ಬೆಂಗಳೂರು: ಕಟ್ಟಾ ಹಿಂದುತ್ವವಾದಿ, ಪ್ರಖರ ಭಾಷಣಗಾರ್ತಿ ಎಂದೇ ಬಿಂಬಿಸಿಕೊಳ್ಳುವ ಚೈತ್ರಾ ಕುಂದಾಪುರ ತಮ್ಮ ಗೆಳೆಯ ಶ್ರೀಕಾಂತ್ ಕಶ್ಯಪ್ ಜತೆ ಸಪ್ತಪದಿ ತುಳಿದಿದ್ದಾರೆ. ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದ ಈಕೆಯ ವಿವಾಹಕ್ಕೆ ಅನೇಕ ಸಹ ಸ್ಪರ್ಧಿಗಳು ಶುಭ ಹಾರೈಸಿ ಹೋಗಿದ್ದಾರೆ. ಅಪ್ಪಟ ಹಿಂದೂ ಹೆಣ್ಣು ಮಗಳಂತೆ ಈಕೆ ನಡೆದುಕೊಳ್ಳುತ್ತಿದ್ದಾರೆ ಎಂದು ಭಾವಿಸಿದ್ದವರಿಗೆ ಶಾಕ್ ಹೊಡೆಯುವ ರೀತಿಯಲ್ಲಿ ಚೈತ್ರಾ ಕುಂದಾಪುರ ಅವರ ತಂದೆಯೇ ಮಗಳ ಜನ್ಮ ಜಾಲಾಡಿದ್ದಾರೆ.
ಈಕೆಯ ತಂದೆ ಬಾಲಕೃಷ್ಣ ನಾಯ್ಕ್ ʻಹುಟ್ಟಿಸಿದ ಅಪ್ಪ ಬದುಕಿದ್ದರೂ, ನನಗೇ ಮದುವೆಗೆ ಆಮಂತ್ರಣ ನೀಡಿಲ್ಲ. ಕೋಟಿ ಕೋಟಿ ಹಣ ನುಂಗಿದ ಇಂತ ಮಗಳು ಯಾರ ಮನೆಯಲ್ಲೂ ಹುಟ್ಟಬಾರದುʼ ಎಂದು ಕೆಂಡ ಕಾರಿದ್ದಾರೆ.
ಕಳ್ಳ ಕಳ್ಳರ ಮದುವೆಯ ಬಗ್ಗೆ ಏನನ್ನೂ ಹೇಳಲಾರೆ. ಆ ಶ್ರೀಕಾಂತ್ 12 ವರ್ಷಗಳಿಂದ ನಮ್ಮ ಮನೆಯಲ್ಲೇ ಉಳಿದುಕೊಂಡಿದ್ದ. ನನ್ನ ಮಗಳೂ ಕಳ್ಳಿ. ಆತನೂ ಅದೇ ಮಾದರಿಯವ. ದರೋಡೆ, ದೇಶಕ್ಕೆ ದ್ರೋಹ ಎಸಗುವುದು, ವಂಚನೆ ಮಾಡುವುದು ಇಬ್ಬರ ಕಸುಬಾಗಿತ್ತು. ಅವಳಿಗಂತೂ ಮಾನ ಮರ್ಯಾದೆ ಇಲ್ಲ. ನಮ್ಮ ಕುಟುಂಬದ ಮಾನ ಮರ್ಯಾದೆ ತೆಗೆದಿದ್ದಾಳೆ. ಅವಳು ಯಾವತ್ತೂ ಉದ್ದಾರ ಆಗುವುದಿಲ್ಲ. ಅವಳು ಮಾಡುವ ಕೆಲವು ಕೆಲಸಗಳಿಗೆ ನಾನು ಒಪ್ಪಿಗೆ ಕೊಡಲಿಲ್ಲ. ನಾನು ಸತ್ಯ ನ್ಯಾಯದ ಪರವಾಗಿ ಇದ್ದವ ಎಂದು ಕಣ್ಣೀರು ಹರಿಸಿದ್ದಾರೆ.
