ಸಮಕಾಲೀನ ರಾಜಕಾರಣದ ಜಿಜ್ಞಾಸೆಗೆ ರಂಗರೂಪ : ಅಶ್ವತ್ಥಾಮ ನಾಟ್‍ಔಟ್

Most read

ಯಕ್ಷಗಾನ ವೀಕ್ಷಕರಿಗೆ ಅಶ್ವತ್ಥಾಮನ ಕಥೆ ಅಪರಿಚಿತವೇನಲ್ಲ. ಕನ್ನಡ ಕಾವ್ಯ ಸಾಹಿತ್ಯದಲ್ಲೂ ಕಥೆ ಗೊತ್ತಿದ್ದದ್ದೇ.  ಆತನ ವಿಕ್ಷಪ್ತತೆಯ ಎಳೆ ಹಿಡಿದುಕೊಂಡೇ ಯಕ್ಷಗಾನ, ನಾಟಕದ ಕಲಾವಿದರು ವಿವಿಧ ನೆಲೆಗಳಲ್ಲಿ  ಅಶ್ವತ್ಥಾಮನನ್ನು  ನಿರೂಪಿಸಿದ ಉದಾಹರಣೆಗಳು ನಮ್ಮೆದುರಿಗಿವೆ.

ಈ ಹಿನ್ನೆಲೆಯಲ್ಲಿ ಮೋಹನಚಂದ್ರ (ಮೋಚ) ಅವರು ಬರೆದು ನಿರ್ದೇಶಿಸಿದ, ಮಂಗಳೂರಿನ ʼಆಯನʼ ನಾಟಕದ ಮನೆಯವರು ಆಡಿದ ಅಶ್ವತ್ಥಾಮ ನಾಟ್‍ಔಟ್ ನಾಟಕದ ಪ್ರದರ್ಶನವು ಮಂಗಳೂರಿನ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಎಪ್ರಿಲ್ 8ರಂದು ನಡೆಯಿತು. 

“ಅಶ್ವತ್ಥಾಮ ನಾಟ್‍ಔಟ್ ‘ನಾಟಕದ ಪ್ರದರ್ಶನ ಸೀದಾ ಸೀದಾ ಪುರಾಣದ ಪರಿಕ್ಷೇತ್ರದಲ್ಲೇ ನಡೆಯುವುದಿಲ್ಲ. ಅದು ಈ ಕಾಲದ ಮನೋರೋಗಿಗಳ ಆಸ್ಪತ್ರೆಯ  ಕೊಠಡಿಯ ಆವರಣದಲ್ಲಿ ನಡೆಯುವಂಥದ್ದು.  ಇಲ್ಲಿ ಬರುವುದು ಒಬ್ಬ ಮನೋರೋಗಿ, ಒಬ್ಬ  ನರ್ಸ್ ಮತ್ತು ಒಬ್ಬ ಮನೋವೈದ್ಯ. ಮನೋರೋಗಿ ತಾನು ತನ್ನನ್ನು ಅಶ್ವತ್ಥಾಮ ಎಂದು ತಿಳಿದುಕೊಂಡಿರುತ್ತಾನೆ. ಈತನ ಬಳಿಬಂದ ನರ್ಸ್ (ಪ್ರಹರಿ) ನ್ನು  ದ್ವಾಪರದ ಶಕುನಿ ಎಂದು ಭಾವಿಸುತ್ತಾನೆ. ಮನೋವೈದ್ಯ ಡಾಕ್ಟರ್‌ನನ್ನು ಕೃಷ್ಣ ಎಂದೂ ಭಾವಿಸುತ್ತಾನೆ. ರೋಗಿಯನ್ನು  ಅರ್ಥಮಾಡಿಕೊಳ್ಳಲು ನರ್ಸ್ ಮತ್ತು ಡಾಕ್ಟರ್ ತಾವೂ ಶಕುನಿ ಹಾಗೂ ಕೃಷ್ಣರಾಗಿ ನಟಿಸಲು ಪ್ರಾರಂಭಿಸುತ್ತಾರೆ. ಆಸ್ಪತ್ರೆಯ  ಒಳಾವರಣದ ಸನ್ನಿವೇಶವು ಮಹಾಭಾರತ ಪುರಾಣದ ಸನ್ನಿವೇಶವಾಗಿ ಮಾರ್ಪಾಡಾಗುತ್ತದೆ.

