1990ರ ದಶಕದಲ್ಲಿ ಹರ್ಷದ್ ಮೆಹತಾ, ಹಗರಣಗಳ ಕಾರಣ ಷೇರುಪೇಟೆಯಿಂದ ನಿರ್ಗಮಿಸಿದ ಆನಂತರ 1999-2000 ರ ಅವಧಿಯಲ್ಲಿ ಷೇರು ಮಾರುಕಟ್ಟೆಯನ್ನು ಆಳುತ್ತಿದ್ದ ಕೇತನ್ ಪರೇಖ್ ಎಂಬ ಷೇರು ದಲ್ಲಾಳಿ ಭಾರತದ ಷೇರು ಮಾರುಕಟ್ಟೆಯನ್ನು ಬೆಚ್ಚಿಬೀಳಿಸಿದ ಪರಿಯ ಕುರಿತು ಬರೆದಿದ್ದಾರೆ ಡಾ. ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು
ಹರ್ಷದ್ ಮೆಹತಾ ಎನ್ನುವ ಷೇರು ಮಾರುಕಟ್ಟೆಯ ‘ಅಮಿತಾಬ್ ಬಚ್ಚನ್’ ಸೃಷ್ಟಿಸಿದ ಆವಾಂತಗಳ ಬಗ್ಗೆ ಹಿಂದಿನ ಸಂಚಿಕೆಯಲ್ಲಿ ನಾವು ತಿಳಿದುಕೊಂಡಿದ್ದೆವು. ಹರ್ಷದ್‍ನ ಗರಡಿಯಲ್ಲಿ ಪಳಗಿದ ಇನ್ನೊಬ್ಬ ‘ಸೈತಾನ ಸೃಷ್ಟಿಸಿದ ಸಮಸ್ಯೆಯಿಂದಲೂ ಬಂಡವಾಳ ಮಾರುಕಟ್ಟೆಯಲ್ಲಿ ಸಾಮಾನ್ಯ ಹೂಡಿಕೆದಾರರು ನಲುಗಿ ಹೋದರು.
ಷೇರುಪೇಟೆಯಲ್ಲಿ ದಲ್ಲಾಳಿ ಕೆಲಸ ನಿರ್ವಹಿಸುವ ಕುಟುಂಬದಿಂದ ಬಂದ ಕೇತನ್ ಪಾರೀಖ್ ವೃತ್ತಿಯಿಂದ ಲೆಕ್ಕ ಪರಿಶೋಧಕನಾದರೂ ಆಯ್ಕೆ ಮಾಡಿಕೊಂಡದ್ದು ಷೇರುಪೇಟೆಯ ದಲ್ಲಾಳಿ ವೃತ್ತಿಯನ್ನು. ಹರ್ಷದ್ ಮೆಹತಾನಂತಹ ಗುರು ಸಿಕ್ಕಿ ಬಿಟ್ಟರೆ ಮತ್ತೆ ಹೇಳಬೇಕೇ? ಇಡೀ ಷೇರುಮಾರುಕಟ್ಟೆಯ ಒಳ ಹೊರಗುಗಳು ಆತನಿಗೆ ಕರತಲಾಮಲಕ. ಸಾಲದ್ದಕ್ಕೆ ಸಾಮಾಜಿಕ ಸಂಬಂಧಗಳ ಗಟ್ಟಿಯಾದ, ವಿಸ್ತಾರವಾದ ಸಾಮಾಜಿಕ ಬಂಡವಾಳ ಬೇರೆ ಇವನ ಬೆನ್ನಿಗಿತ್ತು. (ಸಾಮಾಜಿಕ ಬಂಡವಾಳವೆಂದರೆ ಜಾತಿ, ಸಂಬಂಧ, ಪ್ರದೇಶ, ಭಾಷೆ, ಇತ್ಯಾದಿ ವಿಷಯಗಳು. ಇಂತಹ ಅಗೋಚರ ವಿಷಯಗಳು ವ್ಯಕ್ತಿ ವ್ಯಕ್ತಿಗಳ ಮತ್ತು ಸಮುದಾಯಗಳ ನಡುವೆ ಇರುವ ವ್ಯವಹಾರ ವ್ಯಾಪಾರ ಮತ್ತಿತರ ವ್ಯವಹಾರಗಳಲ್ಲಿ ವೇಗ ವರ್ಧಕದಂತೆ ಕೆಲಸ ಮಾಡುತ್ತವೆಂದು ಹೇಳಬಹುದು. ವ್ಯಾಪಾರದಲ್ಲಿ ಅಪರಿಚಿತರು ಯಾ ಗುರುತಿಲ್ಲದ ಆಗಂತುಕರೊಂದಿಗೆ ವ್ಯವಹಾರ ನಡೆಸುವುದಕ್ಕೂ ತನ್ನದೇ ಜಾತಿಯ ಪ್ರದೇಶದ, ಭಾಷಿಕರೊಂದಿಗೆ ವ್ಯವಹಾರ ನಡೆಸುವುದಕ್ಕೂ ವ್ಯತ್ಯಾಸವಿರುತ್ತದೆ. ಯಾವುದೇ ರೀತಿಯಲ್ಲಿ ಬಾಂಧವ್ಯ ಇದ್ದಾಗ ವ್ಯಾಪಾರ ವ್ಯವಹಾರಗಳು ಸುಲಭ ಮತ್ತು ಸರಳ). ಕೇತನ್ ಪಾರೀಖ್‍ಗೆ ಇದ್ದ ಷೇರು ಮಾರುಕಟ್ಟೆಯ ಮೇಲಿನ ಮಾಹಿತಿ ಮತ್ತು ಚಾಕಚಕ್ಯತೆಯ ಕಾರಣದಿಂದ ಆತನನ್ನು ಷೇರುಪೇಟೆಯ “ಕಿಂದರಿ ಜೋಗಿ” “ಪೆಂಟಾ ಫೆಂಟಾಫೊರ್‍ಬುಲ್” “ವನ್‍ಮ್ಯಾನ್ ಆರ್ಮಿ” ಮುಂತಾದ ವಿಶೇಷಣಗಳಿಂದಲೂ ಕರೆಯಲಾಗುತ್ತಿತ್ತು. 1990ರ ದಶಕದಲ್ಲಿ ಹರ್ಷದ್ ಮೆಹತಾ ಹಗರಣಗಳ ಕಾರಣ ಷೇರುಪೇಟೆಯಿಂದ ನಿರ್ಗಮಿಸಿದ ನಂತರ ಈ ಖೇತನ್ ಪಾರೀಖ್ (ಕೆ.ಪಿ) ನದ್ದೇ ಹವಾ ನಡೆಯಲಾರಂಭಿಸಿತು.
1998ರ ಹೊತ್ತಿಗೆ ಆರ್ಥಿಕ ಬೆಳವಣಿಗೆಗಳು ಮಂದಗತಿಯಲ್ಲಿ ಸಾಗತೊಡಗಿ ಷೇರುಪೇಟೆಯ ವ್ಯವಹಾರಗಳ ವೇಗ ಕಳೆದುಹೋಗಿತ್ತು. ಷೇರು ಪೇಟೆಯಲ್ಲಿ ನೋಂದಾಯಿತ ಕಂಪೆನಿಗಳು ಬ್ಯಾಂಕುಗಳಿಂದ ಸಾಲ ಪಡೆಯಲೂ ಕಷ್ಟಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಷೇರುಪೇಟೆಯಲ್ಲಿ ಕಂಪೆನಿಗಳ ಷೇರಿನ ಮೌಲ್ಯದಲ್ಲಿ ಯಾ ಬೆಲೆಯಲ್ಲಿ ಒಂದು ರೀತಿಯ ಸ್ಥಗಿತ ಉಂಟಾಗಿರುವ ಸ್ಥಿತಿಯೂ ಇದಕ್ಕೆ ಕಾರಣವಾಗಿತ್ತು. ಅಗತ್ಯ ಹಣಕಾಸನ್ನು ಒಟ್ಟುಗೂಡಿಸುವುದರಲ್ಲಿ ಕಂಪೆನಿಯ ಪ್ರವಕ್ತರಿಗೆ ಕಷ್ಟವಾಗತೊಡಗಿತು. ಅಂತಹ ಸಮಯದಲ್ಲಿ ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ಹೆಚ್ಚಾಗುವಂತೆ ಮಾಡುವುದು ಅಗತ್ಯವಿತ್ತು. ವ್ಯವಹಾರಗಳು ಸರಾಗವಾಗಿ ನಡೆಯುತ್ತಿದ್ದರೆ, ಹಣಕಾಸಿನ ಚಲಾವಣೆ ಜಾಸ್ತಿಯಾದಷ್ಟು ಲಾಭ ಗಳಿಕೆಯೂ ಹೆಚ್ಚುತ್ತದೆ. ಇಂತಹ ಹೊತ್ತಲ್ಲಿ ಕಂಪೆನಿಯ ಪ್ರವರ್ತಕರು ಕೇತನ್ ಪಾರೀಖ್‍ನನ್ನು ಹಿಡಿದು ಷೇರುಗಳ ಬೆಲೆ ಹೆಚ್ಚುವಂತೆ ಮಾಡಲು ಉಪಕ್ರಮಿಸಿದರು. ಹಾಗೆ ಮಾಡುವ ಮೂಲಕ ವ್ಯವಹಾರ ಕುದುರಿ, ಹಣದ ಚಲಾವಣೆ ಹೆಚ್ಚಾಗತೊಡಗಿತು. ಸ್ವಾಭಾವಿಕವಾಗಿಯೇ ಕೇತನ್ ಸಾಕಷ್ಟು ಲಾಭ ಗಳಿಸಲೂ ತೊಡಗಿದ.
ಆ ಸಮಯದಲ್ಲಿ ಮಾಹಿತಿ ತಂತ್ರಜ್ಞಾನ ಸಂವಹನ ಮತ್ತು ಮನೋರಂಜನಾ ವಲಯದಲ್ಲಿರುವ ಕಂಪೆನಿಗಳು ಭವಿಷ್ಯದಲ್ಲಿ ಹೆಚ್ಚಿನ ವ್ಯವಹಾರ ನಡೆಸುವ ಸಾಧ್ಯತೆಗಳಿವೆ ಎಂದೇ ಬಿಂಬಿಸಲಾಗುತ್ತಿತ್ತು. ಈ ಕಾರಣದಿಂದ ಮಾಹಿತಿ ತಂತ್ರಜ್ಞಾನ ಆಧಾರಿತ ಕಂಪೆನಿಗಳೆಡೆಗೆ ದೊಡ್ಡ ಮಟ್ಟದಲ್ಲಿ ಬಂಡವಾಳ ಹರಿದು ಬರತೊಡಗಿತು. ಕೇತನ್ ಪಾರೀಖ್ ಎಲ್ಲೆಲ್ಲಿ ಪ್ರವೇಶ ಮಾಡಲಾರಂಭಿಸಿದನೋ ಅಂತಹ ಕಡೆ ಕಂಪೆನಿಗಳ ಷೇರಿನ ಮೌಲ್ಯದಲ್ಲಿ ಹೆಚ್ಚಳವಾಗತೊಡಗಿತು. ಉದಾಹರಣೆಗೆ “ವಿಷುವಲ್ ಸಾಷ್ಟ್” ಎಂಬ ಕಂಪೆನಿಯ ಷೇರುಗಳ ದರ ಆರುನೂರ ಇಪ್ಪತ್ತೈದರಿಂದ ಎಂಟು ಸಾವಿರದ ನಾನೂರ ನಲ್ವತ್ತಕ್ಕೆ ಏರಿಕೆಯಾಯಿತು. “ಸೊನಾಟ ಸಾಫ್ಟ್ವೇರ್” ಕಂಪೆನಿಯ ಷೇರಿನ ಬೆಲೆ ತೊಂಭತ್ತರಿಂದ ಎರಡು ಸಾವಿರದ ಒಂದು ನೂರ ಐವತ್ತು ರೂಪಾಯಿಗಳಿಗೆ ಏರಿಕೆಯಾಯಿತು. ಕೃತಕವಾಗಿ ಬೆಲೆಗಳನ್ನು ಹೆಚ್ಚು ಮಾಡುವುದು, ಒಳಗಿರುವವರ ಸಹಕಾರ ಪಡೆಯುವುದು, ವರ್ತುಲಾಕಾರದಲ್ಲಿ ವ್ಯವಹಾರ ಮುಂತಾದ ತಂತ್ರಗಳನ್ನು ಪ್ರಯೋಗಿಸಿ ಕೇತನ್ ತನಗೆ ಬೇಕಾದ ಕಂಪೆನಿಯ ಷೇರುಗಳ ಬೆಲೆ ಏರಿಸುವುದನ್ನು ಮಾಡತೊಡಗಿದ. ತನಗೆ ಬೇಕಾದ ಕಂಪೆನಿಯ ಷೇರುಗಳನ್ನು ಹೆಚ್ಚಿನ ಬೆಲೆಗೆ ದೊಡ್ಡ ಪ್ರಮಾಣದಲ್ಲಿ ಖರೀದಿಸಬೇಕಾದರೆ ಆತನಿಗೆ ದೊಡ್ಡ ಮೊತ್ತದ ಹಣದ ಅವಶ್ಯಕತೆ ಇತ್ತು. ಇಂತಹ ದೊಡ್ಡ ಮೊತ್ತದ ಹಣವನ್ನು ಪ್ರವರ್ತಕರು ನಿರ್ದೇಶಕರಾಗಿದ್ದ ಹಣಕಾಸು ಹೂಡಿಕೆ ಸಂಸ್ಥೆಗಳಿಂದ, ಸಹಕಾರಿ ಬ್ಯಾಂಕುಗಳಿಂದ ಪಡೆಯಲಾರಂಭಿಸಿದ. ದೊಡ್ಡ ಮೊತ್ತದ ಹಣವನ್ನು ಗ್ಲೋಬಲ್ ಟ್ರಸ್ಟ್ ಬ್ಯಾಂಕ್, ಮಾಧವಪುರ ಮರ್ಕೆಂಟೈಲ್ ಬ್ಯಾಂಕ್ ಮುಂತಾದ ಹಣಕಾಸು ಸಂಸ್ಥೆಗಳಿಂದ ನಿಯಮ ಬಾಹಿರವಾಗಿ ಪಡೆಯಲು ಶಕ್ತನಾದ. 21ನೇ ಶತಮಾನ ಮಾಹಿತಿ ತಂತ್ರಜ್ಞಾನಾಧಾರಿತ ಶತಮಾನ ಎನ್ನುವ ವಿಸ್ಮೃತಿ ದಟ್ಟವಾಗಿ ವ್ಯವಹಾರ ವಾಣಿಜ್ಯ ಜಗತ್ತಿನಲ್ಲಿ ಹರಡಿಕೊಂಡಿತ್ತು. ಇಂತಹ ವಿಸ್ಮೃತಿ ಗೆ ಒಳಗಾದಾಗ ಸಹಜವಾಗಿಯೇ ಹೂಡಿಕೆದಾರರು, ತಮ್ಮ ಹೂಡಿಕೆಯ ನಿರ್ಧಾರಗಳಲ್ಲಿ ಪ್ರಭಾವಿತರಾದರು. ಕೇತನ್ ಪಾರೀಖ್‍ನ ಆದ್ಯತೆ ಪಡೆದ ಹತ್ತು ಕಂಪೆನಿಗಳ ಷೇರುಗಳನ್ನು ‘ಕೆ-10’ ಎಂದು ಗುರುತಿಸಲಾಗಿತ್ತು. ಇಂತಹ ಕಂಪೆನಿಯ ಷೇರುಗಳ ಬೆಲೆಯನ್ನು ಏರಿಕೆ ಮಾಡಲು ಸೂಕ್ತ ತಂತ್ರಗಳನ್ನು ಕೇತನ್ ಅನುಸರಿಸಿದ. ಹರ್ಷದ್ ಮೆಹತಾನಿಂದ ತರಬೇತಾದ ಶಿಷ್ಯನೆಂದ ಮೇಲೆ ಕೇಳಬೇಕೆ? ‘ರಾನ್ಭಾಕ್ಸಿ’ ‘ಪೆಂಟಾ ಮೀಡಿಯಾ ಗ್ರಾಫಿಕ್ಸ್’ ‘ವಿಷುವಲ್ ಸಾಷ್ಟ್’ ‘ಗ್ಲೋಬಲ್ ಟೆಲಿ ಸಿಸ್ಟಮ್’ ‘ಝೀ ಟೆಲಿಫಿಲ್ಮ್’ ‘ಸಿಲ್ವರ್ ಲೈನ್’ ‘ಸತ್ಯಂ’ ‘ಆಫ್ಟೆಕ್’ ‘ಇನ್ಫೋಸಿಸ್’ ‘ಡಿ ಎಸ್ ಕ್ಯೂ ಸಾಫ್ಟ್ವೇರ್’ ‘ಹೆಚ್.ಎಫ್.ಸಿ.ಎಲ್’ ಮುಂತಾದ ಕಂಪೆನಿಯ ಷೇರುಗಳು ಕೇತನ್ ಪಾರೀಖ್‍ನ ‘ಕೆ-10’ ಪಟ್ಟಿಯಲ್ಲಿದ್ದ ಷೇರುಗಳು.
