ಗೆಳೆಯನ ಆನ್ ಲೈನ್ ಜೂಜಿಗೆ ವಿದ್ಯಾರ್ಥಿನಿ ಬಲಿ; ಸಾವಿನ ರಹಸ್ಯ ಬಯಲು

Most read

ಬೆಂಗಳೂರು: ರಾಜಾಜಿನಗರದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಬಿಕಾಂ ವಿದ್ಯಾರ್ಥಿನಿ ಪ್ರಿಯಾಂಕಾ (19) ಸಾವಿನ ರಹಸ್ಯ ಬಯಲಾಗಿದೆ. ಈಕೆಯ ಸಹಪಾಠಿಯೊಬ್ಬ ರೂ.15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಪಡೆದುಕೊಂಡು ಹಿಂತಿರುಗಿಸದ ಕಾರಣ ಪ್ರಿಯಾಂಕಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ರಹಸ್ಯ ಬಯಲಾಗುತ್ತಿದ್ದಂತೆ ಪೊಲೀಸರು ಬಿಕಾಂ ವಿದ್ಯಾರ್ಥಿ ದಿಗಂತ್ (19) ಎಂಬಾತನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇರೆಗೆ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.

ರಾಜಾಜಿನಗರ 3ನೇ ಬ್ಲಾಕ್‌ನಲ್ಲಿ ಪೋಷಕರ ಜತೆ ವಾಸಿಸುತ್ತಿದ್ದ ಪ್ರಿಯಾಂಕಾ, ನ.29ರಂದು ಬೆಳಗಿನ ಜಾವ ಮನೆಯ ಕಟ್ಟಡದ ಕಬ್ಬಿಣದ ಕಂಬಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗಳನ್ನು ಕಳೆದುಕೊಂಡ ಪೋಷಕರು ಪೊಲೀಸರ ಸಮ್ಮುಖದಲ್ಲಿ ಪ್ರಿಯಾಂಕಾ ಮೊಬೈಲ್ ಪರಿಶೀಲನೆ ನಡೆಸಿದಾಗ ಆಕೆಯ ಮೊಬೈಲ್ ಬ್ಯಾಕ್ ಕವರ್ನಲ್ಲಿ ಬಚ್ಚಿಟ್ಟಿದ್ದ ಡೆತ್ನೋಟ್ ಪತ್ತೆಯಾಗಿದ್ದು, ಸಾವಿನ ಕಾರಣ ಬಯಲಾಗಿದೆ.

ಪ್ರಿಯಾಂಕಾ ಮತ್ತು ದಿಗಂತ್ ಕಾಲೇಜಿನಲ್ಲಿ ಸಹಪಾಠಿಗಳು. ಪ್ರಿಯಾಂಕಾ ತಂದೆ ಚಿನ್ನಾಭರಣ ವ್ಯಾಪಾರಿ ಎಂದು ಅರಿತುಕೊಂಡಿದ್ದ ದಿಗಂತ್, ಹಣ ಹಾಗೂ ಆಭರಣ ಪಡೆಯಲು ಸಂಚು ರೂಪಿಸಿದ್ದ. ಆನ್ಲೈನ್ ಕ್ಯಾಸಿನೋ, ಸೂಪರ್ ಕಾರ್ ಜೂಜಿನ ವಿಡಿಯೊಗಳನ್ನು ಪ್ರಿಯಾಂಕಾಳಿಗೆ ತೋರಿಸಿ ಆನ್ಲೈನ್ ಜೂಜಿನಲ್ಲಿ ಹಣ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಗಳಿಸಬಹುದು ಎಂದು ದಿಗಂತ್ ನಂಬಿಸಿದ್ದ. ಜತೆಗೆ, ಮನೆಯಲ್ಲಿಟ್ಟಿರುವ ಆಭರಣ ಹಾಗೂ ಹಣ ತಂದುಕೊಡುವಂತೆ ಪುಸಲಾಯಿಸಿದ್ದ. ಗೆಳೆಯನ ಮಾತು ನಂಬಿದ್ದ ಪ್ರಿಯಾಂಕಾ, ಕೆಲವು ತಿಂಗಳಿಂದ ಪೋಷಕರಿಗೆ ಗೊತ್ತಾಗದಂತೆ ಮನೆಯಲ್ಲಿದ್ದ ಆಭರಣಗಳನ್ನು ಹಂತ ಹಂತವಾಗಿ ತಂದಕೊಟ್ಟಿದ್ದಳು.

ಹೀಗೆ ಪ್ರಿಯಾಂಕಾ ಕೊಟ್ಟಿದ್ದ ಸುಮಾರು 15 ಲಕ್ಷ ರೂ. ಮೌಲ್ಯದ ಆಭರಣಗಳನ್ನು ದಿಗಂತ್ ಗಿರವಿ ಇಟ್ಟು ಬಂದ ಹಣದಲ್ಲಿ ಆನ್ಲೈನ್ ಜೂಜಾಡಿ ಕಳೆದಿದ್ದ. ಆಭರಣ ಮರಳಿಸುವಂತೆ ಕೇಳಿದರೂ ತಂದು ಕೊಡದೆ ಸತಾಯಿಸುತ್ತಿದ್ದ. ಪೋಷಕರಿಗೆ ವಿಚಾರ ಗೊತ್ತಾದರೆ ಕಷ್ಟ ಎಂದು ಹೆದರಿದ ಪ್ರಿಯಾಂಕಾ, ದಿಗಂತ್ ವಿರುದ್ಧ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article