ಹೀಗೊಂದು ಹುಚ್ಚ ಗುರು ಮತ್ತು ಮೂರ್ಖ ಶಿಷ್ಯರ ಕಥೆ

Most read

ಇದು ಒಂದು ಹಳ್ಳಿಯಲ್ಲಿ ನಡೆದ ನಿಜ ಘಟನೆ.  ಈ ಹಳ್ಳಿಯ ತರಹದ ಗುಣಲಕ್ಷಣಗಳು ಮತ್ತು ಘಟನೆಗಳು ದಿಲ್ಲಿಯಲ್ಲಿರುವ ಯಾವುದೇ ಅರೆಸಾಕ್ಷರ ವ್ಯಕ್ತಿಗಳಿಗೆ ಸಾಮ್ಯತೆ ಇರುವುದು ಕಂಡರೆ ಅದು ಸಂಪೂರ್ಣ ಕಾಕತಾಳೀಯ.  ಗುಜರಾತಿನಲ್ಲಿ ಇಂತಹ ವಿಕ್ಷಿಪ್ತರು ಯಾರಾದರೂ ಇದ್ದಾರೆ ಎಂದು ನಿಮಗೆ ಅನಿಸಿದರೆ ಅದು ನಿಮ್ಮ ಕಲ್ಪನೆ ಮತ್ತು ಅದಕ್ಕೆ ನೀವೇ ಜವಾಬ್ದಾರರು ಪ್ರವೀಣ್‌ ಎಸ್‌ ಶೆಟ್ಟಿ, ಚಿಂತಕರು

ಒಂದೂರಲ್ಲಿ ಊರ ಹೊರಗೆ ಪಾಳು ಬಿದ್ದ ಒಂದು ದೇವಾಲಯವಿತ್ತು. ಅಲ್ಲಿ ಊರಿನ ಸೋಮಾರಿ ಪಡ್ಡೆ ಹುಡುಗರು ಜುಗಾರಿ ಆಡಿ ಕಾಲ ಕಳೆಯುತ್ತಿದ್ದರು. ಒಂದು ದಿನ ಮಧ್ಯಾಹ್ನ ಈ ಪಡ್ಡೆಗಳು ಪಾಳು ದೇವಳಕ್ಕೆ ಹೋದಾಗ ದೇವಾಲಯ ಸ್ವಚ್ಛವಾಗಿತ್ತು ಮತ್ತು ಗರ್ಭಗುಡಿಯಲ್ಲಿ ಯಾರೋ ಒಂದು ಗುಂಡು ಕಲ್ಲು ಇಟ್ಟು ಅದನ್ನು ಕಾಡು ಹೂವಿನಿಂದ ಅಲಂಕರಿಸಿದ್ದು ಕಂಡು ಬಂತು. ಪಡ್ಡೆಗಳು ಕುತೂಹಲದಿಂದ ಗರ್ಭಗುಡಿ ಹೊಕ್ಕು ನೋಡಿದಾಗ ಅಲ್ಲಿ ಒಬ್ಬ ಉದ್ದ ಗಡ್ಡ ಉದ್ದ ತಲೆಕೂದಲು ಇದ್ದ ವ್ಯಕ್ತಿ  ಅದೇನೋ ಮಂತ್ರ ಪಠಿಸುತ್ತಾ ಕೂತಿದ್ದ. ಅವನ ಮೈಮೇಲಿದ್ದ ಬಟ್ಟೆಯಿಂದ ಹಾಗೂ ವರ್ತನೆಯಿಂದ ಅವನು ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿದ್ದ ವ್ಯಕ್ತಿ ಎಂದು ಗೊತ್ತಾಗುತ್ತಿತ್ತು. ಪಡ್ಡೆಗಳು ಅವನನ್ನು ಕೆದಕಿ ವಿಚಾರಿಸಿದಾಗ ಅವನು ಸ್ವಲ್ಪ ದೂರದಲ್ಲಿರುವ ನಗರದ ಒಂದು ದೇವಸ್ಥಾನದ ಅರ್ಚಕನಾಗಿದ್ದ. ಚಿಕ್ಕಂದಿನಲ್ಲಿ ಅತಿ ಬಡತನದಿಂದಾಗಿ ಅವನು ಬಸ್ ಸ್ಟ್ಯಾಂಡ್ ನಲ್ಲಿ ಚಹಾದ ಜತೆಗೆ ಗಾಂಜಾ ಮಾರುತ್ತಿದ್ದ,  ದೊಡ್ಡವನಾದ ಮೇಲೆ ಅರ್ಚಕ ವೃತ್ತಿ ಕಲಿತು ನಗರದ ದೇವಳವೊಂದರಲ್ಲಿ  ಅರ್ಚಕನಾಗಿದ್ದ,  ಆದರೆ ಅವನ ಹೆಂಡತಿ ಬಿಟ್ಟು ಹೋಗಿದ್ದರಿಂದ ಅರ್ಚಕನಿಗೆ ಹುಚ್ಚು ಹಿಡಿದಿತ್ತು ಮತ್ತು ಅವನ ಹಿತೈಷಿಗಳು ಅವನನ್ನು ಹುಚ್ಚಾಸ್ಪತ್ರೆ ಸೇರಿಸಿದ್ದರು. ಆದರೆ ನಿನ್ನೆ ಸಾಯಂಕಾಲ ಅವನು ಹುಚ್ಚಾಸ್ಪತ್ರೆಯಿಂದ ತಪ್ಪಿಸಿಕೊಂಡು ಗೊತ್ತುಗುರಿ ಇಲ್ಲದೇ ಅಲೆಯುತ್ತಾ ಈ ಹಳ್ಳಿಗೆ ಬಂದು ಮುಟ್ಟಿದ್ದ ಎಂದು ತಿಳಿದು ಬಂತು.

