Sunday, September 8, 2024

ಸರ್‌ ಎಮ್‌ವಿ ಪ್ರತಿಮೆಯ ಮೇಲೂ ಸಂಕ್ರಾಂತಿಯ ಸೂರ್ಯರಶ್ಮಿ

Most read

ನಮ್ಮ ಮನೆಯ ಪುಸ್ತಕದ ಕಪಾಟುಗಳ ಪಕ್ಕಕ್ಕಿಟ್ಟ ಸರ್‌ ಎಮ್‌ವಿ ಪ್ರತಿಮೆಯ ಮೇಲೂ ನಿನ್ನೆ ಮುಂಜಾನೆಯ ಮೊದಲ ಸೂರ್ಯಕಿರಣ ಕೋರೈಸಿತು. ನಾನು ಅದರ ಚಿತ್ರವನ್ನು ಸರಿಯಾದ ಕೋನದಲ್ಲಿ ಸೆರೆಹಿಡಿಯಲೆಂದು ತುಸು ಬಗ್ಗಿ, ಕೂತು, ನಿಂತು ಪರದಾಡಿದೆ.

ಇದೂ ಕೂಡ ವರ್ಷದಲ್ಲಿ ಒಮ್ಮೆ ಮಾತ್ರ ಜರುಗುವ ವಿದ್ಯಮಾನ. ಇಂದು ಅಲ್ಲೇ ಪಕ್ಕದಲ್ಲಿರುವ ಬುದ್ಧನ ಪ್ರತಿಮೆಯ ಮೇಲೆ ಅಂಥದೇ ಚಂದದ ಸೂರ್ಯರಶ್ಮಿ ಕಂಗೊಳಿಸಿತು.

ಇಂಥ ಅಪರೂಪದ ದೃಶ್ಯವನ್ನು ಮತ್ತೆ ನೋಡಬೇಕೆಂದರೆ ನಾನು ಮುಂದಿನ ಸಂಕ್ರಾಂತಿಯವರೆಗೂ ಕಾಯಬೇಕು. ಅದಕ್ಕೆ ಅದೃಷ್ಟ ಬೇಕು. ಮೋಡ ಕವಿದಿದ್ದರೆ ಅಥವಾ (ಈಗ ದೇಶದ ಅನೇಕ ವಿಮಾನ ನಿಲ್ದಾಣಗಳಲ್ಲಿ ಆಗುತ್ತಿರುವಂತೆ) ದಟ್ಟ ಮಂಜು ಅಥವಾ ಹೊಂಜು ಕವಿದಿದ್ದರೆ, ಅಥವಾ ನಾನು ಮನೆ ಬದಲಿಸಿದರೆ ಈ ವೈಚಿತ್ರ್ಯವನ್ನು ಕಾಣಲು ಸಾಧ್ಯವಿಲ್ಲ. ನಾಳೆಗಳನ್ನು ನೋಡಿದವರು ಯಾರು?

ನಿಮ್ಮ ಮನೆಯಲ್ಲಿ ಅಥವಾ ಶಾಲೆಯಲ್ಲಿ ಅಥವಾ ಪೂಜಾ ಮಂದಿರದಲ್ಲಿ ಕೂಡ ನೀವು ಇಂಥ ಅಪರೂಪದ ಸಂಗತಿಯನ್ನು ನೋಡಬಹುದು. ಅದಕ್ಕೆ ನೀವು ಮಾಡಬೇಕಾದುದು ಇಷ್ಟೆ: ಇಂದು ಸಂಜೆ ಅಥವಾ ನಾಳೆ ಬೆಳಿಗ್ಗೆ ನೀವಿರುವ ಕಟ್ಟಡದ ಹೊರಬಾಗಿಲು ಅಥವಾ ಕಿಟಕಿಯ ಮೂಲಕ ಸೂರ್ಯನ ಎಳೆ/ಇಳಿ ಬೆಳಕು ಬೀಳುವ ತಾಣವನ್ನು ಗುರುತಿಸಿ ಇಡಿ. ಅಲ್ಲೊಂದು ದೇವರ ಅಥವಾ ನಿಮ್ಮಿಷ್ಟದ ತಾರೆಯ ಚಿತ್ರವನ್ನೊ ಮೂರ್ತಿಯನ್ನೊ ಇಟ್ಟಿರಿ.

ಅದೇ ತಾಣದಲ್ಲಿ ಮುಂದಿನ ವರ್ಷವೂ ಸಂಕ್ರಾಂತಿಯ ದಿನ ಅದೇ ಬಗೆಯ ಚಿನ್ನದ ಬಣ್ಣದ ಬಿಸಿಲು ಬೀಳುತ್ತದೆ. ಬೇಕಿದ್ದರೆ 14 ಜನವರಿ 2025ರಂದು ಪರೀಕ್ಷೆ ಮಾಡಿ. ಪ್ರತಿ ವರ್ಷ ಜನವರಿ 14ರಂದು ಅದೇ ತಾಣದಲ್ಲಿ ಅದೇ ಹೊಂಬಿಸಿಲು ಬೀಳುತ್ತದೆ.

