ನವದೆಹಲಿ: ದೇಶದ ವಿವಿಧ ಹೈಕೋರ್ಟ್ ಗಳಲ್ಲಿ ಸುಮಾರು 7 ಲಕ್ಷ ಕ್ರಿಮಿನಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇದ್ದು, ನೇಮಕಗೊಂಡ ಹೈಕೋರ್ಟ್ ನ್ಯಾಯಮೂರ್ತಿಗಳ ಹೆಸರುಗಳನ್ನು ಕೇಂದ್ರ ಸರ್ಕಾರವು ಆದಷ್ಟೂ ಬೇಗನೆ ಅಂತಿಮಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ನ್ಯಾಯಮೂರ್ತಿಗಳಾದ ಅಭಯ್ ಎಸ್. ಒಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಈ ನಿರ್ದೇಶನ ನೀಡಿದೆ.
ಅಲಹಾಬಾದ್ ನ್ಯಾಯಾಲಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪ್ರಕರಣಗಳು ಬಾಕಿ ಇವೆ. ಇಲ್ಲಿಗೆ 160 ನ್ಯಾಯಮೂರ್ತಿಗಳ ಮಂಜೂರಾತಿ ಇದ್ದು, ಸದ್ಯ 79 ನ್ಯಾಯಮೂರ್ತಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಸಂಗತಿಯನ್ನು ಗಮನಕ್ಕೆ ತಂದಿದೆ.
ಕೊಲಿಜಿಯಂ ಶಿಫಾರಸುಗಳನ್ನು ತ್ವರಿತವಾಗಿ ಅಂತಿಮಗೊಳಿಸುವ ಖಾತ್ರಿಯನ್ನು ಕೇಂದ್ರ ಸರ್ಕಾರ ನೀಡಬೇಕು. ಬಾಕಿ ಇರುವ ಶಿಫಾರಸುಗಳ ಪಟ್ಟಿಯನ್ನು ಕೇಂದ್ರ ಸರ್ಕಾರವು ಬೇಗನೆ ಅಂತಿಮಗೊಳಿಸಲಿದೆ ಎಂಬ ನಂಬಿಕೆ ಮತ್ತು ಭರವಸೆ ಮನಗಿದೆ ಎಂದು ಪೀಠ ತಿಳಿಸಿದೆ.
ಹೈಕೋರ್ಟ್‌ಗಳ ನ್ಯಾಯಮೂರ್ತಿಗಳ ನೇಮಕಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡಿದ ಹೆಸರುಗಳನ್ನು ನ್ಯಾಯಾಲಯದ ಅಂತರ್ಜಾಲ ಪುಟದಲ್ಲಿ ಪ್ರಕಟಿಸಿದೆ. ಇಂತಹ ಹಲವು ಶಿಫಾರಸುಗಳು ಕೇಂದ್ರದ ಮುಂದಿದ್ದು, ಇನ್ನೂ ಅಂತಿಮಗೊಳಿಸಿಲ್ಲ.
2023ರಲ್ಲಿ ನಾಲ್ಕು ಶಿಫಾರಸುಗಳು, 2024ರಲ್ಲಿ 13 ಶಿಫಾರಸುಗಳು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಕಳುಹಿಸಿತ್ತು. ಆದರೆ ಈವರೆಗೂ ಅವು ಅಂತಿಮಗೊಂಡಿಲ್ಲ. 2024ರ ಸೆ. 24ರಂದು ಕಳುಹಿಸಿದ ಶಿಫಾರಸು ಕೂಡಾ ಕೇಂದ್ರದ ಮುಂದೆ ಬಾಕಿ ಉಳಿದಿದೆ ಎಂದು ತಿಳಿದು ಬಂದಿದೆ.
ಯಾವ ಹೈಕೋರ್ಟ್? ಎಷ್ಟು ಹುದ್ದೆ ಖಾಲಿ?
ಬಾಂಬೆ ಹೈಕೋರ್ಟ್ ನಲ್ಲಿ ಮಂಜೂರಾದ ಹುದ್ದೆಗಳು 94; ಹಾಲಿ ಇರುವ ನ್ಯಾಯಮೂರ್ತಿಗಳ ಸಂಖ್ಯೆ 66
ಕಲ್ಕತ್ತ ಹೈಕೋರ್ಟ್ ನ ನ್ಯಾಯಮೂರ್ತಿಗಳ ಸಂಖ್ಯೆ 72; ಹಾಲಿ ಇರುವುದು 44
ದೆಹಲಿ ಹೈಕೋರ್ಟ್ ಗೆ ಬೇಕಿರುವುದು 60 ನ್ಯಾಯಮೂರ್ತಿಗಳು; ಹಾಲಿ ಇರುವುದು 41