ಬೆಂಗಳೂರು: ಶೌಚಾಲಯದಲ್ಲಿ ರಹಸ್ಯವಾಗಿ ಮೊಬೈಲ್ ಮೂಲಕ ಮಹಿಳೆಯರನ್ನು ಸೆರೆ ಹಿಡಿಯುತ್ತಿದ್ದ ಆರೋಪದ ಮೇಲೆ ಕೋರಮಂಗಲದ ಪ್ರಖ್ಯಾತ ಸ್ವೀಟ್ ಹೌಸ್ ಆನಂದ್ ಸ್ವೀಟ್ಸ್ ನ ಹೌಸ್ ಕೀಪರ್ ನನ್ನು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಖಾಸಗಿ ಕಂಪನಿಯೊಂದರ ಮಹಿಳಾ ಉದ್ಯೋಗಿಯೊಬ್ಬರು ಏಪ್ರಿಲ್ 25 ರಂದು ಕೋರಮಂಗಲ 60 ಅಡಿ ರಸ್ತೆಯ ಆನಂದ್ ಸ್ವೀಟ್ಸ್ ಗೆ ರಾತ್ರಿ 8 ಗಂಟೆಗೆ ಹೋಗಿದ್ದು, ಅವರು ಅಲ್ಲಿನ ವಾಷ್ ರೂಂಗೆ ತೆರಳಿದ್ದಾರೆ.
ಶೌಚಾಲಯದ ಒಳ ಪ್ರವೇಶಿಸಿದಾಗ, ಅಲ್ಲಿನ ಫೈಬರ್ ಗ್ಲಾಸ್ ಹಿಂದೆ ವಸ್ತುವೊಂದು ಚಲಿಸುತ್ತಿರುವುದು ಗೋಚರಿಸಿದೆ. ಅನುಮಾನಗೊಂಡ ಇವರು ಹತ್ತಿರದಿಂದ ಪರಿಶೀಲಿಸಿದಾಗ ಅದು ಮೊಬೈಲ್ ಎನ್ನುವುದು ಗೊತ್ತಾಗಿದೆ. ಹೊರಗಡೆಯಿಂದ ವ್ಯಕ್ತಿಯೊಬ್ಬ ಮೊಬೈಲ್ ಮೂಲಕ ರೆಕಾರ್ಡ್ ಮಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಅವರು ಸ್ವೀಟ್ ಹೌಸ್ ಸಿಬ್ಬಂದಿ ಗಮನಕ್ಕೆ ತಂದು ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಆಧರಿಸಿ ಪೊಲೀಸರು ಅಲ್ಲಿನ ಹೌಸ್ ಕೀಪರ್ ವಿರುದ್ಧ ದೂರು ದಾಖಲಿಸಿದ್ದಾರೆ. ಸೆ. 77 ರ ಅಡಿಯಲ್ಲಿ ಎಫ ಐಆರ್ ದೂರು ದಾಖಲಾಗಿದ್ದು, ಈ ಮಹಿಳೆಯು ತಮಗಾದ ಅನುಭವವನ್ನು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ಸಾರ್ವಜನಿಕ ಸ್ಥಳಗಳು ಮಹಿಳಯರಿಗೆ ಹೇಗೆ ಅಸುರಕ್ಷಿತ ಎನ್ನುವುದನ್ನು ವಿವರಿಸಿದ್ದಾರೆ.
ಏಪ್ರಿಲ್ 25 ರಂದು ಆನಂದ್ ಸ್ವೀಟ್ಸ್ ಗೆ ತೆರಳಿದ್ದೆ. ಈ ಅಂಗಡಿ ನನಗೆ ದಶಕಗಳಿಂಸ ಪರಿಚಿತ. ಅಲ್ಲಿ ನಡೆದಿದ್ದು ನಿಜಕ್ಕೂ ಭಯಾನಕ ಅನುಭವವಾಗಿತ್ತು. ಅಂಗಡಿ ಮಾಲೀಕರು ನಿಮ್ಮ ವ್ಯಾಪಾರ ನೋಡಿಕೊಂಡು ಹೋಗಿ ಎಂದೂ ಬೆದರಿಕೆ ಹಾಕಿದ್ದರು. ಆದರೆ ನಾನು ಬಗ್ಗಲಿಲ್ಲ. ಏಕೆಂದರೆ ಮೌನವಾಗಿದ್ದರೆ ಅಪರಾಧಿಗಳ ಸಂಖ್ಯೆ ಹೆಚ್ಚುತ್ತದೆ ಎಂದು ವಿವರಣೆ ನೀಡಿದ್ದಾರೆ. ಆರೋಪಿಯು ಆರಂಭದಲ್ಲಿ ತನ್ನ ಅಪರಾಧವನ್ನು ಒಪ್ಪಿಕೊಳ್ಳಲಿಲ್ಲ. ತೀವ್ರ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡಿದ್ದಾನೆ. ವಿಡಿಯೋಗಳನ್ನು ಡಿಲಿಟ್ ಮಾಡಿರುವುದಾಗಿ ಹೇಳಿ ಕ್ಷಮೆ ಯಾಚಿಸಿದ್ದಾನೆ ಎಂದು ಮಹಿಳೆ ತಿಳಿಸಿದ್ದಾರೆ.