ಆದರೆ ಅವನ ಉದ್ದನೆಯ ಗಡ್ಡ ಹಾಗೂ ಅವನು ಪಠಿಸುತ್ತಿದ್ದ ಮಂತ್ರ ಕೇಳಿ ಪಡ್ಡೆಗಳಲ್ಲಿ ಒಬ್ಬ ವ್ಯಾಪಾರಿ ಬುದ್ಧಿಯವನಿಗೆ ಒಂದು ಯುಕ್ತಿ ಹೊಳೆಯಿತು. ಅವನ ಯೋಜನೆಯಂತೆ ಆ ಐದು ಪಡ್ಡೆಗಳು “ಆ ವ್ಯಕ್ತಿ ಹಿಮಾಲಯದಲ್ಲಿ 12 ವರ್ಷ ತಪಸ್ಸು ಮಾಡಿ ಬಂದಿರುವ ಪವಾಡ ಪುರುಷ, ಚಿಕ್ಕಂದಿನಲ್ಲಿ ಅವನು ತನ್ನ ಊರಿನ ನದಿಯಲ್ಲಿದ್ದ ಮೊಸಳೆಗಳೊಂದಿಗೆ ಹೊಡೆದಾಡಿದ್ದ ವೀರ, ದೇಶಭಕ್ತಿಗಾಗಿ ಹೆಂಡತಿ ಬಿಟ್ಟವನು, ಹಾಗೂ ಅವನ ಕೃಪೆಯಾದರೆ ಜನರ ಕಷ್ಟಗಳು ಪರಿಹಾರ ಆಗುತ್ತವೆ” ಎಂದು ಪ್ರಚಾರ ಮಾಡಿದರು.

