ಯುದ್ಧದ ಭೀತಿ, ನೆರೆ ಶತ್ರು ದೇಶದ ಆಕ್ರಮಣ ಆರಂಭವಾದರೆ ಸಾಕು ಗಡಿಭಾಗದ ಜನರು ಯಾವಾಗೆಂದರೆ ಆವಾಗ, ಹಗಲೋ ಇರುಳೋ, ಮಳೆಯೋ ಛಳಿಯೋ ತಮ್ಮ ಮನೆ ಆಸ್ತಿ ಅಂತ ಕೂರದೇ ಎದ್ದು ಜೀವವುಳಿಸಿಕೊಳ್ಳಲು ಪರವೂರಿಗೋ ಇಲ್ಲ ಅವರಿಗೆ ನಿರ್ದೇಶಿಸಿದ ಬಂಕರುಗಳಿಗೆ ಓಡಬೇಕು. ಆಹಾರ ಸಾಮಗ್ರಿಗಳನ್ನು, ಇಂಧನ, ಬೇಕಾದ ಔಷಧಿಗಳನ್ನು, ಅಗತ್ಯದ ವಸ್ತುಗಳನ್ನು ಹೆಚ್ಚಿನ ಬೆಲೆ ಕೊಟ್ಟಾದರೂ ಸಂಗ್ರಹಿಸಿಕೊಳ್ಳಬೇಕು, ಶಾಲೆಗಳು ಮುಚ್ಚಿಹೋಗಿ ಮನೆಯಲ್ಲಿರುವ ಮಕ್ಕಳು ಮರಿಗಳನ್ನೂ ಕಾಯಬೇಕು. ದಾಳಿಯಾಗುತ್ತಿರುವಾಗ ಕೂಳು ನೀರೂ ಸಿಗದೇ ಪರದಾಡುವಂತಾದಾಗ ಬದುಕು ಎಷ್ಟು ಕಷ್ಟ! – ರೇಣುಕಾ ನಿಡಗುಂದಿ, ಕವಯಿತ್ರಿ.
ಭಾರತ –ಪಾಕಿಸ್ತಾನ ನಡುವೆ ಜಾರಿಯಾದ ಯುದ್ಧ ವಿರಾಮದ ಮೂರು ದಿನಗಳ ನಂತರ, ಪಂಜಾಬಿನ ಅಂತಾರಾಷ್ಟ್ರೀಯ ಗಡಿಗೆ 200 ರಿಂದ 500 ಮೀಟರ್ ದೂರದಲ್ಲಿರುವ ಹಳ್ಳಿಗಳಲ್ಲಿ ಸಹಜ ಜೀವನ ಮತ್ತೆ ಆರಂಭವಾಗಿದೆ. ಅಮೃತಸರ್ ಮತ್ತು ಪಠಾಣ್‌ಕೋಟ್‌ನ ಆರು ಹಳ್ಳಿಗಳಲ್ಲಿ ದೈನಿಕ ಭಾಸ್ಕರ್ ಪ್ರತಿನಿಧಿಗಳು ಭೇಟಿ ನೀಡಿ ವರದಿ ಮಾಡಿದ್ದಾರೆ—ಇತ್ತೀಚಿನ ಯುದ್ಧಭೀತಿಯಿಂದ ಹಳ್ಳಿಗಳಿಂದ ಬೇರೆಕಡೆ ಗುಳೆ ಹೋದವರು ಇದೀಗ ಮರಳಿ ಬಂದಿದ್ದಾರಂತೆ. ಜನಜೀವನದ ಹೊಳಪು ಮರಳಿ ಬಂದಿದೆ.
ಕೃಷಿ ಚಟುವಟಿಕೆಗಳು ಪುನಾರಂಭವಾಗಿವೆ, ಮಾರುಕಟ್ಟೆಗಳು ಸಂಜೆವರೆಗೆ ತೆರೆದಿವೆ, ಮತ್ತು ಗುರುದ್ವಾರಗಳಲ್ಲಿ ಲಂಗರ್‌ಗಳು ಮತ್ತೆ ತಮ್ಮ ಕಾರ್ಯ ನಿರ್ವಹಿಸತೊಡಗಿವೆ.