ವಿಸ್ತಾರವಾದ ಎರಡನೆ ದೃಶ್ಯದಲ್ಲಿ ಅಶ್ವತ್ಥಾಮ, ಶಕುನಿ ಮತ್ತು ಕೃಷ್ಣ ಪಾತ್ರಗಳು ಮುಖಾಮುಖಿಯಾಗುತ್ತವೆ.  ಮಹಾಭಾರತ ಕಾಲದ ಸಂದರ್ಭದಲ್ಲಿ ತಾವು ಮಾಡಿದ ಕೃತ್ಯಗಳ ಬಗ್ಗೆ ಒಂದೋ ಮತ್ತೊಬ್ಬರಲ್ಲಿ  ಸಮರ್ಥಿಸಿಕೊಳ್ಳುತ್ತಾರೆ ಇಲ್ಲವೇ ಅವರಿಬ್ಬರ ಕೃತ್ಯಗಳ ಬಗ್ಗೆ ಟೀಕೆ ಮಾಡುತ್ತಾರೆ. ಈ ಟೀಕೆ, ವಿಮರ್ಶೆಗಳ ಹಿನ್ನೆಲೆಯಲ್ಲಿ  ಮಹಾಭಾರತದ ಹಲವಾರು ಘಟನೆಗಳು ವಿಶ್ಲೇಷಣೆಗೊಳಪಡುತ್ತಾ ಹೋಗುತ್ತವೆ.  ಪ್ರಧಾನವಾಗಿ ಅವೆಲ್ಲವೂ ಭೂಮಿ ಮತ್ತು ಅಧಿಕಾರವನ್ನು ಸ್ವಾಧೀನ ಪಡಿಸಿಕೊಳ್ಳುವ ಪ್ರಯತ್ನಗಳಾಗಿ ಗುರುತಿಸಲ್ಪಡುತ್ತವೆ.  ಆ ಗಣನೆಯಲ್ಲಿ  ಭೀಷ್ಮನದ್ದೂ  ಅಧಿಕಾರ  ತನ್ನಲ್ಲಿರಿಸುವ  ವರಸೆ, ತಾನು ಕುರುಡನಾಗಿದ್ದರೂ ಧೃತರಾಷ್ಟ್ರನದೂ ಅಧಿಕಾರ ಭದ್ರಪಡಿಸುವ  ವರಸೆ.  ಈ ಹಿನ್ನೆಲೆಯಲ್ಲಿ  ನೂರು ಮಕ್ಕಳೂ ಧೃತರಾಷ್ಟ್ರನವು ಎನ್ನುವ ಸುಳ್ಳುಗಳು.  ಗಾಂಧಾರಿ ಪಿಂಡವೊಂದನ್ನು ಹಿಸುಕಿ ನೂರು ಮಾಡಿದಳೆಂಬ ಸುಳ್ಳು. ಅತಿಕಾಮಿಯಾದ ಧೃತರಾಷ್ಟ್ರನು ಗಾಂಧಾರಿಯ ದಾಸಿಯರಲ್ಲಿ  ಪಡೆದ ಮಕ್ಕಳು ನೂರಾರು ಕೌರವರು ಎಂದು ಈ ನಾಟಕ ನಿರೂಪಿಸಿ, ನಮ್ಮ ವಿವೇಚನೆಯ ಸಮ್ಮತಿ ಪಡೆದುಕೊಳ್ಳುತ್ತಿದೆ.

