ಬೆಂಗಳೂರು: ಜಮೀನಿನ ಪಹಣಿಯಲ್ಲಿ ವಕ್ಫ್ ಎಂದು ತೋರಿಸಿದ್ದಕ್ಕೆ ಹಾವೇರಿ ಜಿಲ್ಲೆಯ ಹನಗಲ್ ತಾಲೂಕಿನ ಹರನಗಿರಿ ರೈತ ಚನ್ನಪ್ಪ ಬಾಳಿಕಾಯಿ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಆರೋಪಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ದ ದಾಖಲಿಸಿದ್ದ ಎಫ್ ಐ ಆರ್ ಗೆ ಹೈಕೋರ್ಟ್ ತಡೆ ನೀಡಿದೆ.
ಈ ಸಂಬಂಧ ಹಾವೇರಿ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐಆರ್ ಅನ್ನು ರದ್ದುಪಡಿಸುವಂತೆ ಕೋರಿ ತೇಜಸ್ವಿ ಸೂರ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ಪರ ವಕೀಲರು ಇದು ದುರುದ್ಧೇಶದಿಂದ ಕೂಡಿರುವ ಎಫ್ ಐಆರ್ ಮತ್ತು ಕಾನೂನುಬಾಹಿರ ಎಂದು ವಾದಿಸಿದ್ದರು. ಪೊಲೀಸರು ಸ್ಪಷ್ಟನೆ ನೀಡಿದ ಬಳಿಕ ಟ್ವೀಟ್ ಅನ್ನು ರದ್ದುಪಡಿಸಲಾಗಿದೆ. ಮೇಲ್ನೋಟಕ್ಕೆ ಇದು ಅಪರಾಧ ಆಗುವುದಿಲ್ಲ. ಅರ್ಜಿದಾರರು ಜವಬ್ದಾರಿಯುತ ಸಂಸದರಾಗಿದ್ದು, ಯಾವುದೇ ಸಮುದಾಯಗಳ ನಡುವೆ ಕೋಮುದ್ವೇಷ ಬಿತ್ತುವ ಕೆಲಸ ಮಾಡಿಲ್ಲ. ಆದ್ದರಿಂದ ಎಫ್ ಐಆರ್ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು. ಇವರ ವಾದಕ್ಕೆ ರಾಜ್ಯ ಪ್ರಾಸಿಕ್ಯೂಟರ್ ಬೆಳ್ಳಿಯಪ್ಪ ಆಕ್ಷೇಪ ವ್ಯಕ್ತಪಡಿಸಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಎಫ್ ಐಆರ್ ಗೆ ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಡಿ.4ಕ್ಕೆ ಮುಂದೂಡಿತು.