ಡ್ರೋನ್ ಬೆದರಿಕೆಗಳು ಮತ್ತು ಶೆಲ್ಲಿಂಗ್ ವೇಳೆ ಸಹ ಹಲವರು ಹಳ್ಳಿಗಳಲ್ಲಿಯೇ ಉಳಿದು, ಭಾರತೀಯ ಸೇನೆ ಮತ್ತು ಬಿಎಸ್ಎಫ್ ಸಿಬ್ಬಂದಿಗೆ ಬೆಂಬಲ ನೀಡಿದ್ದರು. ಈಗ ಪರಿಸ್ಥಿತಿ ಶಾಂತವಾಗಿರುವುದರಿಂದ, ಟ್ರ್ಯಾಕ್ಟರ್‌ಗಳು ಮತ್ತೆ ಹೊಲಗಳಲ್ಲಿ ಕಾಣಿಸಿಕೊಂಡಿವೆ ಮತ್ತು ದಿನನಿತ್ಯದ ಜೀವನ ತನ್ನ ಲಯವನ್ನು ಮರಳಿ ಪಡೆಯುತ್ತಿದೆ.
ಇದೆಲ್ಲವನ್ನು ಓದುತ್ತಿದ್ದರೆ ಮನಸ್ಸು ವ್ಯಾಕುಲಗೊಳ್ಳುತ್ತದೆ. ಪಹಲ್‌ಗಾಮ್ ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಆ 26 ಮನೆಮಂದಿಯ ಸ್ಥಿತಿ ಏನಾಗಿರಬೇಡ?. ಸುಖವಾಗಿ ಪ್ರವಾಸಕ್ಕೆಂದು ಬಂದವರು ಶವವಾಗಿ ಮರಳಿದರು. ಜೀವನಪರ್ಯಂತ ಈ ಗಾಯದ ಶಿಲುಬೆಯನ್ನು ಆ ಕುಟುಂಬಗಳು ಹೊತ್ತುಕೊಂಡೇ ಬದುಕಬೇಕು. ಈಗ ಆಪರೇಶನ್ ಸಿಂಧೂರದಿಂದ ನ್ಯಾಯ ಸಿಕ್ಕಿತೇ? ಉಗ್ರರ ಬಗ್ಗೆ ಯಾವ ಮಾಹಿತಿಯೂ ಸರಕಾರದ ಕಡೆಯಿಂದಾಗಲಿ ಸೈನ್ಯದ ಕಡೆಯಿಂದಾಗಲಿ ಇದುವರೆಗೂ ತಿಳಿದುಬಂದಿಲ್ಲ.
ಇದು ಹೋಗಲಿ, ಇನ್ನು ಗಡಿಪ್ರದೇಶ ಅಮೃತಸರ್, ಗುರದಾಸಪುರ, ಭಟಿಂಡಾ, ವಾಘಾ ಊರು, ಪಠಾಣಕೋಟ್, ಪುಂಛ ಗಡಿಯ ಬಳಿ ವಾಸಿಸುವವರು ಎಲ್ಲಿ ಹೋಗಬೇಕು?
ಇತಿಹಾಸದುದ್ದಕ್ಕೂ ಸ್ವಾತಂತ್ರ್ಯ ಹಾಗೂ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಅದೆಷ್ಟು ಯುದ್ಧಗಳನ್ನು ಈ ಜನ ನೋಡಿಲ್ಲ? ಅದೆಷ್ಟು ಜನ ತಮ್ಮ ಕರುಳಕುಡಿಗಳನ್ನು, ಮನೆ ಯಜಮಾನನನ್ನು, ಬಂಧು ಬಾಂಧವರನ್ನು ಕಳೆದುಕೊಂಡಿಲ್ಲ? ಮನೆಮಠ, ಕೃಷಿ, ಜಾನುವಾರುಗಳನ್ನು ತೊರೆದು ಹೋಗುವುದಾದರೂ ಎಲ್ಲಿಗೆ?
