ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮಹತ್ವದ ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲವು ಅಂಶಗಳಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ವಕ್ಫ್ (ತಿದ್ದುಪಡಿ) ಕಾಯ್ದೆ–2025ರ ಮೂರು ಪ್ರಮುಖ ವಿಚಾರಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ಇಂದು ಮಧ್ಯಂತರ ಆದೇಶ ಪ್ರಕಟಿಸಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ ಹಾಗೂ ನ್ಯಾಯಮೂರ್ತಿ ಎ.ಜಿ ಮನೀಶ್ ಅವರಿದ್ದ ಪೀಠ ಇಂದು ಕೆಲವು ಅಂಶಗಳಿಗೆ ತಡೆ ನೀಡಿ ಆದೇಶಿಸಿದೆ.
ಆಸ್ತಿಯನ್ನು ದಾನ ಅಥವಾ ವಕ್ಫ್ ಮಾಡಬೇಕಿದ್ದರೆ ವ್ಯಕ್ತಿಯೊಬ್ಬ ಇಸ್ಲಾಂ ಧರ್ಮವನ್ನು ಕನಿಷ್ಠ 5 ವರ್ಷಗಳಿಂದ ಅನುಸರಿಸುತ್ತಿರಬೇಕು ಎನ್ನುವ ಕಾಯ್ದೆಯ ಸೆಕ್ಷನ್ ಗೆ ತಡೆ ನೀಡಿದೆ.
ವಕ್ಫ್ ಬೋರ್ಡ್‌ನಲ್ಲಿ ಮುಸ್ಲಿಮೇತರರನ್ನು ಸದಸ್ಯರಾಗಿ ನೇಮಕ ಮಾಡುವುದಕ್ಕೆ ತಡೆ ನೀಡಲು ನಿರಾಕರಿಸಿದೆ. ಆದರೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಸ್ಲಿಂ ಧರ್ಮದವರೇ ಆಗಿರಬೇಕು ಎಂದು ಹೇಳಿದೆ. ಕೇಂದ್ರ ವಕ್ಫ್ ಕೌನ್ಸಿಲ್ ನಲ್ಲಿ 4 ಮಂದಿಗಿಂತ ಹೆಚ್ಚು ಮತ್ತು ರಾಜ್ಯ ವಕ್ಫ್ ಬೋರ್ಡ್‌ಗಳಲ್ಲಿ 3 ಮಂದಿಗಿಂತ ಹೆಚ್ಚು ಇರಬಾರದು ಎಂದು ಹೇಳಿದೆ
ಒಬ್ಬ ವ್ಯಕ್ತಿಯು 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಇಸ್ಲಾಂ ಧರ್ಮವನ್ನು ಆಚರಿಸುತ್ತಿದ್ದಾನೆಯೇ ಎಂಬುದನ್ನು ನಿರ್ಧರಿಸಲು ರಾಜ್ಯ ಸರ್ಕಾರಗಳು ನಿಯಮಗಳನ್ನು ರೂಪಿಸಬೇಕು. ಆಸ್ತಿ ಅತಿಕ್ರಮಣವಾಗಿದೆಯೇ ಎಂದು ನಿಯೋಜಿತ ಅಧಿಕಾರಿ ವರದಿ ಸಲ್ಲಿಸುವವರೆಗೆ ಆಸ್ತಿಯನ್ನು ವಕ್ಫ್ ಎಂದು ಪರಿಗಣಿಸಲಾಗದು ಎನ್ನುವ ಸೆಕ್ಷನ್ ಗೆ ಮತ್ತು ಒಂದು ವೇಳೆ ಆಸ್ತಿಯು ಸರ್ಕಾರಿ ಜಮೀನು ಎನ್ನುವುದನ್ನು ಈ ಅಧಿಕಾರಿ ನಿರ್ಧರಿಸಿದರೆ, ಈ ಬಗ್ಗೆ ಕಂದಾಯ ದಾಖಲೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎನ್ನುವ ಸೆಕ್ಷನ್ ಗೆ ತಡೆ ನೀಡಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕಡೆಗಳ ವಾದ ಆಲಿಸಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ನ್ಯಾಯಪೀಠವು ಮಧ್ಯಂತರ ಆದೇಶವನ್ನು ಕಾಯ್ದಿರಿಸಿತ್ತು. ವಕ್ಫ್ ಕಾಯ್ದೆ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಅರ್ಜಿದಾರರು ತಡೆಕೋರಿ ಸಲ್ಲಿಸಿದ್ದ ವಿಚಾರಕ್ಕೆ ಸಂಬಂಧಿಸಿ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದ್ದರು.
ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ವಕ್ಫ್ (ತಿದ್ದುಪಡಿ) ಕಾಯ್ದೆಯು ಏಪ್ರಿಲ್ 3 ಹಾಗೂ 4ರಂದು ಅಂಗೀಕಾರಗೊಂಡಿತ್ತು.