ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರು ಪ್ರಕರಣವೊಂದರ ವಿಚಾರಣೆ ವೇಳೆ ಬೆಂಗಳೂರಿನ ಗೋರಿಪಾಳ್ಯವನ್ನು ‘ಪಾಕಿಸ್ತಾನ’ಕ್ಕೆ ಹೋಲಿಸಿದ್ದಾರೆ ಎಂಬ ಆರೋಪದ ಸಂಬಂಧ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿದೆ. ಸುಪ್ರೀಂಕೋರ್ಟ್ ನ್ಯಾಯಪೀಠ ಸದ್ಯ ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ರಿಂದ ವರದಿ ಕೇಳಿದೆ.
ಕರ್ನಾಟಕ ಹೈಕೋರ್ಟ್ ನ್ಯಾಯಶಧೀಶರ ಹೇಳಿಕೆ ಕುರಿತ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸದ್ಯ ಎರಡು ವಾರ ಕಾಲ ಮುಂದೂಡಿಕೆ ಮಾಡಿದೆ. ಈ ಕುರಿತು ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ರಿಂದ ವರದಿ ಕೇಳಿದೆ. ಇದಲ್ಲದೇ ಅಟಾರ್ನಿ ಜನರಲ್ ಹಾಗೂ ಸಾಲಿಸಿಟರ್ ಜನರಲ್ ಅಭಿಪ್ರಾಯ ಕೇಳಿದೆ.
ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾ. ಸಂಜೀವ್ ಖನ್ನಾ, ನ್ಯಾ. ಬಿ ಆರ್ ಗವಾಯಿ, ನ್ಯಾ. ಸೂರ್ಯಕಾಂತ್ ಮತ್ತು ನ್ಯಾ. ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಪೀಠವು ಇಂದು ಬೆಳಿಗ್ಗೆ ಕಲೆತು ಈ ಕುರಿತು ಆದೇಶ ಹೊರಡಿಸಿತು. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಮಾತನಾಡಿ, “ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರೊಬ್ಬರು ನೀಡಿರುವ ಅನವಶ್ಯಕ ಹೇಳಿಕೆ ಇರುವ ವಿಡಿಯೋ ಒಂದು ಹರಿದಾಡುತ್ತಿದೆ. ಇದರ ಕುರಿತು ಚರ್ಚಿಸಲು ನಾವಿಲ್ಲಿ ಸೇರಿದ್ದೇವೆ. ಇದರ ಹಿನ್ನೆಲೆಯಲ್ಲಿ ನಾವೊಂದು ಎಲ್ಲರಿಗೂ ಅನ್ವಯವಾಗುವ ಮಾರ್ಗಸೂಚಿಗಳನ್ನು ಮಾಡಬೇಕಾಗಬಹುದು. ಸಾಮಾಜಿಕ ಮಾಧ್ಯಮದ ಇಂದಿನ ಕಾಲಘಟ್ಟದಲ್ಲಿ ನಮ್ಮನ್ನು ಹತ್ತಿರದಿಂದ ಗಮನಿಸಲಾಗುತ್ತದೆ. ಹೀಗಾಗಿ ಎಚ್ಚರದಿಂದ ವರ್ತಿಸಬೇಕಾಗುತ್ತದೆ” ಎಂದು ತಿಳಿಸಿದರು.
ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ವಿ ಶ್ರೀಶಾನಂದ ಅವರು ವಿಚಾರಣೆಯೊಂದರ ವೇಳೆ ಮೈಸೂರು ರಸ್ತೆ ಮೇಲ್ಸೇತುವೆ ಬಳಿ ಹೋಗಿ ನೋಡಿ, ಪ್ರತಿ ಆಟೊ ರಿಕ್ಷಾದಲ್ಲಿ 10 ಮಂದಿ ಇರುತ್ತಾರೆ. ಅಲ್ಲಿ ಯಾವುದೂ ಅನ್ವಯವಾಗುವುದಿಲ್ಲ. ಯಾಕೆಂದರೆ ಕೆಆರ್ ಮಾರುಕಟ್ಟೆ ಮತ್ತು ಗೋರಿಪಾಳ್ಯವರೆಗೆ ಮೈಸೂರು ರೋಡ್ ಫ್ಲೈಓವರ್ ಪಾಕಿಸ್ತಾನದಲ್ಲಿದೆ, ಭಾರತದಲ್ಲಿಲ್ಲ. ಇದು ವಾಸ್ತವ ಎಂದು ಹೇಳಿದ್ದರು. ಈ ಹೇಳಿಕೆ ಕುರಿತ ವಿಡಿಯೋ ತುಣುಕೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ವೈರಲ್ ಆದ ಇನ್ನೊಂದು ವಿಡಿಯೋದಲ್ಲಿ ಇದೇ ನ್ಯಾಯಮೂರ್ತಿ ವಿ ಶ್ರೀಶಾನಂದ ಅವರು ಮಹಿಳಾ ವಕೀಲೆ ಒಬ್ಬರೊಂದಿಗೆ ಕೀಳುಮಟ್ಟದಲ್ಲಿ ಮಾತನಾಡಿದ್ದರು. ಅವರು ಮಾತನಾಡುತ್ತಾ ಈ ಹೆಂಗಸಿಗೆ (ಮಹಿಳಾ ವಕೀಲರಿಗೆ) ವಿರೋಧಿ ಕಕ್ಷಿದಾರರ ಒಳಉಡುಪಿನ ಬಗ್ಗೆಯೂ ತಿಳಿದಿರುವಂತಿದೆ ಎಂದಿದ್ದರು. ಈ ವಿಡಿಯೋ ರಾಷ್ಟ್ರದಾದ್ಯಂತ ಹರಿದಾಡಿದ್ದು ವ್ಯಾಪಕ ಖಂಡನೆ ವ್ಯಕ್ತವಾಗಿದೆ.