ಲೌಕಿಕಾತೀತವಾದ ಬೇರೆ ಒಂದೆರಡು ವಿದ್ಯಮಾನಗಳನ್ನು ಲೌಕಿಕದ ವ್ಯಾಪ್ತಿಗೆ ತಂದು ನಿರೂಪಿಸುವ ಒಂದೆರಡು ಘಟನೆಗಳು ಇಲ್ಲಿವೆ. ದ್ರೌಪದಿಯ ಅಕ್ಷಯಾಂಬರವೂ ಅವುಗಳಲ್ಲೊಂದು. ದ್ರೌಪದಿಯ ಮಾನಭಂಗವಾಗುವ ಹೊತ್ತಿನಲ್ಲಿ ಕೃಷ್ಣನ ಕೋರಿಕೆಯಂತೆ ಗಾಂಧಾರಿಯು ತನ್ನ ನೂರು ಮಂದಿ ಸೊಸೆಯಂದಿರಿಗೆ ಸೂಚಿಸಿದ ಮೇರೆಗೆ,  ಉಪ್ಪರಿಗೆಯಿಂದ ಆ ನೂರು ಮಂದಿ ರಾಶಿ ರಾಶಿ ತಮ್ಮ ಮೇಲುದವನ್ನು ದ್ರೌಪದಿಯ  ಮೇಲಕ್ಕೆ ಎಸೆಯುತ್ತಿದ್ದಾಗ, ದುಶ್ಯಾಸನ ದ್ರೌಪದಿಯ ಮಾನಭಂಗ ಮಾಡಲಾಗದೆ ಹೋದ ಎಂಬ  ನಿರೂಪಣೆ ಈ ಮೂರು ಪಾತ್ರಗಳ ಚರ್ಚೆಯಲ್ಲಿ ಮೂಡುತ್ತದೆ. ತನ್ನನ್ನು ತಾನು ದೈವಾಂಶಸಂಭೂತನೆಂದು ಜನ ಭಾವಿಸಬೇಕೆಂಬ ಗ್ರಹಿಕೆಯನ್ನು ಕೃಷ್ಣನೇ ಬೆಳೆಸಿದನೆಂದು ಮತ್ತಿಬ್ಬರು ಆರೋಪಿಸುತ್ತಾರೆ.  ಅಧಿಕಾರ ಬಲಪಡಿಸಲು ತಾನು ದೈವ ಪುರುಷನೆಂಬ ಪ್ರಚಾರವು ಇವತ್ತಿಗೂ ಅಗತ್ಯ ಎನ್ನುತ್ತದೆ ಅವರ ಚರ್ಚೆಗಳು.

ಯುದ್ಧದಲ್ಲಿ ಯಾದವರ ಸಖ್ಯವನ್ನು ಯಾಕೆ ಕೌರವರೂ, ಪಾಂಡವರೂ ಬಯಸಿದರು? ಗೊಲ್ಲರಾದ ಯಾದವರಲ್ಲಿ ಹೇರಳವಾದ ಗೋಸಂಪತ್ತಿತ್ತು.  ಆರ್ಥಿಕವಾಗಿ  ಅವರು ಕುರುಗಳಿಗಿಂತಲೂ ಬಲಿಷ್ಟರಾಗಿದ್ದರು.   ದೂರದಲ್ಲಿರುವ ಹಾಲುಮತದ ವಿರಾಟನ ಸಹಾಯ ಪಡೆಯುವುದಕ್ಕಿಂತಲೂ, ಸಮೀಪದ ಮಥುರೆಯ ಆಸುಪಾಸಿನಲ್ಲಿದ್ದ ಯಾದವರ ಹಣಬಲ ಹಾಗೂ ಮಾನವಬಲ ಪಾಂಡವ ಕೌರವರಿಬ್ಬರಿಗೂ ಅಗತ್ಯವಾಗಿತ್ತು ಎಂದು  ಚರ್ಚೆ ಸಾಗುತ್ತದೆ..

ಮಹಾಭಾರತದಂಥ ಪ್ರಾಚೀನ ಕತೆಗಳಲ್ಲಿ ಕಾಲ್ಪನಿಕವಾಗಿ ಕಾಣುವ ಅಥವಾ ಅಲೌಕಿಕವೆನಿಸಬಹುದಾದ ಘಟನೆಗಳನ್ನು ವಾಸ್ತವಿಕಗೊಳಿಸುವ ಹಾಗೂ ಲೌಕಿಕಗೊಳಿಸುವ ಕೆಲಸಗಳನ್ನು ಪುರಾಣಗಳನ್ನಾಧರಿಸಿ ಬರೆಯುವ ಆಧುನಿಕ ಸಾಹಿತಿಗಳು ಮಾಡಲೇಬೇಕೇ ಎಂಬುದು ಒಂದು ಚರ್ಚಾಸ್ಪದ ವಿಷಯ.

