ʼRevanna Republic of fear’ — how sexual assault, caste bias & abuse of power defined life in Hassan ಎಂಬ ವಿಶೇಷ ವರದಿಯೊಂದನ್ನು ದಿ ಪ್ರಿಂಟ್ ಪ್ರಕಟಿಸಿದ್ದು, ʻರೇವಣ್ಣ ರಿಪಬ್ಲಿಕ್ʼ ನ ಭಯಾನಕ ಚಿತ್ರಗಳನ್ನು ಕಟ್ಟಿಕೊಟ್ಟಿದೆ. ಕ್ರೌರ್ಯಗಳಿಗೆ ಎಲ್ಲಿ ಎಣೆಯೇ ಇಲ್ಲ. ಅಲ್ಲಿ ಇಲ್ಲಿ ಕೇಳಿದಂತೆ, ನಿಮ್ಮ ಕಿವಿಗೆ ಬಿದ್ದಿರಬಹುದಾದ ವಿಷಯಗಳ ಜೊತೆಗೆ ದಿ ಪ್ರಿಂಟ್ ತಂಡ ಹೊಳೆನರಸೀಪುರದ ನೂರಾರು ಜನರನ್ನು ಮಾತಾಡಿಸಿ ಈ ವರದಿ ಸಿದ್ಧಪಡಿಸಿದೆ. ವರದಿಯ ಕೆಲವು ಅಂಶಗಳು ಇಲ್ಲಿವೆ. ಪೂರ್ಣ ವರದಿಯನ್ನು ನೀವು ದಿ ಪ್ರಿಂಟ್ ನಲ್ಲಿ ಓದಬಹುದು.
40ರ ಆಸುಪಾಸಿನಲ್ಲಿರುವ ಮಹಿಳೆಗೆ ಇದು ಎಂದಿನಂತೆ ಇನ್ನೊಂದು ದಿನ. ದಕ್ಷಿಣ ಬೆಂಗಳೂರಿನ ಬಸವನಗುಡಿ ಪ್ರದೇಶದಲ್ಲಿನ ಐಷಾರಾಮಿ ನಿವಾಸವೊಂದರಲ್ಲಿ ಆಕೆ ತನ್ನ ಉದ್ಯೋಗದಾತರ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದಳು. ಉದ್ಯೋಗದಾತ ಬೇರೆ ಯಾರೂ ಅಲ್ಲ, ಹಾಸನದ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ. ಆಕೆಗೆ ಅದು ಮರೆಯಲಾಗದ ಕೆಟ್ಟ ನೆನಪು. ಪ್ರಜ್ವಲ್ ರೇವಣ್ಣ ಕೋಣೆಗೆ ಪ್ರವೇಶಿಸಿ, ಬಾಗಿಲ ಚಿಲಕ ಹಾಕಿ ತನ್ನ ಮೇಲೆ ಬಲವಂತಪಡಿಸಿದ ಎಂದು ಆಕೆ ಹೇಳುತ್ತಾಳೆ.
“ನೀನು ನಾನು ಹೇಳಿದಂತೆ ಮಾಡದಿದ್ದರೆ, ನಾನು ನಿನ್ನ ಮಗಳ ಮೇಲೂ ಅತ್ಯಾಚಾರವೆಸಗುತ್ತೇನೆ. ನಿನ್ನನ್ನು ಮತ್ತು ನಿನ್ನ ಗಂಡನನ್ನು ಕೊಲ್ಲುತ್ತೇನೆ” ಎಂದು ಆತ ಬೆದರಿಸುತ್ತಾನೆ. ಪ್ರಜ್ವಲ್ ಅಲ್ಲಿಗೇ ನಿಲ್ಲಲಿಲ್ಲ. ನಂತರ ಮಗಳಿಗೆ ವಿಡಿಯೋ ಕಾಲ್ ಮಾಡುತ್ತಾನೆ. ಬಲವಂತವಾಗಿ ವಿಡಿಯೋ ಕಾಲ್ ನಲ್ಲಿ ಬಟ್ಟೆ ಬಿಚ್ಚಿಸುತ್ತಾನೆʼʼ ಎಂದು ವಿವರಿಸುತ್ತಾರೆ ತಾಯಿ-ಮಗಳು.