ಕೋಟಿ ಕೋಟಿ ಹಣ ಹೊಡೆದಿದ್ದಾಳೆ:
ಬಿಗ್ ಬಾಸ್ ನಲ್ಲಿ ಅವಕಾಶ ಸಿಕ್ಕಾಗಲೂ ಅಪ್ಪನಾದ ನನಗೆ ಹೇಳಲಿಲ್ಲ. ತಾನೇ ಮನೆಯನ್ನು ನಡೆಸುತ್ತಿದ್ದೇನೆ ಎಂದು ಕೇಳಿಕೊಂಡು ಓಡಾಡುತ್ತಿದ್ದಾಳೆ. ಈ ಪಾಪಿಯನ್ನು ನಾನು ಯಾವತ್ತೂ ಕ್ಷಮಿಸುವುದಿಲ್ಲ. ಅವಳು ಕ್ರಿಮಿ ಇದ್ದ ಹಾಗೆ. ದೇಶಕ್ಕೆ ಮಾರಕ. ಗೋವಿಂದ ಪೂಜಾರಿಗೆ ಟಿಕೆಟ್ ಕೊಡಿಸುವುದಾಗಿ ಕೋಟಿ ಕೋಟಿ ಹಣ ಹೊಡೆದಿದ್ದಾಳೆ. ಆ ಹಣವನ್ನು ಬೇರೆ ಬೇರೆಯವರು ಮತ್ತು ಪಡ್ಡೆ ಹುಡುಗರ ಹೆಸರಲ್ಲಿ ಬ್ಯಾಂಕ್ ನಲ್ಲಿ ಇರಿಸಿದ್ದಾಳೆ. ಅದೇ ಡಿಪಾಸಿಟ್ ಹಣದ ಮೇಲೆ ಸಾಲ ಪಡೆದು, ಆ ಸಾಲದಿಂದ ಬರುವ ಬಡ್ಡಿಯಲ್ಲಿ ಜೀವನ ನಡೆಸುತ್ತಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಮಗಳಾದರೂ ಈಕೆ ದೇಶಕ್ಕೆ ಮಾರಕ. ಇವಳು ನನ್ನ ಮಗಳು ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತಿದೆ. ಇಂತಹವರನ್ನು ಜನ ಬೆಂಬಲಿಸುತ್ತಾರಲ್ಲಾ, ಅದೇ ದುರಂತ. ಸೈನಿಕರಿಗೆ ದುಡ್ಡು ಕೊಡ್ತೀನಿ ಎಂದು ಸುಳ್ಳು ಹೇಳುತ್ತಿದ್ದಾಳೆ. ಸ್ವಂತ ದುಡ್ಡು, ದುಡಿದ ದುಡ್ಡು ಕೊಟ್ಟಿದ್ದರೆ ನನಗೆ ಸಂತೋಷವಿತ್ತು. ಯಾರದೋ ತಲೆ ಒಡೆದು ಕೊಟ್ಟರೆ ಅದು ಸರೀಯೇ ? ಎಂದು ಪ್ರಶ್ನಿಸಿದ್ದಾರೆ. ನನ್ನ ದೊಡ್ಡ ಮಗಳು ಮರ್ಯಾದೆಯಿಂದ ಬದುಕು ನಡೆಸುತ್ತಿದ್ದಾಳೆ. ಇವಳಂತೆ ಅಲ್ಲ ಎಂದು ಹೇಳಿದ್ದಾರೆ.
