ಪ್ರಬೀರ್ ಪುರಕಾಯಸ್ಥರಾದರೂ ತಮ್ಮ ಅಕ್ರಮ ಬಂಧನಕ್ಕೆ ಕಾರಣರಾದ ಎಲ್ಲಾ ಅಧಿಕಾರಿಗಳು, ಸರಕಾರಿ ಸಂಸ್ಥೆಗಳು, ಕೇಂದ್ರ ಗೃಹ ಸಚಿವಾಲಯ ಹಾಗೂ ಸರ್ವಾಧಿಕಾರಿ ಪ್ರಧಾನಿಗಳ ಮೇಲೆಯೇ ದೂರು ದಾಖಲಿಸಿ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲು ಪ್ರಯತ್ನಿಸುವುದು ಮಾಧ್ಯಮ ಸ್ವಾತಂತ್ರ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಸರ್ವಾಧಿಕಾರಿಗೆ ಪಾಠ ಕಲಿಸಲು ಇದೊಂದು ಉತ್ತಮ ಅವಕಾಶ – ಶಶಿಕಾಂತ ಯಡಹಳ್ಳಿ, ಪತ್ರಕರ್ತರು
ಮತ್ತೆ ಸುಪ್ರಿಂ ಕೋರ್ಟ್ ಮೋದಿ ಸರಕಾರದ ಸರ್ವಾಧಿಕಾರಿ ಆಕ್ರಮಣಕೋರತನಕ್ಕೆ ಮರ್ಮಾಘಾತ ನೀಡಿದೆ. ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ. ನ್ಯೂಸ್ ಕ್ಲಿಕ್ ಸಂಸ್ಥಾಪಕ ಪ್ರಬೀರ್ ಪುರಕಾಯಸ್ಥರವರ ಬಂಧನವನ್ನು ಕಾನೂನು ಬಾಹಿರವೆಂದು ಹೇಳಿ ತಕ್ಷಣ ಬಿಡುಗಡೆ ಗೊಳಿಸಲು ಆದೇಶಿಸಿದೆ.
ಕಳೆದ 10 ವರ್ಷಗಳಿಂದ ಭಾರತದ ಪತ್ರಿಕಾ ಸ್ವಾತಂತ್ರ್ಯ ತೀವ್ರವಾಗಿ ದಮನಕ್ಕೊಳಗಾಗುತ್ತಲೇ ಬಂದಿದೆ. ಇತ್ತೀಚೆಗೆ ಬಿಡುಗಡೆಯಾದ ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತದ ಸ್ಥಾನ 180 ದೇಶಗಳಲ್ಲಿ 159 ನೆಯದ್ದಾಗಿದೆ. ಸರ್ವಾಧಿಕಾರಿ ಧೋರಣೆಯ ಸರಕಾರದಲ್ಲಿ ಸತ್ಯಹೇಳುವ ಪತ್ರಕರ್ತರು ದಮನಕ್ಕೊಳಗಾಗುತ್ತಾರೆ ಎನ್ನುವುದಕ್ಕೆ ಸಾಕ್ಷಿ ಪತ್ರಕರ್ತ ಪ್ರಬೀರ್ ಪುರಕಾಯಸ್ಥರವರ ಅಕ್ರಮ ಬಂಧನ.
ಸುಳ್ಳು ಆರೋಪಗಳೇನು?