ಈ ಎಲ್ಲ ತಲ್ಲಣಗಳನ್ನು ಮೀರಿ ಎರಡೂವರೆ ಸಾವಿರ ಕಿಲೋಮೀಟರ್ ದೂರದ ರಾಜ್ಯಗಳಲ್ಲಿ ಕುಳಿತು ಯುದ್ಧದ ಬಗ್ಗೆ ಕೇಳಬಹುದು, ಓದಬಹುದು ಇನ್ನೂ ಮುಂದೆ ಹೋಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅರ್ಧ ಸತ್ಯ ಅರ್ಧ ಸುಳ್ಳಿನ ದೃಶ್ಯಗಳನ್ನು ನೋಡಿ ಭೀತಿ ಗೊಳ್ಳಬಹುದು ಅಥವಾ ರೋಮಾಂಚನ ಗೊಳ್ಳಬಹುದು. ನಾವು ಕಂಡಂತೆ ಯುದ್ಧೋನ್ಮಾದದಲ್ಲಿ ಯುದ್ಧವನ್ನು ರೋಮ್ಯಾಂಟಿಸೈಸ್ ಮಾಡಿದವರೇ ಹೆಚ್ಚು. ಅವರು ಗಡಿಯಲ್ಲಿ ವಾಸಿಸುವವರ ಬದುಕನ್ನು ಊಹಿಸಲೂ ಸಾಧ್ಯವಿಲ್ಲ.
ಯುದ್ಧದ ಭೀತಿ, ನೆರೆ ಶತ್ರು ದೇಶದ ಆಕ್ರಮಣ ಆರಂಭವಾದರೆ ಸಾಕು ಫ್ರೀ ಬಸ್ ಹತ್ತಿಕೊಂಡು ಊರೂರು ಹೋಗುವಂತೆ ಇವರು ಹೋಗಲಾಗದು. ಏನಿದ್ದರೂ ಸೈನ್ಯದ ಕಣ್ಗಾವಲಿನಲ್ಲೇ ಇವರ ಬದುಕು.ಒಣ ಗುಂಡಿಗಳು, ಪೊದೆಗಳಲ್ಲಿಯೋ, ಬಂಕರುಗಳಲ್ಲೋ ಹೋಗಿ ಅಡಗಿ ಕೊಂಡಿರಬೇಕು. ಮನೆಯ ಗಂಡಸರು ಹೆಂಗಸರು, ಮಕ್ಕಳನ್ನು ಬಂಕರುಗಳಿಗೆ ಕಳಿಸಿ ತಾವು ಮನೆ, ಜಾನುವಾರುಗಳನ್ನು ನೋಡಿಕೊಳ್ಳುವುದಕ್ಕಾಗಿ ಅಲ್ಲೇ ಉಳಿದು ಕೊಳ್ಳಬೇಕಾಗಿರುತ್ತದೆ. ಒಂದುವೇಳೆ ಮನೆಯಲ್ಲಿ ಹೆರಿಗೆ ಆಗಿರುವ ಅಥವಾ ಇಂದೋ ನಾಳೆಯೋ ಹೆರಿಗೆಯನ್ನು ನಿರೀಕ್ಷಿಸುತ್ತಿರುವವರ ಪಾಡೇನು? ಬಂಕರುಗಳಲ್ಲಿ ಅಷ್ಟು ಸವಲತ್ತು ಸೌಕರ್ಯ ಇದ್ದೀತೇ? ಕೆಲವು ಗಟ್ಮಿಗಿತ್ತಿ ಹಿರಿಯ ಹೆಂಗಸರೂ ಇದ್ದಾರೆ. ತಾವು ಊರುಕೇರಿ, ಮನೆಬಿಟ್ಟು ಹೋಗದೇ ಗಂಡ ಮಕ್ಕಳು,- ಮೊಮ್ಮಕ್ಕಳನ್ನು ಅಡಗುದಾಣಗಳಿಗೆ ಕಳಿಸಿ ನಾವು ಯುದ್ಧಕ್ಕೆ ಹೆದರುವುದಿಲ್ಲ, ಸಂಘರ್ಷವೇ ಬದುಕಾಗಿರುವಾಗ ಈ ಯುದ್ಧವೇನು ಮಹಾ ಎಂದು ಕೆಚ್ಚೆದೆ ಮೆರೆದವರೂ ಇದ್ದಾರೆ. ಪರಿಸ್ಥಿತಿ ಹತೋಟಿಯಲ್ಲಿದೆ ಎಂದಾಗ ಈ ಅಡಗುದಾಣಗಳಿಂದ ಹೊರಬಂದು ಮನೆ ಸೇರಿಕೊಳ್ತಾರೆ. ಮತ್ತೆ ಬದುಕು ಸಾಗುತ್ತದೆ.
