ಧಾರ್ಮಿಕ ಸ್ಥಳ ಸಮೀಕ್ಷೆ ಸ್ಥಗಿತಗೊಳಿಸುವಂತೆ ಕೋರಿ ಸುಪ್ರೀಂಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಕೆ

Most read

ನವದೆಹಲಿ: ಧಾರ್ಮಿಕ ಸ್ಥಳಗಳಲ್ಲಿ ಸಮೀಕ್ಷೆ ನಡೆಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಗಣಿಸದಂತೆ ಮತ್ತು ಈಗಾಗಲೇ ನಡೆಯುತ್ತಿರುವ ಸಮೀಕ್ಷೆಗಳನ್ನು ನಿಲ್ಲಿಸುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.

ಒಂದು ಧರ್ಮದ ಧಾರ್ಮಿಕ ಸ್ಥಳ ತಮಗೆ ಸೇರಿದ್ದು ಎಂದು ಇನ್ನೊಂದು ಧರ್ಮದ ಅನುಯಾಯಿಗಳು ಅರ್ಜಿ ಹಾಕಿದಾಗ ಸಮೀಕ್ಷೆಗೆ ಆದೇಶಿಸಬಾರದು. ಆದ್ದರಿಂದ 1991ರ ಆರಾಧನಾ ಸ್ಥಳಗಳ ಕಾಯ್ದೆ ನಿಯಮಗಳನ್ನು ಪಾಲಿಸುವಂತೆ ಕೆಳ ನ್ಯಾಯಾಲಯಗಳಿಗೆ ನಿರ್ದೇಶನ ನೀಡಬೇಕು. ಸಮೀಕ್ಷೆ ನಡೆಸುವಂತೆ ನ್ಯಾಯಾಲಯಗಳು ನೀಡಿರುವ ಆದೇಶಗಳನ್ನು ಕಾರ್ಯಗತಗೊಳಿಸದಂತೆ ಸರ್ಕಾರಗಳಿಗೆ ಸೂಚಿಸಬೇಕು ಎಂದು ಅಲೋಕ್ ಶರ್ಮಾ ಮತ್ತು ಪ್ರಿಯಾ ಮಿಶ್ರಾ ಎಂಬವರು ಅರ್ಜಿ ಸಲ್ಲಿಸಿದ್ದಾರೆ.
ಹೈಕೋರ್ಟ್, ವಿಚಾರಣಾ ನ್ಯಾಯಾಲಯಗಳು ಸೇರಿದಂತೆ ಕೆಳ ಹಂತದ ನ್ಯಾಯಾಲಯಗಳು 1991ರ ಆರಾಧನಾ ಸ್ಥಳಗಳ ಕಾಯ್ದೆಯನ್ನು ಅನುಸರಿಸುವಂತೆ ಮತ್ತು ಸಮೀಕ್ಷೆಗೆ ಆದೇಶ ನೀಡದಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಶಾಂತಿ, ಸೌಹಾರ್ದತೆಯನ್ನು ಕಾಪಾಡುವಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಬೇಕು. ಸಿವಿಲ್ ನ್ಯಾಯಾಲಯಗಳು ಸಮೀಕ್ಷೆಗೆ ಆದೇಶಿಸಿದ ತಕ್ಷಣ ತರಾತುರಿ ಮಾಡದೆ, ಪ್ರಕರಣ ಸಂಬಂಧ ಹೈಕೋರ್ಟ್, ಸುಪ್ರೀಂ ಕೋರ್ಟ್ಗೆ ಹೋಗಲು ಸಮಯ ನೀಡುವಂತೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈದ್ಗಾ ಮಸೀದಿ ಮತ್ತು ಜ್ಞಾನವಾಪಿಗೆ ಸಂಬಂಧಿಸಿದ ಪ್ರಕರಣಗಳು ದೇಶದ ಕೋಮು ವಾತಾವರಣವನ್ನು ಹಾಳು ಮಾಡುತ್ತಿದ್ದು ಮಥುರಾ ಶ್ರೀಕೃಷ್ಣ ಜನ್ಮಭೂಮಿ-ಶಾಹೀ, ಅಜ್ಮೀರ್ ದರ್ಗಾ ಷರೀಫ್, ಭೋಜಶಾಲಾ,ಸಂಭಲ್ ಜಾಮಾ ಮಸೀದಿ ಸೇರಿದಂತೆ ಎಲ್ಲಾ ಪ್ರಕರಣಗಳಿಗೆ ಕಡಿವಾಣ ಹಾಕಲು ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. 1991ರ ಆರಾಧನಾ ಸ್ಥಳಗಳ ಕಾಯಿದೆಯು ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ ಹಾಗೆಯೇ ಧಾರ್ಮಿಕ ಸ್ಥಳ, ನಿರ್ಮಾಣಗಳು ಮುಂದುವರೆಯಬೇಕು. ಅದರ ಸ್ವರೂಪದಲ್ಲಿ ಬದಲಾವಣೆ ಮಾಡಬಾರದು ಎಂದು ಹೇಳುತ್ತದೆ. ಹೀಗಿರುವಾಗ, ಧಾರ್ಮಿಕ ಸ್ಥಳಗಳ ಹಕ್ಕು ಪ್ರತಿಪಾದಿಸಿ ಅರ್ಜಿ ಸಲ್ಲಿಸುವುದು. ಅದನ್ನು ಪರಿಗಣಿಸಿ ನ್ಯಾಯಾಲಯಗಳು ಸಮೀಕ್ಷೆಗೆ ಆದೇಶಿಸುವುದು ಸರಿಯಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.

More articles

Latest article