ಸಾಕಿ ಸಲುಹಿದ ಅಪ್ಪನನ್ನೇ ಮದುವೆಗೆ ಕರೆದಿಲ್ಲ:
ಹೋಟೆಲ್‌ನಲ್ಲಿ ದೋಸೆ , ಟೀ ಕಾಫಿ ಮಾಡಿಕೊಂಡು ಇದ್ದೇನೆ. ಮಗಳಾದ ಇವಳಿಗೆ ಅಪ್ಪನಾದ ನನಗೆ ಒಂದು ತುತ್ತು ಅನ್ನ ಹಾಕುವ ಯೋಗ್ಯತೆ ಇಲ್ಲ. ಕೋಟಿ ಕೋಟಿ ಹಣ ತಂದು ನನ್ನ ಹೆಂಡತಿ ಕೈಗೆ ಕೊಟ್ಟಿದ್ದಾಳೆ. ಅವಳಿಗೂ ಗಂಡ ಬೇಡ, ಮಗಳು ಬೇಕು. ತಪ್ಪು ಮಾಡಿದಾಗ, ಮಗಳೇ ನೀನು ಮಾಡಿದ್ದು ತಪ್ಪು ಮಾಡುತ್ತಿರುವೆ ಎಂದು ಯಾವತ್ತೂ ಹೇಳಲಿಲ್ಲ. ಮಗಳ ಜೊತೆಗೆ ಇವಳೂ ನಾಚಿಕೆ ಬಿಟ್ಟು ನಿಂತಿದ್ದಾಳೆ. ಬಿಗ್ ಬಾಸ್‌ಗೆ ಹೋಗುವಾಗಲೂ ನನ್ನ ಗಮನಕ್ಕೆ ತರಲಿಲ್ಲ. ಅಪ್ಪ ಬದುಕಿದ್ದರೂ, ಮದುವೆಗೆ ಕರೆದಿಲ್ಲ. ನನ್ನನ್ನು ಕರೆದರೆ ಇವರು ಮಾಡುವ ಕಳ್ಳ ಕೆಲಸ ಹೊರಗೆ ಬರುತ್ತದೆ ಎಂದು ಕರೆದಿಲ್ಲ ಎಂದು ನೋವನ್ನು ಹಂಚಿಕೊಂಡಿದ್ದಾರೆ.
ಯಾರ ಮನೆಯಲ್ಲೂ ಇಂಥ ಕೆಟ್ಟ ಹೆಣ್ಣು ಹುಟ್ಟಬಾರದು!:
ಅಷ್ಟಕ್ಕೂ ಈ ಮದುವೆಗೆ ನನ್ನ ಒಪ್ಪಿಗೆ ಇಲ್ಲ. ಏಕೆಂದರೆ ಅವನೂ ಕಳ್ಳ. ಇವಳೂ ಕಳ್ಳಿ. ಕಳ್ಳ ಕಳ್ಳಿ ಮದುವೆ ಆಗಿದ್ದಾರೆ. ಯಾರ ತಲೆ ಹೊಡೆಯಬೇಕು ಎನ್ನುವುದೇ ಇವರ ಉದ್ದೇಶ. ವಿಡಿಯೋದಲ್ಲಿ ತಂದೆ ಇಲ್ಲದ ಹುಡುಗಿ ಎಂದು ಹೇಳಿಕೆ ಕೊಟ್ಟಿದ್ದಾರೆ. ನಾನು ಬದುಕಿದ್ದರೂ ಇಂಥ ಹೇಳಿಕೆ ಕೊಡಲು ಕಾರಣ ಏನು? ನಾನು ಖಂಡಿತ ಅವಳನ್ನು ಕ್ಷಮಿಸುವುದಿಲ್ಲ. ಯಾವ ಕುಟುಂಬದಲ್ಲಿಯೂ ಇಂಥ ಹೆಣ್ಣು ಮಗಳು ಹುಟ್ಟಬಾರದು. ಇವಳು ಹೇಳುವುದೆಲ್ಲವೂ ಅಪ್ಪಟ ಸುಳ್ಳು. ತಂದೆಗೆ ಒಂದು ತುತ್ತು ಅನ್ನ ಹಾಕುವ ಯೋಗ್ಯತೆಯೂ ಇಲ್ಲದ ಮಗಳು ಎಂದು ಬಾಲಕೃಷ್ಣ ನಾಯ್ಕ್ ತಮ್ಮ ಮಗಳು ಚೈತ್ರಾ ಕುಂದಾಪುರ ಮೇಲೆ ಸರಣಿ ಆರೋಪಗಳನ್ನು ಮಾಡಿದ್ದಾರೆ.