ಮಹಿಳೆ ಮತ್ತು ಆಕೆಯ ಮಗಳು ಈ “ಚಿತ್ರಹಿಂಸೆ” ಯನ್ನು ವರ್ಷಗಳವರೆಗೆ ಮೌನವಾಗಿ ಸಹಿಸಿಕೊಂಡು ಬಂದರು. ರೇವಣ್ಣ ಕುಟುಂಬದವರು ನಮ್ಮನ್ನು ಮನೆಯಿಂದ ಹೊರಹಾಕಿದರು, ಸಂಬಂಧಿಕರಿಂದ ಹೊಡೆಸಿದರು, ನಿಂದಿಸಿದರು, ಈಗ ನಾವು ಬೀದಿಪಾಲಾಗಿದ್ದೇವೆʼʼ ಎಂದು ಅವರು ನೋವಿನಿಂದ ಹೇಳುತ್ತಾರೆ.
ಆಗ ರೇವಣ್ಣ ಕುಟುಂಬದ ಅಧಿಕಾರ ಬಲದ ಮುಂದೆ ಸವಾಲು ಹಾಕುವ ಸಾಧ್ಯತೆ ಇರಲಿಲ್ಲ. ಜನತಾ ದಳ (ಜಾತ್ಯತೀತ) ಭದ್ರಕೋಟೆಯಾದ ಹಾಸನದಲ್ಲಿ ರೇವಣ್ಣ ಕುಟುಂಬವು ಭೂಮಿ, ಜಾತಿ ಮತ್ತು ಸ್ಥಳೀಯ ಆಡಳಿತದ ಎಲ್ಲಾ ವಿಷಯಗಳ ಮೇಲೆ ತನ್ನ ಯಜಮಾನಿಕೆ ನಡೆಸುತ್ತಿದ್ದ ಕಾಲವದು.
ಕಾಳಪ್ಪನಹಳ್ಳಿ ಬೆಟ್ಟದ ಮಡಿಲಲ್ಲಿರುವ ತೆಂಗಿನ ಮರಗಳ ಮರೆಯಲ್ಲಿ ಮರೆಯಾಗಿರುವ ಹಾಸನದ ಹಳ್ಳಿಗಳು ಈಗ ಜಗತ್ತಿನ ಕಣ್ಣಿಗೆ ರಾಚುತ್ತಿವೆ. ಇಲ್ಲಿನ ನಿವಾಸಿಗಳು ಇಲ್ಲಿ ಕುಟುಂಬದ ಆಡಳಿತವನ್ನು ಇತಿಹಾಸ ಮತ್ತು ಪುರಾಣಗಳಲ್ಲಿ ಅತ್ಯಂತ ಕುಖ್ಯಾತ ಸರ್ವಾಧಿಕಾರಿಗಳೊಂದಿಗೆ ಹೋಲಿಸುತ್ತಾರೆ. ರೇವಣ್ಣ ದರ್ಬಾರನ್ನು ಅವರು ಹೋಲಿಸುವುದು ‘ಔರಂಗಜೇಬ್’, ‘ಮುಸೊಲಿನಿ’, ‘ಸದ್ದಾಂ ಹುಸೇನ್’ ಮತ್ತು ‘ದುರ್ಯೋಧನ’ ಇಂಥವರಿಗೆ!
ಏಪ್ರಿಲ್ ಕೊನೆಯ ವಾರದಲ್ಲಿ, ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ರೆಕಾರ್ಡ್ ಮಾಡಿದ್ದಾರೆ ಎಂದು ಹೇಳಲಾದ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯದ ಸಾವಿರಾರು ವೀಡಿಯೊಗಳು ಎಲ್ಲೆಡೆ ವೈರಲ್ ಆಗಿದ್ದು, ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಪ್ರಜ್ವಲ್‌ನಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯನ್ನು ಅಪಹರಣ ಮಾಡಿದ ಆರೋಪ ಆತನ ತಂದೆ ಎಚ್.ಡಿ.ರೇವಣ್ಣ ಮೇಲಿದೆ. ವೈರಲ್ ಆದ ವೀಡಿಯೋ ಒಂದರಲ್ಲಿ “ಬೇಡ ಅಣ್ಣಾ, ಬಿಟ್ಬಿಡಿ” ಎಂದು ಅಪಹರಣಗೊಂಡ ಮಹಿಳೆ ಅಂಗಲಾಚುವುದನ್ನು ಕೇಳಬಹುದು.