ನ್ಯೂಸ್ ಕ್ಲಿಕ್ ಎನ್ನುವ ಪ್ರಸಿದ್ಧ ವೆಬ್ ಪತ್ರಿಕೆಯ ಸಂಸ್ಥಾಪಕರಾದ ಪ್ರಬೀರ್ ಪುರಕಾಯಸ್ಥ ಹಾಗೂ ಅದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಅಮಿತ್ ಚಕ್ರವರ್ತಿಯವರನ್ನು 2023, ಅಕ್ಟೋಬರ್ 3 ರಂದು ದೆಹಲಿ ಪೊಲೀಸರ ವಿಶೇಷ ಘಟಕವು ಬಂಧಿಸಿತ್ತು. ಚೀನಾ ಪರ ಪ್ರಚಾರ ಮಾಡಲು ಆ ದೇಶದಿಂದ ಹಣ ಪಡೆದಿದ್ದಾರೆಂದು ಆರೋಪಿಸಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯೊಂದು ಪ್ರಕಟವಾಗಿತ್ತು. ಅದಕ್ಕಾಗಿಯೇ ಕಾಯುತ್ತಿದ್ದ ಮೋದಿ ಸರಕಾರವು ಭಯೋತ್ಪಾದನಾ ವಿರೋಧಿ ಎಂಬ ಕರಾಳ ಕಾನೂನಿನಡಿ ಬಂಧಿಸಿ ಕಾನೂನು ಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕೇಸಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿತ್ತು. “ಭಯೋತ್ಪಾದಕರಿಗೆ ಧನಸಹಾಯ ಮತ್ತು ಚೀನಾದ ಪರ ಪ್ರಚಾರಕ್ಕೆ ಉತ್ತೇಜನ ನೀಡಿದ್ದಾರೆಂದೂ ಹಾಗೂ ಅರುಣಾಚಲ ಪ್ರದೇಶವನ್ನು ವಿವಾದಿತ ಪ್ರದೇಶವೆಂದು ಹೇಗೆ ತೋರಿಸುವುದು ಎಂದು ಸಂಚು ರೂಪಿಸಿ 115 ಕೋಟಿಗಳನ್ನು ಚೀನಾದಿಂದ ಅಕ್ರಮ ಮಾರ್ಗದಲ್ಲಿ ಪಡೆದಿದ್ದಾರೆ” ಎಂಬುದು ಪುರಕಾಯಸ್ಥರ ಬಂಧನಕ್ಕೆ ದೆಹಲಿ ಪೊಲೀಸರ ಸಮರ್ಥನೆಯಾಗಿತ್ತು. ಅದರ ಜೊತೆಗೆ 2019ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಚುನಾವಣೆಯನ್ನು ಹೇಗೆ ಹಾಳು ಮಾಡಬೇಕು ಎಂಬ ಸಂಚಿನಲ್ಲಿ ಪೀಪಲ್ಸ್ ಅಲೈಯನ್ಸ್ ಫಾರ್ ಡೆಮಾಕ್ರಸಿ ಆಂಡ್ ಸೆಕ್ಯುಲರಿಸಂ ಗುಂಪಿನೊಂದಿಗೆ ಸೇರಿ ಪುರಕಾಯಸ್ಥರವರು ಪಿತೂರಿ ನಡೆಸಿದ್ದಾರೆ ಎನ್ನುವ ಹೆಚ್ಚುವರಿ ಆರೋಪವೂ ಸೇರಿಕೊಂಡಿತ್ತು.
ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳು ಅಕ್ಟೋಬರ್ 3 ರಂದು ದೆಹಲಿಯ 88 ಸ್ಥಳಗಳಲ್ಲಿ ಹಾಗೂ ಇತರ ಏಳು ರಾಜ್ಯಗಳಲ್ಲಿ ದಾಳಿಯನ್ನು ನಡೆಸಿದವು. ನ್ಯೂಸ್ ಕ್ಲಿಕ್ ಕಚೇರಿ ಹಾಗೂ ಪತ್ರಕರ್ತರುಗಳ ನಿವಾಸಗಳಿಂದ 300 ಕ್ಕೂ ಹೆಚ್ಚು ಎಲೆಕ್ಟ್ರಾನಿಕ್ ಗ್ಯಾಜೆಟ್ ಸಾಧನಗಳನ್ನು ವಶಪಡಿಸಿ ಕೊಳ್ಳಲಾಗಿತ್ತು. 9 ಮಹಿಳಾ ಪತ್ರಕರ್ತರೂ ಸೇರಿದಂತೆ 46 ಪತ್ರಕರ್ತರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ನ್ಯೂಸ್ ಕ್ಲಿಕ್ ಮಾಧ್ಯಮ ಕಚೇರಿಗಳನ್ನು ಸೀಜ್ ಮಾಡಲಾಗಿತ್ತು. ಇದರಿಂದಾಗಿ ನ್ಯೂಸ್ ಕ್ಲಿಕ್ ವೆಬ್ ಪತ್ರಿಕೆ ಸ್ಥಗಿತಗೊಂಡಿತ್ತು. ಇದರಿಂದಾಗಿ ಭಾರತೀಯ ಪತ್ರಿಕೋದ್ಯಮವೇ ಆತಂಕಕ್ಕೆ ಒಳಗಾಗಿತ್ತು.
