ನವದೆಹಲಿ: ಸ್ತನಗಳನ್ನು ಹಿಡಿದುಕೊಳ್ಳುವುದು, ಪೈಜಾಮಾದ ಲಾಡಿಯನ್ನು ತುಂಡು ಮಾಡುವುದು ಅತ್ಯಾಚಾರ ಅಥವಾ ಅತ್ಯಾಚಾರ ಯತ್ನದ ಅಪರಾಧ ಆಗುವುದಿಲ್ಲ ಎಂದು ತೀರ್ಪು ನೀಡಿರುವ ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದು ಕೇಂದ್ರ ಸಚಿವೆ ಅನ್ನಪೂರ್ಣ ದೇವಿ ಅವರು ಒತ್ತಾಯಿಸಿದ್ದಾರೆ.
ಸಂಸತ್ ಭವನದ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. ನಾಗರಿಕ ಸಮಾಜದಲ್ಲಿ ಇಂಥ ತೀರ್ಪಿಗೆ ಜಾಗವಿಲ್ಲ. ಇಂತಹ ತೀರ್ಪಿನಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ಸಮಾಜದಲ್ಲಿ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
2021ರಲ್ಲಿ 11 ವರ್ಷದ ಬಾಲಕಿಯ ಮೇಲೆ ಇಬ್ಬರು ದಾಳಿ ನಡೆಸಿದ್ದರು. ಆದರೆ ಆರೋಪಿಗಳು ಸಂತ್ರಸ್ತೆಯ ಮೇಲೆ ಅತ್ಯಾಚಾರ ಎಸಗುವ ತೀರ್ಮಾನ ಮಾಡಿದ್ದರು ಎಂಬುದನ್ನು ಸೂಚಿಸುವ ಯಾವುದೇ ಅಂಶಗಳು ಇಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ರಾಮಮನೋಹರ್ ನಾರಾಯಣ ಮಿಶ್ರಾ ಅವರು ತೀರ್ಪು ನೀಡಿದ್ದರು.
ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲೀವಾಲ್ ಪ್ರತಿಕ್ರಿಯಿಸಿ ಅಲಹಾಬಾದ್ ಹೈಕೋರ್ಟ್ ತೀರ್ಪು ನಾಚಿಕೆಗೇಡಿನದ್ದಾಗಿದೆ ಮತ್ತು ಅದನ್ನು ಒಪ್ಪಲು ಸಾಧ್ಯವೇ ಇಲ್ಲ. ಅವರು ಸಮಾಜಕ್ಕೆ ಯಾವ ಸಂದೇಶ ನೀಡುತ್ತಿದ್ದಾರೆ? ಬಾಲಕಿಯೊಬ್ಬಳು ಭೀಕರ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಆದರೂ ಅದನ್ನು ಅತ್ಯಾಚಾರ ಎಂದು ಪರಿಗಣಿಸುವುದಿಲ್ಲ ಎಂದರೆ ಏನರ್ಥ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.