ಆದರೆ ಶಕುನಿ ಮತ್ತು ಅಶ್ವತ್ಥಾಮರದ್ದು ಪ್ರತೀಕಾರದ ಕೃತ್ಯಗಳು. ಶಕುನಿಯ ಬಗ್ಗೆ ಸಾಮಾನ್ಯವಾಗಿ ತಿಳಿದಿರದ ಹಿನ್ನೆಲೆಯನ್ನು ಈ ನಾಟಕ ಹೇಳುತ್ತಿದೆ. ಗಾಂಧಾರ ರಾಜನ ಪುತ್ರಿಯಾದ ಗಾಂಧಾರಿ ಮೂಲ ನಕ್ಷತ್ರದಲ್ಲಿ ಜನಿಸಿದವಳಾಗಿದ್ದು, ಅವಳಿಗೆ ಮೊದಲ ವಿವಾಹದಲ್ಲಿ ಪತಿಯಾದವನು ಮೂರು ದಿನಗಳಲ್ಲಿ ಮರಣ ಹೊಂದುವನು ಎಂಬ ಮಾತಿತ್ತಂತೆ. ಮೊದಲ ಪತಿಯು ಮರಣ ಹೊಂದಿದ ಬಳಿಕ ಕುರುವಂಶದ ಧೃತರಾಷ್ಟ್ರನಿಗೆ ಗಾಂಧಾರಿಯನ್ನು ಮದುವೆ ಮಾಡಲಾಯಿತು. ಶಕುನಿಯೂ ಸೇರಿ ನೂರು ಮಂದಿ ಗಾಂಧಾರಿಯ ಸೋದರರಾದ ಗಾಂಧಾರರಾಜಪುತ್ರರನ್ನು ಹಸ್ತಿನಾವತಿಗೆ ಆಹ್ವಾನಿಸಿದ ಧೃತರಾಷ್ಟ್ರ ಅವರನ್ನು ನಗರದ ಹೊರಗಡೆ ಬಂಧನದಲ್ಲಿಟ್ಟು ಅನ್ನಾಹಾರ ಕೊಡದೆ ಕೊಲ್ಲಿಸುತ್ತಾನೆ. ಆ ಬಂಧನದಿಂದ ಹೇಗೋ ತಪ್ಪಿಸಿಕೊಂಡು ಬಂದು ತನ್ನ ಸೋದರಿ ಗಾಂಧಾರಿಯ ಆಶ್ರಯ ಪಡೆದ ಶಕುನಿ, ಕೌರವರನ್ನು ಚೆನ್ನಾಗಿಟ್ಟುಕೊಂಡೇ ಕುರುವಂಶದ ವಿನಾಶಕ್ಕಾಗಿ  ಪ್ರಯತ್ನಿಸಿದೆ ಎನ್ನುತ್ತಾನೆ ಈ ನಾಟಕದ ಶಕುನಿ. ಹಾಗಾಗಿ ಶಕುನಿಯದ್ದು ಒಂದು ಪ್ರತೀಕಾರದ ಕತೆ.

ಚಿರಂಜೀವಿತ್ವದ ವರವನ್ನು ತಂದೆ ದ್ರೋಣರಿಂದ ಪಡೆದ ಅಶ್ವತ್ಥಾಮನ ಪ್ರತೀಕಾರದ ಕತೆ ಭಯಾನಕವೂ, ದಾರುಣವೂ ಆದುದು.  ದ್ರೋಣನಾಗಲಿ, ಅಶ್ವತ್ಥಾಮನಾಗಲಿ ಅಧಿಕಾರಸ್ಥ ಕೌರವರ ಸಾಮೀಪ್ಯ ಹೊಂದಿ ಸಕಲ ಸೌಭಾಗ್ಯ ಲಾಭಗಳನ್ನು ಹೊಂದುವುದು ಇವತ್ತು ನಡೆಯುವ ವಿದ್ಯಮಾನಗಳಿಗೆ ಹೋಲುವಂತದ್ದೇ ಆಗಿದೆ. ಚಿರಂಚೀವಿಯಾಗಿರುವುದರಿಂದ  ತಾನೇನು ಕುಕೃತ್ಯ ಮಾಡಿದರೂ ಸಾವಂತೂ ಬರುವುದಿಲ್ಲ. ಅಲ್ಲದೆ ಪೋಷಕರ ಬೆಂಬಲವೂ ಇದ್ದೇ ಇರುತ್ತದೆ. ಕಳೆದ ಐವತ್ತು ವರ್ಷಗಳ ಆಧುನಿಕ ಭಾರತದ ಇತಿಹಾಸದಲ್ಲಿ  ಇಂಥ ಹಲವಾರು ವಿದ್ಯಮಾನಗಳನ್ನು ನಾವು ನೋಡಿರುತ್ತೇವೆ. ಯುದ್ಧ ನಿಯಮವನ್ನು ಮುರಿದು, ರಾತ್ರಿ ಹೊತ್ತಲ್ಲಿ ಮಲಗಿದ್ದ ಅಮಾಯಕ ಬಾಲಕರಾದ ಉಪಪಾಂಡವರ ತಲೆಗಳನ್ನು ಕತ್ತರಿಸಿದ್ದು ನ್ಯಾಯಬಾಹಿರವೆಂದು ಕೃಷ್ಣನೂ, ಶಕುನಿಯೂ ತಿಳಿಸಿ, ಅಶ್ವತ್ಥಾಮ ಅದಕ್ಕಾಗಿ ನ್ಯಾಯ ವಿಚಾರಣೆಯನ್ನು ಎದುರಿಸಬೇಕಾಗುತ್ತದೆಂದೂ ಸೂಚಿಸುತ್ತಾರೆ.