ಇನ್ನು ಕೂಲಿನಾಲಿ ಅರಸಿಕೊಂಡು ಹೋದ ಬಿಹಾರ, ಮಧ್ಯಪ್ರದೇಶ್, ರಾಜಸ್ಥಾನ ಹೀಗೆ ಬೇರೆ ರಾಜ್ಯಗಳ ಜನ ಇಂತಹ ವಾತಾವರಣದಲ್ಲಿ ಸಿಕ್ಕಿಕೊಂಡು ಅತ್ತ ಊರಿಗೂ ಹೋಗದ ಇತ್ತ ಸಿಗಬೇಕಾದ ಸಂಬಳ ಸಿಗದೇ ಉಣ್ಣಲು ಆಹಾರ ಸಾಮಗ್ರಿಯ ಕೊರತೆಯಲ್ಲಿ ಹೇಗೆ ಜೀವನ ನಡೆಸಿರಬಹುದು ಊಹಿಸಿಕೊಳ್ಳಿ. ಕೆಲವು ವಿಡಿಯೋಗಳಲ್ಲಿ ಗಡಿಭಾಗದ ಜನ ತಮ್ಮ ದನಕರುಗಳನ್ನು ಟೆಂಪೋದಲ್ಲಿ ಸಾಗಿಸಿಕೊಂಡು ಗಡಿಯಿಂದ ದೂರ ಅಡಗುದಾಣಗಳಿಗೆ ಹೋಗುವುದನ್ನು ನೋಡಿದೆ. ಈ ವಿಷಯದಲ್ಲಿ ನಾವೆಲ್ಲ ಎಷ್ಟು ಆರಾಮವಾಗಿದ್ದೇವಲ್ಲ ಎನಿಸಿ ಆತಂಕಗೊಂಡೆ. ಆ ಜನರಿಗಾಗಿ ಮನದಲ್ಲೇ ಪ್ರಾರ್ಥಿಸುತ್ತಿದ್ದೆ.
ಬದುಕಿರುವಷ್ಟು ಕಾಲ ನಮ್ಮ ತಾಯಿಗೆ ದಿಲ್ಲಿಗೆ ಬಾ ಅಂದರೆ ಅಯ್ಯೋ ಮನೆಬಿಟ್ಟು ಹೇಗೆ ಬರಲಿ ? ಎಂದು ಮನೆಬಿಟ್ಟು ಪರವೂರಿಗೆ ಹೋಗುವುದೇ ಒಂದು ದೊಡ್ಡ ಸಮಸ್ಯೆ, ಏನೋ ಮಹಾ ಆಸ್ತಿಯನ್ನು ಕಾಯಬೇಕಾಗಿದೆ ಎನ್ನುವಂತೆ ಚಿಂತೆಗೀಡಾಗುತ್ತಿದ್ದಳು. ಬಹುಶಃ ಆ ತಲೆಮಾರಿನ ಜನವೇ ಹಾಗಿದ್ದರು. ಈಗಲೂ ಎಷ್ಟೋ ಜನ ಒಳ್ಳೆಯ ನೌಕರಿ ಉದ್ಯೋಗ ಪರವೂರಿನಲ್ಲಿ, ಪರರಾಜ್ಯದಲ್ಲಿ ಸಿಕ್ಕಿದೆಯೆಂದು ಸಿಕ್ಕ ಉದ್ಯೋಗವನ್ನು, ಅವಕಾಶವನ್ನು ಬಿಡುತ್ತಾರೆಯೆ ಹೊರತು ತಮ್ಮ ಊರನ್ನು ಬಿಟ್ಟು ಎಲ್ಲೂ ಹೋಗಲು