ಸಾಂದರ್ಭಿಕ ಚಿತ್ರ

ಅದು ಅರೆಸಾಕ್ಷರ ರೈತರೇ ಹೆಚ್ಚಿದ್ದ ಊರಾಗಿತ್ತು. ಆಗ ಮಳೆಗಾಲವಾದರೂ ಮಳೆ ತಡವಾಗಿದ್ದರಿಂದ ಊರ ರೈತರು ಕಳವಳಗೊಂಡಿದ್ದರು. ಈ ಹುಚ್ಚ ಆ ಊರಿಗೆ ಬಂದ ದಿನವೇ ಕಾಕತಾಳೀಯವಾಗಿ ಚೆನ್ನಾಗಿ ಮಳೆ ಬೀಳಲು ಶುರುವಾಯಿತು.  ಈ ಮಳೆ ಬಂದಿದ್ದು ತಮ್ಮ ಊರಿಗೆ ಬಂದಿರುವ ಮಹಾತ್ಮನ ಪವಾಡದಿಂದಲೇ ಎಂದು ಪಡ್ಡೆಗಳು ಪ್ರಚಾರ ಮಾಡಿದರು. ಆನಂತರ ಆ ಋತುವಿನಲ್ಲಿ ಮಳೆ ಬೆಳೆ ಚೆನ್ನಾಗಿ ಆಗಿದ್ದರಿಂದ ಆ ಹುಚ್ಚ ನಿಜವಾಗಿ ಮಹಾತ್ಮನಾಗಿರುವ ಬಗ್ಗೆ ಊರಿನ ಮುಗ್ಧ ಜನರ ನಂಬಿಕೆ ಹೆಚ್ಚುತ್ತಾ ಹೋಯಿತು. ಮೇಲಾಗಿ ಅವನ ಪವಾಡದ ಸುದ್ದಿ ನೆರೆಯ ಊರುಗಳಿಗೂ ಹಬ್ಬಿ ಅಲ್ಲಿಂದ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಅದರಿಂದಾಗಿ ಮಹಾತ್ಮರಿಗೆ ಹರಕೆ-ದಕ್ಷಿಣೆಯ ರೂಪದಲ್ಲಿ ಹೆಚ್ಚು ಹೆಚ್ಚು ಹಣ ಬರಲು ಶುರುವಾಗಿ ಆ ಹುಚ್ಚನನ್ನು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದ ಅಂಬಾನಯ್ಯ ಮತ್ತು ಅದಾನಯ್ಯ ಎಂಬ ಹೆಸರಿನ ಶಿಷ್ಯರ ವೇಷದ ಪಡ್ಡೆಗಳ ಆದಾಯವೂ ಭಾರಿ ಹೆಚ್ಚಾಯಿತು. ಜತೆಗೆ ಆ ಊರಲ್ಲಿ ಪಡ್ಡೆಗಳ ರಾಜಕೀಯ ಪ್ರಭಾವವೂ ಬೆಳೆಯಿತು. ಅದನ್ನು ಬಳಸಿ ಒಬ್ಬ ಪಡ್ಡೆ ಊರಿನ ಪಟೇಲನೂ ಆಗಿಬಿಟ್ಟ.  ಆ ಪಟೇಲ ನೆರೆಯ ಪಟ್ಟಣಕ್ಕೆ ಹೋಗಿ ಅಲ್ಲಿಯ ಒಂದು ಪತ್ರಿಕೆ ಮತ್ತು ಸ್ಥಳೀಯ ಟಿ‌ವಿ ಚಾನೆಲ್‌ ನವರಿಗೆ ಒಳ್ಳೆಯ ಹಣ ಕೊಟ್ಟು ಟಿ‌ವಿ ಮತ್ತು ಪತ್ರಿಕೆಯಲ್ಲಿ ಹುಚ್ಚನ ಮಹಾತ್ಮೆಯ ಕುರಿತು ಅನೇಕ ಕಾಲ್ಪನಿಕ ಕತೆಗಳನ್ನು ಪ್ರಕಟಿಸಿದನು. ಅವನು ವಿಷ್ಣುವಿನ ಹನ್ನೊಂದನೆ ಅವತಾರ ಎಂದೂ ಬಣ್ಣಿಸಲಾಯಿತು.