ಮೂರನೆಯ ಹಾಗೂ ಕೊನೆಯ ದೃಶ್ಯವು ನ್ಯಾಯ ವಿಚಾರಣೆಯ ಪ್ರಸಂಗ.  ಇಲ್ಲಿ ನ್ಯಾಯವಾದಿಗಳಾಗಿ ನರ್ಸ್  ಮತ್ತು ಡಾಕ್ಟರ್ ಇದ್ದಾರೆ.  ನ್ಯಾಯವಾದಿಗಳ ಕೋಟು ಧರಿಸಿದ್ದಾರೆ.  ನ್ಯಾಯಾಧೀಶ  ಯಾರೆಂದು ಕೊಳ್ಳುವಾಗ ಅಶ್ವತ್ಥಾಮನೇ ನ್ಯಾಯಾಧೀಶನಾಗಿ ಪ್ರತ್ಯಕ್ಷನಾಗುತ್ತಾನೆ. ಕೋರ್ಟ್ ಸನ್ನಿವೇಶವನ್ನು ಅಣಕಿಸುವಂತಹ ಈ ದೃಶ್ಯದಲ್ಲಿ  ಆರೋಪಿ (ನಿಜವಾಗಿ ಅಪರಾಧಿ) ಅಶ್ವತ್ಥಾಮನೇ ನ್ಯಾಯಾಧೀಶನಾಗುತ್ತಾನೆ. ನ್ಯಾಯಾಧೀಶರು ಭ್ರಷ್ಟರಾಗಿರುವುದು, ನ್ಯಾಯಾಧೀಶರೇ ತಮ್ಮ ಮೇಲಿನ ಆರೋಪದ ಬಗ್ಗೆ ವಿಚಾರಣೆ ನಡೆಸುವುದು ಈ ಮೊದಲಾದ ಈ ಕಾಲದ ದೇಶದ ವಿದ್ಯಮಾನಗಳು ಇಲ್ಲಿ ಪ್ರಸ್ತಾಪವಾಗುತ್ತವೆ. ಕೊನೆಗೂ ವಿಚಾರಣೆ ಆರಂಭವಾದಾಗ, ಉಪಪಾಂಡವರ ತಲೆಗಳನ್ನು ಕಡಿಯುವ ಮೊದಲೇ ತಾನು ತನ್ನಪ್ಪ ದ್ರೋಣನನ್ನು ಅವಮಾನಿಸಿದ ಆತನ ಬಾಲ್ಯದ ಗೆಳೆಯ ದ್ರುಪದನ ಸಂತತಿಯನ್ನೇ ಹೇಗೆ ಪ್ರತೀಕಾರವಾಗಿ ಕೊಂದುಬಿಟ್ಟೆ  ಎಂದು ಅಶ್ವತ್ಥಾಮ ನಿರೂಪಿಸುತ್ತಾನೆ. ದ್ರುಪದನ ಮಕ್ಕಳಾದ ದೃಷ್ಟದ್ಯುಮ್ನ, ಶಿಖಂಡಿಯರನ್ನೂ ಆ ಬಳಿಕ ಅವರ ಸೋದರಿ ದ್ರೌಪದಿಯ ಮಕ್ಕಳಾದ ಉಪಪಾಂಡವರನ್ನೂ ಕೊಂದು ಅಶ್ವತ್ಥಾಮ ತನ್ನ ರಕ್ತಪಿಪಾಸುತನವನ್ನು ವ್ಯಕ್ತಪಡಿಸುತ್ತಾನೆ. ಅಧಿಕಾರದ ಸಾಮೀಪ್ಯದಿಂದ ಗಳಿಸಿದ  ಧೈರ್ಯ ಹಾಗೂ ದಕ್ಕಿದ ಅಜರಾಮತ್ವದ  ವರದಿಂದ ಮನುಷ್ಯನಾದವನು ಮಾಡಲೇ ಬಾರದ ಕೃತ್ಯಗಳನ್ನು ಮಾಡಿದೆನೆಂದು ಹೇಳುತ್ತಾ ಇದಕ್ಕೆ ಶಿಕ್ಷೆ ತನಗುಂಟೇ ಎಂದು ಪ್ರಶ್ನಿಸುತ್ತಾನೆ.

ನರ್ಸ್ ಮತ್ತು ಡಾಕ್ಟರು ಪ್ರೇಕ್ಷಕರನ್ನುದ್ದೇಶಿಸಿ ನಿಮ್ಮಲ್ಲಿ ಕೆಲವರ ಒಳಗಾದರೂ ಅಶ್ವತ್ಥಾಮ ಇರಲೇಬೇಕಲ್ಲವೇ? ಶಕುನಿ ಇರಬೇಕಲ್ಲವೇ, ಕೃಷ್ಣ ಇರಬೇಕಲ್ಲವೇ ಎಂದು ಪ್ರಶ್ನಿಸುವುದರೊಂದಿಗೆ ನಾಟಕ ಕೊನೆಯಾಗುತ್ತದೆ.

ಮೂರು ಪಾತ್ರಗಳನ್ನು ರಂಗದಲ್ಲಿರಿಸಿ, ಮಹಾಭಾರತ ಕಥೆಯಲ್ಲಿ ಕಂಡುಬರುವ ಕ್ರೌರ್ಯ, ಹಿಂಸೆ, ಯುದ್ಧದ  ಭೀಕರತೆಯನ್ನೂ, ಸಾವಿನ ಅನಿವಾರ್ಯತೆಯನ್ನು ಅರಿತೂ ಮನುಷ್ಯ ತಾನು ಚಿರಂಜೀವಿ ಎಂದು ಭ್ರಮಿಸಿ ಲೋಕಕಂಟಕನಾಗುವುದನ್ನು ನಾಟಕವು ಹೇಳುವ ಪ್ರಯತ್ನ ಮಾಡುತ್ತದೆ. ಸಂಪತ್ತಿನ ಗಳಿಕೆ, ಆ ಮೂಲಕ ಅಧಿಕಾರ ಪಡೆಯುವ ಮಂದಿ, ಅವರೊಂದಿಗೆ ಒಡನಾಟದ ಸಾಮೀಪ್ಯ ಹೊಂದಿ ತಮ್ಮ ತಮ್ಮ ಕುಟುಂಬದ ಲಾಭ ಪಡೆಯುವ ಇನ್ನಷ್ಟು ಮಂದಿ, ಪ್ರಭುತ್ವದ ಊಳಿಗದವನಾಗಿದ್ದರೂ ಪ್ರಭುವಿಗೆ ಮೆಚ್ಚುಗೆಯಾಗಬಹುದೆಂದು ಯಾವ ಕ್ರೂರ ಅಮಾನುಷ ಕೃತ್ಯಕ್ಕೂ ಮುಂದಾಗುವ ಮತ್ತಷ್ಟು ಮಂದಿ, ನ್ಯಾಯ ವ್ಯವಸ್ಥೆಯನ್ನೇ  ಅರ್ಥಹೀನಗೊಳಿಸುವ ಪ್ರಭುತ್ವದ  ಭಯೋತ್ಪಾದನೆ ಇವೆಲ್ಲ ಒಂದೆಡೆ ಸಾರ್ವಕಾಲಿಕ  ಸತ್ಯವನ್ನು ತೋರಿಸುವಂತೆ ರಂಗ ಪ್ರದರ್ಶನದಲ್ಲಿ  ಮೂಡಿ ಬರುವುದರ ಜೊತೆಗೇ ಸಮಕಾಲೀನ ಭಾರತದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೆನಪಿಸುತ್ತಾ ಸದ್ಯದ ಭಾರತದ ಬಗ್ಗೆ ಒಂದು ರಾಜಕೀಯ ಅರಿವನ್ನು  ಉಂಟುಮಾಡುವ ಗಂಭೀರ  ಕೆಲಸವನ್ನು ಮಾಡುತ್ತದೆ.

