸ್ಸಿನಲ್ಲೂ ಅದೇ ಮಸುಕು. ಬೆಳಿಗ್ಬೆಳಿಗ್ಗೆನೇ ಜೋರ್ ಮಳೆ ಬರೋತರ ಇತ್ತು. ಮೋಡಗಳು ತುಂಬು ಗರ್ಭಿಣಿಗಳ ತರ ಅಲ್ಲಲ್ಲಿ ಕಂಡವು. ಹೆರುವ ಮುನ್ನ ನೋವು ಇಡೀ ದೇಹವನ್ನಾವರಿಸಿದಂತೆ ಮೋಡಗಳು ತನ್ನ ಕಪ್ಪನ್ನು ಹರಡಿ ಬೆಳಿಗ್ಗೆ ಅಂತಾನೆ ಗೊತ್ತಾಗದಂತೆ ಮಾಡಿದ್ದುವು.. ಆಕಾಶದಲ್ಲಿ ಮೋಡಗಳು ಯಾಕೆ ಗಂವ್‌ ಅಂತ ಇವೆ? ಮಳೆಗೇನು ನೋವು, ಸೂರ್ಯನಿಗೇನು ಬಿಂಕ, ಚಂದ್ರನಿಗೇನು ಆಟ… ಭೂಮಿಗಂತೂ ಕೆಲ್ಸವೇ ಇಲ್ಲ … ಮಕ್ಳು ಹುಟುಸ್ಕೊಂಡು ಕೂತಿರುತ್ತೆ…. ಭಾರ ಜಾಸ್ತಿ ಮಾಡ್ಕೊತಾ…ಏನ್ ಹೇಳೋದು ಇವಕ್ಕೆ?

ಆವತ್ತು ನಡೆಯೋ ಘಟನೆಗೆ ಮುಂಚೆಯಿಂದ್ಲೇ ಅಳಕ್ಕೆ ಶುರು ಮಾಡಿದ್ವು. ನಾನ್ ಹೇಳ್ತಾನೇ ಇದ್ದೆ “ಬೇಡ ತಡೀರಿ ತಡೀರಿ” ಅಂತ … ಕೇಳಿದ್ರೆ ತಾನೆ…..ಆವತ್ತು ಅವಳೂನು ನಮ್ ಕಥಾನಾಯಕಿನೂ ಯಾಕೋ ತುಂಬಾ ಭಾರವಾಗಿ ಮನಸ್ಸಲ್ಲಿ ಕುಗ್ಗಿ ಹೋದಂತಿದ್ರು. ಬೆಳಿಗ್ಗೆ ಕೆಲಸಕ್ಕೆ ಬಂದಾಗಿನಿಂದ್ಲು ಅವಳ ಕಣ್ಣುಗಳಲ್ಲಿ ಖಾಲಿತನ. ಅತ್ತೂ ಅತ್ತೂ ಕಣ್ಗಳು ಬತ್ತಿ ಹೋಗಿ, ಅದು ಕಾಣಿಸ್ಬಾರ್ದು ಅಂತ ಮೇಕಪ್ ಹಾಕ್ಕೊಂಡು, ಏನೋ ಅರಿಯದ ದುರಂತ ಅವಳನ್ನು ಕಾದಿರುವಂತೆ ಮುಖದಲ್ಲಿ ತೀವ್ರ ಆತಂಕ. ಕಳೆದೋದಂಗೆ ಓಡಾಡ್ತಿದ್ದ ಅವಳಿಗೆ ಒಂದು ಗಿರಾಕಿ ಸಿಕ್ಕು ಥಿಯೆಟರ್ ಒಳಗೆ ಹೋದ್ಲು.