ಈ ವರದಿಯಲ್ಲಿ ಮೊದಲು ಉಲ್ಲೇಖಿಸಿದ ಮಹಿಳೆ ದಿ ಪ್ರಿಂಟ್ ಜೊತೆ ಮಾತಾಡಿದ್ದಾರೆ. ಅಶ್ಲೀಲ ವಿಡಿಯೋಗಳ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡದೊಂದಿಗೆ (ಎಸ್‌ಐಟಿ) ಹಂಚಿಕೊಂಡಿರುವ ವಿವರಗಳನ್ನು ಅವರು ದಿ ಪ್ರಿಂಟ್ ನೊಂದಿಗೂ ಹಂಚಿಕೊಂಡಿದ್ದಾರೆ.
ಪ್ರಕರಣವನ್ನು ಕೈಬಿಡುವಂತೆ ಭವಾನಿ ರೇವಣ್ಣ ಅವರ ಕುಟುಂಬದಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ ಎನ್ನುತ್ತಾರೆ ಆಕೆ. ಎಸ್‌ಐಟಿ ತನ್ನ ಮತ್ತು ಅವರ ಕುಟುಂಬದ ಸುರಕ್ಷತೆಯ ವ್ಯವಸ್ಥೆ ಮಾಡಿದೆ. ತನ್ನ ಕುಟುಂಬ ಕಷ್ಟಪಟ್ಟು ನಿರ್ಮಿಸಿದ ಮನೆಯನ್ನು ಮರಳಿ ಪಡೆಯುವ ನಂಬಿಕೆ ಈಗ ಬಂದಿದೆ. ನನ್ನ ಮನೆಯನ್ನು ರೇವಣ್ಣ ಕುಟುಂಬ ಕಿತ್ತುಕೊಂಡಿದೆ ಎಂದು ಅವರು ಹೇಳುತ್ತಾರೆ.
ಭಾರತದಲ್ಲಿ ಪ್ರಜಾಪ್ರಭುತ್ವವಿದೆ, ಹಾಸನದಲ್ಲಿ ಸರ್ವಾಧಿಕಾರವಿದೆ
ಇಡೀ ಹಾಸನವೇ ಈಗ ಕ್ರೈಂ ಸೀನ್‌ನಂತೆ ಭಾಸವಾಗುತ್ತಿದೆ.ಪೊಲೀಸ್ ಸೂಪರಿಂಟೆಂಡೆಂಟ್ (ಎಸ್‌ಪಿ) ಕಚೇರಿಯೊಂದಿಗೆ ಗೋಡೆಯನ್ನು ಹಂಚಿಕೊಳ್ಳುವ ಸರ್ಕಾರಿ ವಸತಿಗೃಹದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುವಾಗ ನಿವಾಸಿಗಳ ತೋರು ಬೆರಳು ಸಂಸತ್ ಸದಸ್ಯರ ನಿವಾಸವನ್ನು ತೋರಿಸುತ್ತದೆ.
“ಕೋವಿಡ್ ಸಮಯದಲ್ಲಿ, ಸರ್ಕಾರಿ ಕಾರುಗಳಲ್ಲಿ ಮಹಿಳೆಯರನ್ನು ಅವನ ಬಳಿಗೆ ಕರೆತರಲಾಗುತ್ತಿತ್ತು” ಎಂದು ಪ್ರಜ್ವಲ್ ನ ಜೊತೆ ಕೆಲಸ ಮಾಡುತ್ತಿದ್ದ ಸಹಾಯಕನೊಬ್ಬ ಹೇಳುತ್ತಾನೆ. ಈತ ಪ್ರಜ್ವಲ್ ಜೊತೆ ಹತ್ತು ವರ್ಷಗಳ ಕಾಲ ಜೊತೆಗೆ ಇದ್ದವನು.
2019 ರಲ್ಲಿ ಪ್ರಜ್ವಲ್ ಮೊದಲ ಬಾರಿ ಲೋಕಸಭೆಗೆ ಆಯ್ಕೆಯಾದ. ಅವನಿಗೆ ಹಾಸನವೇ ತನ್ನ ಸಾಮ್ರಾಜ್ಯವಾಯಿತು. ಆ ಸಾಮ್ರಾಜ್ಯದ ರಾಜ ತಾನು ಎಂದು ಆತ ಭಾವಿಸಿದ್ದ. ಅವನ ದರ್ಬಾರಿನಲ್ಲಿ ಒಂದೇ ಕುರ್ಚಿ ಇರುತ್ತಿತ್ತು ಮತ್ತು ಅದರಲ್ಲಿ ಆತ ಮಾತ್ರ ಕುಳಿತು ಕೊಳ್ಳುತ್ತಿದ್ದ. ಮಿಕ್ಕವರೆಲ್ಲ ನಿಂತೇ ಇರಬೇಕಿತ್ತು ಎನ್ನುತ್ತಾನೆ ಆತನ ಮತ್ತೊಬ್ಬ ಸಹಾಯಕ. “ಅವರು ಮಾತನಾಡುವಾಗ ಎಲ್ಲಾ ಅಧಿಕಾರಿಗಳು ಅವನ ಸುತ್ತಲೂ ನಿಲ್ಲಬೇಕಾಗಿತ್ತು; ಅವನ ಸಭೆಗಳಲ್ಲಿ ಕುರ್ಚಿಗಳನ್ನು ಹಾಕುವ ಸಂಪ್ರದಾಯವೇ ಇರಲಿಲ್ಲ” ಎನ್ನುತ್ತಾನೆ ಆತ.
ಮದ್ಯದ ಅಮಲಿನಲ್ಲಿ ಪ್ರಜ್ವಲ್ ಗೆ ಬೇಟೆಯಾಡುವ ಅಭ್ಯಾಸವಿತ್ತು. ಜಿಂಕೆಗಳನ್ನು ಬೇಟೆಯಾಡಲು ಅವನು ಆಗಾಗ ಕಾಡಿಗೆ ಹೋಗುತ್ತಿದ್ದ ಎಂದು ಆತನ ಮಾಜಿ ಸಹಾಯಕರುಗಳು ಹೇಳುತ್ತಾರೆ.
“ಒಂದು ಸಂದರ್ಭದಲ್ಲಿ ಆತ ಆಕಸ್ಮಿಕವಾಗಿ ಚಿರತೆಯೊಂದನ್ನು ಕೊಂದುಹಾಕಿದ. ಇನ್ನೊಮ್ಮೆ ಜಿಂಕೆಗಳ ಕಣ್ಣು ಎಂದು ತಪ್ಪಾಗಿ ಭಾವಿಸಿ ಮನೆಯೊಂದರ ಜಗಲಿಗೆ ಗುಂಡು ಹಾರಿಸಿದ್ದʼʼ ಎಂದು ಅವರು ವಿವರಿಸುತ್ತಾರೆ.
“ರೇವಣ್ಣ ಕುಟುಂಬ ಹಾಸನದಲ್ಲಿ ಎಕರೆಗಟ್ಟಲೆ ಜಮೀನು ಕಬಳಿಸಿದೆ. ಆ ಜಮೀನುಗಳನ್ನು ಬೇನಾಮಿಯಾಗಿ ಇತರರ ಹೆಸರುಗಳಲ್ಲಿ ಮಾಡಲಾಗಿದೆʼʼ ಎಂದು ಹೇಳುತ್ತಾರೆ ನಿವೃತ್ತ ಅಧಿಕಾರಿಯೋರ್ವರು. ನನಗೆ ಪ್ರಾಣಭೀತಿ ಇತ್ತು, ಹೀಗಾಗಿ ಹಾಸನವನ್ನು ತೊರೆಯಬೇಕಾಯಿತು ಎಂದು ಅವರು ಹೇಳುತ್ತಾರೆ.