ಕೆ-10 ಕಂಪೆನಿಯ ಷೇರುಗಳ ಬೆಲೆಯನ್ನು ಈ ಮೊದಲೇ ಉಲ್ಲೇಖಿಸಿದ ತಂತ್ರಗಳನ್ನು ಬಳಸಿ ಉಬ್ಬಿಸಲಾಗುತ್ತಿತ್ತು. ಈ ರೀತಿಯ ಕೃತ್ರಿಮತೆಯಿಂದ ಬೆಲೆಗಳು ಏರುತ್ತಾ ಹೋಗಿ ಒಂದು ಹಂತದಲ್ಲಿ ಸ್ಥಿರವಾಗುತ್ತವೆ. ಆ ನಂತರ ಖರೀದಿ ನಿಂತುಹೋಗಿ ಮಾರಾಟ ಆರಂಭವಾಗುತ್ತದೆ. ಈ ರೀತಿ ದೊಡ್ಡ ಮಟ್ಟದಲ್ಲಿ ಕೃತಕ ಏರಿಕೆಯಾದ ಬೆಲೆಗಳನ್ನು ಮಾರುಕಟ್ಟೆ ಆಧರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಹಜವಾಗಿಯೇ ಮಾರಾಟ ಮಾಡಲು ಮುಂದಾದರೆ ಖರೀದಿದಾರರು ಸಿಗುವುದಿಲ್ಲ. ಮಾತ್ರವಲ್ಲ ಬೆಲೆಯೂ ಇಳಿಯಲಾರಂಭಿಸುತ್ತದೆ. ಅಂತಹ ಹೊತ್ತಲ್ಲಿ ಕೇತನ್ ಆ ಷೇರುಗಳನ್ನು ಹಣಕಾಸು ಸಂಸ್ಥೆಗಳಾಗಿರುವ ಯುನಿಟ್ ಟ್ರಸ್ಟ್ ಆಫ್ ಇಂಡಿಯಾ (ಯುಟಿಐ) ಜೀವ ವಿಮಾ ನಿಗಮ (ಎಲ್‍ಐಸಿ) ಇವುಗಳ ಮಡಿಲಿಗೆ ಹಾಕಿ ಬಿಡಲಾರಂಭಿಸಿದ. ಆ ಮೂಲಕ ಸಾರ್ವಜನಿಕ ಸಹಭಾಗಿತ್ವವಿರುವ ಹಣಕಾಸು ಸಂಸ್ಥೆಗಳು ಕೇತನ್ ಪಾರೀಖ್‍ನಂತಹ ದಲ್ಲಾಳಿಗಳು ಹೆಣೆದ ಜಾಲದೊಳಗೆ ಸಿಕ್ಕಿ ಹಾಕಿಕೊಳ್ಳುವಂತೆ ಆಯಿತು. ಅದೇ ಹೊತ್ತಿಗೆ ಹೊಸ ತಳಿಯ ಡಾಟ್.ಕಾಮ್ ಕಂಪೆನಿಗಳು ಸೋಲಲು ತೊಡಗಿದವು. ಅಮೇರಿಕಾದಲ್ಲಿ ನಡೆದ ಈ ಬದಲಾವಣೆಯ ಭಾರ ಜಾಗತೀಕರಣದ ಪ್ರಭಾವದಿಂದ ಜಗತ್ತಿನ ಎಲ್ಲೆಡೆ ವರ್ಗಾವಣೆ ಗೊಳ್ಳತೊಡಗಿತು. ಸ್ವಾಭಾವಿಕವಾಗಿ ಅದರ ಪ್ರಭಾವ ಭಾರತೀಯ ಬಂಡವಾಳ ಮಾರುಕಟ್ಟೆಯ ಮೇಲೆಯೂ ಆಯಿತು. ಮಾಹಿತಿ ತಂತ್ರಜ್ಞಾನಾಧಾರಿತವಾದ ನೂರಾರು ಕಂಪೆನಿಗಳು ಸೂಕ್ತ ಮುಂದಾಲೋಚನೆ ಇಲ್ಲದೆ ಆರಂಭ ಗೊಂಡಿದ್ದುವು. ಮಾಹಿತಿ ತಂತ್ರಜ್ಞಾನದ ಬಗೆಗಿದ್ದ ಭ್ರಮೆಯ ಕಾರಣದಿಂದ ಸಾಕಷ್ಟು ಹೂಡಿಕೆದಾರರು ಇಂತಹ ಕಂಪೆನಿಗಳಲ್ಲಿ ಲಾಭದ ನಿರೀಕ್ಷೆಯಿಂದ ಹಣ ಹೂಡಿಕೆ ಮಾಡಿದ್ದರು. ಆದರೆ ನಿರೀಕ್ಷಿತ ಯಶಸ್ಸು ದೊರೆಯದೇ ಅಂತಹ ಸಂಸ್ಥೆಗಳು ಕುಸಿಯಲಾರಂಭಿಸಿ ಹೂಡಿಕೆದಾರರ ಕೋಟ್ಯಂತರ ರೂಪಾಯಿ ತೊಳೆದು ಹೋಯಿತು. ಈ ಹಂತದಲ್ಲಿ ಜಾಗತಿಕ ಮಟ್ಟದಲ್ಲಿಯೇ ಆರ್ಥಿಕ ಅಭಿವೃದ್ಧಿ ದರವೂ ನಿಧಾನವಾಗ ತೊಡಗಿತು. ಕೇತನ್ ಪಾರೀಖ್ ತನ್ನ ವ್ಯವಹಾರವನ್ನು ಮಾಹಿತಿ ತಂತ್ರಜ್ಞಾನ ಆಧಾರಿತ ಕಂಪೆನಿಗಳ ಹೂಡಿಕೆಗೆ ಹೆಚ್ಚಾಗಿ ಕೇಂದ್ರೀಕರಿಸಿದ್ದು ಸಮಸ್ಯೆ ಉಲ್ಬಣಗೊಳ್ಳಲು ಮತ್ತೊಂದು ಕಾರಣವಾಯಿತು.
2001ನೇ ಸಾಲಿನ ಕೇಂದ್ರ ಸರಕಾರದ ಬಜೆಟ್ ಮಂಡನೆಯಾದ ನಂತರ ಭಾರತದ ಷೇರುಪೇಟೆಯಲ್ಲಿ ಗೂಳಿ ಮರೆಯಾಗಿ ಕರಡಿಯ ಪ್ರವೇಶವಾದದ್ದು ಕೇತನ್ ಪಾರೀಖ್‍ನ ಸಂಕಷ್ಟವನ್ನು ಇನ್ನಷ್ಟು ಹೆಚ್ಚು ಮಾಡಿತು. ಷೇರುಪೇಟೆಯಲ್ಲಿ ವಿಶೇಷವಾಗಿ ಕಲ್ಕತ್ತಾ ಷೇರುಪೇಟೆಯಲ್ಲಿದ್ದ ಕರಡಿ ಕೂಟ (ಶಂಕರ್ ಶರ್ಮಾ, ಆನಂದ್‍ರಾತಿ, ನಿರ್ಮಲ್ ಬಾಂಗ್ ಮುಂತಾದ ದಲ್ಲಾಳಿಗಳ ಗುಂಪು) ಮಾರಾಟ ಮಾಡಲಾದ ಷೇರಿನ ಮೌಲ್ಯವನ್ನು ಪಾವತಿ ಮಾಡಿ ಬಿಡುವಂತೆ ಒತ್ತಡ ತರಲಾರಂಭಿಸಿತು. ಅನಿರೀಕ್ಷಿತವಾಗಿ ದೊಡ್ಡ ಮೊತ್ತದ ಷೇರುಗಳು ಮಾರಾಟವಾಗ ತೊಡಗಿ ಅದರ ಲೆಕ್ಕ ಚುಕ್ತಾ ಮಾಡುವ ತಾಪತ್ರಯ ಕೇತನ್‍ಗೆ ಒದಗಿ ಬಂತು. ಇಂತಹ ಪರಿಸ್ಥಿತಿಯಲ್ಲಿ ಹಣಕಾಸಿನ ಮುಗ್ಗಟ್ಟಿಗೆ ತುತ್ತಾದ ಕೇತನ್ ಹಲವಾರು ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲಾರಂಭಿಸಿದರೂ ಅಗತ್ಯವಿದ್ದಷ್ಟು ಮೊತ್ತದ ಹಣಕಾಸು ಇಲ್ಲದಿರುವ ಕಾರಣ, ಸಮಸ್ಯೆ ಉಂಟಾಯಿತು. ಕೇತನ್ ಪಾರೀಖ್‍ಗೆ ನಿಯಮ ಬಾಹಿರವಾಗಿ ಹಣಕಾಸು ಸಹಾಯ ಮಾಡಲು ಹೊರಟ ಗ್ಲೋಬಲ್ ಟ್ರಸ್ಟ್ ಬ್ಯಾಂಕ್, ಮಾಧವಪುರ ಮರ್ಕಂಟೈಲ್ ಕೋ ಆಪರೇಟಿವ್ ಬ್ಯಾಂಕುಗಳು ಸಂಕಷ್ಟ ಎದುರಿಸಬೇಕಾಯ್ತು. ಪರಿಣಾಮವಾಗಿ ಗ್ಲೋಬಲ್ ಟ್ರಸ್ಟ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಜೊತೆ ವಿಲೀನಗೊಂಡರೆ, ಮಾಧವಪುರ ಮರ್ಕಂಟೈಲ್ ಬ್ಯಾಂಕ್ ದಿವಾಳಿಯಾಗಿ ಬಿಟ್ಟಿತು. ಹರ್ಷದ್ ಮೆಹತಾನಂತೆಯೇ ಕೇತನ್ ಕೂಡಾ ವ್ಯವಸ್ಥೆಯ ಲೋಪಗಳನ್ನು ಬಳಸಲು ಹೋಗಿ ಹೂಡಿಕೆದಾರರಿಗೆ ಸಾವಿರಾರು ಕೋಟಿ ನಷ್ಟ ಉಂಟು ಮಾಡಿದ. ಈ ಹಗರಣದ ನಂತರವೂ ಸಾಕಷ್ಟು ಸುಧಾರಣಾ ಕ್ರಮಗಳನ್ನು ಷೇರುಪೇಟೆ ನಿಯಂತ್ರಣ ಮಂಡಳಿ ಜಾರಿಗೆ ತಂದಿದೆ.
ಷೇರುಮಾರುಕಟ್ಟೆಯಲ್ಲಿ 1992 ರಿಂದ 2019ರ ವರೆಗೆ ಪ್ರಮುಖ ಹಗರಣಗಳ ಕುರಿತ ಮಾಹಿತಿ.
1992 – ಹರ್ಷದ್ ಮೆಹತಾ ಹಗರಣ – ಮಾರುಕಟ್ಟೆಯನ್ನು ಮೋಸಗೊಳಿಸುವುದು.
