ಬೆಂಗಳೂರು: ಬಿಸಿಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಹಾಗೂ ಕಿತ್ತೂರು ಕರ್ನಾಟಕದ 2 ಜಿಲ್ಲೆಗಳು ಸೇರಿದಂತೆ ಒಟ್ಟು 9 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಗಳ ಕೆಲಸದ ಅವಧಿಯನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರಿ ಕಚೇರಿಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಮಾತ್ರ ತೆರೆದಿರುತ್ತವೆ.
ಏಪ್ರಿಲ್ ಮತ್ತು ಮೇ ಈ ಎರಡು ತಿಂಗಳು ಅವಧಿಯಲ್ಲಿ ಸರ್ಕಾರಿ ಕಚೇರಿಗಳಿಗೆ ಬೆಳಗಿನ 8 ಗಂಟೆಯಿಂದ ಮಧ್ಯಾಹ್ನ 1.30 ಗಂಟೆಯವರೆಗೆ ಕೆಲಸದ ಅವಧಿ ನಿಗದಿ ಮಾಡಲಾಗಿದೆ. ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ಯಾದಗಿರಿ ಜಿಲ್ಲೆಗಳು ಹಾಗೂ ಕಿತ್ತೂರು ಕರ್ನಾಕದ (ಬೆಳಗಾವಿ ವಿಭಾಗ) ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲಿ ಈ ಬದಲಾವಣೆ ಅವಧಿ ಅನ್ವಯವಾಗಲಿದೆ.
ಕಳೆದ ಹಲವು ದಶಕಗಳಿಂದ ಬೇಸಿಗೆಯಲ್ಲಿ ಕಚೇರಿ ಸಮಯದಲ್ಲಿ ಬದಲಾವಣೆ ನಡೆದುಕೊಂಡೇ ಬಂದಿದೆ. ಕಳೆದ 2 ವರ್ಷಗಳಿಂದ ಚುನಾವಣೆ ಮತ್ತಿತರ ಕಾರಣಗಳಿಗಾಗಿ ಸರ್ಕಾರಿ ಕಚೇರಿ ಸಮಯದ ಬದಲಾವಣೆ ಮಾಡಿರಲಿಲ್ಲ. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಸಮಯದ ಬದಲಾವಣೆಗೆ ಮನವಿ ಮಾಡಿದ್ದರು. ಇದೀಗ ರಾಜ್ಯ ಸರ್ಕಾರ, ಕಚೇರಿ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಿದೆ.