ಷೇರು ಮಾರುಕಟ್ಟೆಯ ಸೂಚ್ಯಂಕಗಳು, ಗೂಳಿ ಕರಡಿ ಇತ್ಯಾದಿ

Most read

ಒಂದು ದೇಶದ ಅರ್ಥವ್ಯವಸ್ಥೆಯನ್ನು ಆಧರಿಸುವ, ಮಹತ್ವದ ಪಾತ್ರವನ್ನು ಷೇರು (ಬಂಡವಾಳ) ಮಾರುಕಟ್ಟೆ ಮಾಡುವುದರೊಂದಿಗೇನೇ ಜನಸಾಮಾನ್ಯರ ಉಳಿತಾಯದ ಹಣವನ್ನು ದೇಶದ ಅಭಿವೃದ್ಧಿಯಲ್ಲಿ ವಿನಿಯೋಗಿಸುವಂತೆ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುತ್ತದೆ. ಉಳಿತಾಯದ ಹಣವನ್ನು ಉಳಿಸಿ ಬೆಳೆಸುವ ಈ ಕೆಲಸ ಜನಸಾಮಾನ್ಯರಿಗೆ ಸಲ್ಲಿಸುವ ಸೇವೆ ಕೂಡಾ ಆಗಿದೆ – ಡಾ.ಉದಯ ಕುಮಾರ ಇರ್ವತ್ತೂರು.

ದೇಶದ ಪ್ರಮುಖ ಷೇರು ಮಾರುಕಟ್ಟೆಗಳು

ಪ್ರಸ್ತುತ ದೇಶದಲ್ಲಿ ಸಾಂಸ್ಥಿಕ ಸ್ವರೂಪದ ಎರಡು ಷೇರು ವಿನಿಮಯ ಕೇಂದ್ರಗಳಿವೆ,

1. ಮುಂಬಯಿ ಷೇ ರು ಮಾರುಕಟ್ಟೆ- ಈ ಹಿಂದಿನ ಲೇಖನದಲ್ಲಿ ತಿಳಿಸಿದಂತೆ ಮುಂಬೈಯ ದಲಾಲ್ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡವನ್ನು ಕೇಂದ್ರವಾಗಿರಿಸಿ ವ್ಯವಹಾರ ಮಾಡುವ ಮುಂಬೈ ಷೇರು ಮಾರುಕಟ್ಟೆ,

2. 1994ರಿಂದ ಕಾರ್ಯಾರಂಭ ಮಾಡಲಾರಂಭಿಸಿದ, ಮುಂಬಯಿಯ ಬಾಂದ್ರ ಕುರ್ಲಾ ಸಂಕೀರ್ಣದಲ್ಲಿ ಕೇಂದ್ರ ಕಛೇರಿ ಹೊಂದಿರುವ ರಾಷ್ಟ್ರೀಯ ಷೇರುಪೇಟೆ.

ದೇಶದ ಇಡೀ ಬಂಡವಾಳ ಮಾರುಕಟ್ಟೆಯನ್ನು ನಿಯಂತ್ರಿಸುವ ಅಧಿಕಾರ ಸ್ಟಾಕ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಷೇರುಪೇಟೆ ನಿಯಂತ್ರಣ ಮಂಡಳಿ) ಇದರ ಕೈಯಲ್ಲಿದೆ. ಷೇರು ಪೇಟೆಗಳ ಸಂಪೂರ್ಣ ವ್ಯವಹಾರವನ್ನು ನಾವು ಉಪಗ್ರಹ ಮೂಲಕ ದೇಶಾದ್ಯಂತ ಸಂಪರ್ಕ ಜಾಲಹೊಂದಿರುವ ಕಂಪ್ಯೂಟರ್ ಪರದೆಯ ಮೂಲಕ ಏಕಕಾಲಕ್ಕೆ ಗಮನಿಸಬಹುದಾಗಿದೆ. ಒಟ್ಟಿನಲ್ಲಿ ಕ್ಷಣ ಕ್ಷಣದ ಮಾಹಿತಿ, ವ್ಯವಹಾರ ನಮ್ಮ ಬೆರಳ ತುದಿಗೆ ದಕ್ಕುವ ಹಾಗಿದೆ.