ಬಂಧನಕ್ಕೆ ಕಾರಣಗಳಾದರೂ ಏನು?
ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಹಾಗೂ ದೇಶದ ವಿರುದ್ಧ ಅಸಮಾಧಾನ ಸೃಷ್ಟಿಸಲು ನ್ಯೂಸ್ ಕ್ಲಿಕ್ ಚೀನಾದಿಂದ ಹಣ ಪಡೆದಿದೆ ಎಂದು ಆರೋಪಿಸಿ ಬಂಧನಗಳನ್ನು ಮಾಡಿದ್ದರ ಹಿಂದೆ ಮೋದಿ ಸರಕಾರದ ಬಹುದೊಡ್ಡ ಶಡ್ಯಂತ್ರ ಇತ್ತು. ವಾಸ್ತವದಲ್ಲಿ ದೇಶದ ಸರ್ವಾಧಿಕಾರಿ ಆಡಳಿತದ ವೈಫಲ್ಯಗಳ ವಿರುದ್ಧ ನ್ಯೂಸ್ ಕ್ಲಿಕ್ ಧ್ವನಿ ಎತ್ತಿತ್ತು. ಅದರಲ್ಲೂ ಕೋವಿಡ್ ಸಮಯದಲ್ಲಾದ ಕೇಂದ್ರ ಸರಕಾರದ ಯಡವಟ್ಟುಗಳ ಬಗ್ಗೆ ವರದಿಗಳನ್ನು ಪ್ರಕಟಿಸ ತೊಡಗಿತ್ತು. ದೆಹಲಿ ಗಡಿಯಲ್ಲಿ ನಡೆದ ಐತಿಹಾಸಿಕ ರೈತ ಹೋರಾಟವನ್ನು ಬೆಂಬಲಿಸಿ ಮೋದಿ ಸರಕಾರದ ವಿರುದ್ಧ ಪುರಾವೆಗಳ ಸಮೇತ ಲೇಖನಗಳನ್ನು ಪ್ರಕಟಿಸಲಾಗಿತ್ತು. ನ್ಯೂಸ್ ಕ್ಲಿಕ್ ನಲ್ಲಿ ಬಂದ ವರದಿಗಳು ಬೇರೆ ಪತ್ರಿಕೆಗಳಲ್ಲೂ ಪ್ರತಿಫಲನಗೊಂಡು ಮೋದಿ ಸರಕಾರ ವಿಪರೀತ ಮುಜುಗರಕ್ಕೊಳಗಾಗಿತ್ತು. ಕೇಂದ್ರ ಸರಕಾರದ ಯಾವುದೇ ಆಸೆ ಆಮಿಷ ಒತ್ತಡಕ್ಕೊಳಗಾಗದ ಪುರಕಾಯಸ್ಥರ ಬಂಧನಕ್ಕೆ ಶಡ್ಯಂತ್ರವನ್ನು ರೂಪಿಸಲಾಯಿತು.