ಬಯಸುವುದಿಲ್ಲ. ತಾವಿರುವ “ಸೇಫ್ ಝೋನ್” ಬಿಟ್ಟು ಬೇರೆಡೆ ಹೋಗಲು ಇಷ್ಟಪಡರು. ಅದೇ ಈ ಗಡಿಭಾಗದ ಜನರು ಯಾವಾಗೆಂದರೆ ಆವಾಗ, ಹಗಲೋ ಇರುಳೋ, ಮಳೆಯೋ ಛಳಿಯೋ ತಮ್ಮ ಮನೆ ಆಸ್ತಿ ಅಂತ ಕೂರದೇ ಎದ್ದು ಜೀವವುಳಿಸಿಕೊಳ್ಳಲು ಪರವೂರಿಗೋ ಇಲ್ಲ ಅವರಿಗೆ ನಿರ್ದೇಶಿಸಿದ ಬಂಕರುಗಳಿಗೆ ಓಡಬೇಕು. ಆಹಾರ ಸಾಮಗ್ರಿಗಳನ್ನು, ಇಂಧನ, ಬೇಕಾದ ಔಷಧಿಗಳನ್ನು, ಅಗತ್ಯದ ವಸ್ತುಗಳನ್ನು ಹೆಚ್ಚಿನ ಬೆಲೆ ಕೊಟ್ಟಾದರೂ ಸಂಗ್ರಹಿಸಿಕೊಳ್ಳಬೇಕು, ಶಾಲೆಗಳು ಮುಚ್ಚಿಹೋಗಿ ಮನೆಯಲ್ಲಿರುವ ಮಕ್ಕಳು ಮರಿಗಳನ್ನೂ ಕಾಯಬೇಕು. ದಾಳಿಯಾಗುತ್ತಿರುವಾಗ ಕೂಳು ನೀರೂ ಸಿಗದೇ ಪರದಾಡುವಂತಾದಾಗ ಬದುಕು ಎಷ್ಟು ಕಷ್ಟ!
ಇನ್ನು ಸೈನ್ಯಕ್ಕೆ ಹೋದ ಮಗನನ್ನು ನೆನೆದು ಯುದ್ಧಕಾಲದಲ್ಲಿನ ಭೀಕರತೆಯನ್ನು ಕಲ್ಪಿಸಿಕೊಂಡು ಕಣ್ಣಿಗೆ ನಿದ್ದೆಹತ್ತದೆ, ನಾಲಿಗೆಗೆ ಊಟ ರುಚಿಸದೇ ಜೀವವನ್ನು ಕೈಲಿಟ್ಟುಕೊಂಡು ಕಾಯುತ್ತಿರುವ ತಾಯಿ ತಂದೆ ಎಲ್ಲೋ ನಿಟ್ಟುಸಿರು ಬಿಡುತ್ತಿರಬಹುದು, ಯುದ್ಧವನ್ನು ಯುದ್ಧಪಿಪಾಸುಗಳನ್ನು ಶಪಿಸುತ್ತ. ತಮ್ಮ ಪ್ರೀತಿಯ ಜೀವದ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿರುವ ಪತ್ನಿ, ಮಗಳು, ಅಕ್ಕತಂಗಿಯರು ಯುದ್ಧ ನಿಂತುಬಿಡಲೆಂದು ಹಾರೈಸುತ್ತಿರಬಹುದು.