ಷೇರು ಮಾರು ಕಟ್ಟೆಯ ವ್ಯವಹಾರಗಳು

ಮುಂಬಯಿಯ ಬಾಂದ್ರ ಕುರ್ಲಾ ಸಂಕೀರ್ಣದಲ್ಲಿನ ರಾಷ್ಟ್ರೀಯ ಷೇರುಪೇಟೆ.

ಇಲ್ಲಿ ವ್ಯವಹಾರ ಮಾಡಲಿಚ್ಛಿಸುವ ಕಂಪನಿಗಳು ಮತ್ತು ಖರೀದಿದಾರರು ಕೆಲವು ನಿಯಮಗಳನ್ನು ಪಾಲಿಸಲೇ ಬೇಕಾಗುತ್ತದೆ. ಮೊತ್ತ ಮೊದಲನೆಯದಾಗಿ ಕಂಪನಿಗಳು ಮತ್ತು ಹೂಡಿಕೆದಾರರು ಷೇರು ವಿನಿಮಯ ಕೇಂದ್ರಕ್ಕೆ ಪ್ರವೇಶ ಪಡೆಯುವ ಅರ್ಹತೆ ಗಳಿಸಲೇ ಬೇಕು. ಮೊದ ಮೊದಲು ತಮ್ಮ ಮರ್ಜಿಗೆ ಅನುಗುಣವಾಗಿ ಇಡೀ ಷೇರು ಪೇಟೆಯನ್ನು ಕುಣಿಸುತ್ತಿದ್ದ ಬ್ರೋಕರ್‌ಗಳೂ ಈಗ ಬಹುಪಾಲು ವಿನಿಮಯ ಕೇಂದ್ರದ ನಿಯಂತ್ರಣದೊಳಗೆ ಬಂದಿದ್ದಾರೆ.

ತನ್ನ ಷೇರುಗಳನ್ನು ಮಾರಾಟ ಮಾಡ ಬಯಸುವ ಯಾವುದೇ ಒಂದು ಸಂಸ್ಥೆ ಅಥವಾ ಕಂಪೆನಿ ಷೇರು ವಿನಿಮಯ ಕೇಂದ್ರದಲ್ಲಿ ತನ್ನ ಷೇರುಗಳನ್ನು ನೋಂದಣಿ ಮಾಡಿಸಿಕೊಳ್ಳಬೇಕು. ಇದಕ್ಕೆ (ನಿಯಮಾನುಸಾರ) ಅಗತ್ಯ ಶುಲ್ಕ ಪಾವತಿ ಮಾಡಿ, ಸೂಕ್ತ ದಾಖಲೆಗಳನ್ನು ನೀಡಬೇಕಾಗುತ್ತದೆ. ನೊಂದಾವಣೆಯ ಕಾರ್ಯ ಪೂರ್ಣವಾದ ನಂತರ ವ್ಯವಹಾರ ನಡೆಸಲು ಅರ್ಹವಾದ ಷೇರುಗಳ ಪಟ್ಟಿಯಲ್ಲಿ ನೊಂದಾಯಿತ ಕಂಪನಿಯ ಷೇರುಗಳನ್ನೂ ಸೇರಿಸಲಾಗುತ್ತದೆ. ಷೇರು ಮಾರುಕಟ್ಟೆಯಲ್ಲಿನ ವ್ಯವಹಾರವನ್ನು ಮದ್ಯವರ್ತಿಗಳು ಅಥವಾ ಬ್ರೋಕರ್‌ಗಳು ನಡೆಸಿ ಕೊಡುತ್ತಾರೆ. ಈ ಕಾರಣದಿಂದ ವ್ಯವಹಾರ ಮಾಡಲು ಇಚ್ಚಿಸುವ ಖರೀದಿದಾರರು, ವಿನಿಮಯ ಕೇಂದ್ರದಲ್ಲಿ ಮಾನ್ಯತೆ ಪಡೆದ ನೊಂದಾಯಿತ ಬ್ರೋಕರ್‌ಗಳ ಮೂಲಕ ಷೇರು ಮಾರುಕಟ್ಟೆಗೆ ಪ್ರವೇಶ ಪಡೆಯಬಹುದು. ಹೀಗೆ ಪ್ರವೇಶ ಪಡೆಯ ಬಯಸುವ ಹೂಡಿಕೆದಾರರು, 1. ಬ್ಯಾಂಕ್ ಖಾತೆ, 2. ಡೀಮ್ಯಾಟ್ ಮತ್ತು ವ್ಯವಹಾರ ಖಾತೆ (ಇದನ್ನು ಬ್ರೋಕರಗಳ ಮೂಲಕ ತೆರೆಯ ಬೇಕಾಗುತ್ತದೆ) ಹೊಂದಿರ ಬೇಕಾಗಿರುತ್ತದೆ.