ಇಡೀ ನಾಟಕದ ರಚನೆಯು  ತರ್ಕ ಪ್ರಧಾನವಾಗಿದೆ.  ಕರಾವಳಿಯ ಯಕ್ಷಗಾನದ ಪ್ರದರ್ಶನಗಳಲ್ಲಿ  ತರ್ಕವನ್ನು ಒಳಗೊಂಡ ವಾಚಿಕಾಭಿನಯವಿದೆ.  ಯಕ್ಷಗಾನದ ಪ್ರೇಕ್ಷಕ ಅಂಥ ಸಂದರ್ಭದಲ್ಲಿ  ರಂಗದಲ್ಲಿ  ಮಾತು ಆಡುವ ನಟನನ್ನೇ ಕೇಂದ್ರೀಕರಿಸಿ ಆತನ ಮಾತು,  ನಟನೆಯನ್ನು ವೀಕ್ಷಿಸುತ್ತಿರುತ್ತಾನೆ. ಆ ಸಂದರ್ಭದಲ್ಲಿ ಪ್ರೇಕ್ಷಕನ ವೀಕ್ಷಣೆ ಆ ನಟನನ್ನು ಹೊರತುಪಡಿಸಿ ರಂಗದಲ್ಲಿರುವ ಬೇರೆ ನಟರ ಕಡೆಗೆ ಅಷ್ಟಾಗಿ ಇರುವುದಿಲ್ಲ.  ತರ್ಕಪ್ರಧಾನವಾದ  ಈ ರಂಗಪ್ರದರ್ಶನವು ಕರಾವಳಿಯ ನಾಟಕಾಸಕ್ತರಿಗೆ ಒಂದು ಯಕ್ಷಗಾನ ಆಟದಂತೆ ಕಂಡಿದ್ದಿರಬಹುದು ಎನಿಸುತ್ತದೆ.  ಪರಿಣತ ಮುಮ್ಮೇಳದ ಕಲಾವಿದರು ಯಕ್ಷಗಾನವನ್ನು ಮನೋಹರವಾಗಿ ಪ್ರದರ್ಶಿಸುವುದನ್ನು ನಾವು ನೋಡಿದ್ದೇವೆ.  ಆ ಛಾಪಿನಲ್ಲಿ ಈ ನಾಟಕವೂ ಮನಸೆಳೆದಿದೆ ಎಂಬುದರಲ್ಲಿ ಅನುಮಾನವಿಲ್ಲ.

ಜಿಲ್ಲೆಯ ಪರಿಣತ ನಟರಾದ ಚಂದ್ರಹಾಸ ಉಳ್ಳಾಲ (ಅಶ್ವತ್ಥಾಮ/ ರೋಗಿ/ನ್ಯಾಯಾಧೀಶ),  ಪ್ರಭಾಕರ ಕಾಪಿಕಾಡ್ (ಶಕುನಿ/ನರ್ಸ್/ನ್ಯಾಯವಾದಿ), ಇವರ ಜೊತೆಗೆ ಸರಿಮಿಗಿಲೆನಿಸಿ ಡಾ. ದಿನೇಶ್ ನಾಯಕ್ (ಕೃಷ್ಣ/ಡಾಕ್ಟರ್/ನ್ಯಾಯವಾದಿ) ಅವರುಗಳು ಅತ್ಯುತ್ತಮ ನಟನೆ ತೋರಿದ್ದರಿಂದ ಈ  ರಂಗ ಪ್ರದರ್ಶನವನ್ನು ಗೆಲ್ಲಿಸುವುದು ಸಾಧ್ಯವಾಗಿದೆ.

