ಬ್ಯಾಂಕಾಕ್: ಮ್ಯಾನ್ಮಾರ್, ಥಾಯ್ಲೆಂಡ್ ಮತ್ತು ಬಾಂಗ್ಲಾದೇಶದಲ್ಲಿ ಪ್ರಬಲ ಭೂಕಂಪನವಾಗಿದೆ. 90 ಮಂದಿ ನಾಪತ್ತೆಯಾಗಿದ್ದು ಇದುವರೆಗೂ 3 ಶವಗಳು ಪತ್ತೆಯಾಗಿವೆ ಎಂದು ಥಾಯ್ಲೆಂಡ್ ದೇಶದ ಸಚಿವರೊಬ್ಬರು ತಿಳಿಸಿದ್ದಾರೆ. ಬ್ಯಾಂಕಾಕ್ ನಲ್ಲಿ ನಿರ್ಮಾಣ ಹಂತದ 30 ಮಹಡಿಗಳ ಕಟ್ಟಡವೊಂದು ಕುಸಿದುಬಿದ್ದಿದ್ದು 45 ಮಂದಿ ಕಾರ್ಮಿಕರು ಕಟ್ಟಡದ ಕೆಲಳಗೆ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಬಲ ಭೂಕಂಪನದಿಂದ ಇಡೀ ಬ್ಯಾಂಕಾಕ್ ನಗರವೇ ಶಾಕ್ ಗೊಳಗಾಗಿದೆ ಎಂದು ಅಲ್ಲಿನ ನಿವಾಸಿಯೊಬ್ಬರು ಎಕ್ಸ್ ನಲ್ಲಿ ಬರೆದುಕೊಂಡಿದ್ದು, ಭೂಕಂಪನದ ತೀವ್ರತೆಯನ್ನು ತೋರಿಸುತ್ತದೆ. ಬ್ಯಾಂಕಾಕ್ ನಗರವು 17 ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿದೆ. ಅವರಲ್ಲಿ ಹಲವರು ಎತ್ತರದ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ಭೂಕಂಪ ಸಂಭವಿಸಿದಾಗ ಕಟ್ಟಡಗಳಲ್ಲಿ ಎಚ್ಚರಿಕೆಯ ಗಂಟೆಗಳು ಮೊಳಗಿದವು ಮತ್ತು ಜನನಿಬಿಡ ಕೇಂದ್ರ ಬ್ಯಾಂಕಾಕ್‌ನಲ್ಲಿರುವ ಎತ್ತರದ ಕಟ್ಟಡಗಳು ಮತ್ತು ಹೋಟೆಲ್‌ಗಳ ಗಾಬರಿಗೊಂಡ ನಿವಾಸಿಗಳನ್ನು ಹೊರಗೆ ಕಳುಹಿಸಲಾಗಿದೆ.
ಬ್ಯಾಂಕಾಂಕ್‌ನಲ್ಲಿ ಜನರು ಭಯಭೀತರಾಗಿ ಬೀದಿಗಳಿಗೆ ಓಡಿಬಂದಿದ್ದಾರೆ. ಈಜುಕೊಳಗಳಿಂದ ನೀರು ಹೊರಗೆ ಚಿಮ್ಮಿತು ಎಂದು ಬ್ಯಾಂಕಾಕ್‌ನ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಕಟ್ಟಡ ಕುಸಿತಗಳ ಬಗ್ಗೆ ವರದಿಯಾಗಿಲ್ಲ. ಭೂಕಂಪದ ನಂತರ ಹಾನಿಯ ಬಗ್ಗೆ ಮ್ಯಾನ್ಮಾರ್‌ನಿಂದಲೂ ತಕ್ಷಣದ ಮಾಹಿತಿ ಬಂದಿಲ್ಲ.
ಥಾಯ್ಲೆಂಡ್ ನವ್ವಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ತೀವ್ರತೆ ಪ್ರಮಾಣ 7.7ರಷ್ಟು ದಾಖಲಾಗಿದೆ. ನಿಮಿಷಗಳ ನಂತರ ಅದೇ ಪ್ರದೇಶದಲ್ಲಿ 6.4 ತೀವ್ರತೆಯ ನಂತರದ ಕಂಪನ ಸಂಭವಿಸಿದೆ. ಪರಿಣಾಮ ಬ್ಯಾಂಕಾಕ್ ನಲ್ಲಿ ಸರ್ಕಾರಿ ಕಚೇರಿಗಳಿಗಾಗಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದಿದೆ. ಇಲ್ಲಿ ಕನಿಷ್ಠ 3 ಮಂದಿ ಸಾವಿಗೀಡಾಗಿ 90 ಮಂದಿ ನಾಪತ್ತೆಯಾಗಿದ್ದಾರೆ. ಅಂತೆಯೇ ಇಲ್ಲಿಯವರೆಗೆ ಏಳು ಜನರನ್ನು ರಕ್ಷಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನು ಭೂಕಂಪದ ಪರಿಣಾಮವಾಗಿ ಥಾಯ್ ಪ್ರಧಾನಿ ಪೇಟೊಂಗ್ಟಾರ್ನ್ ಶಿನವಾತ್ರಾ ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಮೆಟ್ರೋ ಮತ್ತು ಲಘು ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಭೂಕಂಪನಕ್ಕೆ 20 ಸಾವು:
ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ನಲ್ಲೂ ಪ್ರಬಲ ಭೂಕಂಪನ ಸಂಭವಿಸಿದ್ದು, ಈ ಮೂರು ದೇಶಗಳಲ್ಲಿ ಸಂಭವಿಸಿದ ವಿವಿಧ ಅವಘಡಗಳಲ್ಲಿ ಈ ವರೆಗೂ ಕನಿಷ್ಠ 20 ಮಂದಿ ಸಾವಿಗಿಡಾಗಿದ್ದಾರೆ ಎಂದು ತಿಳಿದುಬಂದಿದೆ. ಬಾಂಗ್ಲಾದೇಶದ ಢಾಕಾ ಮತ್ತು ಚಟ್ಟೋಗ್ರಾಮ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ತೀವ್ರತೆ ಪ್ರಮಾಣ 7.3ರಷ್ಟು ದಾಖಲಾಗಿದೆ. ಪ್ರಾಥಮಿಕ ವರದಿಗಳ ಪ್ರಕಾರ, ಮ್ಯಾನ್ಮಾರ್ ನ ಮಂಡಲೆ ನಗರದ ಬಳಿ 10 ಕಿಮೀ (6.21 ಮೈಲುಗಳು) ಆಳದಲ್ಲಿ ಕೇಂದ್ರಬಿಂದು ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮತ್ತು ಜರ್ಮನಿಯ ಜಿಎಫ್‌ಝಡ್ ಭೂವಿಜ್ಞಾನ ಕೇಂದ್ರ ತಿಳಿಸಿದೆ. ಮ್ಯಾನ್ಮಾರ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ. ಆದರೆ ಸಾವು ನೋವಿನ ಸಂಖ್ಯೆ ತಿಳಿದು ಬಂದಿಲ್ಲ.
ಮ್ಯಾನ್ಮಾರ್‌ನಲ್ಲಿ 18 ಜನರು ಹಾಗೂ ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಬಾಂಗ್ಲಾದಲ್ಲಿ ಸಾವು– ನೋವಿನ ಬಗ್ಗೆ ವರದಿಯಾಗಿಲ್ಲ. ಅತ್ತ ಮ್ಯಾನ್ಮಾರ್‌ನ ಮಂಡಲೆ ಬಳಿ 90 ವರ್ಷ ಹಳೆಯ ಸೇತುವೆ ಕುಸಿದಿದೆ. ಇದು ಮಂಡಲೆ ಮತ್ತು ಮ್ಯಾನ್ಮಾರ್‌ನ ಪ್ರಮುಖ ನಗರ ಯಾನ್ಗಾಂಗ್ ಗೆ ಸಂಪರ್ಕ ಕಲ್ಪಿಸುತ್ತಿತ್ತು.
ಭೂಕಂಪದ ತೀವ್ರತೆಗೆ ಬ್ಯಾಂಕಾಕ್‌ನ ಬಹುಮಹಡಿ ಕಟ್ಟಡವು ಧರೆಗುರುಳಿ ಧೂಳು ಎಬ್ಬಿಸಿದ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಬ್ಯಾಂಕಾಕ್‌ನ ಚತುಚಕ್ ಮಾರುಕಟ್ಟೆ ಪ್ರದೇಶದಲ್ಲಿ ಕಟ್ಟಡ ಕುಸಿತ ಸಂಭವಿಸಿದ ದುರ್ಘಟನೆಯಲ್ಲಿ ಎಷ್ಟು ಕಾರ್ಮಿಕರು ಸಿಲುಕಿದ್ದಾರೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇಲ್ಲ.