ಎಂಬತ್ತರ ದಶಕದಲ್ಲಿ ಜಾಗತೀಕರಣದ ಪ್ರಕ್ರಿಯೆ ವೇಗ ಪಡೆದ ಮೇಲೆ ಮತ್ತು ತೊಂಬತ್ತರ ದಶಕದಲ್ಲಿ ನಡೆದ ಹಲವಾರು ಹಗರಣಗಳ ಪರಿಣಾಮವಾಗಿ, ಈಗ ಷೇರು ಮಾರುಕಟ್ಟೆಯ ವ್ಯವಹಾರಗಳಲ್ಲಿ ಸಾಕಷ್ಟು ಸುಧಾರಣೆಗಳಾಗಿವೆ. ಈ ಮೊದಲು ಇದ್ದಂತೆ ಖರೀದಿ ಮತ್ತು ಮಾರಾಟದ ದರಗಳನ್ನು ಟ್ರೇಡಿಂಗ್ ರಿಂಗ್‍ನಲ್ಲಿ ಕೂಗಿ ಹೇಳುವ ಕ್ರಮಕ್ಕೆ ಬದಲಾಗಿ ಉಪಗ್ರಹ ಆಧಾರಿತ ಸಂಪರ್ಕ ಜಾಲದ ಮೂಲಕ ನಮೂದಿಸಲಾಗುತ್ತದೆ. ಷೇರು ಖರೀದಿ ಮಾಡಲು ಇಚ್ಛಿಸುವವರು ಯಾವ ದರದಲ್ಲಿ ಖರೀದಿ ಮಾಡಲು ಬದ್ಧರಿದ್ದೇವೆ ಎಂದು ಮಾಹಿತಿ ತಂತ್ರಜ್ಞಾನ ಆಧಾರಿತ ಪ್ಲಾಟ್‍ಫಾರ್‍ಂನಲ್ಲಿ ದರ ನಮೂದಿಸುತ್ತಾರೆ, ಅದೇ ಅಥವಾ ಅದಕ್ಕಿಂತ ಕಡಿಮೆ ದರದಲ್ಲಿ ತಮ್ಮಲ್ಲಿರುವ ಷೇರುಗಳನ್ನು ಯಾರಾದರೂ ಮಾರಾಟ ಮಾಡಲು ಸಿದ್ಧರಿದ್ದು ಅದನ್ನು ವ್ಯವಸ್ಥೆಯಲ್ಲಿ ನಮೂದಿಸಿದರೆ ಸ್ವಯಂಚಾಲಿತವಾಗಿ ಬೇಡಿಕೆ ಮತ್ತು ಪೂರೈಕೆಗಳು ಸಂಪರ್ಕ ಪಡೆದು ವಹಿವಾಟು ಅಂತಿಮವಾಗುತ್ತದೆ. ಮಾಹಿತಿ ತಂತ್ರಜ್ಞಾನದ ಬೆಳವಣಿಗೆಯ ಕಾರಣದಿಂದ ಷೇರು ಪತ್ರಗಳ ವರ್ಗಾವಣೆಯೂ ಸುಲಭವಾಗಿ ಮತ್ತು ಇಡೀ ಪ್ರಕ್ರಿಯೆಯೇ ಸರಳವಾಗಿದೆ. ಖರೀದಿಸಿದ ಷೇರುಗಳನ್ನು ಈ ಖಾತೆಗೆ ವರ್ಗಾಯಿಸಲಾಗುತ್ತದೆ. ಅಂದರೆ ಈಗ ಹೂಡಿಕೆ ಪತ್ರಗಳು ಭೌತಿಕ ರೂಪದಲ್ಲಿ ಇರದೇ, ಅಂರ್ತಜಾಲದಲ್ಲಿ ಸಂರಕ್ಷಿಸಲ್ಪಡುವ ಅವ್ಯಕ್ತ, ಅಭೌತಿಕ ರೂಪದಲ್ಲಿ ಖಾತೆಯಲ್ಲಿ ದಾಖಲೆಗಳ ರೂಪದಲ್ಲಿರುತ್ತದೆ. ಇದು ಬ್ಯಾಂಕ್ ಖಾತೆಯ ರೀತಿಯಲ್ಲಿರುತ್ತದೆ, ಅಂದರೆ ಖರೀದಿ ಮಾಡಿದಾಗ ಅದು ನಮ್ಮ ಖಾತೆಗೆ ಜಮೆಯಾದರೆ, ಮಾರಾಟ ಮಾಡಿದಾಗ ಖಾತೆಯಿಂದ ಕಡಿತವಾಗುತ್ತದೆ.  ಹಾಗಾಗಿ ಈ ಹಿಂದಿನಂತೆ ಮಾರಾಟಗಾರರ ಖಾತೆಯಿಂದ ಖರೀದಿದಾರರ ಖಾತೆಗೆ ವರ್ಗಾವಣೆಯಾಗಲು ಕ್ಷಣ ಮಾತ್ರ ಸಾಕು. ಸಾಮಾನ್ಯವಾಗಿ ಡಿಜಿಟಲ್ ಪಾವತಿಯಲ್ಲಿ ಹೇಗೆ ಹಣವನ್ನು ಮೊಬೈಲ್ ಮೂಲಕ ನಿಂತಲ್ಲಿಂದಲೇ ತಕ್ಷಣ ಪಾವತಿ ಮಾಡುತ್ತೇವೋ ಹಾಗೆ ಈ ವ್ಯವಹಾರ ಕೂಡಾ ಅತ್ಯಂತ ವೇಗವಾಗಿ ನಡೆಯುತ್ತದೆ. ಆದರೆ ಖರೀದಿದಾರರು, ಷೇರುಪೇಟೆಯ ಅಂರ್ತಜಾಲದ ಮೂಲಕ ದಲ್ಲಾಳಿಗಳು ಕೊಡ ಮಾಡಿದ ಗುರುತಿನ ಸಂಖ್ಯೆಯನ್ನು ಬಳಸಿ ದೇಶದ ಯಾವುದೇ ಭಾಗದಲ್ಲಿ ಇದ್ದರೂ ಭಾಗವಹಿಸಿ ಷೇರುಗಳನ್ನು ಖರೀದಿ ಮಾಡಬಹುದು ಅಥವಾ ಮಾರಾಟ ಮಾಡಬಹುದು. ಹೂಡಿಕೆದಾರರು ಹೀಗೆ ನೇರವಾಗಿ ಭಾಗವಹಿಸಿದರೂ ಅದು ಬ್ರೋಕರ್‌ಗಳು ನೀಡುವ ಅಧಿಕೃತ ಗುರುತಿನ ಮೂಲಕ ನಡೆಯುತ್ತದೆ. ಯಾವುದೇ ರೀತಿಯ ಮಾರಾಟ ಮತ್ತು ಖರೀದಿಯಲ್ಲಿ ಬ್ರೋಕರ್‌ಗಳ ಕಮಿಷನ್, ವ್ಯವಹಾರದ ಶುಲ್ಕ ಮತ್ತು ಸ್ಟಾಂಪ್ ಡ್ಯೂಟಿಯನ್ನು ಪಾವತಿಸ ಬೇಕಾಗುತ್ತದೆ.

