2023ರ ಕಾನೂನಿನ ಅಡಿ ಇಬ್ಬರು ನೂತನ ಚುನಾವಣಾ ಆಯುಕ್ತರ ನೇಮಕವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿಗಳನ್ನು ಸಲ್ಲಿಸಲಾಗಿದೆ. ಈ ಅರ್ಜಿಗಳ ವಿಚಾರಣೆಯನ್ನು ಮಾರ್ಚ್ 21ರಂದು ನಡೆಸಲು ಸರ್ವೋಚ್ಛ ನ್ಯಾಯಾಲಯ ಶುಕ್ರವಾರ ಸಮ್ಮತಿಸಿದೆ.
ಕೇಂದ್ರ ಚುನಾವಣಾ ಆಯೋಗದ ಆಯ್ಕೆ ಸಮಿತಿಯಿಂದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳನ್ನು (ಸಿಜೆಐ) ಕೈಬಿಡಲಾಗಿದೆ. ಇದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯು ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠದ ಮುಂದೆ ಬಂದಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕಾಸ್ ಸಿಂಗ್, ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಕೈಬಿಟ್ಟಿರುವ ಕಾರಣ ಚುನಾವಣಾ ಆಯುಕ್ತರ ನೇಮಕಾತಿಗೆ ತಡೆ ನೀಡಬೇಕೆಂದು ಕೋರಿದರು. ಆಗ ನ್ಯಾಯಮೂರ್ತಿ ಖನ್ನಾ, ”ಈ ವಿಷಯವು ಎರಡು ಸಂದರ್ಭಗಳಲ್ಲಿ ಎರಡೂ ಬಾರಿಯೂ ಬಂದಿತ್ತು. ಸಾಮಾನ್ಯವಾಗಿ ಮತ್ತು ಸಾಧಾರಣವಾಗಿ ಶಾಸಕಾಂಗಕ್ಕೆ ನಾವು ಮಧ್ಯಂತರ ಆದೇಶ ನೀಡುವುದಿಲ್ಲ” ಎಂದು ಹೇಳಿದರು.
ಆದರೆ, ”ಈ ನೇಮಕಾತಿಗಳಿಗೆ ತಡೆ ಕೋರಿ ಅರ್ಜಿ ಸಲ್ಲಿಸಿ, ನಂತರ ಅದನ್ನು ಪರಿಶೀಲಿಸಲಾಗುವುದು” ಎಂದು ಕಕ್ಷಿದಾರರ ಪರ ವಕೀಲರಿಗೆ ನ್ಯಾಯ ಪೀಠ ತಿಳಿಸಿತು. ಈ ವೇಳೆ, ಮತ್ತೊಬ್ಬ ವಕೀಲರು ಕೆಲವು ಸುರಕ್ಷಿತ ಕ್ರಮಗಳನ್ನು ಒದಗಿಸಬೇಕು ಎಂದು ಕೇಳಿದರು. ಈ ಸಂದರ್ಭದಲ್ಲಿ ನ್ಯಾಯ ಪೀಠವು, ಅರ್ಜಿ ಸಲ್ಲಿಸಲು ವಕೀಲರಿಗೆ ಸೂಚಿಸಿ, ಮೌಖಿಕ ಮನವಿಗಳನ್ನು ನ್ಯಾಯಾಲಯವು ಸ್ವೀಕರಿಸಲು ಸಾಧ್ಯವಿಲ್ಲ. ಆ ಅರ್ಜಿ ಬರಲಿ ಎಂದು ಸ್ಪಷ್ಟಪಡಿಸಿತು. ಮಾರ್ಚ್ 21ರಂದು ಮುಂದಿನ ವಿಚಾರಣೆಯನ್ನು ನಿಗದಿಪಡಿಸಿತು.
ನೂತನ ಚುನಾವಣಾ ಆಯುಕ್ತರ ನೇಮಕದ ಸಂಬಂಧ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಈ ಅರ್ಜಿಯನ್ನು ಸಲ್ಲಿಸಿದೆ. ಕೇಂದ್ರ ಚುನಾವಣಾ ಆಯೋಗದ ಆಯ್ಕೆ ಸಮಿತಿಯಲ್ಲಿ ಸಿಜೆಐ ಕಡ್ಡಾಯವಾಗಿ ಭಾಗವಹಿಸಬೇಕೆಂಬ ಈ ಹಿಂದಿನ ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ, ಇಬ್ಬರು ನೂತನ ಚುನಾವಣಾ ಆಯುಕ್ತರ ನೇಮಕ ಆಗಬೇಕು. ಆದರೆ, ಸಿಜೆಐ ಅವರನ್ನು ಕೈಬಿಟ್ಟು, ಪ್ರಧಾನಿಯಿಂದ ನಾಮನಿರ್ದೇಶನ ಮಾಡಲಾದ ಕ್ಯಾಬಿನೆಟ್ ಮಂತ್ರಿಯನ್ನು ಸೇರಿಸಿಕೊಳ್ಳಲಾಗಿದೆ. ಈ ಮೂಲಕ ಹಿಂದಿನ ಕಾನೂನನ್ನು ಮರುಸ್ಥಾಪಿಸಲಾಗಿದೆ. ಅಂದರೆ ಕಾರ್ಯಾಂಗದ ಆಯ್ಕೆಯು ಕಾನೂನಿನ ನಿಯಮವನ್ನು ದುರ್ಬಲಗೊಳಿಸುತ್ತದೆ ಮತ್ತು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಮುಖ್ಯ ಚುನಾವಣಾ ಆಯೋಗ ಮತ್ತು ಇತರ ಚುನಾವಣಾ ಆಯೋಗಗಳ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಚೇರಿಯ ಅವಧಿ) ಕಾಯ್ದೆ-2023ರ ಸೆಕ್ಷನ್ 7ರ ಅನುಷ್ಠಾನಕ್ಕೆ ತಡೆ ನೀಡಬೇಕು. ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಮಾತ್ರವಲ್ಲದೇ ವಿವಿಧ ರಾಜಕೀಯ ಪಕ್ಷಗಳ ನಡುವೆ ನಿರ್ಣಾಯಕ ಪಾತ್ರವನ್ನು ಸಹ ವಹಿಸುತ್ತದೆ. ಆದ್ದರಿಂದ ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕಾನೂನಿನ ನಿಯಮದ ಸರಿಯಾದ ಅನುಷ್ಠಾನಕ್ಕಾಗಿ ನ್ಯಾಯದ ಹಿತಾಸಕ್ತಿಯಿಂದ ತಡೆ ನೀಡಬಹುದು ಎಂದು ಅರ್ಜಿಯಲ್ಲಿ ಸೇರಿಸಲಾಗಿದೆ.
ದೇಶಾದ್ಯಂತ ಸಾರ್ವತ್ರಿಕ ಚುನಾವಣಾ ಸಿದ್ಧತೆಯ ಸಮಗ್ರ ಮೌಲ್ಯಮಾಪನವನ್ನು ಪೂರ್ಣಗೊಳಿಸಿದ ಭಾರತೀಯ ಚುನಾವಣಾ ಆಯೋಗ (ಇಸಿಐ) 2024 ರ ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ನಾಳೆ ಘೋಷಿಸಲು ಸಜ್ಜಾಗಿದೆ. ಈ ಘೋಷಣೆ ಮಾಡಲು ಇಸಿಐ ನವದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲು ನಿರ್ಧರಿಸಿದೆ.