ನೊಯ್ಡಾ: ಮೋಜು ಮಸ್ತಿಗಾಗಿ ಪಾರ್ಟಿ ಮಾಡುತ್ತಿದ್ದಾಗ ಆರಂಭಗೊಂಡ ಜಗಳ ವಿಕೋಪಕ್ಕೆ ತಿರುಗಿ ತಮ್ಮ ಗೆಳೆಯನನ್ನೆ ನಾಲ್ವರು ಕಾಲೇಜು ವಿದ್ಯಾರ್ಥಿಗಳು ಕೊಂದು ಆತನ ಶವವನ್ನು ಅಮ್ರೋಹ ಎಂಬಲ್ಲಿ ಹೂತು ಹಾಕಿದ ಅಮಾನುಷ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ಈ ಸಂಬಂಧ ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ. ಕೊಲೆಗೀಡಾದ ವಿದ್ಯಾರ್ಥಿ ಯಶ್ ಮಿಥ್ಥಲ್ ನೊಯ್ಡಾ ವಿಶ್ವವಿದ್ಯಾಲಯದಲ್ಲಿ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗದಲ್ಲಿ ಪದವಿ ವಿದ್ಯಾಭ್ಯಾಸ ನಡೆಸುತ್ತಿದ್ದ.
ಘಟನೆಯ ಹಿನ್ನೆಲೆ: ಉದ್ಯಮಿ ದೀಪಕ್ ಮಿಥ್ಥಲ್ ಅವರ ಮಗ ಯಶ್ ಮಿಥ್ಥಲ್ ಕಳೆದ ಮಂಗಳವಾರ ಹಾಸ್ಟೆಲ್ ನಿಂದ ಕಾಣೆಯಾಗಿದ್ದ. ಈ ವಿಷಯ ತಿಳಿಯುತ್ತಿದ್ದಂತೆ ದೀಪಕ್ ಮಿಥ್ಥಲ್ ನೋಯ್ಡಾ ಪೊಲೀಸರ ಮೊರೆಹೋಗಿದ್ದರು. ನಿಮ್ಮ ಮಗ ನಮ್ಮ ವಶದಲ್ಲಿದ್ದಾನೆ, ಅವನನ್ನು ನಿಮಗೆ ಒಪ್ಪಿಸಬೇಕು ಎಂದರೆ ಆರು ಕೋಟಿ ರುಪಾಯಿ ಕೊಡಬೇಕು ಎಂದು ದೀಪಕ್ ಅವರಿಗೆ ಅನಾಮಧೇಯರಿಂದ ಸಂದೇಶಗಳು ಬಂದಿದ್ದವು.
ತನಿಖೆ ಕೈಗೊಂಡ ನೊಯ್ಡಾ ಪೊಲೀಸರು, ಯಶ್ ಓದುತ್ತಿದ್ದ ವಿಶ್ವವಿದ್ಯಾಲಯದ ಸಿಸಿ ಟಿವಿಗಳನ್ನು ಪರಿಶೀಲಿಸಿದರು. ಜೊತೆಗೇ ಆತನ ಮೊಬೈಲ್ ನ ಕಾಲ್ ರೆಕಾರ್ಡ್ ಗಳನ್ನು ಪರಿಶೀಲಿಸಿದರು. ಸೋಮವಾರ ಕಾಣೆಯಾಗುವುದಕ್ಕೆ ಮುನ್ನ ಆತ ಯಾರೊಂದಿಗೋ ಮೊಬೈಲ್ ನಲ್ಲಿ ಮಾತನಾಡುವ ದೃಶ್ಯ ಸಿಸಿ ಟಿವಿಯಲ್ಲಿ ಕಂಡ ಕೂಡಲೇ, ಆ ಸಮಯದ ಆತನ ಕಾಲ್ ರೆಕಾರ್ಡ್ ಗಳನ್ನು ತಾಳೆ ಹಾಕಿ ನೋಡಿದಾಗ ಆತ ರಚಿತ್ ಎಂಬ ತನ್ನ ಸ್ನೇಹಿತನೊಂದಿಗೆ ಮಾತನಾಡುತ್ತಿರುವುದು ಪತ್ತೆಯಾಯಿತು.
ರಚಿತ್ ನನ್ನು ವಿಚಾರಣೆಗೆ ಒಳಪಡಿಸಿದಾಗ, ಆತ ತನ್ನ ಮೂವರು ಸ್ನೇಹಿತರಾದ ಶಿವಂ, ಸುಶಾಂತ್ ಮತ್ತು ಶುಭಂ ಜೊತೆ ಸೇರಿ ನಡೆಸಿದ ಕ್ರೌರ್ಯವನ್ನು ಬಾಯಿಬಿಟ್ಟ.
ಕಳೆದ ಮಂಗಳವಾರ ನೊಯ್ಡಾದಿಂದ ನೂರು ಕಿ.ಮೀ ದೂರವಿರುವ ಉತ್ತರ ಪ್ರದೇಶದ ಅಮ್ರೋಹ ಎಂಬಲ್ಲಿಗೆ ಬರಲು ಯಶ್ ನನ್ನು ಆತನ ನಾಲ್ವರು ಸ್ನೇಹಿತರು ಪಾರ್ಟಿಗೆಂದು ಕರೆದಿದ್ದರು. ಅಲ್ಲಿ ಮೋಜಿನ ಕೂಟ ನಡೆಸುವಾಗ ಜಗಳ ಆರಂಭಗೊಂಡು ಹೊಡೆದಾಟವೇ ನಡೆಯಿತು. ರಚಿತ್, ಶಿವಂ, ಸುಶಾಂತ್ ಮತ್ತು ಶುಭಂ ಸೇರಿ ಯಶ್ ನನ್ನು ಕೊಂದೇ ಹಾಕಿದರು. ನಂತರ ಆತನ ಶವವನ್ನು ಮೈದಾನವೊಂದಕ್ಕೆ ಕೊಂಡೊಯ್ದು ಹೂತು ಹಾಕಿದರು.
ಸಾದ್ ಮಿಯಾ ಖಾನ್ ನೇತೃತ್ವದ ಪೊಲೀಸರ ತಂಡ ಈ ಅಪರಾಧ ಪ್ರಕರಣವನ್ನು ಭೇದಿಸಲು ಯಶಸ್ವಿಯಾಗಿದ್ದು, ಉಳಿದ ಆರೋಪಿಗಳನ್ನು ಗೌತಮ್ ಬುದ್ಧ ನಗರದ ದಾದ್ರಿ ಎಂಬಲ್ಲಿ ಬಂಧಿಸಲಾಗಿದೆ.