ತಂದೆ ಸ್ಥಾನದಲ್ಲಿದ್ದು ರಾಜಧರ್ಮ ಪಾಲಿಸಬೇಕಾದ ರಾಜ್ಯಪಾಲರು ಪಕ್ಷಪಾತಿಯಾಗಿದ್ದಾರೆ: ಶಾಸಕ ನಾರಾ ಭರತ್ ರೆಡ್ಡಿ

Most read

ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗುತ್ತಿದೆ, ತಂದೆ ಸ್ಥಾನದಲ್ಲಿದ್ದು ರಾಜಧರ್ಮ ಪಾಲಿಸಬೇಕಾದ ರಾಜ್ಯಪಾಲರು ಪಕ್ಷಪಾತಿಯಾಗಿದ್ದಾರೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹೇಳಿದ್ದಾರೆ.

ಬಳ್ಳಾರಿ ನಗರದ ಗಡಿಗಿ ಚನ್ನಪ್ಪ ವೃತ್ತದ ಬಳಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಸಿಎಂ ಅವರ ಮೇಲೆ ಮಾತ್ರವಲ್ಲ, ನಮ್ಮ ಮೇಲೂ ಕೇಸ್ ಹಾಕಿ, ನಾವ್ಯಾರೂ ಅಂಜಲ್ಲ, ನಮ್ಮ ಮೇಲೆ ನೂರು ಕೇಸ್ ಆದ್ರೂ ನಾವು ಯಾರಿಗೂ ಅಂಜಲ್ಲ ಎಂದರು.

ನಾವು ಶಾಸಕರು, ಸಚಿವರು, ಕಾರ್ಯಕರ್ತರು ಸೈನಿಕರಂತೆ ಸಿಎಂ ಅವರ ರಕ್ಷಣೆ ಮಾಡಲಿದ್ದೇವೆ ಎಂದು ಹೇಳಿದ ಅವರು, ಐದು ವರ್ಷಗಳ ಕಾಲ ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಿದರು.

ಸಿದ್ದರಾಮಯ್ಯ ಸಿಎಂ ಆಗಿ ಇದ್ದರೂ ಇರದಿದ್ದರೂ ಅವರು ಸಿಂಹ ಇದ್ದಂತೆ, ನಮ್ಮ ಸಿದ್ದರಾಮಯ್ಯ ಜನಪರ ನಾಯಕ ಅವರನ್ನು ಯಾರೂ ಏನೂ ಮಾಡಲಾಗದು ಎಂದರು.

ಶಶಿಕಲಾ ಜೊಲ್ಲೆ, ಜನಾರ್ದನ ರೆಡ್ಡಿ, ಮುರುಗೇಶ್ ನಿರಾಣಿ ಸೇರಿದಂತೆ ಹಲವರ ವಿರುದ್ಧ ಕೇಸುಗಳು ಬಾಕಿಯಿದ್ದರೂ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿಲ್ಲ. ಆದರೆ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ, ಇದು ಪಕ್ಷಪಾತಿ ಧೋರಣೆಯಲ್ಲದೇ ಬೇರೇನೂ ಅಲ್ಲ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.

ಗಾಂಧಿ ಭವನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಸಲ್ಲಿಸಿದರು.

ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಕಂಪ್ಲಿ ಶಾಸಕ ಜೆ.ಎನ್.ಗಣೇಶ್, ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎ.ಮಾನಯ್ಯ, ಬಳ್ಳಾರಿ ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ಹುಮಾಯೂನ್ ಖಾನ್, ಡಿಸಿಸಿ ಅಧ್ಯಕ್ಷ ಅಲ್ಲಂಅಂ ಪ್ರಶಾಂತ್, ಕಲ್ಲುಕಂಭ ಪಂಪಾಪತಿ, ಬ್ಲಾಕ್ ಅಧ್ಯಕ್ಷರುಗಳಾದ ಅಲ್ಲಾಬಕಷ್, ಅಭಿಲಾಶ್, ಹುಸೇನ ಪೀರಾ, ಸುಬ್ಬರಾಯುಡು, ಮೇಯರ್ ಮುಲ್ಲಂಗಿ ನಂದೀಶ್, ಮಾಜಿ ಮೇಯರ್ ಬಿ.ಶ್ವೇತಾ, ಮಹಾನಗರ ಪಾಲಿಕೆಯ ಸದಸ್ಯರುಗಳು, ವೆಂಕಟೇಶ್ ಹೆಗಡೆ, ಕುರುಗೋಡು ಚೆನ್ನಬಸು, ಬಿ.ಎಂ.ಪಾಟೀಲ್ ಸೇರಿದಂತೆ ಕಾಂಗ್ರೆಸ್ಸಿನ ನೂರಾರು ಜನ ಮುಖಂಡರು ಹಾಜರಿದ್ದರು.

More articles

Latest article