ಕಿಂಗ್ ಸ್ಟನ್: ಅಪಘಾನಿಸ್ತಾನ ತಂಡ 2023ರ ವಿಶ್ವಕಪ್ ನಲ್ಲಿ ಗೆದ್ದೇ ಬಿಟ್ಟಿದ್ದ ಪಂದ್ಯವನ್ನು ಗ್ಲೆನ್ ಮ್ಯಾಕ್ಸ್ ವೆಲ್ ಅವರ ಪವಾಡದಂಥ ಡಬಲ್ ಸೆಂಚುರಿಯಿಂದಾಗಿ ಸೋತುಹೋಗಿತ್ತು. ಆ ಸೇಡನ್ನು ಇಲ್ಲಿನ ಆರ್ಮೋಸ್ ವೇಲ್ ಮೈದಾನದಲ್ಲಿ ತೀರಿಸಿಕೊಂಡಿತು. ಈ ಭರ್ಜರಿ ಗೆಲುವು ಗ್ರೂಪ್- 1 ರಿಂದ ಸೆಮಿಫೈನಲ್ ತಲುಪುವ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡಿದೆ.
ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದಿದ್ದರೆ, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಯಾವ ಲೆಕ್ಕಾಚಾರದ ಗೋಜಲು ಇಲ್ಲದೆ ಸೆಮಿಫೈನಲ್ ತಲುಪುತ್ತಿದ್ದವು. ಎರಡೂ ತಂಡಗಳ ಬುಟ್ಟಿಗೆ ತಲಾ ನಾಲ್ಕು ಅಂಕಗಳು ಸಿಕ್ಕಿದಂತಾಗಿ ಅಫಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಟೂರ್ನಿಯಿಂದ ಹೊರಬೀಳುತ್ತಿದ್ದವು.
ಟೂರ್ನಿಯುದ್ದಕ್ಕೂ ಸೋಲಿಲ್ಲದೆ ಬೀಗುತ್ತಿದ್ದ ಆಸ್ಟ್ರೇಲಿಯಾ ಇಂದು ಅಫಘಾನಿಸ್ತಾನದ ಎದುರು ಶರಣಾಗಿ ಎಲ್ಲ ತಂಡಗಳಿಗೂ ಅವಕಾಶವನ್ನು ಕಲ್ಪಿಸಿದಂತಾಗಿದೆ. ಭಾರತ ಮತ್ತು ಇತರ ತಂಡಗಳು ಸೆಮಿಫೈನಲ್ ತಲುಪಲು ಮುಂದಿನ ಫಲಿತಾಂಶಗಳು ಏನಾಗಬೇಕು? ಇಲ್ಲಿದೆ ಒಂದು ಲೆಕ್ಕಾಚಾರ.
ಟೀಂ ಇಂಡಿಯಾ ಸೂಪರ್- 8 ರ ತನ್ನ ಎರಡೂ ಪಂದ್ಯಗಳನ್ನು ಗೆದ್ದು +2.425 ರನ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಇರುವ ಇನ್ನೊಂದು ಪಂದ್ಯ ಗೆದ್ದರೆ ಭಾರತ ಸಲೀಸಾಗಿ ಸೆಮಿಫೈನಲ್ ತಲುಪಲಿದೆ. ಈ ಪಂದ್ಯ ಸೋತರೂ ಭಾರತಕ್ಕೆ ಅವಕಾಶ ಇರುತ್ತದೆ.
ಆಸ್ಟ್ರೇಲಿಯಾ ಗೆದ್ದರೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಕೈಯಲ್ಲಿ ತಲಾ ನಾಲ್ಕು ಅಂಕಗಳು ಇರುತ್ತವೆ. ಅಫಘಾನಿಸ್ತಾನ ತನ್ನ ಮುಂದಿನ ಪಂದ್ಯವನ್ನು ಬಾಂಗ್ಲಾದೇಶದ ಎದುರು ಗೆದ್ದರೆ ಅದೂ ಕೂಡ ನಾಲ್ಕು ಅಂಕ ಗಿಟ್ಟಿಸಲಿದೆ. ಹೀಗಾದಾಗ ಭಾರತ, ಆಸ್ಟ್ರೇಲಿಯಾ, ಅಫಘಾನಿಸ್ತಾನ ತಂಡಗಳಲ್ಲಿ ಯಾವ ಎರಡು ತಂಡಗಳು ಹೆಚ್ಚಿನ ರನ್ ರೇಟ್ ಗಳಿಸಿರುತ್ತವೋ ಅವು ಸೆಮಿಫೈನಲ್ ಪ್ರವೇಶಿಸಲಿವೆ. ಹೀಗಾದಾಗಲೂ ಭಾರತಕ್ಕೆ ಹೆಚ್ಚಿನ ಅವಕಾಶವಿದೆ. ಯಾಕೆಂದರೆ ಆಸ್ಟ್ರೇಲಿಯಾ, ಅಫಘಾನಿಸ್ತಾನಕ್ಕಿಂತ ಭಾರತದ ರನ್ ರೇಟ್ ಹೆಚ್ಚಾಗಿಯೇ ಇದೆ.
ವಿಶೇಷವೆಂದರೆ ಗ್ರೂಪ್ 1 ರಲ್ಲಿ ಎರಡು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯಲ್ಲಿರುವ ಬಾಂಗ್ಲಾದೇಶ ತಂಡಕ್ಕೂ ಸೆಮಿಫೈನಲ್ ತಲುಪುವ ಸಣ್ಣ ಅವಕಾಶ ತೆರೆದುಕೊಂಡಿದೆ. ಬಾಂಗ್ಲಾದೇಶ. ಸೆಮಿಫೈನಲ್ ತಲುಪಬೇಕೆಂದರೆ ಭಾರತವು ಆಸ್ಟ್ರೇಲಿಯಾವನ್ನು ಸೋಲಿಸಬೇಕು, ಬಾಂಗ್ಲಾದೇಶ ತಂಡ ಅಫಘಾನಿಸ್ತಾನವನ್ನು ಸೋಲಿಸಬೇಕು. ಹೀಗಾದಾಗ ಭಾರತ ಹೊರತುಪಡಿಸಿ ಉಳಿದ ಮೂರೂ ತಂಡಗಳ ಬಳಿ ಕೇವಲ 2 ಅಂಕಗಳು ಇರುತ್ತವೆ. ಆಗ ಈ ಮೂರು ತಂಡಗಳ ಪೈಕಿ ಅತಿಹೆಚ್ಚು ರನ್ ರೇಟ್ ಪಡೆದ ಒಂದು ತಂಡ ಭಾರತದೊಂದಿಗೆ ಸೆಮಿಫೈನಲ್ ಪ್ರವೇಶಿಸಲಿದೆ.