ಕಳೆದ ಕೆಲ ವರ್ಷಗಳಲ್ಲಿ ಯುಕ್ರೇನ್ ರಷ್ಯಾ ನಡುವಿನ ಯುದ್ಧ, ಪಶ್ಚಿಮ ಏಷ್ಯಾದ ದೇಶಗಳಾದ ಇಸ್ರೇಲ್ ಇರಾನ್ ಯುದ್ಧಗಳು ಅವು ಸೃಷ್ಟಿಸಿದ ಸರ್ವನಾಶವನ್ನು ಕಂಡಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಮಹಿಳೆಯರು ಬಲಿಯಾಗಿದ್ದಾರೆ. ದೇಶದ ಭಾಗಗಳೇ ನಿರ್ನಾಮವಾಗೊಂಡು ಜನಾಂಗಗಳೇ ಅಳಿವಿನ ಅಂಚಿಗೆ ನೂಕಲ್ಪಟ್ಟಿವೆ. ಹೀಗಿರುವಾಗ ಯಾರು ಯುದ್ಧವನ್ನು ಬಯಸುತ್ತಾರೆ ?!! ತಮ್ಮ ಲಾಭಕ್ಕಾಗಿ, ತಮ್ಮ ಅನುಕೂಲಕ್ಕಾಗಿ ರಾಜಕೀಯ ಶಕ್ತಿಗಳೇ ಹೊರತು ನಾಗರಿಕರು ಯಾವತ್ತೂ ಯುದ್ಧವನ್ನು ಬಯಸುವುದಿಲ್ಲ.
” ಯುದ್ಧವೆಂದರೆ ವಿನಾಶ. ಯುದ್ಧಗಳಲ್ಲಿ ಗೆಲುವು ಎನ್ನುವುದಿಲ್ಲ, ಪತನವಾದ ಧ್ವಜಗಳು ಮತ್ತು ಉರುಳಿದ ಮನುಷ್ಯರು ಮಾತ್ರ. ಸತ್ತ ಶರೀರಗಳು ಮತ್ತು ಆಳುವ ತಾಯಂದಿರು, ವಿಧವೆಯರ ಅಳಲು. ದ್ವೇಷಕ್ಕಾಗಿ ಒಬ್ಬನು ಸತ್ತರೆ ಅದರಲ್ಲಿ ಯಾವುದೇ ಮಹಿಮೆ ಇಲ್ಲ.” ಈ ಸಾಲುಗಳನ್ನು ಕವಿ ಹಾಗೂ ಮಾನವೀಯತೆಯುಳ್ಳ ಮನುಷ್ಯ ಮಾತ್ರವೇ ಹೇಳಬಲ್ಲ
ಗಡಿಯಲ್ಲಿನ ಜನರು ಪ್ರತಿಕ್ಷಣವೂ ಬೆಂಕಿಯ ಮೇಲೆ ಕುಳಿತಂತೆ ಈಗಲೋ ಆಗಲೋ ಬೀಳಬಹುದಾದ ಬಾಂಬ್, ಶೆಲ್ ಗಳಿಗೆ ಮೈಯೆಲ್ಲಾ ಕಣ್ಣಾಗಿ, ಕಿವಿಯಾಗಿ ಅಂಗೈಯಲ್ಲಿ ಜೀವವಿಟ್ಟುಕೊಂಡು ಕುಳಿತಿರುವಾಗ ನಾವು ಸಾವಿರಾರು ಮೈಲುಗಳಾಚೆ ಹವಾನಿಯಂತ್ರಿತ ಕೋಣೆಯಲ್ಲಿ ಆರಾಮಾಗಿ ನಿದ್ದೆಹೋಗಿದ್ದೇವಲ್ಲ. ನಮಗೆ ನೆಮ್ಮದಿಯ ನಿದ್ದೆಯನ್ನು ಕೊಟ್ಟ ಸೈನಿಕರು ಗಡಿ ಕಾಯುತ್ತಿದ್ದರು. ಶತ್ರುವಿನ ಆಕ್ರಮಣವನ್ನು ತಡೆದು ಹಿಮ್ಮೆಟ್ಟಿಸುತ್ತಿದ್ದರು. ಯುದ್ಧವೆಂದರೆ ಶತ್ರುವನ್ನು ಸಾಯಿಸುವುದಷ್ಟೇ, ಯುದ್ಧ ನಮಗೆ ಬೇಕೇ ಬೇಕು ಎನ್ನುವ ಹುಚ್ಚರು, ಕೋಮುದ್ವೇಷಿಗಳು, ಬಹುಶಃ ಈ ದೇಶದ ಭೌಗೋಳಿಕ ಚಿತ್ರಣವಾಗಲಿ, ಮಾಹಿತಿಯಾಗಲಿ ಗೊತ್ತಿಲ್ಲದವರು. ಸರ್ವಾಧಿಕಾರಿಯನ್ನು ದೇವರ ಅವತಾರವೆಂದು ನಂಬುವ ಮಬ್ಬಕ್ತರು. ಇವರೆಲ್ಲರೂ ಇತಿಹಾಸವನ್ನು ಓದದ ಹಾಗೂ ಭೌಗೋಳಿಕ ಪ್ರಾದೇಶಿಕ ಜ್ಞಾನವಿರದ ವಾಟ್ಸಪ್ ಯೂನಿವರ್ಸಿಟಿಯ ಪಂಡಿತರುಗಳೇ ಇರಬೇಕು.