*****

ಸುತ್ತಾ ಕತ್ತಲು. ಚಿತ್ರ ಮಂದಿರದಲ್ಲಿ ಚಿತ್ರದ ಬೆಳಕು ಮಾತ್ರ. ಕೆಲವೇ ಜನ ಇದ್ದರು. ಇದ್ದವರಲ್ಲಿ ಜೋಡಿಗಳೇ ಹೆಚ್ಚು. ಹರಿದ ಸೀಟುಗಳು, ಒಡೆದ ಛೇರುಗಳು, ಒಂದು ಕಡೆ ಗೋಡೆ ಸುಟ್ಟ ನಿಶಾನೆಗಳು, ನಿಧಾನವಾಗಿ ತಿರುಗುವ ದೊಡ್ಡ ದೊಡ್ಡ ಧೂಳು ಹಿಡಿದ ಫ್ಯಾನುಗಳು, ದಶಕಗಳಷ್ಟು ಧೂಳು ಹಿಡಿದು ಅಲುಗಾಡಿಸಲಾಗದೆ ಭಾರವಾಗಿರುವ ಕೆಂಪು ಬಣ್ಣದಿಂದ  ಕಪ್ಪು ಬಣ್ಣಕ್ಕೆ ತಿರುಗಿದಂತ ಪರದೆಗಳು, ಮೆಟ್ಟಲು ಹತ್ತಿ ಬಾಲ್ಕನಿಗೆ ಹೋಗುವುದೆಂದರೆ ಸ್ವರ್ಗ ಲೋಕಕ್ಕೇರಿದಂತೆ ಸುಸ್ತಾಗುವ ಉದ್ದ ಉದ್ದ ಮೆಟ್ಟಿಲುಗಳು, ಗುಲ್ಮೊಹರ್ ಹೂಗಳಾಗಿ ಆಗಾಗ ಜನರ ಮೇಲೆ ಪುಷ್ಪ ವೃಷ್ಟಿಯಾಗುವ ಹಳೇ ಕಾಲದ ಶ್ಯಾಂಡಲಿಯರ್ ಧೂಳು, ನಾಲ್ಕು ತಾತರಾಯನ ಕಾಲದ ಚಿತ್ರಗಳನ್ನು ಇಟ್ಕೊಂಡು ಮತ್ತೆ ಮತ್ತೆ ಅದನ್ನೇ ಹಾಕ್ತಾ ಇರ್ತಾರೆ.  ಹಾಗಂತ ಚಿತ್ರಮಂದಿರದ ಒಳಗೆ ಬಂದಾಗ ಏನೋ ಒಂಥರ ಅಹಿತವಾಗಿ ಏನೂ ಇಲ್ಲ.

ಆ ಅವಳು ಚಿತ್ರಮಂದಿರದಲ್ಲಿ ಆ ಹಳೆಯ ಚಿತ್ರ ನೋಡುತ್ತಾ ನೋಡುತ್ತಾ ತನ್ನ ಕೆಲಸ ಮಾಡುತ್ತಿದ್ದಳು. ಅವಳ ಪಕ್ಕದ ಸೀಟಿನಲ್ಲಿ ಕೂತಿದ್ದ ಗಂಡಸು ಮೆಲ್ಲಗೆ ಮುಲುಗುತ್ತಿದ್ದ. ಒಮ್ಮೊಮ್ಮೆ ಉದ್ಗಾರ ತೆಗೆಯುತ್ತಿದ್ದ. ಅವನಿಗೆ ಆಹ್ಲಾದ. ಅವಳಿಗೆ ದಿನ ನಿತ್ಯದ ಕೆಲಸ. ಕೈ ಕೆಲಸ. ಅವಳಿಗೆ ಸಿನೆಮ ಬೋರಾಗಿ ಅಲ್ಲಿದ್ದ ಫ್ಯಾನುಗಳನ್ನು ನೋಡಲು ತೊಡಗಿದಳು. ಅವಳಿಗೆ ಸಿನಿಮಾ ಬಾಯಿಪಾಠವಾದಂತಿತ್ತು… ಕೆಲಸ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಅವಳ ಧ್ಯಾನ ಫ್ಯಾನಿನ ಮೇಲೆ ಹೋಯ್ತು.  

