ಚುಂಚನಗಿರಿ ಮಠದಲ್ಲಿ ಹೇಳಿಕೆ: ಆರ್. ಅಶೋಕ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

Most read

ಬೆಂಗಳೂರು: ಧಾರ್ಮಿಕ ಕೇಂದ್ರವಾಗಿರುವ ಚುಂಚನಗಿರಿ ಮಠದ ಆವರಣದಲ್ಲಿ ಸ್ವಾಮೀಜಿಯವರ ಬೆಂಬಲ ತಮಗಿದೆ ಎಂದು ಹೇಳಿ, ಧಾರ್ಮಿಕ ಕೇಂದ್ರವನ್ನು ರಾಜಕೀಯಕ್ಕೆ ಬಳಸಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿರುವ ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ.

ಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯ ವಕ್ತಾರ ಎ.ಎಸ್.ನಟರಾಜ್ ಗೌಡ ಹಾಗು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಆಯೋಗಕ್ಕೆ ದೂರು ಸಲ್ಲಿಸಿದ್ದು, ಆರ್.ಅಶೋಕ್ ಅವರನ್ನು ಕೂಡಲೇ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೈ ಬಿಡಬೇಕು ಮತ್ತು ಮಠ ಮಂದಿರಗಳಲ್ಲಿ ಧರ್ಮದ ನೆಲೆಯಲ್ಲಿ ಮತ ಯಾಚನೆ ನಡೆಸಿ ನೀತಿ ಸಂಹಿತೆ ಉಲ್ಲಂಘಿಸಿರುವ ಆರ್ ಅಶೋಕ್ ಸೇರಿದಂತೆ ಬಿಜೆಪಿ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ದೂರಿನಲ್ಲೇನಿದೆ?

ದಿನಾಂಕ 10-5-2024ರಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆದಿ ಚುಂಚನಗಿರಿ ಪೀಠಾಧ್ಯಕ್ಷರನ್ನು ಹಳೇ ಮೈಸೂರು ಭಾಗದ ಬಿಜೆಪಿ ಅಭ್ಯರ್ಥಿಗಳೊಂದಿಗೆ ಭೇಟಿ ಮಾಡಿದ ನಂತರ ಮಠದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ಸ್ವಾಮೀಜಿಯವರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ ಹೀಗಾಗಿ ನಮ್ಮ ಅಭ್ಯರ್ಥಿಗಳ ಗೆಲುವು ನಿಶ್ಚಿತ ಎಂದು ಹೇಳಿದ್ದರು.

ಆದಿಚುಂಚನಗಿರಿ ಮಠ ನಾಡಿನ ಪ್ರಮುಖ ಮಠವಾಗಿದ್ದು, ಹೀಗೆ ಮಠವನ್ನು ತಮ್ಮ ರಾಜಕೀಯಕ್ಕೆ ಬಳಸಿಕೊಳ್ಳುವ ಮೂಲಕ ಆರ್.ಅಶೋಕ್ ಅವರು ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ದೂರಿನಲ್ಲಿ ತಿಳಿಸಿದೆ.

More articles

Latest article