ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸುಧಾಕರ್ ನಾನು ಮನೆಯಲ್ಲ ಇಲ್ಲದ ಸಮಯದಲ್ಲಿ ಮಾಧ್ಯಮದವರನ್ನು ಕರೆದುಕೊಂಡುಬಂದು, ಸಿಂಪಥಿ ಗಿಟ್ಟಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹರಿ ಹಾಯ್ದಿದ್ದಾರೆ.
ಇಂದು ಬೆಳಿಗ್ಗೆ ಸಿಂಗನಾಯಕನಹಳ್ಳಿಯ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ, ವಿಶ್ವನಾಥ್ ತಾವು ಯಾರಿಗೂ ಅಪಮಾನ ಮಾಡುವ ಕೆಲಸ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.
ಡಾ. ಸುಧಾಕರ್ ಮನೆಗೆ ಹೋದರೂ, ವಿಶ್ವನಾಥ್ ಬಾಗಿಲು ತೆಗೆಯದೆ ಅಪಮಾನ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಹಿನ್ನೆಲೆಯಲ್ಲಿ ಇಂದು ಅವರು ಸ್ಪಷ್ಟನೆಗಳನ್ನು ನೀಡಿದ್ದರು.
ಟಿಕೆಟ್ ದೊರೆಯದೇ ಇದ್ದಾಗ ಅಸಮಾಧಾನ ಆಗುವುದು ಸಹಜ. ನಮ್ಮ ಪಕ್ಷದ ಏಳಿಗೆ ಮುಖ್ಯವೇ ಹೊರತು ಬೇರೇನೂ ಇಲ್ಲ. ಇದರಲ್ಲಿ ಯಾವ ಸ್ವಾರ್ಥವೂ ಇಲ್ಲ. ನಾಲ್ಕೈದು ದಿನಗಳ ಹಿಂದೆ ಭೇಟಿ ಮಾಡಬೇಕು ಎಂದು ಸುಧಾಕರ್ ಮೆಸೇಜ್ ಮಾಡಿದ್ದರು. ಅದನ್ನು ಬಿಟ್ಟರೆ ನಮ್ಮ ನಡುವೆ ಯಾವುದೇ ಸಂಪರ್ಕ ಇರಲಿಲ್ಲ. ದಿಢೀರನೆ ಮನೆಗೆ ಬಂದಿದ್ದಾರೆ. ಆ ಸಂದರ್ಭದಲ್ಲಿ ನಾನು ಮನೆಯಲ್ಲಿ ಇರಲಿಲ್ಲ. ಅವರು ಮನೆಗೆ ಬರುವ ಮಾಹಿತಿಯೂ ನನಗೆ ಇರಲಿಲ್ಲ ಎಂದು ಸುಧಾಕರ್ ಹೇಳಿದರು.
ನಾನು ನನ್ನ ವೈಯಕ್ತಿಕ ಕೆಲಸಗಳಿಗಾಗಿ ಹೊರಗೆ ಹೋಗಿದ್ದೆ. ಅವರು ಒಬ್ಬರೇ ಬಂದು ಭೇಟಿ ಮಾಡಬೇಕಿತ್ತು. ಆದರ ಬದಲಾಗಿ ಮಾಧ್ಯಮಗಳನ್ನು ಕರೆತಂದು ಸಿಂಪಥಿ ಸೃಷ್ಟಿಸಿದ್ದಾರೆ. ಗೇಟ್ ಹಾಕಿದ್ರು, ಒಳಗೆ ಬಿಟ್ಟಿಲ್ಲ ಎಂದು ಹೇಳಿದ್ದಾರೆ. ಅವರನ್ನು ಬೀದಿಯಲ್ಲಿ ನಿಲ್ಲಿಸುವ ನಿಕೃಷ್ಟ ನಾನಲ್ಲ ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.