ನಿರ್ದೇಶಕ ಮೋಹನಚಂದ್ರ

ಪ್ರದರ್ಶನದಲ್ಲಿ ಬೆಳಕು, ಸಂಗೀತ, ರಂಗ ಪರಿಕರ ಯಾವತ್ತೂ ಪೂರಕ ಪಾತ್ರ ವಹಿಸುವವೇ ಆಗಿವೆ.  ಪುರಾಣ  ಕಾಲದಿಂದ  ಆಧುನಿಕ ಕಾಲದವರೆಗೆ ಜೋತಾಡುವ  ಈ ನಾಟಕ ಪ್ರದರ್ಶನದಲ್ಲಿ ರಂಗಸಂಗೀತವು ಜಾನಪದ, ಯಕ್ಷಗಾನದಿಂದ ಆಧುನಿಕ ಪಾಶ್ಚಾತ್ಯ ಸಂಗೀತದವರೆಗೂ ಓಲಾಡುತ್ತಿತ್ತು. ಸರಳ ಆದರೆ ಅರ್ಥಪೂರ್ಣ ರಂಗ ಪರಿಕರ  ಮೆಚ್ಚುವಂತಿತ್ತು.  ಆದರೂ ಎಷ್ಟೆಲ್ಲಾ ತಾಂತ್ರಿಕ ಸಾಮಗ್ರಿಗಳನ್ನು,  ಪರಿಕರಗಳನ್ನು  ಬಳಸಿದರೂ ನಾಟಕ ಗೆಲ್ಲಬೇಕಾದರೆ ನಟನ ವಾಚಿಕಾಭಿನಯ, ದೇಹಭಾಷೆಯ ಬಳಕೆ, ರಂಗ ಚಲನೆಯ ಖಚಿತತೆ ಇರಲೇ ಬೇಕೆಂಬುದನ್ನು ಅಶ್ವತ್ಥಾಮ ನಾಟ್‍ಔಟ್ ನಾಟಕ ಶ್ರುತಪಡಿಸಿದೆ.

ಸಮಕಾಲೀನ ದೇಶದ ವಿದ್ಯಮಾನಗಳನ್ನು ನಾಟಕ ರಚನೆ ಹಾಗೂ ರಂಗ ಪ್ರದರ್ಶನದ ಮೂಲಕ ಅರ್ಥೈಸಬೇಕೆಂಬ  ಪ್ರಯತ್ನವನ್ನು ಹಿರಿಯ ನಿರ್ದೇಶಕ ಮೋಹನಚಂದ್ರ ಅವರು ಕಳೆದ ನಾಲ್ಕಾರು ವರ್ಷಗಳಿಂದ ಮಾಡುತ್ತಿದ್ದಾರೆ. ಐತಿಹ್ಯವನ್ನೋ, ಇತಿಹಾಸವನ್ನೋ, ಪುರಾಣವನ್ನೋ ಕೃತಿಯ ನೆಲಗಟ್ಟಾಗಿಸಿ ಅಲ್ಲಿಂದ ಸಮಕಾಲೀನತೆಗೆ ಜೋಕಾಲಿಯಾಡುವ ಪ್ರಯತ್ನ ಅವರ ತಿರುಕನ ಕನಸು, ಕನಕ ಪುರಂದರ ನಾಟಕ ಕೃತಿಗಳಲ್ಲಿ ನಡೆದಿದ್ದು, ಅದರ ಬಳಿಕದ ಪ್ರಯತ್ನವಾಗಿ ಅಶ್ವತ್ಥಾಮ ನಾಟ್‍ಔಟ್ ಮೂಡಿ ಬಂದಿದೆ.  ಬೆರಗುಗೊಳಿಸುವುದರೊಂದಿಗೆ  ಚಿಂತನೆಗೆ ಹಚ್ಚುವ ನಾಟಕ ಪ್ರದರ್ಶನ  ನೀಡಿದ ಮೋಹನಚಂದ್ರರಿಗೆ ಭೇಷ್ ಎನ್ನಲೇ ಬೇಕು.

ವಾಸುದೇವ ಉಚ್ಚಿಲ

ಸಾಮಾಜಿಕ ಕಾರ್ಯಕರ್ತರು

More articles

Latest article