SSLC ಪೂರ್ವಸಿದ್ಧತಾ ಪರೀಕ್ಷೆ ಸಮಯ ಬದಲಾವಣೆ ವಿಷಯವು ಈಗ ಕೋಮು ತಿರುವು ಪಡೆದುಕೊಂಡಿದೆ. ಮುಸ್ಲಿಮರಿಗೆ ನಮಾಜ್ ಮಾಡಲು ಅನುಕೂಲವಾಗುವಂತೆ ಪರೀಕ್ಷಾ ಸಮಯ ಬದಲಾವಣೆ ಮಾಡಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿದ್ದಾರೆ.
ಶಿಕ್ಷಣ ಇಲಾಖೆಯಿಂದ ಬಿಡುಗಡೆಯಾದ ಈ ವೇಳಾಪಟ್ಟಿಯಿಂದ ರಾಜ್ಯದಲ್ಲಿ ಈಗ ವಿವಾದವನ್ನು ಎಬ್ಬಿಸಿದ್ದು, ಈ ಕುರಿತು ರಾಜ್ಯ ಶಿಕ್ಷಣ ಇಲಾಖೆ ಅಧಿಕೃತ ಸ್ಪಷ್ಟೀಕರಣವನ್ನು ನೀಡುವ ಸಾಧ್ಯತೆಯಿದೆ. ಪರೀಕ್ಷೆಗಳನ್ನು ಫೆಬ್ರವರಿ 26 ರಿಂದ ಮಾರ್ಚ್ 3 ರವರೆಗೆ ನಿಗದಿಪಡಿಸಲಾಗಿದೆ.
ಮಾರ್ಚ್ 1 ರಂದು ಶುಕ್ರವಾರ ಹೊರತುಪಡಿಸಿ ಎಲ್ಲಾ ಪರೀಕ್ಷೆಗಳು ಪ್ರತಿದಿನ ಬೆಳಿಗ್ಗೆ 10.15 ಕ್ಕೆ ಪ್ರಾರಂಭವಾಗುತ್ತವೆ, ಶುಕ್ರವಾರದಂದು ನಡೆಯುವ ವಿಜ್ಞಾನ ವಿಷಯ ಪರೀಕ್ಷೆಯನ್ನು ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಿಲಾಗಿದ್ದು, ಮುಸ್ಲಿಮರಿಗೆ ಶುಕ್ರವಾರ ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಲು ಪರೀಕ್ಷಾ ವೇಳಾಪಟ್ಟಿಯನ್ನು ನವೀಕರಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಹೇಳಿಕೊಂಡಿವೆ.
ಭಟ್ಕಳದ ಹಿಂದೂ ಮುಖಂಡ ಶ್ರೀಕಾಂತ ನಾಯ್ಕ ಮಾತನಾಡಿ, ಕಾಂಗ್ರೆಸ್ ಸರ್ಕಾರದ ನಿರ್ದೇಶನದಂತೆ ಶಿಕ್ಷಣ ಇಲಾಖೆ ವೇಳಾಪಟ್ಟಿಯನ್ನು ಬದಲಾಯಿಸಿದೆ. ಸರಕಾರ ನೇರವಾಗಿ ಶಿಕ್ಷಣ ಇಲಾಖೆಯಲ್ಲಿ ತುಷ್ಟೀಕರಣಕ್ಕೆ ಅವಕಾಶ ನೀಡುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ, ಮಾರ್ಚ್ 1ರಂದು ಪಿಯುಸಿ ಮುಖ್ಯ ಪರೀಕ್ಷೆ ನಡೆಯಲಿದ್ದು, ಅದೇ ದಿನ 01-03-2024 ರ ಶುಕ್ರವಾರ ಕನ್ನಡ ಹಾಗೂ ಅರೇಬಿಕ್ ಪರೀಕ್ಷೆ ಇದೆ. ಬೆಳಗ್ಗೆ 10.15ಕ್ಕೆ ಪರೀಕ್ಷೆ ಆರಂಭವಾಗಿ 1.30ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ ಮಾರ್ಚ್ 1ರಂದು ಎಸ್‌ಎಸ್‌ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆ ಮಧ್ಯಾಹ್ನ 2 ಗಂಟೆಗೆ ಪ್ರಾರಂಭಿಸಲಾಗಿದೆ. ಹಾಗಾಗಿಯೇ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ.
ಸಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಬಿಜೆಪಿ ವಕ್ತಾರ ಹರಿಬಿಟ್ಟ ಹರಿಪ್ರಕಾಶ್ ಕೋಣೆಮನೆ ಮತ್ತು ಸೂಲಿಬೆಲೆ
ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಒಂದೇ ದಿನ ಇರುವ ಕಾರಣ ಸಮಯವನ್ನು ನವೀಕರಣ ಮಾಡಿರುವುದನ್ನು ಅರಿಯದೇ ಸಮಾಜಿಕ ಜಾಲತಾಣದಲ್ಲಿ ಪತ್ರಕರ್ತ ಹಾಗೂ ಬಿಜೆಪಿ ವಕ್ತಾರ ಹರಿಪ್ರಕಾಶ್ ಕೋಣೆಮನೆ, “ರಾಜ್ಯಮಟ್ಟದ ಎಸ್ ಎಸ್ ಎಲ್ ಸಿ ಪೂರ್ವ ಸಿದ್ದತಾ ಪರೀಕ್ಷೆಯ ವೇಳಾಪಟ್ಟಿಯಲ್ಲೂ ಸಹ ಮುಸ್ಲಿಂ ತುಷ್ಟೀಕರಣ. ಇದೇ ಮೊದಲ ಬಾರಿಗೆ ಕಾಂಗ್ರೆಸ್ ಸರ್ಕಾರದ ನಿರ್ದೇಶನದಂತೆ, ರಾಜ್ಯ ಶಿಕ್ಷಣ ಇಲಾಖೆ ಬೆಳಿಗ್ಗೆಯ ನಮಾಜ್ ಮಾಡಲು ಅನುಕೂಲ ಮಾಡಿಕೊಡಲು ಉಳಿದೆಲ್ಲ ದಿನದ ವೇಳಾಪಟ್ಟಿಯ ಸಮಯಕ್ಕೆ ಬದಲಾಗಿ ಶುಕ್ರವಾರದಂದು ಮಧ್ಯಾಹ್ನ ಪರೀಕ್ಷೆ ನಡೆಸಲು ನಿರ್ಧರಿಸಿದ್ದು ನಿಜವಾಗಿಯೂ ಖೇದಕರ. ಶಿಕ್ಷಣ ಕ್ಷೇತ್ರದಲ್ಲೂ ನೇರವಾಗಿ ಮುಸ್ಲಿಂ ತುಷ್ಟೀಕರಣದ ಈ ನೀತಿಯನ್ನು ಬಹಿರಂಗವಾಗಿ ಖಂಡಿಸಬೇಕಾಗಿದೆʼ, ಎಂದು ಬರೆದುಕೊಂಡಿದ್ದರು.
ಸಮಾಜಿಕ ಜಾಲತಾಣದಲ್ಲಿ ಅತೀ ಹೆಚ್ಚು ಟ್ರಾಲ್ ಆದ ವ್ಯಕ್ತಿ ಚಕ್ರವರ್ತಿ ಸೂಲಿಬೆಲೆ ಕೂಡ ಹರಿಪ್ರಕಾಶ್ ಪೋಸ್ಟ್ ಮಾಡಿದ್ದ ಸುಳ್ಳು ಸುದ್ದಿಯನ್ನು ಶೇರ್ ಮಾಡಿಕೊಳ್ಳುವ ಮೂಲಕ ಮತ್ತೆ ಟ್ರಾಲ್ ಆಗುತ್ತಿದ್ದಾರೆ.
ಬಿಜೆಪಿ ಮತ್ತವರ ಕಾರ್ಯಕರ್ತರು ಸುಳ್ಳು ಸುದ್ದಿಯನ್ನೇ ಸತ್ಯ ಎಂದು ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಸುಳ್ಳು ಸುದ್ದಿ ಹರಡುವ ಮೂಲಕ ಬಿಜೆಪಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ. ಸುಳ್ಳು ಸುದ್ದಿ ಹರಡಿದ ಹರೀಶ್ ಕೋಣೆಮನೆ, ಚಕ್ರವರ್ತಿ ಸೂಲಿಬೆಲೆಯರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂಬ ಕೂಗು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.