ನ್ಯೂಸ್ ಕ್ಲಿಕ್ ಪತ್ರಿಕೆಗೂ ಹಾಗೂ ಅದರ ಮೇಲೆ ದಾಖಲಿಸಲಾದ ಆರೋಪಗಳಿಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಬೋಗಸ್ ಕೇಸ್ ಬಲೆಯನ್ನು ಹೆಣೆದು ನ್ಯೂಸ್ ಕ್ಲಿಕ್ ವೆಬ್ ಪತ್ರಿಕೆಯನ್ನು ಹಣಿಯಲಾಯ್ತು. ಈ ಪತ್ರಿಕೆಯ ಮೇಲೆ ಜಾರಿ ನಿರ್ದೇಶನಾಲಯ, ಆರ್ಥಿಕ ಅಪರಾಧ ವಿಭಾಗ, ಆದಾಯ ತೆರಿಗೆ ಇಲಾಖೆಗಳೂ ವಿಚಾರಣೆಯ ಹೆಸರಲ್ಲಿ ಮುಗಿಬಿದ್ದವು. ಈ ದೇಶದ ಅತ್ಯಂತ ಕರಾಳ ಕಾಯ್ದೆಯಾದ ಯುಎಪಿಎ ಅಡಿಯಲ್ಲಿ ಕೇಸ್ ದಾಖಲಿಸಿ ನ್ಯೂಸ್ ಕ್ಲಿಕ್ ಪತ್ರಿಕೆಯನ್ನು ಸರ್ವನಾಶ ಮಾಡಲು ಎಲ್ಲಾ ತನಿಖಾ ಸಂಸ್ಥೆಗಳು ಕಾರ್ಯನಿರತವಾದವು. ಇಲ್ಲಿ ನ್ಯೂಸ್ ಕ್ಲಿಕ್ ಪತ್ರಿಕೆಯಾಗಲಿ ಇಲ್ಲವೇ ಪುರಕಾಯಸ್ಥರಾಗಲಿ ಕೇವಲ ಸಾಂಕೇತಿಕ ಮಾತ್ರ. ಆದರೆ ಮೋದಿ ಮಡಿಲ ಮಾಧ್ಯಮವಾಗದೇ ಕೇಂದ್ರ ಸರಕಾರದ ವಿರುದ್ಧ ಬರೆಯುವ ಪತ್ರಿಕೆಗಳಿಗೆಲ್ಲಾ ಈ ಅಕ್ರಮ ಬಂಧನಗಳು ಮೋದಿ ಸರಕಾರ ಕೊಟ್ಟ ಎಚ್ಚರಿಕೆಯ ಗಂಟೆಯಾಗಿತ್ತು.
ಸುಪ್ರೀಂ ಕೋರ್ಟ್ ಆದೇಶವೇನು?
‘ಭಯೋತ್ಪಾದಕ ನಿಗ್ರಹ ಕಾನೂನು (ಯುಎಪಿಎ) ಅಡಿಯಲ್ಲಿ ಪ್ರಬೀರ್ ಪುರಕಾಯಸ್ಥರವರನ್ನು ಬಂಧಿಸಿರುವುದೇ ಅಸಿಂಧು’ ಎಂದು ಸುಪ್ರೀಂ ಕೋರ್ಟ್ ಮೇ 15 ರಂದು ಘೋಷಿಸಿ ತಕ್ಷಣ ಅವರನ್ನು ಕಸ್ಟಡಿಯಿಂದ ಬಿಡುಗಡೆ ಮಾಡಬೇಕೆಂದು ನ್ಯಾಯಾಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ಸಂದೀಪ್ ಮೆಹ್ತಾರವರ ನ್ಯಾಯಪೀಠ ಆದೇಶಿಸಿತು. ಆರೋಪಿಗೆ ಬಂಧನದ ಕಾರಣಗಳ ಕುರಿತ ಮಾಹಿತಿಯನ್ನೂ ಕೊಡದೆ ಇರುವುದನ್ನು ತರಾಟೆಗೆ ತೆಗೆದುಕೊಂಡಿತು. ಒಂಬತ್ತು ದಿನಗಳ ಹಿಂದಷ್ಟೇ ದೆಹಲಿಯ ಹೈಕೋರ್ಟ್ ಬಂಧನಕ್ಕೊಳಗಾಗಿದ್ದ ನ್ಯೂಸ್ ಕ್ಲಿಕ್ ನ ಅಮಿತ್ ಚಕ್ರವರ್ತಿಯವರನ್ನು ಬಂಧನದಿಂದ ಬಿಡುಗಡೆಗೊಳಿಸಲು ಆದೇಶಿಸಿದ್ದರೂ ಪುರಕಾಯಸ್ಥರವರ ನ್ಯಾಯಾಂಗ ಬಂಧನ ಮುಂದುವರೆದಿತ್ತು. ಆದರೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನ್ಯಾಯಯುತವಾದ ವಿವೇಚನಾ ಆದೇಶದಿಂದಾಗಿ ಬಿಡುಗಡೆ ಸಾಧ್ಯವಾಗಿದೆ. ಸರ್ವಾಧಿಕಾರಿಯ ಮಾಧ್ಯಮ ವಿರೋಧಿ ಮುಖವಾಡ ಬಯಲಾಗಿದೆ.
