ಸುಹಾಸ್ ಶೆಟ್ಟಿ ಕೊಲೆ‌‌: ಶಾಂತಿ ಕದಡುವ ಕೆಲಸ ಮಾಡಬೇಡಿ, ಬಿಜೆಪಿಗೆ:  ದಿನೇಶ್ ಗುಂಡೂರಾವ್ ಎಚ್ಚರಿಕೆ

Most read

ಮಂಗಳೂರು: ಬಜಪೆಯಲ್ಲಿ‌ ನಡೆದ ಸುಹಾಸ್ ಶೆಟ್ಟಿ ಕೊಲೆ‌‌ ಕೃತ್ಯ ಅತ್ಯಂತ ಆಘಾತಕಾರಿ ಘಟನೆಯಾಗಿದೆ. ಈಪ್ರಕರಣದಿಂದ ವೈಯಕ್ತಿಕವಾಗಿ ನಾನು ವಿಚಲಿತನಾಗಿದ್ದೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ‌. ಮೇಲ್ನೋಟಕ್ಕೆ ‌ಈ ಕೃತ್ಯ ಹಳೆ ದ್ವೇಷಕ್ಕೆ ನಡೆದಂತೆ ಕಂಡು ಬಂದರೂ ಇದರ ಹಿಂದಿನ ಉದ್ದೇಶ ಕರಾವಳಿಯಲ್ಲಿ ಶಾಂತಿ ಭಂಗ ಉಂಟು ಮಾಡುವಂತಿದೆ. ಹಾಗಾಗಿ ಈ ಕೃತ್ಯ ಎಸಗಿದ ಕ್ರಿಮಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದಾರೆ‌.

ಸುಹಾಸ್ ಶೆಟ್ಟಿ ಹತ್ಯೆಯಲ್ಲಿ ಭಾಗಿಯಾದ ದುಷ್ಕರ್ಮಿಗಳನ್ನು ಯಾವುದೇ ಕಾರಣಕ್ಕೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಇಲ್ಲಿ ಯಾರ ಓಲೈಕೆಯೂ ಇಲ್ಲ, ಯಾರ ತುಷ್ಟೀಕರಣವೂ ಇಲ್ಲ. ಈಗಾಗಲೇ ಈ ಕೃತ್ಯದ ಕುರಿತು ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಹತ್ಯೆ ನಡೆಸಿದ ದುಷ್ಕರ್ಮಿಗಳ ವಿರುದ್ಧ ‌ನಿರ್ದಾಕ್ಷಿಣ್ಯ ಕ್ರಮಕ್ಕೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರೂ ಆದ ದಿನೇಶ ಗುಂಡೂರಾವ್‌ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸುಹಾಸ್ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ‌ಮಾಡಲು ಹೊರಟಿದೆ. ಹೆಣದ ಮೇಲೆ ರಾಜಕೀಯ ಮಾಡಲು ಹೊರಟಿರುವ ಬಿಜೆಪಿಯವರಿಗೆ ಒಂದು ಮಾತು ಹೇಳುವೆ. ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ನಿಮ್ಮದು ಕೂಡ ಇದೆ. ದ್ವೇಷ ಹರಡುವ ಮೂಲಕ‌, ಪ್ರಚೋದಿಸುವ ಮೂಲಕ‌ ಮಂಗಳೂರಿನಲ್ಲಿ ಶಾಂತಿ ಭಂಗ‌ ಮಾಡುವ ದುಷ್ಟ ಕೆಲಸಕ್ಕೆ ಕೈ ಹಾಕಬೇಡಿ‌. ಜವಾಬ್ದಾರಿಯಿಂದ ವರ್ತಿಸಿ ಎಂದು ತಾಕೀತು ಮಾಡಿದ್ದಾರೆ.

ಕೊಲೆಯಾದ ಸುಹಾಸ್ ಕುಟುಂಬಕ್ಕೆ ನ್ಯಾಯ ಕೊಡಿಸುವುದು ನಮ್ಮ ಸರ್ಕಾರದ ಜವಾಬ್ದಾರಿ. ನಾವು‌ ಕೇವಲ ಬಾಯಿ‌ ಮಾತಿನಲ್ಲಿ ಕಠಿಣ ಕ್ರಮದ ಭರವಸೆ ನೀಡುವವರಲ್ಲ. ಬದಲಿಗೆ ಕಾನೂನಿನ ಅನುಸಾರ ಈ ಕೃತ್ಯ ಎಸಗಿದವರಿಗೆ ತಕ್ಕ‌‌ ಪಾಠ ಕಲಿಸುವವರು. ಇದು ನಿಶ್ಚಿತ ಎಂದು ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ‌.

More articles

Latest article