ಮೊನ್ನೆ SCROLL ನಲ್ಲಿ ಪ್ರಕಟವಾದ ಜೀಶಾನ್ ಸಾಹಿಲ್ ಅವರ ಈ ಪದ್ಯ ಓದಿ ನಿಮ್ಮ ಹೃದಯದ ಮೇಲೆ ಕೈಯಿಟ್ಟು ನಿಮ್ಮೊಳಗನ್ನು ನೋಡಿಕೊಳ್ಳಿ ಒಮ್ಮೆ. ನಿಮಗೂ ನನಗನಿಸಿದಂತೆಯೇ ಅನುಭವವಾಗುವುದೆಂಬ ಖಾತ್ರಿಯಿದೆ.
ಯುದ್ಧದ ದಿನಗಳಲ್ಲಿ
ಯುದ್ಧದ ದಿನಗಳಲ್ಲಿ,
ಪ್ರೇಮ ಸುಲಭವಾಗುತ್ತದೆ
ಜೀವನ ಕಠಿಣವಾಗುತ್ತದೆ.
ಒಬ್ಬ ಸೈನಿಕನು ನಿನ್ನ ಪ್ರಾಣವನ್ನು ತೆಗೆದುಕೊಳ್ಳಬಹುದು
ಒಂದು ಸಿಗರೇಟಿನ ಪ್ಯಾಕೆಟ್ ಗೆ ಬದಲಾಗಿ,
ಪರಿಮಳದ ಸಾಬೂನನ್ನು
ನೀನು ಒಬ್ಬ ಹುಡುಗಿಗೆ ಕೊಟ್ಟರೆ,
ನೀನು ಪಡೆಯಬಹುದು
ಅವಳ ನಗು, ಅವಳ ದೇಹ.
ಯುದ್ಧದ ದಿನಗಳಲ್ಲಿ,
ಜನರು ಮರೆತುಹೋಗುತ್ತಾರೆ
ಸಿಡಿತ ಮತ್ತು ಕಿರುಚಾಟದ ನಡುವೆ
ಗೆರೆ ಎಳೆಯುವುದನ್ನು,
ನೆರೆಯವನನ್ನು ಮತ್ತು ಗೂಢಚಾರನನ್ನು
ಭಿನ್ನವಾಗಿ ನೋಡುವುದನ್ನು.
ಒಣ ಚರಂಡಿಗಳು ಮನೆಗಳಾಗಿ ಮಾರ್ಪಾಡಾಗುತ್ತವೆ
ಬೆಳಕು ಕತ್ತಲಾಗಿ ಪರಿವರ್ತನೆ ಆಗುತ್ತದೆ.
ಪತ್ರಿಕೆಗಳು ಇತಿಹಾಸವನ್ನು ಬರೆಯುತ್ತವೆ
ಮರಣವು ತನ್ನ ಹೆಸರನ್ನು ಎಲ್ಲೆಡೆ ಬರೆಯುತ್ತದೆ.
ಯುದ್ಧದ ದಿನಗಳಲ್ಲಿ,
ಸೂರ್ಯೋದಯವಾಗುವುದಿಲ್ಲ—
ಲೋಕದೆಲ್ಲೆಡೆ, ಸದಾ ರಾತ್ರಿಯೇ.
ರೇಣುಕಾ ನಿಡಗುಂದಿ, ದೆಹಲಿ
ಕವಿಗಳು
ಇದನ್ನೂ ಓದಿ- http://ಯುದ್ಧೋತ್ತರ…
.https://kannadaplanet.com/post-war/