2001 – ಕೇತನ್ ಪಾರೀಖ್ (ವರ್ತುಲಾಕೃತಿ ವ್ಯಾಪಾರ)
2009 – ಸತ್ಯಂ ಹಗರಣ (ಲೆಕ್ಕಪತ್ರದಲ್ಲಿ ವಂಚನೆ ಮತ್ತು ದುರ್ಬಲ ಆಡಳಿತ)
2010 – ಸಹರಾ ಇಂಡಿಯಾ (ಕಾನೂನು ಬಾಹಿರವಾಗಿ ಬಂಡವಾಳ ಸಂಗ್ರಹ)
2009-13 – ಗ್ಲೋಬಲ್ ಡಿಪಾಸಿಟ್ ರಿಸೀಟ್ ಮೂಲಕ ವಂಚನೆ
2013–14 – ಎನ್‍ಎಸ್‍ಇಎಲ್ ಮತ್ತು ಆರಂಭಿಕ ಬಂಡವಾಳ ನೀಡಿಕೆಯಲ್ಲಿ ಮೋಸ
2013 – ಪೋಂಜಿ ಸರಣಿ ವಂಚನೆ (ಸಾರದಾ ಸಮೂಹ ಹಣಕಾಸು ಹಗರಣ)
2014–15 – ಫ್ಯೂಚರ್ಸ್ ಆಂಡ್ ಆಪ್ಕನ್‍ಗೆ ಸಂಬಂಧಿಸಿದ ಹಗರಣ
2016–17 – ದೀರ್ಘಾವಧಿ ಬಂಡವಾಳ ಸ್ವರೂಪದ ಲಾಭಕ್ಕೆ ಸಂಬಂಧಿಸಿದ ವಂಚನೆ ಮತ್ತು ಷೇರುಪೇಟೆಯ ಒಳಗಿನವರಿಂದ ನಡೆದ ದೊಡ್ಡ ಮಟ್ಟದ ಕಾನೂನುಬಾಹಿರ ವ್ಯವಹಾರ
2018 -ಕೊಲೊಕೇಶನ್ ವಂಚನೆ (ಷೇರುಪೇಟೆಯ ಮಾರಾಟದ ಜಾಲದ ವ್ಯವಸ್ಥೆಯೊಳಗೆ ದಲ್ಲಾಳಿಗಳ ಅನಧಿಕೃತ ಪ್ರವೇಶ).
2019 -ಅನಧಿಕೃತ ವಹಿವಾಟು (ಖಾರ್ವಿ ಕಂಪೆನಿಯಿಂದ)
2024- ಹಿಂಡನ್ ಬರ್ಗ್ ವರದಿಯ ಕುರಿತ ಚರ್ಚೆಗಳನ್ನು ಗಮನಿಸಬೇಕಿದ
ದೇಶ ಪ್ರಗತಿಯತ್ತ ನಡೆಯುವ ವೇಗ 1990ರ ದಶಕದ ನಂತರ ವೇಗ ಪಡೆಯುತ್ತಾ ಬಂದಿರುವುದನ್ನು ಗಮನಿಸ ಬಹುದು. ಅದರೊಂದಿಗೆ ಆದ ಹಲವು ಆರ್ಥಿಕ, ರಾಜಕೀಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳನ್ನು ನಾವು ಗಮನಿಸಬೇಕಿದೆ.
ರಾಜಕೀಯ ಅಧಿಕಾರದ ಮೂಲಕ ಸಾಧಿಸಬಹುದಾದ ಹಲವಾರು ಉದ್ದೇಶಗಳಿವೆ. ಈ ಕಾರಣದಿಂದಾಗಿ ವ್ಯಾಪಾರೀ ಜಗತ್ತು ರಾಜಕೀಯ ರಂಗದ ಒಡನಾಟ ಉಳಿಸಿಕೊಂಡು ಕೊಡುಕೊಳ್ಳುವ ಸಂಬಂಧವನ್ನು ಭಾರತೀಯ ಉದ್ಯಮ ಜಗತ್ತೂ ಹೊಂದಿತ್ತು. ಆದರೆ ರಾಜಕೀಯ ಚಟುವಟಿಕೆಗಳು, ವಿಶೇಷವಾಗಿ ಜನಾಭಿಪ್ರಾಯವನ್ನು ಮತಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ, ತಂತ್ರಜ್ಞಾನ ಆಧರಿತ ಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು, ಜಾಹೀರಾತು ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಲಾರಂಭಿಸಿದುವು. ಈ ಬೆಳವಣಿಗೆಯ ಪರಿಣಾಮವಾಗಿ ರಾಜಕೀಯ ರಂಗವೂ ಬಂಡವಾಳ ಕೇಂದ್ರಿತ ಕ್ರಿಯೆಯಾಗತೊಡಗಿತು. ಇದರ ಪರಿಣಾಮವಾಗಿ ಜನಬಲದ ಮೇಲೆ ಧನಬಲದ ಪ್ರಭಾವ ಹೆಚ್ಚಾಗಿ ಉದ್ಯಮಿಗಳು, ಅಪರಾಧ ಹಿನ್ನೆಲೆಯನ್ನು ಸಮುದಾಯದ ಮೇಲೆ ಪ್ರಭಾವ ಬೀರಬಲ್ಲ (ಎಲ್ಲಾ ರೀತಿಯಿಂದಲೂ) ವ್ಯಕ್ತಿಗಳು ಜನಪ್ರತಿನಿಧಿಗಳಾಗ ತೊಡಗಿದ್ದಾರೆ. ಇಂತಹ ವರ್ಗ ಹಣ, ಸಂಪತ್ತು ಸಿಕ್ಕಿದ್ದಕ್ಕೆ ಯಾವುದೇ ರೀತಿಯ ಆರ್ಥಿಕ ಅಪರಾಧಗಳನ್ನು ಸಹಜವಾಗಿ ಸ್ವೀಕರಿಸುವ ಮನೋಭಾವ ಹೊಂದಿರುವುದು ಪರಿಸ್ಥಿತಿ ಹದಗೆಡಲು ಕಾರಣ.
