ಉನ್ನಾವೊ ಅತ್ಯಾಚಾರ ಪ್ರಕರಣ: ಸೆಂಗಾರ್‌ ಗೆ ನೀಡಿದ್ದ ಜಾಮೀನು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ

Most read

ನವದೆಹಲಿ: ಉನ್ನಾವೋ ಅತ್ಯಾಚಾರ ಪ್ರಕರಣದ ಅ‍ಪರಾಧಿ ಮಾಜಿ ಬಿಜೆಪಿ ಕುಲದೀಪ್‌ ಸೆಂಗಾರ್‌ ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಷರತ್ತುಬದ್ಧ ಜಾಮೀನು ನೀಡಿದ್ದ ದೆಹಲಿ ಹೈಕೋರ್ಟ್ ಆದೇಶಕ್ಕೆ ಇಂದು ತಡೆ ನೀಡಿದೆ. ಈ ಪ್ರಕರಣ ಆರಂಭದಿಂದಲೂ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿತ್ತು. ಇತ್ತೀಚೆಗೆ ಸೆಂಗಾರ್‌ ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್‌ ಅಮಾನತುಗೊಳಿಸಿತ್ತು. ನಂತರವಂತೂ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ, ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಹೈಕೋರ್ಟ್ ಆದೇಶದ ವಿರುದ್ಧ ಸಿಬಿಐ ಸಲ್ಲಿಸಿದ ಮೇಲ್ಮನವಿಗೆ ಸಂಬಂಧಿಸಿದಂತೆ ಸೆಂಗಾರ್‌ಗೆ ನೋಟಿಸ್‌ ಜಾರಿ ಮಾಡಿದೆ. ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಕೇಂದ್ರ ತನಿಖಾ ದಳ (ಸಿಬಿಐ) ಹಾಗೂ ವಕೀಲರಾದ ಅಂಜಲಿ ಪಟೇಲ್, ಪೂಜಾ ಶಿಲ್ಪಕರ್ ಅವರು ಸುಪ್ರೀಂ ಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಸಿಬಿಐ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಿದರು. ಅವರು ಇದೊಂದು ಪೋಕ್ಸೋ ಪ್ರಕರಣವಾಗಿದ್ದು, ಆರೋಪಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಅಮಾನತುಗೊಳಿಸಬಾರದು ಎಂದು ವಾದ ಮಂಡಿಸಿದರು.

2017ರಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ದೆಹಲಿಯ ವಿಚಾರಣಾ ನ್ಯಾಯಾಲಯವು 2019ರಲ್ಲಿ ಸೆಂಗಾರ್‌ ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ತಮಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಸೆಂಗರ್ ದೆಹಲಿ ಹೈಕೋರ್ಟ್‌ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಡಿಸೆಂಬರ್‌ 23ರಂದು ಇದರ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌, ಅರ್ಜಿ ಇತ್ಯರ್ಥವಾಗುವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿ ಇರಿಸಿ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆ ಅಮಾನತುಗೊಂಡಿದ್ದರೂ ಸಂತ್ರಸ್ತೆಯ ತಂದೆ ಪೊಲೀಸ್ ಕಸ್ಟಡಿ ಸಾವು ಪ್ರಕರಣದಲ್ಲಿ ಸೆಂಗಾರ್‌‌ ಗೆ 10 ವರ್ಷಗಳ ಶಿಕ್ಷೆಯಾಗಿದ್ದು, ಅವರು ಜೈಲಿನಲ್ಲಿಯೇ ಇರುತ್ತಾರೆ ಎಂದೂ ಆದೇಶಿಸಿತ್ತು.

ಸೆಂಗಾರ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿರುವುದನ್ನು ಖಂಡಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು.  

More articles

Latest article