ದಿಲ್ಲಿಯಿಂದ ಬರಿಗೈಯಲ್ಲಿ ಮರಳಿದ ಸುಮಲತಾ, ಮಂಡ್ಯದಲ್ಲಿ ಟಿಕೆಟ್ ಇಲ್ಲ

Most read

ಹೊಸದಿಲ್ಲಿ: ಮಂಡ್ಯದಲ್ಲಿ ಹೇಗಾದರೂ ಬಿಜೆಪಿ ಟಿಕೆಟ್ ಪಡೆಯಬೇಕು ಎಂದು ಪ್ರಯತ್ನಿಸಿದ ಸಂಸದೆ ಸುಮಲತಾ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಆದರೆ ಭೇಟಿ ಫಲಪ್ರದವಾಗುವ ಸಾಧ್ಯತೆ ಕಡಿಮೆ ಇದೆ.

ದಿಲ್ಲಿಯಿಂದ ಹಿಂದಿರುಗಿದ ಸುಮಲತಾ ಇಂದು ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದು, ಪಕ್ಷದ ಕೆಲ ಮುಖಂಡರು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರೆ, ಆದರೆ ಅದಕ್ಕೆ ನನ್ನ ಒಪ್ಪಿಗೆ ಇಲ್ಲ ಎಂದು ಹೇಳಿದರು.

ಜೆ.ಪಿ.ನಡ್ಡಾ ಎಲ್ಲರನ್ನೂ ಭೇಟಿ ಮಾಡಿ ಬಂದಿದ್ದೇನೆ. ಜೆ.ಪಿ.ನಡ್ಡಾರವರ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿದ್ದೆ. ಮೋದಿಯವರ ಸೂಚನೆ ಮೇರೆಗೆ ನನ್ನನ್ನು ಆಹ್ವಾನಿಸಲಾಗಿತ್ತು. ನನಗೆ ಪಾಸಿಟಿವ್ ರೆಸ್ಪಾನ್ಸ್ ಸಿಗುವ ಸೂಚನೆ ಇದೆ ಎಂದು ಅವರು ಹೇಳಿದರು.

ಬೆಂಗಳೂರು ಉತ್ತರ ಕ್ಷೇತ್ರವನ್ನೇ ಬೇಡವೆಂದಿದ್ದೆ. ಇನ್ನು ಚಿಕ್ಕಬಳ್ಳಾಪುರಕ್ಕೆ ಹೋಗುವ ಮಾತೇ ಇಲ್ಲ. ನಾನು ರಾಜಕಾರಣ ಮಾಡಿದ್ರೆ ಮಂಡ್ಯದಲ್ಲಿ ಮಾತ್ರ ಎಂದು ಸುಮಲತಾ ಹೇಳಿದ್ದಾರೆ.

ಮಂಡ್ಯ ಕ್ಷೇತ್ರವನ್ನು ಮಿತ್ರ ಪಕ್ಷ ಜೆಡಿಎಸ್ ಗೆ ಬಿಟ್ಟುಕೊಡುವುದಾಗಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡುವಾಗಲೇ ಘೋಷಿಸಿದೆ. ಹೀಗಾಗಿ ಸುಮಲತಾ ಅವರಿಗೆ ಮಂಡ್ಯ ಟಿಕೆಟ್ ಸಿಗುವ ಸಾಧ್ಯತೆ ಇಲ್ಲ. ಬೆಂಗಳೂರು ಉತ್ತರ ಕ್ಷೇತ್ರದ ಟಿಕೆಟ್ ಅನ್ನು ಈಗಾಗಲೇ ಶೋಭ ಕರಂದ್ಲಾಜೆ ಅವರಿಗೆ ನೀಡಲಾಗಿದೆ. ಉಳಿದಂತೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಿಲ್ಲಿ ಎಂದು ಸುಮಲತಾಗೆ ಬಿಜೆಪಿ ಮುಖಂಡರು ಹೇಳುತ್ತಿದ್ದಾರಾದರೂ ಅಲ್ಲಿ ಸ್ಪರ್ಧಿಸಲು ಸುಮಲತಾ ಅವರಿಗೆ ಆಸಕ್ತಿ ಇಲ್ಲ.

ಕಳೆದ ಬಾರಿಯಂತೆ ಸುಮಲತಾ ಈ ಬಾರಿಯೂ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ ಅಥವಾ ಕೆಲಕಾಲ ರಾಜಕೀಯದಿಂದ ದೂರ ಉಳಿಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

More articles

Latest article