ವೈಯಕ್ತಿಕ ನೆಲೆಯಲ್ಲಿ ಮಾಡುವ ವಂಚನೆ, ಮೋಸ, ಹಿಂಸೆಯ ಕುರಿತು ಜನರ ಸರಿ ತಪ್ಪುಗಳ ವಿವೇಚನೆ ಬಹಳ ಗಾಢವಾಗಿಯೇ ಇದೆ. ಆದರೆ ಅದು ಸಾಮಾಜಿಕವಾಗಿ, ಸಾರ್ವಜನಿಕ ನೆಲೆಯಲ್ಲಿ ನಡೆದಾಗ ಅದನ್ನು ಒಂದು ಸಾಮುದಾಯಿಕ ಹಿತಾಸಕ್ತಿಯ ವಿಷಯವೆಂದು ಜನ ಸ್ವೀಕರಿಸುತ್ತಾರೆ ಎನ್ನುವ ಹೊಸ ಸಾಂಸ್ಕೃತಿಕ ಮೌಲ್ಯವೊಂದು ಬಂಡವಾಳ ಕೇಂದ್ರಿತ ಚಿಂತನೆಯ ಭಾಗವಾಗಿ ಇತ್ತೀಚೆಗೆ ಸ್ವೀಕೃತವಾಗಿದೆ. ಹಾಗಾಗಿ ಬಹುಜನರ ಅಭಿಪ್ರಾಯವನ್ನು ಒಂದು ನಿಶ್ಚಿತ ಹಿತಾಸಕ್ತಿಯ ಪರವಾಗಿ ರೂಪಿಸುವಲ್ಲಿ ಧರ್ಮದ ಹೆಸರಿನಲ್ಲಿ, ಸಮುದಾಯದ ಹಿತಾಸಕ್ತಿಯ ಹೆಸರಿನಲ್ಲಿ ಹಿಂಸೆ ನಡೆಸಿದರೆ ಜನ ಸರಿ ತಪ್ಪು ನ್ಯಾಯ ಅನ್ಯಾಯಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇದನ್ನು ಬಂಡವಾಳ ನಿರ್ದೇಶಿತ ಅಧಿಕಾರ ರಾಜಕಾರಣ ಬಹಳ ಸಮರ್ಥವಾಗಿಯೇ ಬಳಸಿಕೊಂಡು ಎಲ್ಲ ರೀತಿಯ ಅನ್ಯಾಯ, ಹಿಂಸೆ, ಅಪರಾಧಗಳನ್ನು ಸಮರ್ಥಿಸಿಕೊಳ್ಳತೊಡಗಿದೆ. ಈ ಕಾರಣದಿಂದ ಜನಪ್ರತಿನಿಧಿಗಳು ಒಂದು ಪಕ್ಷದ ಚಿಹ್ನೆಯಲ್ಲಿ ಒಂದು ಉದ್ದೇಶದಿಂದ ಜನರ ಮತ ಪಡೆದು ಆಯ್ಕೆಯಾಗಿ, ಹಣ, ಅಧಿಕಾರ ಮತ್ತು ತಮ್ಮ ವೈಯಕ್ತಿಕ ಹಿತಾಸಕ್ತಿಯ ಕಾರಣದಿಂದ ಮಾರಿಕೊಂಡು ಇನ್ನೊಂದು ರಾಜಕೀಯ ಪಕ್ಷ ಸೇರಿದಾಗಲೂ ಅದಕ್ಕೆ ಧರ್ಮದ, ಸಮುದಾಯದ ಹಿತಾಸಕ್ತಿಯ ಲೇಪ ಹಚ್ಚಿದರೆ ಜನ ಅದನ್ನು ಸುಲಭವಾಗಿ ಸ್ವೀಕಾರ ಮಾಡುತ್ತಾರೆ.
ಕೊನೆಯ ಮಾತು..
ಬಹಳ ಹಿಂದಿನಿಂದಲೂ ನಮ್ಮ ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಹಿಡಿತ ಹೊಂದಿದ್ದ ಒಂದು ಸಣ್ಣ ಜನ ವರ್ಗ, ರಾಜಕೀಯ ರಂಗದೊಂದಿಗೆ ಉತ್ತಮ ಸಂಪರ್ಕ ಮತ್ತು ಸಂಬಂಧ ಹೊಂದುವ ಮೂಲಕ ಕಾಪೋರೇಟ್ ಜಗತ್ತಿನ ಹಿತಾಸಕ್ತಿಯನ್ನು ಕಾಯ್ದುಕೊಂಡು ಬರುತ್ತಿತ್ತು. ಉದ್ಯಮಿಗಳು ತಮ್ಮ ಉದ್ಯಮಶೀಲತೆಯ ಮತ್ತು ವ್ಯಾಪಾರ ಜಗತ್ತಿನಲ್ಲಿ ಅನಿವಾರ್ಯವಾಗಿರುವ ಎಲ್ಲ ರೀತಿಯ ಅಪಾಯಗಳನ್ನು ಎದುರಿಸಿ ತಮ್ಮ ಕಾರ್ಯಕ್ಷೇತ್ರಗಳನ್ನು ವಿಸ್ತರಿಸುತ್ತಾ ಬಂದಿರುವುದು ಅಭಿನಂದನೀಯ ವಿಷಯವೇ. ಇಂತಹ ಯಶಸ್ವೀ ಉದ್ಯಮಿಗಳಲ್ಲಿ ಬಹುತೇಕರು ಗುಜರಾತ್ ಮೂಲದವರು ಎನ್ನುವುದೂ ಗಮನಿಸಬೇಕಾದ ಅಂಶ. ದೇಶದೊಳಗಷ್ಟೇ ಅಲ್ಲದೇ ವಿದೇಶದಲ್ಲಿಯೂ ಇವರ ಸಾಧನೆ ಗಣನೀಯ. 1990ರ ದಶಕದ ನಂತರ ಯಾವಾಗ ಮುಕ್ತ ಮಾರುಕಟ್ಟೆಯ ನೀತಿ, ಜಾಗತೀಕರಣ ಮುಂತಾದ ಕಾರಣಗಳಿಂದಾಗಿ ಬಂಡವಾಳ ಬಲವಾಗಿ ಬೆಳೆಯಲಾರಂಭಿಸಿತೋ, ಆ ನಂತರದ ದಿನಗಳಲ್ಲಿ ದೇಶದ ರಾಜಕೀಯದಲ್ಲಿಯೂ ಉದ್ಯಮ ಜಗತ್ತಿನ ಹಿಡಿತ ಬಲಗೊಳ್ಳುತ್ತಾ ಬಂದಿರುವುದನ್ನು ಕಾಣಬಹುದು. ಈ ಅಂಶವನ್ನು ನಾವು ಬಂಡವಾಳ ಮಾರುಕಟ್ಟೆ ಅಥವಾ ಷೇರುಪೇಟೆಯಲ್ಲಿಯೂ ಕಾಣಬಹುದು. ಈ ಮೊದಲೇ ಹೇಳಿದಂತೆ ಆರ್ಥಿಕ ಬಂಡವಾಳದ ಇಂತಹ ಬೆಳವಣಿಗೆಯ ಹಿಂದೆ ಸಾಮಾಜಿಕ ಬಂಡವಾಳದ ಪ್ರಭಾವವೂ ದಟ್ಟವಾಗಿಯೇ ಇದೆ ಎನ್ನುವುದನ್ನು ನಾವು ನೆನಪಿಡಬೇಕಾಗುತ್ತದೆ. ಈ ಮೊದಲಿದ್ದ ರಾಜಕೀಯ ರಂಗದೊಂದಿಗೆ ಕಾಪೋರೇಟ್ ಜಗತ್ತಿನ ಸಂಪರ್ಕ ಮತ್ತು ಸಂಬಂಧ ನಿಧಾನವಾಗಿ ಪರಿವರ್ತನೆಯಾಗುತ್ತಾ ಬಂದು, ರಾಜಕೀಯದಲ್ಲಿ ಕಾರ್ಪೊರೇಟ್ ವಲಯದ ಹಿತಾಸಕ್ತಿ ನಿರ್ಣಾಯಕವಾಗ ತೊಡಗಿದೆ. ಆರ್ಥಿಕ ವಲಯದ ಮೇಲೂ ಗುಜರಾತ್ ಮೂಲದ ಉದ್ಯಮಗಳ ಹಿಡಿತವೂ ಗಟ್ಟಿಯಾಗಿ ಸದ್ಯದ ಭಾರತದ ರಾಜಕೀಯ ಮತ್ತು ಆರ್ಥಿಕತೆ ಈ ನಿಟ್ಟಿನಲ್ಲಿ ಇನ್ನಷ್ಟು ದೃಢವಾಗತೊಡಗಿರುವುದು ಆಕಸ್ಮಿಕವೇನಲ್ಲ. ಉಳಿದೆಲ್ಲ ಬೆಳವಣಿಗೆಗಳು ಈ ಪ್ರಮುಖ ಸಂಗತಿಯ ಸುತ್ತ ನಡೆಯುತ್ತಿರುವುದು ಸತ್ಯವೇ ಆಗಿದ್ದರೆ, ಈ ರೀತಿಯ ಬೆಳವಣಿಗೆ ದೇಶದ ಬಹುಜನರ ಹಿತದೃಷ್ಟಿಯಿಂದ ಉತ್ತಮ ಲಕ್ಷಣವಲ್ಲ. ಧರ್ಮ, ದೇವರು, ಭಾಷೆ, ಉತ್ತರ, ದಕ್ಷಿಣ, ಒಂದು ದೇಶ ಒಂದು ಚುನಾವಣೆ, ಸಮಾನ ನಾಗರಿಕ ಕಾನೂನು… ಮುಂತಾದ ಬ್ರೇಕಿಂಗ್ ಸುದ್ದಿಗಳು ನಮ್ಮ ಬುದ್ಧಿಗೆ ಮಂಕು ಹಿಡಿಸುವ ಮೊದಲು ದೇಶದ ರಾಜಕೀಯ ಮತ್ತು ಆರ್ಥಿಕ ಹಿತಾಸಕ್ತಿಗಳು ಹೇಗೆ, ಯಾಕೆ ಮತ್ತು ಯಾವ ಹಿತಾಸಕ್ತಿಯಿಂದ ಮರುನಿರೂಪಿತವಾಗುತ್ತಿವೆ ಎನ್ನುವುದನ್ನು ವಿಮರ್ಶೆ ಮಾಡಬೇಕಿದೆ.
(ನುಡಿ ಸಂಚಾರ 14 ರಿಂದ 19 ರವರೆಗಿನ ಲೇಖನಗಳ ವಿಷಯದ ಕುರಿತು ಈಗಾಗಲೇ ಪ್ರಕಟವಾಗಿರುವ, ಸಂಶೋಧನಾ ಲೇಖನಗಳು, ಪತ್ರಿಕಾ ವರದಿಗಳು ಮತ್ತು ಇತರ ದಾಖಲೆಗಳನ್ನು ಆಧರಿಸಿ, ಬರೆಯಲಾಗಿದೆ)
ಡಾ. ಉದಯಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ- ಮೆಹನತ್ ಇಲ್ಲದ ‘ಹರ್ಷ’ ಹಗರಣದಲ್ಲಿ ಕೊನೆಯಾದ ಕಥೆ