ಅಷ್ಟೇ ಅಲ್ಲ ಆ ಪಡ್ಡೆ ಪಟೇಲ ಊರಿನ ಸರಕಾರಿ ಜಮೀನು ಗೋಮಾಳ ಕೆರೆಗಳನ್ನು ಒತ್ತುವರಿ ಮಾಡಿ ತನ್ನ ನಗರದ ಮಾರ್ವಾಡಿ ಆಪ್ತಮಿತ್ರ  ಜೂಟಾಣಿಗೆ ಜುಜುಬಿ ಕ್ರಯಕ್ಕೆ ಮಾರಿದನು. ಜತೆಗೆ ಹಳ್ಳಿಗರ ಮೇಲೆ ಜಿ‌ಎಸ್‌ಟಿ ಅಂದರೆ ‘ಗ್ರಾಮ ಸೇವಾ ಟ್ಯಾಕ್ಸ್’ ವಿಧಿಸಿದನು. ಇವರ ಕೆಟ್ಟ ಕೃತ್ಯಗಳಿಗೆ ಅಡ್ಡ ಬಂದ ಅತಿ ಪ್ರಾಮಾಣಿಕ ಗ್ರಾಮಸ್ಥರಾಗಿದ್ದ ಹರೇನ್ ಪಾಂಡು ಮತ್ತು ಜಡೇಜಾ ಲೋಯಾ ಎಂಬವರನ್ನು ಹೊಡೆದು ಬಡಿದು ಊರಿನಿಂದಲೇ ಓಡಿಸಿದರು ಆ ಪಡ್ಡೆ ಪಟೇಲನ ಕಡೆಯ ಗೂಂಡಾಗಳು.    

ಈ ಹಳ್ಳಿಯ ನೆರೆಯಲ್ಲಿ ಪುಲವಾಮಗಿರಿ ಎಂಬ ಇನ್ನೊಂದು ಹಳ್ಳಿಯಿತ್ತು. ಅಲ್ಲಿಂದ ದಿನಾಲೂ ಒಂದು ಬಸ್ ಈ ಹಳ್ಳಿಗೆ ಬಂದು ಹೋಗುತ್ತಿತ್ತು.  ಒಂದು ದಿನ ರಾತ್ರಿ ಹುಚ್ಚ ಮತ್ತು ಪಡ್ಡೆಗಳು ರಸ್ತೆಗೆ ಅಡ್ಡವಾಗಿ ಒಂದು ಆಳ ಕಂದರ ಅಗೆದು ದೂರದಲ್ಲಿ ಅಡಗಿ ಕುಳಿತರು.  ಪುಲವಾಮಗಿರಿಯಿಂದ ಬಂದ ಬಸ್ಸು ಆ ತಗ್ಗಿನಲ್ಲಿ ಸಿಲುಕಿ ಉರುಳಿತು. ಹುಚ್ಚ ಮತ್ತು ಪಡ್ಡೆಗಳು ಆ ಬಸ್ಸಿನಲ್ಲಿದ್ದ ಗಾಯವಾಗಿ ಬಿದ್ದಿದ್ದ ಪ್ರಯಾಣಿಕರ ಒಡವೆ ಹಣ ಎಲ್ಲಾ ಲೂಟಿ ಮಾಡಿದರು, ಹಾಗೂ ಅದರ ಆರೋಪ ಇನ್ನೊಂದು ಹಳ್ಳಿಯ ರೌಡಿಗಳ ಮೇಲೆ ಹಾಕಿ ತಾವು ಒಳ್ಳೆಯವರೆನಿಸಿ ಕೊಂಡರು.  ಆದರೆ ಇದನ್ನೆಲ್ಲಾ ಸತ್ಯಪಾಲ ಎಂಬ ಗೃಹಸ್ಥರೊಬ್ಬರು ಸರಿಯಾಗಿ ಗಮನಿಸಿದ್ದರು.   