ಸಂಚುಕೋರ ತನಿಖಾ ಸಂಸ್ಥೆಗಳಿಗೆ ಪಾಠ ಕಲಿಸಬೇಕಿದೆ.
ಆಯ್ತು, ನ್ಯಾಯಾಲಯ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಹಾಗೂ ಅಕ್ರಮ ಬಂಧನದ ವಿರುದ್ಧವಾಗಿ ತೀರ್ಪು ಕೊಟ್ಟಿದ್ದು ನಿಜಕ್ಕೂ ಕಾನೂನಾತ್ಮಕ ಗೆಲುವಾಗಿದೆ. ಶಡ್ಯಂತ್ರಗಳ ಮೂಲಕ ಪತ್ರಿಕೆಗಳ ಧ್ವನಿಯನ್ನು ಅಡಗಿಸುವ ನೀಚ ಪ್ರಯತ್ನವನ್ನು ಮಾಡಿದ ಮೋದಿ ಸರಕಾರಕ್ಕೆ ಭಾರೀ ಮುಖಭಂಗವಾಗಿದೆ. ಆದರೆ ಕಳೆದ ಏಳು ತಿಂಗಳುಗಳಿಂದ ಅಕ್ರಮ ಬಂಧನಕ್ಕೊಳಗಾದ ಪ್ರಬೀರ್ ಪುರಕಾಯಸ್ಥ ಹಾಗೂ ಅಮಿತ್ ಚಕ್ರವರ್ತಿಯವರ ಮೇಲಾದ ಹಿಂಸೆಗೆ ಪರಿಹಾರ ಕೊಡುವವರು ಯಾರು? ಜನರ ಧ್ವನಿಯಾದ ಪತ್ರಿಕೆಯೊಂದರ ನಾಶದ ಹೊಣೆಯನ್ನು ಹೊರುವವರು ಯಾರು? ಬಂಧನವೇ ಅಕ್ರಮವೆಂದು ಸುಪ್ರೀಂ ಕೋರ್ಟ್ ಹೇಳಿದ್ದಕ್ಕೆ ಪೂರಕವಾಗಿ ಅಕ್ರಮ ಬಂಧನದ ಶಡ್ಯಂತ್ರವನ್ನು ರೂಪಿಸಿದವರನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಿ ಶಿಕ್ಷೆಗೆ ಗುರಿಪಡಿಸುವವರು ಯಾರು?
