ನವದೆಹಲಿ: ಭಯೋತ್ಪಾದನೆ ವಿರುದ್ಧ ಭಾರತ ಸರ್ಕಾರ ಕೈಗೊಳ್ಳುವ ಎಲ್ಲ ನಿರ್ಧಾರ ಹಾಗೂ ಪ್ರತಿಕ್ರಿಯೆಗಳಿಗೆ ಬೆಂಬಲ ನೀಡುವುದಾಗಿ ಮುಸ್ಲಿಂ ಧರ್ಮಗುರು, ಭಾರತದ ಗ್ರ್ಯಾಂಡ್ ಮುಫ್ತಿ ಶೈಖ್ ಅಬೂಬಕರ್ ಅಹ್ಮದ್ ಶುಕ್ರವಾರ ಘೋಷಿಸಿದ್ದಾರೆ.
ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ದೇಶದ ಸಾರ್ವಭೌಮತ್ವ ಹಾಗೂ ಭದ್ರತೆಯನ್ನು ರಕ್ಷಿಸಲು ಸರ್ಕಾರದ ನಿಲುವು ಹಾಗೂ ಶಸಸ್ತ್ರ ಪಡೆಗಳ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಗ್ರವಾದವು ದೇಶದ ಭದ್ರತೆ ಹಾಗೂ ಜಾಗತಿಕ ಶಾಂತಿಗೆ ದೊಡ್ಡ ತೊಡಕು ಎಂದು ಅಭಿಪ್ರಾಯಪಟ್ಟಿರುವ ಅವರು ಭಾರತದ ಪೂರ್ವಭಾವಿ ಕ್ರಮಗಳು ಆಂತರಿಕ ಸಮಗ್ರತೆಗೆ ಮಾತ್ರವಲ್ಲದೆ ಅಂತರರಾಷ್ಟ್ರೀಯ ಸಾಮರಸ್ಯಕ್ಕೂ ನಿರ್ಣಾಯಕವಾಗಿವೆ ಎಂದು ತಿಳಿಸಿದ್ದಾರೆ.
ಭಾರತದ ಕಾರ್ಯತಂತ್ರದ ಮಧ್ಯಸ್ಥಿಕೆಗಳು ಮತ್ತು ರಾಜತಾಂತ್ರಿಕ ನಾಯಕತ್ವವು ಮೂಲಭೂತ ಸಿದ್ಧಾಂತಗಳನ್ನು ಎದುರಿಸುವಲ್ಲಿ ಹಾಗೂ ದಕ್ಷಿಣ ಏಷ್ಯಾದಲ್ಲಿ ಶಾಂತಿಯನ್ನು ನೆಲೆಸಲು ಪರಿವರ್ತನಾತ್ಮಕ ಪಾತ್ರವನ್ನು ವಹಿಸುತ್ತದೆ. ದೇಶದ ನಾಗರೀಕರು ಐಕ್ಯರಾಗಿರಬೇಕು ಎಂದು ಕರೆ ನೀಡಿದ ಶೈಖ್ ಅಬೂಬಕರ್, ಎಲ್ಲಾ ಧರ್ಮಗಳ ಗುರುಗಳು ಮತ್ತು ಸಾರ್ವಜನಿಕರು ರಾಷ್ಟ್ರೀಯ ಪ್ರಯತ್ನಗಳ ಹಿಂದೆ ನಿಲ್ಲಬೇಕೆಂದು ಒತ್ತಾಯಿಸಿದ್ದಾರೆ.
ನಾವೆಲ್ಲರೂ ವೈವಿಧ್ಯರು, ಆದರೆ ಸಾಮರಸ್ಯದ ರಾಷ್ಟ್ರವಾಗಿ ನಮ್ಮನ್ನು ಬಂಧಿಸುವ ಮೌಲ್ಯಗಳ ಪಾಲಕರಾಗಿ ವರ್ತಿಸಬೇಕು ಎಂದೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಗ್ರ್ಯಾಂಡ್ ಮುಫ್ತಿ ಆಫ್ ಇಂಡಿಯಾ ವೆಬ್‌ಸೈಟ್ ಪ್ರಕಾರ, ಶೈಖ್ ಅಬೂಬಕರ್ ಅವರು ಭಾರತದ 10ನೇ ಗ್ರ್ಯಾಂಡ್ ಮುಫ್ತಿಯಾಗಿದ್ದಾರೆ. ಈ ಹುದ್ದೆಗೇರಿದ ದಕ್ಷಿಣ ಭಾರತದ ಮೊದಲ ಶಾಫಿ ವಿದ್ವಾಂಸರೂ ಆಗಿದ್ದಾರೆ. ಅವರು ಅಖಿಲ ಭಾರತ ಮುಸ್ಲಿಂ ವಿದ್ವಾಂಸ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಜಾಮಿಯ ಮರ್ಕಜ್ ಸಖಾಫತು ಸುನ್ನಿಯಾದ ಉಪಕುಲಪತಿಯಾಗಿದ್ದಾರೆ ಎಂದು ತಿಳಿದು ಬಂದಿದೆ