“ಭಾರತದಲ್ಲಿ ಪ್ರಜಾಪ್ರಭುತ್ವವಿದೆ, ಹಾಸನದಲ್ಲಿ ಸರ್ವಾಧಿಕಾರವಿದೆ” ಹೀಗೆ ಹೇಳಿದವರು ರೇವಣ್ಣ ಸಾಮ್ರಾಜ್ಯದ ರಾಜಧಾನಿಯಾಗಿರುವ ಹೊಳೆನರಸೀಪುರದ ನಿವಾಸಿಯೊಬ್ಬರು. ಹೇಮಾವತಿ ನದಿ ದಡಲ್ಲಿರುವ ಹೊಳೆನರಸೀಪುರ ರೇವಣ್ಣ ಕುಟುಂಬದ ಕೇಂದ್ರ ಸ್ಥಾನ. ತಿಳಿ ಹಳದಿಬಣ್ಣದ ಅವರ ದೊಡ್ಡ ಬಂಗಲೆಯಿಂದ ಪಟ್ಟಣಕ್ಕೆ ಹೋಗುವ ಎಲ್ಲ ದಾರಿಗಳೂ ಆರಂಭಗೊಳ್ಳುತ್ತವೆ.
” ನೀವು ನಂಬುತ್ತೀರಾ? ಹೊಳೆನರಸೀಪುರದಲ್ಲಿರುವ ಅವರ ಮನೆಯಲ್ಲಿ ಒಬ್ಬ ಮಹಿಳೆಯನ್ನು ಮನೆಯ ಬೇರೆ ಬೇರೆ ಮಹಡಿಗಳಲ್ಲಿ, ನಾಲ್ಕು ವಿಭಿನ್ನ ಪುರುಷರು ದೌರ್ಜನ್ಯಕ್ಕೆ ಈಡು ಮಾಡುತ್ತಾರೆ” ಎಂದು ಹೇಳುತ್ತಾನೆ ಮೊದಲು ಉಲ್ಲೇಖಿಸಿದ ಮಾಜಿ ಸಹಾಯಕ.
ಮಹಲಿಗೆ ಹೊಂದಿಕೊಂಡಂತಿರುವ ಪಿಸ್ತಾ ಬಣ್ಣದ ಗೋಡೆಗಳು ಮತ್ತು ಮಹಾತ್ಮ ಗಾಂಧಿಯವರ ಭಾವಚಿತ್ರವಿರುವ ಏಕಾಂತ ಕೊಠಡಿಯೊಂದರಲ್ಲಿ ರೇವಣ್ಣನ ಕಾಲಾಳುಗಳು ವಾಸಿಸುತ್ತಾರೆ. ಈ ಕಟ್ಟುಮಸ್ತಾದ ಯುವಕರು ರೇವಣ್ಣ ಮನೆಯನ್ನು ಕಾವಲು ಕಾಯುತ್ತಾರೆ.
”ಸುಮಾರು ಎರಡು ವರ್ಷಗಳ ಹಿಂದೆ ಚುನಾಯಿತ ಜೆಡಿಎಸ್‌ನ ಕೌನ್ಸಿಲರ್‌ಗಳ ಗುಂಪೊಂದು ಪ್ರಜ್ವಲ್ ರೇವಣ್ಣ ಅವರನ್ನು ಭೇಟಿ ಮಾಡಲು ಹೋಗಿತ್ತು. ರಾಜಕೀಯ ವಿಷಯ ಚರ್ಚೆ ಮಾಡಲು ಆ ತಂಡ ಅಲ್ಲಿಗೆ ಬಂದಿತ್ತು. ಆದರೆ ಅವನ ತಲೆಯಲ್ಲಿ ಬೇರೆಯದ್ದೇ ಓಡುತ್ತಿತ್ತು. ಆತ ಆ ಗುಂಪಿನಲ್ಲಿದ್ದ ಒಬ್ಬ ಮಹಿಳೆಯ ಮೇಲೆ ಕಣ್ಣು ಹಾಕಿದೆ. ಆಕೆಯೊಬ್ಬಳೇ ಬರುವಂತೆ ಹೇಳಿದ. ಮಹಿಳೆ ಭಯದಿಂದಲೇ ಒಳಗೆ ಹೋದಳು. ಆನಂತರ ಆಕೆಯೊಂದಿಗೆ ಬಂದಿದ್ದ ತಂಡಕ್ಕೆ ಕೇಳಿಸಿದ್ದು ಆಕೆಯ ಆಕ್ರಂದನ ಮಾತ್ರʼʼ
ಇದೆಲ್ಲವನ್ನು ವಿವರಿಸುತ್ತ ಹೋಗುತ್ತಾರೆ ಆತನ ಮಾಜಿ ಸಹಾಯಕರುಗಳು.