ಮೊದಲು, ಯಾವುದೋ ವರದಿಯನ್ನು ಆಧರಿಸಿ ಸತ್ಯಾಸತ್ಯತೆಯನ್ನು ಪರಿಶೀಲಿಸದೇ ‘ಭಯೋತ್ಪಾದಕ ನಿಗ್ರಹ ಕಾನೂನಿನ ಅಡಿಯಲ್ಲಿ ಸುಳ್ಳು ಕೇಸನ್ನು ದಾಖಲಿಸಿ ಅಕ್ರಮವಾಗಿ ಬಂಧಿಸಿದ್ದ ದೆಹಲಿಯ ಪೊಲೀಸರ ವಿಶೇಷ ಸೆಲ್ ಅಧಿಕಾರಿಗಳ ಮೇಲೆ ಕೇಸು ದಾಖಲಿಸಿ ಅಮಾನತ್ತು ಗೊಳಿಸಿ ವಿಚಾರಣೆ ನಡೆಸಿ ಶಿಕ್ಷೆಗೆ ಒಳಪಡಿಸುವ ಕೆಲಸವನ್ನು ನ್ಯಾಯಾಲಯ ಮಾಡಬೇಕಿದೆ. ಈ ಪ್ರಕರಣದಲ್ಲಿ ಕೇಂದ್ರ ಸರಕಾರದ ಎಲ್ಲಾ ತನಿಖಾ ಸಂಸ್ಥೆಗಳ ಅಧಿಕಾರಿಗಳ ಭಾಗೀದಾರಿಕೆಯನ್ನೂ ಪ್ರಶ್ನಿಸಿ ಮಾಧ್ಯಮಗಳ ಮೇಲಾದ ದಮನದ ವಿರುದ್ಧ ನ್ಯಾಯಾಲಯ ವಿಚಾರಣೆ ನಡೆಸಬೇಕಾಗಿದೆ. ಯಾರ ಆದೇಶದ ಮೇಲೆ ಮಾಧ್ಯಮ ಕಚೇರಿಯ ಮೇಲೆ ದಾಳಿ ಮಾಡಿದೆ ಎಂಬುದನ್ನು ನ್ಯಾಯಾಂಗ ತನಿಖೆಗೆ ಅಳವಡಿಸಿ ಕೇಂದ್ರ ಗೃಹ ಸಚಿವಾಲಯದ ಸಚಿವರನ್ನೇ ವಿಚಾರಣೆಗೆ ಒಳಪಡಿಸ ಬೇಕಿದೆ.
ಇಲ್ಲದೇ ಹೋದರೆ ಈ ಕೇಂದ್ರ ಸರಕಾರದ ಕೈಗೊಂಬೆ ಸಂಸ್ಥೆಗಳು ಯಾರನ್ನು ಬೇಕಾದರೂ ಬಂಧಿಸಿ, ಸುಳ್ಳು ಕೇಸುಗಳನ್ನು ದಾಖಲಿಸಿ ಹೆದರಿಸುವ ಹಾಗೂ ಅಕ್ರಮವಾಗಿ ಬಂಧಿಸುವ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ. ಕಾನೂನು ವಿರೋಧಿ ಕೆಲಸಗಳನ್ನು ಸರಕಾರವೇ ಮಾಡಲಿ ಇಲ್ಲವೇ ಸರಕಾರಿ ಸಂಸ್ಥೆಗಳೇ ಮಾಡಲಿ ಅವರೆಲ್ಲರೂ ಶಿಕ್ಷಾರ್ಹರು. ಪತ್ರಿಕಾ ಸ್ವಾತಂತ್ರ್ಯದ ಘನತೆಯನ್ನು ಉಳಿಸಲಾದರೂ ಪ್ರಬೀರ್ ಪುರಕಾಯಸ್ಥರಾದರೂ ತಮ್ಮ ಅಕ್ರಮ ಬಂಧನಕ್ಕೆ ಕಾರಣರಾದ ಎಲ್ಲಾ ಅಧಿಕಾರಿಗಳು, ಸರಕಾರಿ ಸಂಸ್ಥೆಗಳು, ಕೇಂದ್ರ ಗೃಹ ಸಚಿವಾಲಯ ಹಾಗೂ ಸರ್ವಾಧಿಕಾರಿ ಪ್ರಧಾನಿಗಳ ಮೇಲೆಯೇ ದೂರು ದಾಖಲಿಸಿ ನ್ಯಾಯಾಲಯದ ವಿಚಾರಣೆಗೆ ಒಳಪಡಿಸಲು ಪ್ರಯತ್ನಿಸುವುದು ಮಾಧ್ಯಮ ಸ್ವಾತಂತ್ರ್ಯದ ಹಿತದೃಷ್ಟಿಯಿಂದ ಒಳ್ಳೆಯದು. ಸರ್ವಾಧಿಕಾರಿಗೆ ಪಾಠ ಕಲಿಸಲು ಇದೊಂದು ಉತ್ತಮ ಅವಕಾಶ.