ಷೇರು ಪೇಟೆಯ ಸೂಕ್ಷ್ಮ ಸೂಚ್ಯಂಕಗಳು

ಷೇರು ಪೇಟೆಯ ಪ್ರತಿದಿನದ ವ್ಯವಹಾರವನ್ನು ಷೇರು ಪೇಟೆ ಸೂಚ್ಯಂಕದ ಮೂಲಕ ಅಳೆಯಲಾಗುತ್ತದೆ. ಮುಂಬಯಿ ಷೇರುಪೇಟೆಯ ಸೂಚ್ಯಂಕವನ್ನು ಸೆನ್‍ಸೆಕ್ಸ್ ಎಂದೂ ರಾಷ್ಟ್ರೀಯ ಷೇರುಪೇಟೆಯ ಸೂಚ್ಯಂಕವನ್ನು ನಿಫ್ಟಿ ಎಂದು ಕರೆಯಲಾಗುತ್ತದೆ. ಸೂಚ್ಯಂಕದಲ್ಲಿ ಎರಡು ಅವಧಿಯ (ಮೂಲ ಮತ್ತು ಪ್ರಸ್ತುತ ವರ್ಷ) ನಡುವೆ ಬೆಲೆಗಳಲ್ಲಿ ಆಗುವ ವ್ಯತ್ಯಾಸವನ್ನು ಗುರುತಿಸಿ ಅಳೆಯಲಾಗುತ್ತದೆ. ಉದಾಹರಣೆಗೆ 2020 ಕ್ಕೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಎಷ್ಟು ಏರಿಕೆಯಾಗಿದೆ ಎನ್ನುವುದನ್ನು ಸೂಚ್ಯಂಕದ ಸಹಾಯದಿಂದ ಸುಲಭವಾಗಿ ತಿಳಿಯಬಹುದು. 2020 ಆಗಸ್ಟ್ ತಿಂಗಳಲ್ಲಿ 10ಗ್ರಾಮ್ ಚಿನ್ನದ ಬೆಲೆ ರೂ.48,650 ಇತ್ತು. 2024 ಆಗಸ್ಟ್ ತಿಂಗಳಲ್ಲಿ ಅದು ರೂ.73,260 ಕ್ಕೆ ಏರಿಕೆ ಆಯಿತು. ನಾವು 2020ಕ್ಕೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಆದ ಶೇಕಡಾ ಏರಿಕೆಯನ್ನೇ ಸೂಚ್ಯಂಕ ತಿಳಿಸುತ್ತದೆ. ಅಂದರೆ 2020ರ (ಮೂಲ ವರ್ಷ) ಬೆಲೆಯನ್ನು 100 (48,650) ಎಂದು ಪರಿಗಣಿಸಿದರೆ, 2024ರಲ್ಲಿ (ಪ್ರಸ್ತುತ ವರ್ಷ) ಅದು 150 ಅಗಿರುತ್ತದೆ. ಇದೇ ಮಾನದಂಡವನ್ನು ಅನುಸರಿಸಿ ಷೇರು ಪೇಟೆಯ ಸೂಚ್ಯಂಕವನ್ನೂ ನಿರ್ಧರಿಸಲಾಗುತ್ತದೆ.