ಸಾಂದರ್ಭಿಕ ಚಿತ್ರ

ಋತುವಿನ ಕೊನೆಗೆ ಸಮೃದ್ಧ ಫಸಲು ಕಟಾವಿಗೆ ಬಂದು ನಿಂತಿತ್ತು, ಆದರೆ ಒಂದು ಅಮವಾಸ್ಯೆ ರಾತ್ರಿ ಆ ಹುಚ್ಚನ ಹುಚ್ಚು ಕೆರಳಿ ನಡು ರಾತ್ರಿಯಲ್ಲಿ ಎಲ್ಲರೂ ಮಲಗಿದ್ದಾಗ ಆ ಮಹಾತ್ಮ ಒಂದು ಕೊಳ್ಳಿ ಹಿಡಿದುಕೊಂಡು ಊರ ಸುತ್ತಲಿನ ಹೊಲಗಳಿಗೆ ನುಗ್ಗಿ ಕಟಾವಿಗೆ ಬಂದಿದ್ದ ಫಸಲಿಗೆ ಬೆಂಕಿ ಇಟ್ಟು ಸುಟ್ಟು ಹಾಕಿದನು. ಮರುದಿನ ಬೆಳಿಗ್ಗೆ ತಮ್ಮ ಬೆಳೆಯೆಲ್ಲಾ ಸುಟ್ಟು ಹೋಗಿರುವುದು ಕಂಡು ಊರಿನಲ್ಲೆಲ್ಲಾ ಹಾಹಾಕಾರ ಎದ್ದಿತು. ಈ ಹುಚ್ಚ ಬೆಳೆಗಳಿಗೆ ಬೆಂಕಿ ಇಕ್ಕುವುದನ್ನು ನೋಡಿದ್ದವರೊಬ್ಬರು ಅದನ್ನು ಊರವರಿಗೆ ತಿಳಿಸಿದರು.  ಊರವರ ಸಿಟ್ಟು ಆ ಹುಚ್ಚ ಸ್ವಾಮಿಯ ವಿರುದ್ಧ ತಿರುಗಿತು. ಆಗ ತಕ್ಷಣ ಜಾಗೃತರಾದ ಪಡ್ಡೆ ಶಿಷ್ಯರು ಊರಿನ ಜನರನ್ನು ಸಮಾಧಾನಿಸುತ್ತ, “ಈ ಬಾರಿಯ ಬೆಳೆಯ ನಡುವೆ ತುಂಬಾ ಕಳೆ ಬೆಳೆದಿತ್ತು ವಿಷದ ಕೀಟಗಳು ತಾಗಿದ್ದವು.  ಹಾಗಾಗಿ ಕಾಳುಗಳೆಲ್ಲಾ ಹೊರಗಿನಿಂದ ನೋಡಲು ಚೆನ್ನಾಗಿದ್ದರೂ ಒಳಗಿನಿಂದ ಜೊಳ್ಳಾಗಿ ವಿಷಪೂರಿತವಾಗಿದ್ದವು.  ಈ ಸತ್ಯ ಮಹಾತ್ಮರಿಗೆ ಅಂತರ್ ಜ್ಞಾನದಿಂದ ಗೊತ್ತಾಗಿ ಅವರು ಮುಂದಿನ ದಿನಗಳಲ್ಲಿ ಪೈರಿನ ನಡುವಿನ ವಿಷಕಾರಿ ಕೀಟ ಮತ್ತು ಕಳೆಗಳನ್ನು ಸಂಪೂರ್ಣ ನಿವಾರಿಸಲು ಹಾಗೂ ಈಗಿನ ಜೊಳ್ಳು ಪೈರು ಸುಟ್ಟ ಗೊಬ್ಬರವಾಗಿ ಮುಂದಿನ ಋತುವಿಗೆ ನೆಲದ ಸತ್ವ ಹೆಚ್ಚಿಸಲು ಮತ್ತು ಮುಂದಿನ ಬೆಳೆಯ ಕಾಳು ಜೊಳ್ಳು ಆಗದಿರಲು ಮಹಾತ್ಮರು ನಿಮ್ಮ ಒಳ್ಳೆಯದಕ್ಕೇ ಬೆಳೆಗಳಿಗೆ ಬೆಂಕಿ ಕೊಟ್ಟಿದ್ದು, ನೋಟು ರದ್ದತಿಯಂತೆ ಇದು ಫಸಲು ರದ್ದತಿ, ಮುಂದೆ ಈ ಮಹಾತ್ಮರಿಂದಾಗಿ ಊರಿನವರಿಗೆ ಒಳ್ಳೆಯ ದಿನಗಳು ಬರಲಿವೆ” ಎಂದು ಪಡ್ಡೆ ಶಿಷ್ಯರು ಊರಿನ ಮುಗ್ಧ ರೈತರ ತಲೆ ತಿಕ್ಕಿ ಮಂಗ ಮಾಡಿದರು.