ಇದು ನಮ್ಮ ಹಿಂದಿನವರಿಗೂ ಗೊತ್ತಿತ್ತು. ಪವಿತ್ರ ತಾಣಗಳನ್ನು ನಿರ್ಮಿಸುವ ಮುಂಚೆ ಅವರು ತಮ್ಮ ಜಾಣ್ಮೆ ಮತ್ತು ಕೌಶಲದಿಂದ ಗೋಡೆ, ಬಾಗಿಲು, ಕಿಟಕಿಗಳನ್ನು ಶಿಸ್ತಾಗಿ ಗುರುತಿಸುತ್ತಿದ್ದರು. ಹೊಂಬಿಸಿಲು ಆ ಕಟ್ಟಡದ ತೀರ ಆಳದವರೆಗೆ ಸೂಸುವಂತೆ ಯೋಜಿತ ಸ್ಥಾನದಲ್ಲಿ ಮೂರ್ತಿಯನ್ನು ನಿಲ್ಲಿಸುತ್ತಿದ್ದರು. ಅವರ ಸಾಧನೆಯನ್ನು ಮೆಚ್ಚೋಣ.

ಆದರೆ ಈಗ ಭಕ್ತಿರಸದಲ್ಲಿ ಪ್ರಜಾಸ್ತೋಮವನ್ನು ಮುಳುಗಿಸಲೆಂದು ಹಗಲಿರುಳೂ ಶ್ರಮಿಸುತ್ತಿರುವ ನಮ್ಮ ಸುದ್ದಿ ವಾಹಿನಿಗಳು ಇದೂ ಒಂದು ದೈವೀ ಪವಾಡ ಎಂಬಂತೆ ಬಿಂಬಿಸುತ್ತಿದ್ದಾರೆ. ಗವಿಗಂಗಾಧರೇಶ್ವರನ ದರ್ಶನಕ್ಕೆ ನೂಕು ನುಗ್ಗಲು ಹಿಂದೆಂದಿಗಿಂತ ಹೆಚ್ಚುವಂತೆ ಮಾಡಿದ್ದಾರೆ.

ಗವಿಗಂಗಾಧರೇಶ್ವರ ಅಷ್ಟೇ ಅಲ್ಲ, ಗದುಗಿನ ಮತ್ತು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಅರಸವಲ್ಲಿಯ ದೇಗುಲಗಳಲ್ಲೂ ಸೂರ್ಯಕಿರಣಗಳ ಪ್ರವೇಶಪಥವಿದೆ. ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಿದ ಅಜಂತಾ ಸಂಕೀರ್ಣದ 26ನೇ ಗುಹಾಲಯದಲ್ಲೂ ಸಂಕ್ರಾಂತಿಯ ದಿನ ಈ ವಿದ್ಯಮಾನವನ್ನು ಕಾಣಬಹುದು. ಬೇರೆ ದೇಶಗಳಲ್ಲೂ ಕಾಣಬಹುದು.

ಇವೆಲ್ಲ ಸೌರಮಾನ ಪಂಚಾಂಗವನ್ನು ಆಧರಿಸಿದ ವಾಸ್ತುನಿರ್ಮಿತಿಗಳು. ಅಯೋಧ್ಯೆಯಲ್ಲಿ ರಾಮನವಮಿಯ ದಿನ ಶ್ರೀರಾಮನ ವಿಗ್ರಹದ ಮೇಲೂ ಹೀಗೇ ಸೂರ್ಯರಶ್ಮಿ ಸಹಜವಾಗಿ ಬೀಳುವಂತೆ ಮಾಡಲು ಸಾಧ್ಯವಿಲ್ಲ. ಆದರೂ ಅಂಥದ್ದೊಂದು ʻಪವಾಡʼವನ್ನು ಸೃಷ್ಟಿಸಲೆಂದು ವಿಜ್ಞಾನಿಗಳನ್ನು ಹೇಗೆಲ್ಲ ದುಡಿಸಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ಹಿಂದೆಯೇ ಬರೆದಿದ್ದೇನೆ.

ಭಕ್ತಿರಸದಲ್ಲಿ ಮುಳುಗೇಳುವ ಭಕ್ತಸಾಗರವೇ ನಮ್ಮೆದುರು ರೂಪುಗೊಳ್ಳುತ್ತಿದೆ.

ನಾಗೇಶ ಹೆಗಡೆ, ವಿಜ್ಞಾನ ಬರಹಗಾರರು

More articles

Latest article