ಮನಸ್ಸಿನಲ್ಲೇ ಯೋಚನೆ ಮಾಡ್ತಾ “ಈ ಥಿಯೆಟರ್‌ ಅದೆಷ್ಟು ದೊಡ್ದು! ಅದಕ್ಕೆ ಹಳೆ ಕಾಲದ ಫ್ಯಾನು, ಅದೂ ಧೂಳಿನ ಮನೆ. ಇದನ್ನ ಸ್ವಚ್ಛ ಮಾಡೋರ್ ಗತಿ!!!” ಅಂದ್ಕೊಂಡ್ಳು. ಬಡ ಹೆಂಗಸರಿಗೆ ತಾವೇನೇ ಹೊರಗೆ ಕೆಲಸ ಮಾಡಿದರೂ ಕಡೆಗೆ ತಮ್ಮ ಮನೆಯ ಸ್ವಚ್ಛತೆ, ತಮ್ಮ ಮನೆಯ ಕೆಲಸ ಅವರದೇ.. ಎಂಥಾ ಸುಸ್ತಿನಲ್ಲೂ ಮಲಗೋ ಮುಂಚೆ ಸ್ವಚ್ಛ ಮಾಡದೆ ಮಲಗಲ್ಲ. ಅದಕ್ಕೆ ಇಂಥಾ ಯೋಚನೆಗಳು ಬರೋದು. ಅವಳು ಅಲ್ಲಿ ಇಲ್ಲಿ ನೋಡ್ತಾ, ಕೆಲಸ ಮಾಡ್ತಾ ಮಾಡ್ತಾ ಗಿರಾಕಿಗೆ ಉನ್ಮಾದ ಕೊಡುತ್ತಾ ಫ್ಯಾನನ್ನು ನೋಡುತ್ತಾ ತನ್ನ ಮನೆಯ ಆ ಚಿಕ್ಕ ಟೇಬಲ್ ಫ್ಯಾನ್ ಒರೆಸಿಡಬೇಕು ಅಂತ ಯೋಚನೆ ಮಾಡಿದಳು. ಆಗ ಆ ಗಿರಾಕಿ ವಿಚಿತ್ರವಾಗಿ ಮುಲ್ಗಕ್ಕೆ ಶುರು ಮಾಡಿದ. ಅದೊಂಥರ ಸಂಡಾಸಲ್ಲಿ ಮುಕ್ಕುವ ಹಾಗೆ.  ಮೆತ್ ಮೆತ್ಗೆ ಅವಳ ಬೆನ್ನನ್ನು ಮುಟ್ಟಕ್ಕೆ ಶುರು ಮಾಡ್ದ. ಅವಳ ಯೋಚನೆಗಳ ಬಲೂನಿಗೆ ಮುಳ್ಳು ಚುಚ್ಚಿ ಫಳ್ ಅಂತ ಒಡೆದ ಹಾಗಾಗಿ ಮೈ ಕೊಡವುತ್ತಾ ಪ್ರಸ್ತುತಕ್ಕೆ ಬಂದಳು. ಇರ್ಸುಮುರ್ಸಾಗಿ ಅವನ ಕೈ ಸರ್ಸಿದ್ಲು. ಅವನು ಮತ್ತೆ ಮತ್ತೆ ಕೈ ಹಾಕಕ್ಕೆ ಶುರು ಮಾಡಿದಾಗ, ಸ್ವಲ್ಪ ಜೋರಾಗೇ ಕೂಗಿ ಹೇಳಿದ್ಳು “ಏಯ್‌, ಕೈ ತೆಗಿ, ಅದೆಲ್ಲ ನಡೆಯಲ್ಲ, ಕಾಸ್ಕೊಟ್ಟಿರೋದು ಬರೀ ಒಂದ್ ಕೆಲ್ಸಕ್ಕೆ”. ಅವನು ಕೈ ತೆಗೆದು ಮೆಲು ದನಿಯಲ್ಲಿ ಗದರಿದ ‘’ಮಾಡೋ ಸೂಳೆ ಕೆಲ್ಸಕ್ಕೆ ಇದೆಲ್ಲಾ ಬೇರೆ, ಏನಾಗೋಗುತ್ತೆ ಮುಟ್ಟಿದ್ರೆ?’’. ಅದಕ್ಕವಳು ಅಷ್ಟೇ ಮೆಲು ಧ್ವನಿಯಲ್ಲಿ “ಚಪ್ಲಿ ಕಿತ್ತೋಗತ್ತಷ್ಟೆ. ಏನಂದ್ಕೊಡಿದ್ದೀಯ? ಹೌದ್ ನಾ ಸೂಳೇನೆ, ಎಲ್ಲಾದಕ್ಕೂ ರೇಟ್ ಕಟ್ಟಿರೋ ಸೂಳೆನೇ, ಏನಿವಗಾ? ಮುಟ್ಟೋದಕ್ಕಿಷ್ಟು, ಮಾಡೋದಕ್ಕಿಷ್ಟು ಮಾಡ್ಸಕೊಳ್ಳಕ್ಕೆ ಇಷ್ಟು ಅಂತ. ಅರ್ಧ ಕೆಜಿ ಬೀನ್ಸ್ ತಗೊಂಡಾಗ ಅರ್ಧ ಕೆಜಿ ಆಲುಗಡ್ಡೆ ಮುಫ್ತಾಗ್ ಕೊಡ್ತಾರಾ???’ ”… ಅವಳು ಒಂದ್ ರೀತಿ ಬಜಾರಿನೂ ಹೌದು, ಬಹಳಾ ನವಿರು ಕೂಡ. ಅದ್ರೆ ಕೆಲಸದಲ್ಲಿ ಮಾತ್ರ ತುಂಬಾ ನಿಷ್ಠೆ. ಅವಳು ಎಷ್ಟು ಕೆಲಸ ಮಾಡ್ತಾಳೋ ಅಷ್ಟಕ್ಕೆ ಮಾತ್ರ ಹಣ ಪಡೀತಾಳೆ.  

 ***

ಮನೋರಮ ಥಿಯೆಟರ್ ಹಳೆಯದು. ಅಲ್ಲಿ ಹೊಸ ಸಿನೆಮ ಹಾಕ್ತಿರ್ಲಿಲ್ಲ. ಆ ಏರಿಯಾಗೇ ಅದೊಂದು ಕಿರೀಟ ಇದ್ದಂಗೆ ಇತ್ತು. ಊರ ಮಧ್ಯದಲ್ಲಿ ರಾರಾಜಿಸ್ತಾ, ಹತ್ರ ಇರೋ ಊರ ಬಸ್ ಸ್ಟಾಂಡ್ ಗೆ ಬರೋ ಜನರಿಗೆ ಒಂದು ಶೆಲ್ಟರ್ ತರ ಇತ್ತು. ಕೆಲವರಿಗೆ ಶೆಲ್ಟರ್, ಕೆಲವರಿಗೆ ಸೆಕ್ಸ್, ಕೆಲವರಿಗೆ ಬೆಚ್ಚಗಿನ ಮನೆ, ಕೆಲವರಿಗೆ ಬೆಚ್ಚಗಿನ ಸಂಬಂಧಗಳು, ಕೆಲವರಿಗೆ ನಾಸ್ಟಾಲ್ಜಿಯ, ಕೆಲವರಿಗೆ ಮೋಜು, ಕೆಲವರಿಗೆ ಸಂದು ಹೋದ ಕಾಲ, ಕೆಲವರಿಗೆ ಪಟ್ಟಣಕ್ಕೆ ಬಂದು ತಮ್ಮ ಕೆಲಸ ಮಾಡಿಕೊಂಡು ಹೋಗುವಾಗ ರಾತ್ರಿ ಮಜಾ ಸಿಗೋ ಜಾಗ. ಭಗ್ನ ಪ್ರೇಮಿಗಳಿಗೆ ಈ ಚಿತ್ರಮಂದಿರ ಹೊಟ್ಟೆ ತುಂಬ ಅಳಬಹುದಾದ ಜಾಗ. ಪ್ರೇಮಿಗಳಿಗಂತು ಎಲ್ಲಾ ರಾಗಗಳನ್ನು ಶೋಧಿಸುವ, ಹಾಡುವ ಜಾಗವಾಗಿತ್ತು.

