ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಮತ್ತು ಸಂವಿಧಾನ ತಜ್ಞ ಫಾಲಿ ಎಸ್. ನಾರಿಮನ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಭಾರತ ಸರ್ಕಾರವು ನಾರಿಮನ್ ಅವರಿಗೆ 1991 ರಲ್ಲಿ ಪದ್ಮಭೂಷಣ ಮತ್ತು 2007ರಲ್ಲಿ ಪದ್ಮ ವಿಭೂಷಣವನ್ನು ನೀಡಿ ಗೌರವಿಸಿತ್ತು. ನಾರಿಮನ್ ಅವರು ಜನವರಿ 10, 1929 ರಂದು ಮ್ಯಾನ್ಮಾರ್‌ನಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು . ತಮ್ಮ ಕಾನೂನು ಅಭ್ಯಾಸವನ್ನು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಾರಂಭಿಸಿದರು. 1950 ರಲ್ಲಿ ವಕೀಲ ವೃತ್ತಿಯನ್ನು ಆರಂಭ ಮಾಡಿದ ಅವರು, 1971 ರಿಂದ ಸುಪ್ರೀಂ ಕೋರ್ಟ್ ವಕೀಲರಾಗಿದ್ದರು. 1999-2005ರ ಅವಧಿಯಲ್ಲಿ ರಾಜ್ಯಸಭಾ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ʼಫಾಲಿ ನಾರಿಮನ್ ಜಿ ಅವರು ಸಾಮಾನ್ಯ ನಾಗರಿಕರಿಗೆ ನ್ಯಾಯ ಸಿಗುವಂತೆ ಮಾಡಲು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಅವರ ಅಗಲಿಕೆಯಿಂದ ನನಗೆ ನೋವಾಗಿದೆʼ ಎಂದು ಪ್ರಧಾನಿ ನರೇಂದ್ರ ಮೋದಿ ʼಎಕ್ಸ್ʼನಲ್ಲಿ ಪೋಸ್ಟ್ ಮಾಡಿದ್ದಾರೆ.
50 ವರ್ಷಗಳ ನನ್ನ ಸ್ನೇಹಿತ, ಖ್ಯಾತ ನ್ಯಾಯಶಾಸ್ತ್ರಜ್ಞ, ಫಾಲಿ ನಾರಿಮನ್ ಅವರು ನಿಧನರಾಗಿದ್ದಾರೆ ಎಂದು ನಾನು ತುಂಬಾ ದುಃಖಿತನಾಗಿದ್ದೇನೆʼ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.
ʼನಾರಿಮನ್ ಅವರು ವಾದಿಸಿರುವ ಪ್ರಕರಣಗಳು ಐತಿಹಾಸಿಕವಾಗಿವೆ. ಜೊತೆಗೆ ನಮ್ಮ ಸಂವಿಧಾನದ ಪಾವಿತ್ರ್ಯತೆ ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ಎತ್ತಿಹಿಡಿಯಲು ನಾರಿಮನ್ ಅವರು ಇಂದಿನ ಪೀಳಿಗೆಗೆ ಸ್ಫೂರ್ತಿʼ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ʼಖ್ಯಾತ ನ್ಯಾಯಶಾಸ್ತ್ರಜ್ಞ, ಹಿರಿಯ ವಕೀಲ ಮತ್ತು ಸಾಂವಿಧಾನಿಕ ನಾಗರಿಕ ಸ್ವಾತಂತ್ರ್ಯಗಳ ಉಗ್ರ ಪ್ರತಿಪಾದಕ ಫಾಲಿ ಎಸ್ ನಾರಿಮನ್ ಅವರ ನಿಧನವು ಕಾನೂನು ವ್ಯವಸ್ಥೆಗೆ ದೊಡ್ಡ ನಷ್ಟವಾಗಿದೆʼ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸಂತಾಪ ಸೂಚಿಸಿದ್ದಾರೆ.