ಗೋದಿ ಮಾಧ್ಯಮಗಳ ಜಾಣ ಮೌನ
ಸುಪ್ರೀಂ ಕೋರ್ಟ್ ಪತ್ರಿಕಾ ಸ್ವಾತಂತ್ರ್ಯದ ಪರವಾಗಿ ಆದೇಶ ನೀಡಿದ್ದರೂ, ಮಾಧ್ಯಮದ ವಿರುದ್ಧ ಸರಕಾರದ ಅಕ್ರಮ ಬಂಧನ ಹಾಗೂ ಪ್ರಭುತ್ವದ ದಮನವನ್ನು ವಿರೋಧಿಸಿ ನ್ಯಾಯಾಧೀಶರು ಐತಿಹಾಸಿಕ ತೀರ್ಪನ್ನು ಕೊಟ್ಟಿದ್ದರೂ ಮೋದಿ ಮಡಿಲ ಮಾಧ್ಯಮಗಳು ಮಾತ್ರ ಜಾಣ ಮೌನಕ್ಕೆ ಶರಣಾಗಿವೆ. ತೀರ್ಪಿನ ಕುರಿತು ಡಿಬೇಟ್ ಗಳಿಲ್ಲ, 24/7 ಬ್ರೇಕಿಂಗ್ ನ್ಯೂಸ್ ಗಳಿಲ್ಲ, ಕವರ್ ಸ್ಟೋರಿಗಳಿಲ್ಲ. ಸರ್ವಾಧಿಕಾರಿ ಪ್ರಭುತ್ವಕ್ಕಾದ ಮುಖಭಂಗ ಮಾರಿಕೊಂಡ ಮಾಧ್ಯಮಗಳಿಗೆ ಬ್ರೇಕಿಂಗ್ ನ್ಯೂಸ್ ಆಗಲು ಸಾಧ್ಯವೂ ಇಲ್ಲ. ಸಾಮಾಜಿಕ ಜಾಲ ತಾಣಗಳ ದಿಟ್ಟ ಮಾಧ್ಯಮಗಳು ಪುರಕಾಯಸ್ಥರ ಬಿಡುಗಡೆಯನ್ನು ಸ್ವಾಗತಿಸಿವೆ. ನ್ಯಾಯಾಲಯದ ನ್ಯಾಯಪರ ಅದೇಶವನ್ನು ಸಂಭ್ರಮಿಸಿವೆ ಹಾಗೂ ಸರ್ವಾಧಿಕಾರಿ ಸರ್ಕಾರದ ಅಸಾಂವಿಧಾನಿಕ ನಡೆಯನ್ನೂ ವಿಮರ್ಶಿಸಿವೆ. ಈಗ ಸರ್ವಾಧಿಕಾರಿ ಪ್ರಭುತ್ವದ ಮಾಧ್ಯಮ ವಿರೋಧಿ ಆಕ್ರಮಣಕಾರಿ ನಿಲುವನ್ನು ವಿರೋಧಿಸಿ ಜನಪರ ಮಾಧ್ಯಮಗಳೆಲ್ಲವೂ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕಿದೆ. ನ್ಯೂಸ್ ಕ್ಲಿಕ್ ಮಾಧ್ಯಮದ ಮೇಲಿನ ದಾಳಿ ಹಾಗೂ ಪತ್ರಕರ್ತರ ಅಕ್ರಮ ಬಂಧನ ಮಾಡಿದವರ ಹಾಗೂ ಅದಕ್ಕಾಗಿ ಆದೇಶಿಸಿದವರ ವಿರುದ್ಧ ನ್ಯಾಯಾಂಗ ವಿಚಾರಣೆ ಮಾಡಬೇಕೆಂದು ಆಗ್ರಹಿಸಬೇಕಿದೆ.
ಶಶಿಕಾಂತ ಯಡಹಳ್ಳಿ
ಪತ್ರಕರ್ತರು, ರಾಜಕೀಯ ವಿಶ್ಲೇಷಕರು.