ಅಲ್ಲೊಂದು ದೊಡ್ಡ ಕಾಂಪೌಂಡು, ನಡುವೆ ಚಿತ್ರಮಂದಿರ, ಸುತ್ತಾ ಹುಲ್ಲಿನ ಹಾಸಿಗೆಯಂತೆ ಬೆಳೆದಿದ್ದ ಕಾಂಗ್ರೆಸ್ ಗಿಡಗಳು, ಅದರ ಬಲಗಡೆ ಒಂದು ದೊಡ್ಡ ಗೋಡೆ, ಗೋಡೆಯ ಹಿಂದೆ ಒಂದು ಪಾಯಿಖಾನೆಯ ತರದ ಕಟ್ಟಡ, ಅದು ಗಂಡಸರಿಗೆ ಸರಾಗ, ಹೆಂಗಸರು ಸ್ವಲ್ಪ ದೂರದಲ್ಲಿ ಪೊದೆಗಳ ಹಿಂದೆ ಕಾರ್ಯ ಸಾಧಿಸಿಕೊಳ್ಳಬೇಕು. ಬಿಲ್ಡಿಂಗ್ ಬಿಳಿಯ ಬಣ್ಣ ಮಾಸಿ  ಕಂದು ಬಣ್ಣ ಆಗಿತ್ತು. ಬಿಲ್ಡಿಂಗ್ ಸುತ್ತಲೂ ಮೂತ್ರದ ರಂಗೋಲಿಗಳು ಪಳೆಯುಳಿಕೆಯಂತೆ ಹೊಸದನ್ನೂ ಸೇರಿಸಿಕೊಳ್ಳುತ್ತಾ ಒಂದು ಮಹಾಕಾವ್ಯವೇ ನಿರ್ಮಿಸಿದಂತಿತ್ತು. ಅದರ ಹತ್ರ ಸುಳಿಯುವ ಧೈರ್ಯ ಅಲ್ಲೇ ಮೂತ್ರ ಮಾಡುವವರಿಗೆ ಮಾತ್ರ ಸಾಧ್ಯವಿತ್ತು. ಆ ಕಮಟು ವಾಸನೆಗೆ ಮೈಲಿಗಳ ಆಯಿಸ್ಸು. ಅದಕ್ಕೆ ಅವಳು, ಆ ಸೆಕ್ಸ್ ವರ್ಕರ್ ಯಾವಾಗಲೂ ಹೇಳುತ್ತಿದ್ದಳು “ಮೊದಲೇ ತಿಪ್ಪೆ, ಅದ್ರ ಮೇಲೆ ಕೊಳೆತ ಹಲಸ್ನಣ್ಣು” ಅಂತ. ಆ ಚಿತ್ರಮಂದಿರದ ಆಚೆಯಿಂದ ನೋಡಿದರೆ ಕೆಲವು ದಾರಿಹೋಕರಿಗೆ ಅದು ಭೂತ ಬಂಗ್ಲೆಯಂತೆ ಕಾಣುತ್ತಿತ್ತು. ಒಂದು ಕಾಲದಲ್ಲಿ ಬೆಂಗಳೂರಿನ ಅತೀ ಹಣವಂತರ ಕಾಲಹರಣದ ತಾಣವಾಗಿ ಬಹಳ ಹೆಸರಾಂತ ಚಿತ್ರಮಂದಿರವಾಗಿದ್ದ ಈ ಸ್ಥಳ ಅಣ್ಣತಮ್ಮಂದಿರ ಜಗಳದಲ್ಲಿ ಒಮ್ಮೆ ಬೆಂಕಿಗೆ ತುತ್ತಾಗಿ ಚಿತ್ರಮಂದಿರದ ಒಂದು ಭಾಗ ಸುಟ್ಟು ಕರಕಲಾಗಿತ್ತು. ಆದರೆ ಅಲ್ಲಿದ್ದ ಗಿಡಬಳ್ಳಿಗಳಿಗೆ ಏನೋ ಕರುಣೆ ಬಂದು ಸುಟ್ಟ ಜಾಗವನ್ನೆಲ್ಲಾ ಮುಚ್ಚುವಂತೆ ಬೆಳೆದು ಅದೊಂದು ಆಧುನಿಕ ಕಲೆಯಂತೆ ಕಾಣುತ್ತಿತ್ತು.

ಈ ಚಿತ್ರಮಂದಿರದ ಇನ್ನೊಂದು ವಿಶೇಷ – ಈ ಸ್ಥಳ ಎಷ್ಟು ಶಿಥಿಲಗೊಂಡಿದೆ ಅಂದ್ರೆ ಸಾಮಾನ್ಯವಾಗಿ ದಂಧ ಮಾಡಕ್ಕೆ ಬರೋ ಹೆಂಗಸರೂ ಕೂಡ ಬರುವುದಿಲ್ಲ. ಅದು ಬಹಳ ಅಪರೂಪ ಇಲ್ಲಿ. ಯಾಕಂದ್ರೆ ಅವರ ಮನಸ್ಸಿನಲ್ಲಿ ಈ ಜಾಗದಲ್ಲಿ ಬರೀ ಮುದುಕರೇ ಬರ್ತಾರೆ ಅಂತ. ಇಲ್ಲಿಗೆ ಬರ್ತಿದ್ದುದು ಸ್ವಲ್ಪ ವಯಸ್ಸಾದ, ಐವತ್ತರ ಮೇಲಿರುವ ಗಿರಾಕಿಗಳು. ಹಾಗೇ ನಮ್ಮ ಕಥಾನಾಯಕಿಗೂ ನಲವತ್ತರ ಮೇಲಾಗಿತ್ತು.

(ಮುಂದುವರಿಯುವುದು….)

ರೂಮಿ ಹರೀಶ್

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

More articles

Latest article