ಹೊಸದಾಗಿ ಹುಟ್ಟಿದ್ದ ನೆರೆಯ ಊರಿನ ಭಕ್ತರೂ ಈ ಊರಿನ ರೈತರಿಗೆ ಉಪದೇಶಿಸುತ್ತಾ- “ಮಹಾತ್ಮರು ನಿಮಗಾಗಿ ಇಷ್ಟೆಲ್ಲಾ ಕಷ್ಟಪಡುತ್ತಿದ್ದಾರೆ, ಇಷ್ಟೆಲ್ಲಾ ತ್ಯಾಗ ಮಾಡಿ ನಿಮ್ಮ ಊರಿಗೆ ಬಂದು ನೆಲೆಸಿದ್ದಾರೆ, ಆದರೆ ಅವರ ಮಹಾತ್ಮೆಯನ್ನು ಅರಿಯಲು ಆಗದ ಪಾಪಿಗಳು ನೀವು, ನಿಮಗಾಗಿ ತಮ್ಮ ಹೆಂಡತಿ ಮತ್ತು ಕುಟುಂಬವನ್ನು ತ್ಯಾಗ ಮಾಡಿದ ಮಹಾತ್ಮರು ನಿಮಗಾಗಿ ವರ್ಷಗಟ್ಟಲೆ ಉಪವಾಸವಿದ್ದು ಹಿಮಾಲಯದಲ್ಲಿ ತಪಸ್ಸು ಮಾಡಿದ್ದಾರೆ, ಈಗ ನಿಮ್ಮ ಬೆಳೆ ಸುಟ್ಟು ಹೋಗಿ ನಿಮ್ಮ ಮಕ್ಕಳು ಸ್ವಲ್ಪ ದಿನ ಉಪವಾಸ ಬಿದ್ದರೂ ಊರಿನ ಒಳ್ಳೆಯದಕ್ಕಾಗಿ ನಿಮ್ಮಿಂದ ಸ್ವಲ್ಪ ದಿನ ತಾಳ್ಮೆ ವಹಿಸಲು ಸಾಧ್ಯ ಇಲ್ಲವೇ? ಇಂತಹಾ ಸಣ್ಣ ತ್ಯಾಗವನ್ನೂ ಮಾಡಲಾಗದ ಮಹಾಸ್ವಾರ್ಥಿಗಳು ನೀವು,  ನಮ್ಮ ಗಡಿಯಲ್ಲಿ ನೋಡಿ ನಮ್ಮ ಸೈನಿಕರು ಹೇಗೆ ಬಿಸಿಲು  ಮಳೆ ಹಿಮಗಾಳಿ ಲೆಕ್ಕಿಸದೆ ದೇಶ ಕಾಯುತ್ತಿದ್ದಾರೆ, ನಿಮಗೆ ಇಷ್ಟು ಸಣ್ಣ ತ್ಯಾಗ ಕೂಡಾ ಮಾಡಲಾಗದೇ?” ಎಂದು ಶಿಷ್ಯರು ಮತ್ತು ಪರಊರಿನ ಭಕ್ತರು ರೈತರನ್ನು ಮೂದಲಿಸಿದರು. ಈ ಮಾತು ಕೇಳಿ, ಮಹಾತ್ಮ ತರುವ ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಊರಿನ ಜನರು ಹೇಗೋ ಅರೆಹೊಟ್ಟೆಯಲ್ಲಿ ದಿನ ದೂಡತೊಡಗಿದರು. ಆನಂತರ ಒಮ್ಮೆ ಊರಿಗೆ ಸಾಂಕ್ರಾಮಿಕ ರೋಗ ಪಸರಿಸಿತು. ಆಗ ಆ ಹುಚ್ಚ ಆದೇಶಿಸಿದನು ಎಂದು ಊರವರು ಚಪ್ಪಾಳೆ ತಟ್ಟಿ , ತಾಟು-ಹರಿವಾಣ ಬಡಿದು, ಕ್ಯಾಂಡಲ್ ಬೆಳಗಿಸಿ  ಡ್ಯಾನ್ಸ್ ಮಾಡಿ ಆ ಸಾಂಕ್ರಾಮಿಕವನ್ನು ಓಡಿಸಲು ಪ್ರಯತ್ನಿಸಿದರು.  ಆಗಲೂ ಆ ಪಡ್ಡೆ ಶಿಷ್ಯರು ಔಷಧ ಮಾರುವ ಗುಜರಾತಿಗಳಿಂದ ಕಮಿಷನ್ ಪಡೆದು ಊರವರಿಗೆ ಕಳಪೆ  ಔಷಧ ಕೊಡಿಸಿದರು.  ಅದರಿಂದಾಗಿ ಅನೇಕ ಹಳ್ಳಿಗರು ಸತ್ತರು.