ಷೇರು ಮಾರುಕಟ್ಟೆಯ ಗೂಳಿ

ಮುಂಬಯಿ ಷೇರುಪೇಟೆಯ ಸೂಕ್ಷ್ಮ ಸೂಚ್ಯಂಕ (ಸೆನ್‍ಸೆಕ್ಸ್) ವನ್ನು ಷೇರುಪೇಟೆಯಲ್ಲಿ ಅತ್ಯಧಿಕ ವ್ಯವಹಾರವಿರುವ ಆಯ್ದ 30 ಕಂಪೆನಿಗಳ ಷೇರುಗಳ ಬೆಲೆಯಲ್ಲಿ ಆಗುವ ಒಟ್ಟು ಏರಿಳಿತವನ್ನು ಅಳೆಯಲಾಗುತ್ತದೆ. ರಾಷ್ಟ್ರೀಯ ಷೇರುಪೇಟೆ ಸೂಕ್ಷ್ಮ ಸೂಚ್ಯಂಕದಲ್ಲಿ ಷೇರುಪೇಟೆಯಲ್ಲಿ ಅತ್ಯಧಿಕ ವ್ಯವಹಾರ ಹೊಂದಿರುವ 50 ಕಂಪೆನಿಗಳನ್ನು ಆಯ್ಕೆ ಮಾಡಿ ಒಂದು ನಿರ್ಧಿಷ್ಟ ಕಾಲವನ್ನು (ಅವಧಿಯನ್ನು) ಆಧಾರವಾಗಿರಿಸಿ ದೈನಂದಿನ ಬೆಲೆಯ ಏರಿಳಿತವನ್ನು ಸೂಚ್ಯಂಕದ ಮೂಲಕ ಅಳೆಯಲಾಗುತ್ತದೆ. (ಅರ್ಥವ್ಯವಸ್ಥೆಯ 13 ಪ್ರಮುಖ ವಲಯಗಳಿಗೆ ಸಂಬಂಧಿಸಿ ವ್ಯವಹರಿಸುವ ಕಂಪೆನಿಯ ಷೇರುಗಳು ಆಯ್ಕೆ ಮಾಡಿದ 50 ಷೇರುಗಳಲ್ಲಿ ಒಳಗೊಂಡಿರುತ್ತವೆ.) ಇದಕ್ಕೆ ಸಂಬಂಧಿಸಿದ ಪೂರಕ ಮಾಹಿತಿಯನ್ನು ಷೇರುಪೇಟೆಗಳಿಗೆ ಸಂಬಂಧಿಸಿರುವ ಅಂರ್ತಜಾಲ ಮಾಹಿತಿ ಕೋಶಗಳಿಂದ ಪಡೆಯಬಹುದಾಗಿದೆ.

ಗೂಳಿ ಮತ್ತು ಕರಡಿ     

ಷೇರು ಮಾರುಕಟ್ಟೆಯಲ್ಲಿ ಬೆಲೆಗಳು ಚಲಿಸುವ ದಿಕ್ಕನ್ನು ದೆಸೆಯನ್ನು ಆಧರಿಸಿ ಬಳಸುವ ಎರಡು ಜನಪ್ರಿಯ ಶಬ್ದಗಳು ‘ಗೂಳಿ’ ಮತ್ತು ‘ಕರಡಿ’. ಮಾರುಕಟ್ಟೆಯಲ್ಲಿ ಬೆಲೆಗಳು ಏರುತ್ತಾ ಹೋಗುವ ಪ್ರವೃತ್ತಿ ಅಥವಾ ಲಕ್ಷಣಗಳನ್ನು ನಾವು ಗೂಳಿ ಮತ್ತು ಬುಲ್ (Bull) ಎಂದು ಕರೆಯುತ್ತೇವೆ. ಮಾರುಕಟ್ಟೆಯಲ್ಲಿ ನಾವು ನೋಡು ನೋಡುತ್ತಿದ್ದಂತೆ ಬೆಲೆಗಳು ಏರುತ್ತಾ ಹೋಗುತ್ತವೆ. ನಾವು ಖರೀದಿ ಮಾಡುವುದೋ ಬೇಡವೋ ಎಂದು ಯೋಚಿಸುವಷ್ಟರಲ್ಲಿ ನಾವು ಖರೀದಿಸ ಬಯಸಿದ ಷೇರಿನ ಬೆಲೆ ತುಂಬಾ ಹೆಚ್ಚಳವಾಗಿ ಅಂತಹ ಷೇರು ಬೇಕೇ ಬೇಕೆಂದಾದರೆ ಒಂದೋ ಜಾಸ್ತಿ ಹಣ ಕೊಡಬೇಕು, ಇಲ್ಲಾ ಕಡಿಮೆ ಪ್ರಮಾಣದ ಷೇರು ಖರೀದಿ ಮಾಡುವ ಪ್ರಸಂಗ ಬರುತ್ತದೆ. ಬಹುಷಃ ಖರೀದಿಸಬೇಕು ಎನ್ನುವಷ್ಟರಲ್ಲಿ ಷೇರಿನ ಬೆಲೆ ನಮ್ಮ ಅಂಕೆಗೆ ಸಿಕ್ಕದೇ ಮತ್ತಷ್ಟು ಏರಿಕೆಯಾಗಿ ಹೋಗುವ ಕಾರಣ ಇದನ್ನು ಗೂಳಿಗೆ ಹೋಲಿಸಿರಬಹುದು.