ಪ್ರಜ್ವಲ್ ಈ ದೌರ್ಜನ್ಯಗಳನ್ನೆಲ್ಲ ತನ್ನದೇ ಆದ ಒಂದು ಮಾದರಿಯಲ್ಲಿ ಮಾಡುತ್ತ ಹೋಗುತ್ತಾನೆ. ಅವನದ್ದೇ ಒಂದು modus operandi ಇರುತ್ತದೆ. ಜೆಡಿಎಸ್ ಕಾರ್ಯಕರ್ತರೊಬ್ಬರು ಸಲ್ಲಿಸಿದ ಪೊಲೀಸ್ ದೂರಿನಲ್ಲಿ ಇದು ನಮಗೆ ಅರ್ಥವಾಗುತ್ತದೆ. ʻʻಅವರು ಪದೇ ಪದೇ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ ಮತ್ತು ತನ್ನ ಪತಿಯ ರಾಜಕೀಯವನ್ನು ನಾಶಪಡಿಸುವುದಾಗಿ ಬೆದರಿಕೆ ಹಾಕಿದ್ದಾರೆʼʼ ಎಂದು ಎಸ್‌ಐಟಿಗೆ ಸಲ್ಲಿಸಿರುವ ದೂರಿನಲ್ಲಿ ಅವರು ತಿಳಿಸಿದ್ದಾರೆ.
ಈ ದೌರ್ಜನ್ಯಗಳನ್ನೆಲ್ಲ ಪ್ರಜ್ವಲ್ ಮಾತ್ರ ಮಾಡುತ್ತಿಲ್ಲ. ಇದು ಆ ಕುಟುಂಬಕ್ಕೆ ಹೊಸದೇನೂ ಅಲ್ಲ, ಈ ಭಾಗದ ಜನರು ಹೇಳುವ ಪ್ರಕಾರ ಅಪ್ಪ ರೇವಣ್ಣ ಕುಟುಂಬದ ಜಮೀನುಗಳಲ್ಲಿ ಕೆಲಸ ಮಾಡುವ ದುರ್ಬಲ ಮಹಿಳೆಯರು, ಪಕ್ಷದ ಕಾರ್ಯಕರ್ತರು ಮತ್ತು ಸರ್ಕಾರಿ ಅಧಿಕಾರಿಗಳನ್ನು ಬೇಟೆಯಾಡಿಕೊಂಡೇ ಬಂದಿದ್ದಾನೆ.