ಸಾಂದರ್ಭಿಕ ಚಿತ್ರ

ಮತ್ತೆ  ಕೆಲವು ತಿಂಗಳು ಕಳೆದ ನಂತರ ಇನ್ನೊಂದು ಅಮವಾಸ್ಯೆಗೆ ಆ ಹುಚ್ಚನ ಹುಚ್ಚು ಮತ್ತೆ ಕೆರಳಿ, ಈ ಬಾರಿ ನಡು ರಾತ್ರಿಯಲ್ಲಿ ಊರಿನ ರೈತರ ಮನೆ ಮತ್ತು ಕೊಟ್ಟಿಗೆಗಳಿಗೆ ಕೊಳ್ಳಿಯಿಟ್ಟು ಬಿಟ್ಟ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳು ಸುಟ್ಟು ಸತ್ತವು, ಕೆಲವು ಮನೆಯಲ್ಲಿ ಗಾಢ ನಿದ್ದೆಯಲ್ಲಿದ್ದ ಮಕ್ಕಳು ಮುದುಕರು ಸುಟ್ಟು ಹೋದರು. ಈ ವಿಷಯ ನಗರದ ಪೊಲೀಸರಿಗೆ ಗೊತ್ತಾಗಿ ಅವರು ಹುಚ್ಚಾಸ್ಪತ್ರೆಯವರನ್ನು ಕರೆದು ತಂದು ಹುಚ್ಚನನ್ನು ಹಿಡಿದು ಕೊಂಡು ಹೋದಾಗಲೇ ಊರಿನ ಜನರಿಗೆ ಗೊತ್ತಾಗಿದ್ದು, ತಾವು ಇಷ್ಟು ದಿನ ಮಹಾತ್ಮ ಎಂದು ಪೂಜಿಸಿದ್ದು ಒಬ್ಬ ಹುಚ್ಚನನ್ನು ಎಂದು. ಆದರೆ ಅಷ್ಟರಲ್ಲಿ ಮಹಾತ್ಮನ ಹೆಸರಲ್ಲಿ ಶಿಷ್ಯರು ತಾವು ಗಳಿಸಿದ್ದ ಹಣವನ್ನೆಲ್ಲಾ ಎತ್ತಿಕೊಂಡು ಮುಂಬೈಗೆ ಪಲಾಯನಗೈದಿದ್ದರು.

ಮೊದಲ ಬಾರಿಯೇ ಕೈಗೆ ಬಂದಿದ್ದ ಫಸಲು ಸುಟ್ಟಾಗಲೇ ಆ ಮಹಾತ್ಮನ ಹುಚ್ಚನ್ನು ತಾವು ಸರಿಯಾಗಿ ಗುರುತಿಸಿ ಅವನನ್ನು ಊರಿನಿಂದ ಓಡಿಸಿದ್ದರೆ ತಮ್ಮ ಕುಟುಂಬಿಕರ ಹಾಗೂ ಜಾನುವಾರುಗಳ ಜೀವವಾದರೂ ಉಳಿಯುತ್ತಿತ್ತು ಎಂದು ಊರ ಜನರು ಪರಿತಪಿಸತೊಡಗಿದರು, ಆದರೆ ಕಾಲ ಮಿಂಚಿತ್ತು.

ಪ್ರವೀಣ್ ಎಸ್  ಶೆಟ್ಟಿ

ಚಿಂತಕರು    

ಇದನ್ನೂ ಓದಿ-    ಚುನಾವಣೆ ಗೆಲ್ಲುವ ಧೂರ್ತ ಬಿಜೆಪಿ ಸೂತ್ರ                                       

More articles

Latest article