ಇದನ್ನೂ ಓದಿಭಾರತೀಯ ಬಂಡವಾಳ ಮಾರುಕಟ್ಟೆ ನಡೆದು ಬಂದ ದಾರಿ

ಷೇರು ಮಾರುಕಟ್ಟೆಯ ಕರಡಿ

ಅದೇ ರೀತಿ ನಾವು ಷೇರುಗಳನ್ನು ಮಾರಬೇಕು ಎಂದು ಆಲೋಚನೆ ಮಾಡುತ್ತಿರುವಂತೆಯೇ ಬೆಲೆಗಳು ನಿರಂತರವಾಗಿ ಕುಸಿಯುತ್ತಾ ಹೋಗುವುದನ್ನು ಕರಡಿ (ಬೇರ್) ಗೆ ಹೋಲಿಸಲಾಗಿದೆ. ಬೆಲೆಗಳು ಬಹಳ ವೇಗವಾಗಿ ಏರುತ್ತಾ ಹೋದ ನಂತರ ಒಂದು ಹಂತದಲ್ಲಿ ಕೊಂಚ ಸ್ಥಿರವಾಗಿ ನಿಲ್ಲುತ್ತದೆ. ಆ ಕ್ಷಣ ಇನ್ನು ಬೆಲೆ ಏರದೇ ಹೋಗಬಹುದು. ಆದುದರಿಂದ ಲಾಭ ನಗದೀಕರಿಸುವ ಎನ್ನುವ ಆಲೋಚನೆ ಬಂದು ಕೆಲವು ಹೂಡಿಕೆದಾರರು ತಮ್ಮಲ್ಲಿರುವ ಷೇರುಗಳನ್ನು ಮಾರಲು ಆರಂಭಿಸುತ್ತಾರೆ. ಈಗ ಮಾರುಕಟ್ಟೆಯಲ್ಲಿ ಬೇಡಿಕೆಗೆ ಪೂರೈಕೆಯೂ ಒದಗಿ ಬರುತ್ತದೆ. ಪರಿಣಾಮವಾಗಿ ಬೆಲೆ ನಿಧಾನ ಇಳಿಯಲಾರಂಭವಾಗುತ್ತದೆ. ಆಗ ಉಳಿದ ಹೂಡಿಕೆದಾರರು ಇನ್ನೂ ಬೆಲೆ ಇಳಿಯಲಾರಂಭಿಸಿದರೆ ಕಷ್ಟ ಎಂದು ತಮ್ಮಲ್ಲಿರುವ ಷೇರು ಮಾರಲು ನಿರ್ಧರಿಸುತ್ತಾರೆ. ಇದರ ಪರಿಣಾಮವಾಗಿ ಪೂರೈಕೆಯ ಪ್ರಮಾಣ ಮತ್ತಷ್ಟು ಹೆಚ್ಚಾಗಿ ಬೆಲೆ ಇನ್ನಷ್ಟು ಇಳಿಯುತ್ತಾ ಹೋಗುತ್ತದೆ. ಈ ಪ್ರವೃತ್ತಿಯನ್ನು ಕರಡಿಗೆ ಹೋಲಿಸಲಾಗುತ್ತದೆ.

ಇದನ್ನೂ ಓದಿ- ಬಂಡವಾಳ ಮಾರುಕಟ್ಟೆ ಎನ್ನುವ ಮಾಯಾಜಿಂಕೆ

ಮುಂದಿನ ಭಾಗದಲ್ಲಿ ಹೂಡಿಕೆದಾರರು ತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಹೂಡಿಕೆಯ ಮೇಲೆ ಲಾಭಗಳಿಸಲು ಏನೆಲ್ಲ ಕಸರತ್ತು ನಡೆಸುತ್ತಾರೆ, ಈ ದಿಸೆಯಲ್ಲಿ ಯಾವೆಲ್ಲ ಹಣಕಾಸಿನ ಉಪಕರಣಗಳು ಬಳಕೆಯಲ್ಲಿವೆ ಮುಂತಾದ ವಿಷಯಗಳ ಕುರಿತ ವಿವರಗಳನ್ನು ತಿಳಿಯೋಣ.

ಡಾ. ಉದಯಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು



More articles

Latest article