ಜಿಲ್ಲಾ ಪಂಚಾಯಿತಿ ಮಾಜಿ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಎಚ್.ಡಿ. ರೇವಣ್ಣ ಅವರು ಜಿಲ್ಲಾ ಪಂಚಾಯತ್, ಕರ್ನಾಟಕ ಹಾಲು ಒಕ್ಕೂಟ ಮತ್ತು ಹಾಸನ ಸಹಕಾರಿ ಹಾಲು ಉತ್ಪಾದಕರ ಸಂಘದ ಒಕ್ಕೂಟದ ಮಹಿಳಾ ಕಾರ್ಮಿಕರನ್ನು ತನ್ನ ತೀಟೆಗೆ ಬಳಸಿಕೊಂಡರು. ಹಾಲು ಒಕ್ಕೂಟದಲ್ಲಿ ರೇವಣ್ಣ ಏಳು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿ ಅಧಿಕಾರ ಅನುಭವಿಸಿದರು.,
ಅಲ್ಲಿ ಅವರು ಅಧ್ಯಕ್ಷರಾಗಿದ್ದಾಗ ಹಿರಿಯ ಅಧಿಕಾರಿಯೊಬ್ಬರಿಗೆ ಸಹಿಗಾಗಿ ಕಡತಗಳನ್ನು ಕಳುಹಿಸುತ್ತಿದ್ದರು. ಈ ಕಡತಗಳನ್ನು ನಿರ್ವಹಿಸಲು ರೇವಣ್ಣ ಅವರು ಆಯ್ಕೆ ಮಾಡುವ ಮಹಿಳೆಯನ್ನೇ ನಿಯೋಜಿಸಬೇಕಾಗಿತ್ತು, ಕೆಎಂಎಫ್‌ನಲ್ಲಿರುವ ಏಕಾಂತ ಅತಿಥಿ ಗೃಹಕ್ಕೆ ಕಡತಗಳನ್ನು ಕೊಂಡೊಯ್ಯುವಂತೆ ಆಕೆಗೆ ಸೂಚಿಸಲಾಗುತ್ತಿತ್ತು ಎಂದು ಅವರು ಹೇಳುತ್ತಾರೆ.
ಹೀಗೆ ಟ್ರಾಪ್ ಆದ ಮಹಿಳೆಯರಿಗೆ ತಮ್ಮ ನೌಕರಿ ಎಲ್ಲಿ ತಪ್ಪಿಹೋಗಿ, ಬದುಕು ಸರ್ವನಾಶವಾಗುತ್ತದೋ ಎಂಬ ಭೀತಿ ಇರುತ್ತಿತ್ತು. ಹೀಗಾಗಿ ಅವನಿಗೆ ʻಇಲ್ಲʼ ಎಂದು ಹೇಳುವ ಆಯ್ಕೆಯೇ ಅವರಿಗೆ ಇರಲಿಲ್ಲ ಎನ್ನುತ್ತಾರೆ ಅವರು.
ಜಿಲ್ಲಾ ಪಂಚಾಯಿತಿ ಮಾಜಿ ಅಧಿಕಾರಿ ಪ್ರಕಾರ ಎಚ್.ಡಿ. ರೇವಣ್ಣ ಅವರು ಸರ್ಕಾರಿ ಗುತ್ತಿಗೆ ಪಡೆದವರ ಪತ್ನಿಯರನ್ನು ಆಗಾಗ “ಭೇಟಿ” ಮಾಡುತ್ತಿದ್ದರು. “ಇದು ನೂರಾರು ಕೋಟಿ ರೂಪಾಯಿಗಳ ಪ್ರಶ್ನೆಯಾಗಿದೆ, ಯಾರೂ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ.” ಎನ್ನುತ್ತಾರೆ ಅವರು.
ಪ್ರಜ್ವಲ್ ಮತ್ತು ಹೆಚ್.ಡಿ ವಿರುದ್ಧದ ಆರೋಪಗಳ ತನಿಖೆಯಿಂದಾಗಿ ಈಗ ʻಪಂಡೋರಾ ಬಾಕ್ಸ್ʼ ತೆರೆದಂತಾಗಿದೆ. ಹಾಸನದಲ್ಲಿ ಈಗ ಒಂದು ಬಗೆಯ ವಿಲಕ್ಷಣ ಮೌನ ಆವರಿಸಿ ಕೊಂಡಿದೆ. ಈ ವಿಲಕ್ಷಣ ಪ್ರಶಾಂತತೆಯಲ್ಲಿ ಲೈಂಗಿಕ ದೌರ್ಜನ್ಯ, ಭೂ ಕಬಳಿಕೆ, ಭ್ರಷ್ಟಾಚಾರ ಮತ್ತು ಜಾತಿ ತಾರತಮ್ಯದ ಅಸಂಖ್ಯಾತ ಕಥೆಗಳು ಮುನ್ನೆಲೆಗೆ ಬರುತ್ತಿವೆ.
ದಿ ಪ್ರಿಂಟ್ ನ ಪೂರ್ಣ ವರದಿಯನ್ನು ಇಲ್ಲಿ ಓದಿ.